ಕನ್ನಡ ಸುದ್ದಿ  /  ಜೀವನಶೈಲಿ  /  ಜಾಮೂನು ಇಷ್ಟ ಅಂತ ಬಾಯಿ ಚಪ್ಪರಿಸಿಕೊಂಡು ತಿನ್ನುವ ಮೊದಲು ಅದರ ಇತಿಹಾಸ ತಿಳ್ಕೊಳ್ಳಿ, ಗುಲಾಬ್‌ ಜಾಮೂನ್‌ ಹುಟ್ಟಿನ ಕಥೆ ಇಲ್ಲಿದೆ

ಜಾಮೂನು ಇಷ್ಟ ಅಂತ ಬಾಯಿ ಚಪ್ಪರಿಸಿಕೊಂಡು ತಿನ್ನುವ ಮೊದಲು ಅದರ ಇತಿಹಾಸ ತಿಳ್ಕೊಳ್ಳಿ, ಗುಲಾಬ್‌ ಜಾಮೂನ್‌ ಹುಟ್ಟಿನ ಕಥೆ ಇಲ್ಲಿದೆ

ಗುಲಾಬ್‌ ಜಾಮೂನ್‌ ಯಾರಿಗಿಷ್ಟ ಇಲ್ಲ ಹೇಳಿ, ಈ ಸಿಹಿ ತಿಂಡಿಯ ಹೆಸರು ಕೇಳಿದ್ರೆ ಬಾಯಲ್ಲಿ ನೀರೂರುತ್ತೆ. ನೀವು ಗುಲಾಬ್‌ ಜಾಮೂನ್‌ ತಿಂದಿರಬಹುದು, ಆದ್ರೆ ಇದರ ಇತಿಹಾಸ ಬಗ್ಗೆ ನಿಮಗೆ ಖಂಡಿತ ಗೊತ್ತಿರೊಲ್ಲ. ಗುಲಾಬ್‌ ಜಾಮೂನ್‌ ಕಂಡುಹಿಡಿದಿದ್ದು ಯಾರು, ಇದಕ್ಕೆ ಈ ಹೆಸರು ಹೇಗೆ ಬಂತು ಎಂಬಿತ್ಯಾದಿ ವಿವರ ಇಲ್ಲಿದೆ. (ಬರಹ: ಪ್ರಿಯಾಂಕ ಗೌಡ)

ಗುಲಾಬ್‌ ಜಾಮೂನ್‌ ಇತಿಹಾಸ
ಗುಲಾಬ್‌ ಜಾಮೂನ್‌ ಇತಿಹಾಸ

ಭಾರತದಲ್ಲಿ ಸಿಹಿ ತಿನಿಸುಗಳಿಲ್ಲದೇ ಶುಭ ಸಮಾರಂಭಗಳಿಲ್ಲ. ಯಾವುದೇ ಹಬ್ಬ-ಹರಿದಿನಗಳಲ್ಲೂ ಸಿಹಿ ತಿನಿಸುಗಳು ಇರಲೇಬೇಕು. ಹಲವು ಬಗೆಯ ಸಿಹಿ ಖಾದ್ಯಗಳನ್ನು ತಯಾರಿಸಿದ್ರೂ, ಗುಲಾಬ್ ಜಾಮೂನ್ ಸ್ಥಾನವನ್ನು ಯಾವುದೂ ಮೀರಿಸುವುದಿಲ್ಲ ಎನ್ನಬಹುದು. ಯಾವುದೇ ಹಬ್ಬವಿರಲಿ, ಮದುವೆ ಮುಂತಾದ ಶುಭ ಕಾರ್ಯಕ್ರಮವಿರಲಿ ಸಿಹಿ-ತಿಂಡಿಗಳಲ್ಲಿ ಗುಲಾಬ್ ಜಾಮೂನಿನದ್ದೇ ಪಾರುಪತ್ಯ. ಹಾಲಿನಿಂದ ಮಾಡಲಾಗುವ ಈ ಸಿಹಿ ತಿಂಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹಳ ಜನಪ್ರಿಯತೆ ಪಡೆದಿದೆ. ಸಕ್ಕರೆ ಪಾಕದಲ್ಲಿ ಅದ್ದಲಾಗುವ ಈ ಸಿಹಿ ಖಾದ್ಯದ ರುಚಿಗೆ ಮನಸೋಲದವರೇ ಇಲ್ಲ. ಐಸ್‌ಕ್ರೀಂ ಜೊತೆಗೂ ಗುಲಾಬ್ ಜಾಮೂನ್ ಸವಿಯುತ್ತಾರೆ.

ಟ್ರೆಂಡಿಂಗ್​ ಸುದ್ದಿ

ಗುಲಾಬ್ ಜಾಮೂನ್ ಹಲವಾರು ಪ್ರಾದೇಶಿಕ ಭಿನ್ನತೆಗಳನ್ನು ಸಹ ಹೊಂದಿದೆ. ಸಾಮಾನ್ಯವಾಗಿ ಗುಲಾಬ್ ಜಾಮೂನ್ ಅನ್ನು ಸಕ್ಕರೆ ಪಾಕದಲ್ಲಿ ಅದ್ದಿ, ಅದರ ಸಹಿತ ತಿನ್ನಲಾಗುತ್ತದೆ. ಆದರೆ, ತಮಿಳುನಾಡಿನಲ್ಲಿ ಇದೇ ರೀತಿಯ ಸಿಹಿ ಖಾದ್ಯವನ್ನು ಕುಂಬಕೋನಮ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಇದನ್ನು ಸಕ್ಕರೆ ಪಾಕದಲ್ಲಿ ಅದ್ದಿ ತೆಗೆಯಲಾಗುತ್ತದೆ. ಅಲ್ಲದೆ, ಸಾಮಾನ್ಯ ಗುಲಾಬ್ ಜಾಮೂನ್‌ಗಿಂತ ಇದು ಚಿಕ್ಕದಾಗಿರುತ್ತದೆ. ಇದನ್ನು ಕಾಲಾ ಜಾಮೂನ್ ಎಂದು ಸಹ ಕರೆಯಲಾಗುತ್ತದೆ. ಇದು ಸಾಂಪ್ರದಾಯಿಕ ಗುಲಾಬ್ ಜಾಮೂನ್‌ಗಿಂತ ಗಾಢವಾಗಿದ್ದು, ಗರಿಗರಿಯಾಗಿರುತ್ತದೆ.

ಜಾಮೂನ್‌ ಇತಿಹಾಸ

ಪ್ರತಿಯೊಂದು ಬಗೆಯ ತಿಂಡಿಗಳಿಗೂ ಒಂದೊಂದು ಕಥೆಯಿರುತ್ತದೆ. ಮೈಸೂರ್ ಪಾಕ್, ಮಂಗಳೂರು ಬನ್ಸ್, ಮಂಗಳೂರು ಬಜ್ಜಿ, ಗಡ್ ಬಡ್ ಐಸ್ ಕ್ರೀಂ ಮುಂತಾದವುಗಳು ಹುಟ್ಟಿಕೊಂಡಿದ್ದು ಹೇಗೆ ಎಂಬುದು ನಿಮಗೆ ತಿಳಿದಿರಬಹುದು. ಹಾಗೆಯೇ ದಿಢೀರನೇ ಬಹಳ ಬೇಗ ಮಾಡಬಹುದಾದ ಗುಲಾಬ್ ಜಾಮೂನ್ ಸಿಹಿ ಖಾದ್ಯದ ಮೂಲ ಯಾವುದು? ಅದನ್ನು ಮೊದಲು ತಯಾರಿಸಿದವರು ಯಾರು ಎಂಬ ಕಥೆ ನಿಮಗೆ ಗೊತ್ತಿದೆಯಾ? ಹಾಗಿದ್ದರೆ ಇಲ್ಲಿದೆ ಆಸಕ್ತಿದಾಯಕ ಕಥೆ..

ಆಹಾರ ತಜ್ಞರು ಮತ್ತು ಇತಿಹಾಸಕಾರರಿಗೆ ಗುಲಾಬ್ ಜಾಮೂನಿನ ಮೂಲ ಕಥೆಯ ಬಗ್ಗೆ ನಿಖರವಾಗಿ ಕಂಡುಹಿಡಿಯಲು ಸಾಧ್ಯವಾಗಲಿಲ್ಲ. ಆದರೂ, ಹಲವಾರು ವರ್ಣರಂಜಿತ ಕಥೆಗಳು ಈ ಸಿಹಿ ತಿಂಡಿಯ ಸುತ್ತ ಗಿರಕಿ ಹೊಡೆದಿದೆ. ಈ ಒಂದು ಕಥೆಯಲ್ಲಿ, ಮೊಘಲ್ ರಾಜವಂಶದಲ್ಲಿ ಗುಲಾಬ್ ಜಾಮೂನ್ ಹುಟ್ಟಿಕೊಂಡಿತು ಎಂದು ಹೇಳಲಾಗಿದೆ. ಆಕಸ್ಮಿಕವಾಗಿ ಮೊಘಲ್ ಚಕ್ರವರ್ತಿ ಷಹಜಹಾನ್ ಅವರ ಬಾಣಸಿಗರಿಂದ ತಯಾರಿಸಲ್ಪಟ್ಟಿತು ಎಂದು ನಂಬಲಾಗಿದೆ. ಆರಂಭದಲ್ಲಿ ಸಂಪೂರ್ಣವಾಗಿ ವಿಭಿನ್ನವಾದ ಖಾದ್ಯವನ್ನು ರಚಿಸಲು ಪ್ರಯತ್ನಿಸಿದರು. ಅದು ಗುಲಾಬ್ ಜಾಮೂನ್ ಆಗಿ ಪರಿವರ್ತನೆಯಾಯಿತು ಎಂದು ಹೇಳಲಾಗುತ್ತದೆ.

ಇನ್ನು ಕೆಲವು ಕಥೆಗಳ ಪ್ರಕಾರ, ಗುಲಾಬ್ ಜಾಮೂನ್ ವಿದೇಶಿ ಸಿಹಿ ಭಕ್ಷ್ಯಗಳಿಂದ ವಿಕಸನಗೊಂಡಿರಬಹುದು ಎಂದು ನಂಬಲಾಗಿದೆ. ಉದಾಹರಣೆಗೆ ಪರ್ಷಿಯನ್ ಮೂಲದ ಬಾಮೀಹ್ ಮತ್ತು ಟರ್ಕಿಶ್ ತುಲುಂಬಾ ಸಿಹಿ ತಿಂಡಿ ಗುಲಾಬ್ ಜಾಮೂನ್‌ನಂತೆಯೇ ಸಕ್ಕರೆ ಪಾಕದಲ್ಲಿ ಅದ್ದಲಾಗುತ್ತದೆ. ಇದು ನೋಡಲು ದುಂಡಗಿನ ಆಕಾರವನ್ನು ಹೊಂದಿದೆ. ಅರೇಬಿಕ್ ಸಿಹಿತಿಂಡಿ ಲುಕ್ಮತ್-ಅಲ್-ಖಾದಿ ಅನ್ನು ಜೇನುತುಪ್ಪದಲ್ಲಿ ನೆನೆಸಲಾಗುತ್ತದೆ. ಈ ತಿಂಡಿಯೇ ಗುಲಾಬ್ ಜಾಮೂನ್ ತಯಾರಾಗಲು ಸ್ಫೂರ್ತಿ ಎಂದು ಸಹ ನಂಬಲಾಗಿದೆ.

ಇನ್ನು ಈ ಸಿಹಿ-ತಿಂಡಿಯನ್ನು ಪರ್ಷಿಯಾಕ್ಕೆ ಸಂಬಂಧ ಬೆಸೆಯಲಾಗಿದೆ. ಏಕೆಂದರೆ ಗುಲಾಬ್ ಜಾಮೂನ್ ಎಂಬ ಹೆಸರನ್ನು ಪರ್ಷಿಯನ್ ಭಾಷೆಯಿಂದ ಪಡೆಯಲಾಗಿದೆ. ಗುಲಾಬ್ ಎಂದರೆ ರೋಸ್ ವಾಟರ್ ಮತ್ತು ಜಮುನ್ ಎಂಬುದು ಅಲ್ಲಿನ ಸ್ಥಳೀಯ ಹಣ್ಣು. ಇದಲ್ಲದೆ, ದಿ ಡೋನಟ್: ಹಿಸ್ಟರಿ, ಪಾಕವಿಧಾನಗಳು ಮತ್ತು ಬೋಸ್ಟನ್‌ನಿಂದ ಬರ್ಲಿನ್‌ಗೆ ಲೋರ್ ಪ್ರಕಟಣೆಯಲ್ಲಿ ಮೈಕೆಲ್ ಕ್ರಾಂಡ್ ಎಂಬ ಲೇಖಕರು ಇದರ ಬಗ್ಗೆ ಉಲ್ಲೇಖಿಸಿದ್ದಾರೆ. ಪರ್ಷಿಯನ್ ಆಕ್ರಮಣಕಾರರು ತಮ್ಮೊಂದಿಗೆ ‘ರೌಂಡ್ ಫ್ರಿಟರ್’ ಅನ್ನು ತಂದ ಬಗ್ಗೆ ಉಲ್ಲೇಖಿಸಿದ್ದಾರೆ. ಅದು ಕ್ರಮೇಣ ಗುಲಾಬ್ ಜಾಮೂನ್ ಆಗಿ ಮಾರ್ಪಟ್ಟಿತು ಎಂದು ಕ್ರಾಂಡ್ ಹೇಳುತ್ತಾರೆ.

ಇನ್ನು, ಈ ಸಿಹಿ ಖಾದ್ಯವನ್ನು ಮನೆಯಲ್ಲಿಯೇ ಹೇಗೆ ಸರಳವಾಗಿ ತಯಾರಿಸಬಹುದು ಎಂಬುದನ್ನು ಇಲ್ಲಿ ತಿಳಿಯಿರಿ..

ಗುಲಾಬ್ ಜಾಮೂನ್ ಮಾಡುವುದು ಹೇಗೆ?

ಬೇಕಾಗುವ ಸಾಮಗ್ರಿಗಳು: ಸಕ್ಕರೆ - 2 ಕಪ್, ನೀರು - 2 ಕಪ್, ಮೈದಾ - ½ ಕಪ್, ಹಾಲಿನ ಪುಡಿ - 100 ಗ್ರಾಂ, ಏಲಕ್ಕಿ - 2, ತುಪ್ಪ - 2 ಚಮಚ, ನಿಂಬೆ ರಸ - 1 ಚಮಚ, ರೋಸ್ ವಾಟರ್ - 1 ಚಮಚ, ಬೇಕಿಂಗ್ ಪೌಡರ್ - ½ ಚಮಚ, ಕೇಸರಿ - ¼ ಚಮಚ, ಹಾಲು - ಬೆರೆಸಲು ಸಾಕಾಗುವಷ್ಟು, ಎಣ್ಣೆ - ಕರಿಯಲು, ತುಪ್ಪ - ಸ್ವಲ್ಪ

ತಯಾರಿಸುವ ವಿಧಾನ: ಹಂತ 1: ಒಂದು ಬಟ್ಟಲಿನಲ್ಲಿ ಹಾಲಿನ ಪುಡಿ, ಮೈದಾ ಮತ್ತು ಬೇಕಿಂಗ್ ಪೌಡರ್ ಅನ್ನು ಮಿಶ್ರಣ ಮಾಡಿ. ಅದಕ್ಕೆ ಸ್ವಲ್ಪ ಹಾಲು ಅಥವಾ ನೀರು ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ.

ಹಂತ 2: ಮಿಶ್ರಣವನ್ನು ಚೆನ್ನಾಗಿ ನಾದಿದ ನಂತರ ಹಿಟ್ಟಿಗೆ ತುಪ್ಪ ಸವರಿ 10 ನಿಮಿಷಗಳ ಕಾಲ ಮುಚ್ಚಿಡಿ.

ಹಂತ 3: ಬಾಣಲೆಯಲ್ಲಿ, ಸಕ್ಕರೆ, ನೀರು, ಏಲಕ್ಕಿ ಮತ್ತು ಕೇಸರಿಯನ್ನು ಹಾಕಿ ಚೆನ್ನಾಗಿ ಪಾಕ ಮಾಡಿ. ಸಕ್ಕರೆ ಪಾಕ ಆಗುವವರೆಗೂ ಮಧ್ಯಮ ಉರಿಯಲ್ಲಿ ಕುದಿಸಿ.

ಹಂತ 4: ಸಕ್ಕರೆ ಪಾಕ ಬಂದ ಮೇಲೆ ಸ್ಟೌ ಆಫ್ ಮಾಡಿ. ಪಾಕವನ್ನು ಕೈಯಲ್ಲಿ ಮುಟ್ಟಿದಾಗ ಅಂಟಾಗಿದ್ದರೆ ಸಾಕು, ಪಾಕ ಬಂದಿದೆ ಎಂದರ್ಥ. ಇದಕ್ಕೆ ನಿಂಬೆ ರಸ ಮತ್ತು ರೋಸ್‌ವಾಟರ್‌ ಸೇರಿಸಿ ಮುಚ್ಚಿಡಿ.

ಹಂತ 5: ಬಳಿಕ ಹಿಟ್ಟನ್ನು ಸಣ್ಣ ಚೆಂಡುಗಳಂತೆ ಮಾಡಿ. ಎಲ್ಲವನ್ನೂ ಉಂಡೆ ಮಾಡಿದ ನಂತರ ಕಾದ ಎಣ್ಣೆ ಅಥವಾ ತುಪ್ಪದಲ್ಲಿ ಚೆನ್ನಾಗಿ ಹುರಿಯಿರಿ

ಹಂತ 6: ಚೆನ್ನಾಗಿ ಹುರಿದ ಜಾಮೂನ್‌ಗಳನ್ನು ಮೊದಲೇ ಮಾಡಿಟ್ಟಿರುವ ಬಿಸಿಬಿಸಿ ಸಕ್ಕರೆ ಪಾಕದಲ್ಲಿ ನೆನೆಸಿ. ಅವುಗಳನ್ನು ಸುಮಾರು 2 ಗಂಟೆಗಳ ಕಾಲ ಮುಚ್ಚಿಡಿ. 2 ಗಂಟೆಯ ಬಳಿಕ ನೋಡಿದಾಗ ಸಕ್ಕರೆ ಪಾಕದಲ್ಲಿ ತೇವಗೊಂಡ ಗುಲಾಬ್ ಜಾಮೂನ್‌ಗಳ ಗಾತ್ರ ದ್ವಿಗುಣವಾಗಿರುತ್ತದೆ. ಈ ನಿಮ್ಮ ಮುಂದೆ ರುಚಿ-ರುಚಿಯಾದ ಗುಲಾಬ್ ಜಾಮೂನ್‌ಗಳು ಸವಿಯಲು ಸಿದ್ಧ.

ಗುಲಾಬ್‌ ಜಾಮೂನ್‌ ಹೀಗೆ ಹುಟ್ಟಿಕೊಂಡಿತ್ತು, ಅದರ ಮೂಲ ಯಾವುದು ಎಂಬುದು ತಿಳಿಯಿತಲ್ವಾ? ಹಾಗಾದ್ರೆ ಇನ್ನೇನು ತಡ ಅದನ್ನು ತಯಾರಿಸುವ ವಿಧಾನ ಕೂಡ ಇಲ್ಲಿ ಇದೆ. ನೀವು ಮನೆಯಲ್ಲಿ ತಯಾರಿಸಿ ತಿಂದು ಖುಷಿ ಪಡಿ.

 

ವಿಭಾಗ