ರಾಗಿ ನುಗ್ಗೆಸೊಪ್ಪಿನ ರೊಟ್ಟಿ; ತೂಕ ಇಳಿಕೆ, ಮಧುಮೇಹ ನಿಯಂತ್ರಿಸುವ ಜತೆ ರುಚಿಯಲ್ಲೂ ರಾಜಿ ಮಾಡಿಕೊಳ್ಳದ ಸೂಪರ್ ರೆಸಿಪಿಯಿದು
ಕನ್ನಡ ಸುದ್ದಿ  /  ಜೀವನಶೈಲಿ  /  ರಾಗಿ ನುಗ್ಗೆಸೊಪ್ಪಿನ ರೊಟ್ಟಿ; ತೂಕ ಇಳಿಕೆ, ಮಧುಮೇಹ ನಿಯಂತ್ರಿಸುವ ಜತೆ ರುಚಿಯಲ್ಲೂ ರಾಜಿ ಮಾಡಿಕೊಳ್ಳದ ಸೂಪರ್ ರೆಸಿಪಿಯಿದು

ರಾಗಿ ನುಗ್ಗೆಸೊಪ್ಪಿನ ರೊಟ್ಟಿ; ತೂಕ ಇಳಿಕೆ, ಮಧುಮೇಹ ನಿಯಂತ್ರಿಸುವ ಜತೆ ರುಚಿಯಲ್ಲೂ ರಾಜಿ ಮಾಡಿಕೊಳ್ಳದ ಸೂಪರ್ ರೆಸಿಪಿಯಿದು

ಇತ್ತೀಚಿನ ದಿನಗಳಲ್ಲಿ ಮಧುಮೇಹ, ತೂಕ ಏರಿಕೆ, ರಕ್ತದೊತ್ತಡದಂತಹ ಸಮಸ್ಯೆಗಳು ಹಲವರನ್ನು ಕಾಡುತ್ತಿದೆ. ಈ ಸಮಸ್ಯೆ ಇರುವವರು ತಮ್ಮ ಆಹಾರ ಕ್ರಮದಲ್ಲಿ ಕಟ್ಟುನಿಟ್ಟಾಗಿರಬೇಕು. ಇಂತಹ ಸಮಸ್ಯೆ ಇರುವವರಿಗಾಗಿ ಒಂದು ಬೆಸ್ಟ್ ಬ್ರೇಕ್‌ಪಾಸ್ಟ್ ರೆಸಿಪಿ ಇದೆ. ಅದುವೇ ರಾಗಿ ನುಗ್ಗೆಸೊಪ್ಪಿನ ರೊಟ್ಟಿ. ಇದು ಆರೋಗ್ಯಕ್ಕೆ ಮಾತ್ರವಲ್ಲ ರುಚಿಗೂ ಬೆಸ್ಟ್‌.

ರಾಗಿ ನುಗ್ಗೆಸೊಪ್ಪಿನ ರೊಟ್ಟಿ
ರಾಗಿ ನುಗ್ಗೆಸೊಪ್ಪಿನ ರೊಟ್ಟಿ

ಬೆಳಗಿನ ಉಪಾಹಾರದ ಹೊತ್ತು ನೀವು ಏನನ್ನು ತಿನ್ನುತ್ತೀರಿ ಎನ್ನುವುದು ನೀವು ದಿನವಿಡಿ ಎಷ್ಟು ಸಕ್ರಿಯರಾಗಿರುತ್ತೀರಿ ಎಂಬುದನ್ನು ನಿರ್ಧರಿಸುತ್ತದೆ. ಪ್ರೊಟೀನ್ ಸಮೃದ್ಧ ಆಹಾರಗಳನ್ನು ಸೇವಿಸುವುದರಿಂದ ದಿನವಿಡಿ ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಮಧುಮೇಹ, ತೂಕ ಏರಿಕೆ, ಅಧಿಕ ರಕ್ತದೊತ್ತಡದಂತಹ ಸಮಸ್ಯೆ ಹೆಚ್ಚಿರುವ ಕಾರಣ ಎಲ್ಲಾ ರೀತಿಯ ಆಹಾರಗಳನ್ನು ತಿನ್ನಲು ಸಾಧ್ಯವಾಗುತ್ತಿಲ್ಲ. ಈ ಎಲ್ಲಾ ಸಮಸ್ಯೆ ಇರುವವರಿಗೂ ಬೆಸ್ಟ್ ಎನ್ನಿಸುವ ಒಂದು ಉಪಾಹಾರದ ರೆಸಿಪಿ ಇಲ್ಲಿದೆ.

ನಿಮ್ಮ ಮನೆಯಲ್ಲಿ ಯಾರಾದರೂ ಮಧುಮೇಹ, ತೂಕ ಏರಿಕೆ ಸಮಸ್ಯೆ ಎದುರಿಸುತ್ತಿದ್ದರೆ ನೀವು ಅವರಿಗೆ ರಾಗಿ ನುಗ್ಗೆಸೊಪ್ಪಿನ ರೊಟ್ಟಿ ಮಾಡಿಕೊಡಬಹುದು. ಇದು ತುಂಬಾನೇ ರುಚಿಕರವಾದ ರೆಸಿಪಿಯಾಗಿದೆ. ಒಮ್ಮೆ ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎನ್ನಿಸುವಂತಹ ರೆಸಿಪಿ ಇದು. ಮಧುಮೇಹ ರೋಗಿಗಳು ಅದರಲ್ಲೂ ಅಧಿಕ ತೂಕದ ಸಮಸ್ಯೆ ಇರುವವರು ರಾಗಿ ನುಗ್ಗೆ ಸೊಪ್ಪಿನ ರೊಟ್ಟಿ ತಿನ್ನಲು ಅಭ್ಯಾಸ ಮಾಡಬೇಕು. ಇದು ಅತ್ಯುತ್ತಮ ಉಪಹಾರ ಎಂದು ಹೇಳಬಹುದು. ಇದನ್ನು ತಿನ್ನುವುದರಿಂದ ದೇಹಕ್ಕೆ ಅಗತ್ಯವಾಗಿರುವ ಪೋಷಕಾಂಶಗಳು ಲಭಿಸುತ್ತದೆ.

ರಾಗಿ ನುಗ್ಗೆಸೊಪ್ಪಿನ ರೊಟ್ಟಿ

ಬೇಕಾಗುವ ಸಾಮಗ್ರಿಗಳು: ರಾಗಿಹಿಟ್ಟು - ಎರಡು ಕಪ್, ನುಗ್ಗೆಸೊಪ್ಪು – 1ಕಪ್‌, ಎಣ್ಣೆ – ಸ್ವಲ್ಪ, ಬಿಸಿ ನೀರು - ಹದಕ್ಕೆ, ಬೆಳ್ಳುಳ್ಳಿ ಪೇಸ್ಟ್ - ಒಂದು ಚಮಚ, ಈರುಳ್ಳಿ ಪೇಸ್ಟ್ - ನಾಲ್ಕು ಚಮಚಗಳು, ಉಪ್ಪು - ರುಚಿಗೆ, ಕರಿಮೆಣಸು - ಎರಡು,

ರಾಗಿ ನುಗ್ಗೆಸೊಪ್ಪಿನ ರೊಟ್ಟಿ ಮಾಡುವ ವಿಧಾನ

ಒಂದು ಬಟ್ಟಲಿನಲ್ಲಿ ರಾಗಿಹಿಟ್ಟು ಹಾಕಿ. ಇದಕ್ಕೆ ಜಜ್ಜಿಕೊಂಡ ಬೆಳ್ಳುಳ್ಳಿ, ಜಜ್ಜಿಕೊಂಡ ಈರುಳ್ಳಿ, ಚಿಕ್ಕದಾಗಿ ಹೆಚ್ಚಿಕೊಂಡ ನುಗ್ಗೆಸೊಪ್ಪು, ಖಾರದಪುಡಿ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ. ಈಗ ಬಿಸಿನೀರನ್ನು ಸೇರಿಸಿ ಮತ್ತು ಉಂಡೆಗಳಿಲ್ಲದಂತೆ ಚೆನ್ನಾಗಿ ಮಿಶ್ರಣ ಮಾಡಿ. ರುಚಿಗೆ ಬೇಕಿನ್ನಿಸಿದರೆ ಒಂದೆರಡು ಚಮಚ ತೆಂಗಿನತುರಿ ಸೇರಿಸಿ. ಇದನ್ನು ಚೆನ್ನಾಗಿ ನಾದಿ ಅರ್ಧ ಗಂಟೆವರೆಗೆ ಪಕ್ಕಕ್ಕೆ ಇರಿಸಿ. ಈ ರೊಟ್ಟಿ ತಯಾರಿಸಲು ಹಿಟ್ಟು ಸ್ವಲ್ಪ ಗಟ್ಟಿಯಾಗಿಯೇ ಇರಬೇಕು. ಈಗ ನಾದಿಟ್ಟುಕೊಂಡ ಹಿಟ್ಟಿನಿಂದ ಚಿಕ್ಕ ಚಿಕ್ಕ ಉಂಡೆ ಮಾಡಿ. ಸ್ಟೀಲ್ ಪ್ಲೇಟ್‌ಗೆ ಎಣ್ಣೆ ಹಾಕಿ ಅದರ ಮೇಲೆ ಉಂಡೆ ಇರಿಸಿ. ನಂತರ ಒಂದು ಪ್ಲಾಸ್ಟಿಕ್ ಕವರ್‌ ಅಥವಾ ಬಾಳೆಎಲೆಗೆ ಎಣ್ಣೆ ಹಚ್ಚಿ ರೊಟ್ಟಿಯನ್ನು ಚೆನ್ನಾಗಿ ತಟ್ಟಿ. ಇದನ್ನು ಇದನ್ನು ಎಣ್ಣೆ ಸವರಿದ ತವಾದ ಮೇಲೆ ಹರಡಿ ಎರಡೂ ಕಡೆ ಚೆನ್ನಾಗಿ ಕಾಯಿಸಿ. ಈ ನಿಮ್ಮ ಮುಂದೆ ರುಚಿಯಾದ ರಾಗಿ ನುಗ್ಗೆಸೊಪ್ಪಿನ ರೊಟ್ಟಿ ತಿನ್ನಲು ಸಿದ್ಧವಾಗಿದೆ. ಇದು ತೆಂಗಿನಕಾಯಿ ಚಟ್ನಿ ಜೊತೆ ತಿನ್ನಲು ಸಖತ್ ಆಗಿರುತ್ತೆ.

ಮಧುಮೇಹಿಗಳು ಕೂಡ ಈ ರೊಟ್ಟಿಯನ್ನು ಯಾವುದೇ ಭಯವಿಲ್ಲದೇ ಸಂತೋಷದಿಂದ ತಿನ್ನಬಹುದು. ತೂಕ ಇಳಿಸಿಕೊಳ್ಳಲು ಬಯಸುವವರು ಬೆಳಗಿನ ಉಪಾಹಾರಕ್ಕೆ ಇದನ್ನು ತಿನ್ನುವುದರಿಂದ ದಿನವಿಡೀ ಇತರ ಆಹಾರಗಳನ್ನು ತಿನ್ನುವ ಬಯಕೆ ಕಡಿಮೆಯಾಗುತ್ತದೆ. ಆದ್ದರಿಂದ ನೀವು ಆರೋಗ್ಯಕರ ರೀತಿಯಲ್ಲಿ ತೂಕವನ್ನು ಕಳೆದುಕೊಳ್ಳುತ್ತೀರಿ.

ಇದರಲ್ಲಿ ಬಳಸಿರುವ ಎಲ್ಲ ಪದಾರ್ಥಗಳು ಆರೋಗ್ಯಕ್ಕೆ ಒಳ್ಳೆಯದು. ವಿಶೇಷವಾಗಿ ರಾಗಿ ಪ್ರೋಟೀನ್, ಫೈಬರ್, ಅಯೋಡಿನ್, ಖನಿಜಗಳು ಮತ್ತು ಕ್ಯಾಲ್ಸಿಯಂನಲ್ಲಿ ಸಮೃದ್ಧವಾಗಿದೆ. ಅಲ್ಲದೆ, ಇದರಲ್ಲಿ ಕೊಬ್ಬಿನ ಶೇಕಡಾವಾರು ಪ್ರಮಾಣವು ತುಂಬಾ ಕಡಿಮೆಯಾಗಿದೆ. ಗ್ಲುಟನ್ ಕೊರತೆಯಿಂದ ಬಳಲುವವರಿಗೂ ರಾಗಿ ಸೇವನೆ ಉತ್ತಮ. ನುಗ್ಗೆಸೊಪ್ಪು ಕೂಡ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಇದು ಮಧುಮೇಹಿಗಳಿಗೆ ಸೂಪರ್ ಫುಡ್ ಆಗಿರುವುದು ಸುಳ್ಳಲ್ಲ.

ಬಹಳ ಸಿಂಪಲ್ ಆಗಿ, ಬೇಗ ಮಾಡಬಹುದಾದ ಈ ರೆಸಿಪಿಯನ್ನು ಆಗಾಗ ನಿಮ್ಮ ಮನೆಯಲ್ಲೂ ಮಾಡಿ. ಇದರ ರುಚಿ ಹೆಚ್ಚಬೇಕು ಅಂತಿದ್ದರೆ ಕೊಂಚ ತುಪ್ಪ ಸೇರಿಸಿ.

Whats_app_banner