ರಾಗಿ ಮಖಾನಾ ಸ್ಮೂಥಿ, ಬೆಳಗಿನ ಉಪಾಹಾರಕ್ಕೆ ಬೆಸ್ಟ್ ಆಯ್ಕೆ ಇದು; ತೂಕ ಇಳಿಕೆ, ಮಧುಮೇಹಿಗಳಿಗೂ ಹೇಳಿ ಮಾಡಿಸಿದ ರೆಸಿಪಿ
ಕನ್ನಡ ಸುದ್ದಿ  /  ಜೀವನಶೈಲಿ  /  ರಾಗಿ ಮಖಾನಾ ಸ್ಮೂಥಿ, ಬೆಳಗಿನ ಉಪಾಹಾರಕ್ಕೆ ಬೆಸ್ಟ್ ಆಯ್ಕೆ ಇದು; ತೂಕ ಇಳಿಕೆ, ಮಧುಮೇಹಿಗಳಿಗೂ ಹೇಳಿ ಮಾಡಿಸಿದ ರೆಸಿಪಿ

ರಾಗಿ ಮಖಾನಾ ಸ್ಮೂಥಿ, ಬೆಳಗಿನ ಉಪಾಹಾರಕ್ಕೆ ಬೆಸ್ಟ್ ಆಯ್ಕೆ ಇದು; ತೂಕ ಇಳಿಕೆ, ಮಧುಮೇಹಿಗಳಿಗೂ ಹೇಳಿ ಮಾಡಿಸಿದ ರೆಸಿಪಿ

ಬೆಳಗೆದ್ದು ಪೌಷ್ಟಿಕ ಆಹಾರ ಸೇವಿಸಬೇಕು ಅಂತಿದ್ದರೆ ನೀವು ರಾಗಿ ಮಾಖಾನ ಸ್ಮೂಥಿ ಆಯ್ಕೆ ಮಾಡಿಕೊಳ್ಳಬಹುದು. ತೂಕ ಇಳಿಸುವವರಿಗೂ ಇದು ಹೇಳಿ ಮಾಡಿಸಿದ್ದು. ಮಧುಮೇಹಿಗಳಿಗೂ ಇದು ಉತ್ತಮ. ನಿಮ್ಮ ದಿನವನ್ನು ಕಿಕ್‌ ಸ್ಟಾರ್ಟ್ ಮಾಡುವುದು ಮಾತ್ರವಲ್ಲ ಒಟ್ಟಾರೆ ಆರೋಗ್ಯ ಸುಧಾರಿಸಲು ಈ ಸ್ಮೂಥಿ ಉತ್ತಮ. ರಾಗಿ ಮಖಾನಾ ಸ್ಮೂಥಿ ಮಾಡುವುದು ಹೇಗೆ, ಇದರ ಪ್ರಯೋಜನಗಳೇನು ನೋಡಿ.

ರಾಗಿ ಮಖಾನಾ ಸ್ಮೂಥಿ
ರಾಗಿ ಮಖಾನಾ ಸ್ಮೂಥಿ (PC: Pinterest/ Times now)

ಬೆಳಗೆದ್ದು ಉಪಾಹಾರ ಸೇವಿಸುವುದು ಬಹಳ ಮುಖ್ಯ. ಬೆಳಗಿನ ಉಪಾಹಾರವನ್ನು ದಿನ ಪ್ರಮುಖ ಊಟಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಬೆಳಗೆದ್ದು ಆಹಾರ ಸೇವಿಸುವುದಷ್ಟೇ ಅಲ್ಲ, ಆರೋಗ್ಯಕರ ಆಹಾರ ಸೇವಿಸುವುದು ಅಷ್ಟೇ ಮುಖ್ಯ. ಆರೋಗ್ಯಕರ ಆಹಾರ ಎಂದಾಕ್ಷಣ ಭಾರತೀಯರಿಗೆ ಮೊದಲು ತಲೆಯಲ್ಲಿ ಬರುವುದು ರಾಗಿ. ರಾಗಿಯಿಂದ ತಯಾರಿಸುವ ಖಾದ್ಯಗಳು ಆರೋಗ್ಯಕ್ಕೆ ಬಹಳ ಉತ್ತಮ. ರಾಗಿ ತಿನಿಸುಗಳು ತೂಕ ಇಳಿಸುವವರಿಗೆ, ಮಧುಮೇಹಿಗಳಿಗೂ ಹೇಳಿ ಮಾಡಿಸಿದ್ದು. 

ಹಲವು ಆರೋಗ್ಯ ಪ್ರಯೋಜನಗಳನ್ನು ಹೊಂದಿರುವ ರಾಗಿ ಸೂಪರ್‌ಫುಡ್‌ಗಳ ಸಾಲಿಗೆ ಸೇರಿದೆ. ರಾಗಿಯನ್ನು ಶಕ್ತಿ ಮತ್ತು ಅಗತ್ಯ ಜೀವಸತ್ವಗಳು, ಪೋಷಕಾಂಶಗಳ ಶಕ್ತಿ ಕೇಂದ್ರವೆಂದು ಪರಿಗಣಿಸಲಾಗಿರುವುದರಿಂದ ಬೆಳಗೆದ್ದು ರಾಗಿಯಿಂದ ಮಾಡಿದ ಉಪಾಹಾರಗಳನ್ನು ಸೇವಿಸುವುಸು ಉತ್ತಮ. ಅಂತಹ ಉಪಾಹಾರಗಳಿಗಾಗಿ ನೀವು ಎದುರು ನೋಡುತ್ತಿದ್ದರೆ ಉತ್ತಮ ಆಯ್ಕೆ ಎಂದರೆ ರಾಗಿ ಮಖಾನಾ ಸ್ಮೂಥಿ. ಇದು ಆರೋಗ್ಯಕರ ಉಪಹಾರ ಭಕ್ಷ್ಯಗಳನ್ನು ಹುಡುಕುವವರಿಗೆ ಪರಿಪೂರ್ಣವಾದ ಉಪಹಾರ ಆಯ್ಕೆಯಾಗಿದೆ. ನಿಮ್ಮ ದಿನವನ್ನು ಕಿಕ್‌ ಸ್ಟಾರ್ಟ್ ಮಾಡಲು ಇದಕ್ಕಿಂತ ಉತ್ತಮ ಆಹಾರ ಇನ್ನೊಂದಿಲ್ಲ.

ರಾಗಿ ಹಿಟ್ಟು, ಮಖಾನ ಅಥವಾ ಕಮಲದ ಬೀಜಗಳ ಮಿಶ್ರಣ ಈ ರಾಗಿ ಉಪಹಾರ ಖಾದ್ಯವು ತೂಕ ಇಳಿಸುವವರಿಗೆ ಹೇಳಿ ಮಾಡಿಸಿದ್ದಾಗಿದೆ. ರಾಗಿ ಸೇವನೆಯಿಂದ ಒಟ್ಟಾರೆ ಪೌಷ್ಟಿಕಾಂಶ ಒದಗುತ್ತದೆ. ರಾಗಿ ಮೂಳೆಯ ಆರೋಗ್ಯದ ಜೊತೆಗೆ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸುತ್ತದೆ ಎಂದು ನಂಬಲಾಗಿದೆ. ನಿಮ್ಮ ಸಾಮಾನ್ಯ ಸ್ಮೂಥಿ ಬೌಲ್‌ಗಳಲ್ಲಿ ರಾಗಿಯನ್ನು ಸೇರಿಸುವುದರಿಂದ ನಿಮ್ಮ ಜೀವನಶೈಲಿಯಲ್ಲಿ ಪರಿಪೂರ್ಣ ಬದಲಾವಣೆಗಳನ್ನು ತರಬಹುದು. ಸ್ಮೂಥಿಯು ನಾರಿನಾಂಶ ಮತ್ತು ನೈಸರ್ಗಿಕ ಸಕ್ಕರೆಯಲ್ಲಿ ಹೆಚ್ಚು ಸಮೃದ್ಧವಾಗಿವೆ, ಇದು ಉತ್ತಮ ಜೀರ್ಣಕ್ರಿಯೆಯನ್ನು ಅನುಮತಿಸುತ್ತದೆ.  

ಸ್ಮೂಥಿ ಮಕ್ಕಳಿಗೂ ಕೂಡ ಇಷ್ಟವಾಗುತ್ತದೆ. ಆರೋಗ್ಯವಾಗಿ ದಿನವನ್ನು ಆರಂಭಿಸಬೇಕು ಎಂದುಕೊಳ್ಳುವವರು ರಾಗಿ ಮಖಾನಾ ಸ್ಮೂಥಿಯನ್ನು ಸೇವಿಸಬಹುದು. ಇದರ ರುಚಿಯೂ ಭಿನ್ನವಾಗಿದ್ದು, ನಿಮಗೆ ಇಷ್ಟವಾಗುವುದರಲ್ಲಿ ಎರಡು ಮಾತಿಲ್ಲ. ಹಾಗಾದರೆ ರಾಗಿ ಮಖಾನಾ ಸ್ಮೂಥಿ ತಯಾರಿಸುವುದು ಹೇಗೆ ನೋಡಿ. 

ರಾಗಿ–ಮಖಾನಾ ಸ್ಮೂಥಿಗೆ ಬೇಕಾಗುವ ಸಾಮಗ್ರಿಗಳು 

ರಾಗಿ ಹಿಟ್ಟು – 2 ಚಮಚ, ಹಾಲು – 1 ಕಪ್, ನೀರು – 1 ಕಪ್, ಮಖಾನಾ – ಕಾಲು ಕಪ್‌, ಹುರಿದ ಎಳ್ಳು – 1 ಟೇಬಲ್ ಚಮಚ, ಒಣದ್ರಾಕ್ಷಿ – 9, ಖರ್ಜೂರ – 5, ಬಾದಾಮಿ – 5, ವಾಲ್‌ನಟ್‌ – 5

ರಾಗಿ ಮಖಾನಾ ಸ್ಮೂಥಿ ತಯಾರಿಸುವ ವಿಧಾನ

ಹಂತ 1: ಒಂದು ಬಾಣಲಿಗೆ ಮಖಾನಾ ಹಾಕಿ ಗೋಲ್ಡನ್ ಬಣ್ಣ ಬರುವವರೆಗೂ ಹುರಿದುಕೊಳ್ಳಿ. ಅದೇ ಬಾಣಲಿಯಲ್ಲಿ ರಾಗಿಹಿಟ್ಟನ್ನು ಹಾಕಿ ಹುರಿಯಿರಿ. ಅಗತ್ಯ ಇರುವಷ್ಟು ನೀರು ಸೇರಿಸಿ. ಈ ಮಿಶ್ರಣವನ್ನು ದಪ್ಪಗಾಗುವವರೆಗೂ ಕುದಿಸಿ. ನಂತರ ತಣ್ಣಗಾಗಲು ಬಿಡಿ.

ಹಂತ 2: ಈಗ ಮಖಾನಾದಿಂದ ನಯವಾದ ಪೇಸ್ಟ್ ತಯಾರಿಸಿಕೊಳ್ಳಿ ಹಾಗೂ ಆ ಮಿಶ್ರಣವನ್ನು ರಾಗಿಹಿಟ್ಟಿನೊಂದಿಗೆ ಸೇರಿಸಿ ಚೆನ್ನಾಗಿ ಕಲೆಸಿಕೊಳ್ಳಿ. ಅದಕ್ಕೆ ಹುರಿದ ಎಳ್ಳು, ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ವಾಲ್‌ನಟ್‌ಗಳನ್ನು ಸೇರಿಸಿ ಮಿಶ್ರಣ ಮಾಡಿ.

ಈಗ ನಿಮ್ಮ ಮುಂದೆ ರುಚಿಯಾದ ರಾಗಿ ಮಖಾನಾ ಸ್ಮೂಥಿ ತಿನ್ನಲು ಸಿದ್ಧ. ಇದು ಸುಲಭವಾಗಿ ಮಾಡಬಹುದಾದ ರೆಸಿಪಿ. ತೂಕ ಇಳಿಕೆಗೆ, ಮಧುಮೇಹ ನಿಯಂತ್ರಣಕ್ಕೆ ಹೇಳಿ ಮಾಡಿಸಿದ ಖಾದ್ಯವಾಗಿದೆ. ಇದನ್ನು ನಿರಂತರವಾಗಿ ಸೇವಿಸುವುದರಿಂದ ಒಟ್ಟಾರೆ ಆರೋಗ್ಯವೂ ಸುಧಾರಿಸುತ್ತದೆ. ರಾಗಿ ಸೇವನೆಯಿಂದ ದೇಹಕ್ಕೆ ಸಾಕಷ್ಟು ಅಗತ್ಯ ಪೋಷಕಾಂಶಗಳು ಸಿಗುತ್ತವೆ. 

Whats_app_banner