ಉತ್ತರ ಕರ್ನಾಟಕ ಶೈಲಿಯ ಸ್ಪೆಷಲ್ ರಾಗಿ ತಾಲಿಪಟ್ಟು ರೆಸಿಪಿ ಇಲ್ಲಿದೆ; ರಾಗಿ ಇಷ್ಟಪಡದವರೂ ಇಷ್ಟಪಟ್ಟು ತಿಂತಾರೆ, ಒಮ್ಮೆ ಮಾಡಿ ನೋಡಿ
ತಾಲಿಪಟ್ಟು ಇದು ಉತ್ತರ ಕರ್ನಾಟಕ ಭಾಗದಲ್ಲಿ ತಯಾರಿಸುವ ವಿಶೇಷ ತಿಂಡಿ. ಬೆಳಗಿನ ಉಪಾಹಾರ ಇದು ಬೆಸ್ಟ್ ಎನ್ನಿಸುತ್ತದೆ. ಸಾಮಾನ್ಯವಾಗಿ ಅಕ್ಕಿಯಿಂದ ತಾಲಿಪಟ್ಟು ತಯಾರಿಸುತ್ತಾರೆ. ಆದರೆ ರಾಗಿಹಿಟ್ಟಿನಿಂದಲೂ ಸಖತ್ ಟೇಸ್ಟಿ ಆಗಿರೋ ತಾಲಿಪಟ್ಟು ತಯಾರಿಸಬಹುದು ಎಂಬುದನ್ನು ವಿಡಿಯೊ ಮೂಲಕ ತೋರಿಸಿದ್ದಾರೆ ಸ್ವಾತಿ ಕೈ ರುಚಿ ಎಂಬ ಫೇಸ್‌ಬುಕ್ ಪುಟದ ಅಡ್ಮಿನ್, ನೀವೂ ಓದಿ ನೋಡಿ
ರಾಗಿ ತಿಂದವನಿಗೆ ರೋಗವಿಲ್ಲ ಎಂಬ ಮಾತಿದೆ. ರಾಗಿ ಸೇವನೆಯಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ರಾಗಿಯಿಂದ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಅವುಗಳಲ್ಲಿ ಒಂದು ರಾಗಿ ತಾಲಿಪಟ್ಟು. ತಾಲಿಪಟ್ಟು ನೀವು ಕೇಳಿರಬಹುದು. ಆದರೆ ರಾಗಿ ತಾಲಿಪಟ್ಟಿನ ಬಗ್ಗೆ ಬಹುತೇಕರಿಗೆ ಗೊತ್ತಿಲ್ಲ. ರಾಗಿಯಿಂದ ಸಖತ್ ಟೇಸ್ಟಿ ಆಗಿರೋ ತಾಲಿಪಟ್ಟು ತಯಾರಿಸಬಹುದು. ಉತ್ತರ ಕರ್ನಾಟಕದ ವಿಶೇಷ ರಾಗಿ ತಾಲಿಪಟ್ಟು ಮಾಡುವ ವಿಧಾನವನ್ನು ವಿಡಿಯೊ ಮೂಲಕ ಹಂಚಿಕೊಂಡಿದ್ದಾರೆ Swathi Kai Ruchi ಫೇಸ್‌ಬುಕ್ ಪುಟದ ಅಡ್ಮಿನ್. ಈ ರಾಗಿ ತಾಲಿಪಟ್ಟನ್ನು ಮಾಡುವ ವಿಧಾನ, ಅದಕ್ಕೆ ಏನೆಲ್ಲಾ ಸಾಮಗ್ರಿಗಳು ಬೇಕು ನೋಡಿ.
ರಾಗಿ ತಾಲಿಪಟ್ಟಿಗೆ ಬೇಕಾಗುವ ಸಾಮಗ್ರಿಗಳು
ರಾಗಿಹಿಟ್ಟು– 2 ಬೌಲ್, ಈರುಳ್ಳಿ – 1ಕಪ್, ಸೋರೆಕಾಯಿ ತುರಿ – ಅರ್ಧ ಕಪ್, ಕ್ಯಾರೆಟ್ ತುರಿ – ಅರ್ಧ ಕಪ್, ಕೊತ್ತಂಬರಿ ಸೊಪ್ಪು ಹೆಚ್ಚಿಕೊಂಡಿದ್ದು – ಅರ್ಧ ಕಪ್, ಉಪ್ಪು – ರುಚಿಗೆ ತಕ್ಕಷ್ಟು, ಶುಂಠಿ–ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಪೇಸ್ಟ್ – 1 ಚಮಚ, ಬಿಸಿ ನೀರು – ಹಿಟ್ಟು ಕಲೆಸಲು
ರಾಗಿ ತಾಲಿಪಟ್ಟು ತಯಾರಿಸುವ ವಿಧಾನ
ಒಂದು ಪಾತ್ರೆಯಲ್ಲಿ ರಾಗಿಹಿಟ್ಟು, ಸೋರೆಕಾಯಿ ತುರಿ, ಕ್ಯಾರೆಟ್ ತುರಿ, ಕೊತ್ತಂಬರಿ ಸೊಪ್ಪು, ಶುಂಠಿ–ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಪೇಸ್ಟ್, ಹೆಚ್ಚಿಟ್ಟುಕೊಂಡು ಈರುಳ್ಳಿ, ಉಪ್ಪು ಹಾಕಿ. ಇದಕ್ಕೆ ಹದಕ್ಕೆ ತಕ್ಕಂತೆ ನೀರು ಸೇರಿಸುತ್ತಾ ಚೆನ್ನಾಗಿ ಕಲೆಸಿ. ಈ ಹಿಟ್ಟನ್ನು ತುಂಬಾ ಗಟ್ಟಿಯಾಗಿ ಕಲೆಸಬಾರದು ಹಾಗೆ ತುಂಬಾ ಮೆತ್ತಗೂ ಕಲೆಸಬಾರದು. ರಾಗಿತಾಲಿಪಟ್ಟು ತಯಾರಿಸಲು ಚೆನ್ನಾಗಿ ಹಿಟ್ಟು ಕಲೆಸಿ 10 ನಿಮಿಷ ಹಾಗೆ ಬಿಡಿ. ಆ ಹೊತ್ತಿಗೆ ನೀವು ಚಟ್ನಿ ಮಾಡಿಟ್ಟುಕೊಳ್ಳಬಹುದು.
ರಾಗಿ ತಾಲಿಪಟ್ಟು ಮಾಡುವಾಗ ಕಲೆಸಿಟ್ಟುಕೊಂಡ ಹಿಟ್ಟಿನಿಂದ ಒಂದು ದೊಡ್ಡ ಉಂಡೆ ಮಾಡಿಕೊಳ್ಳಿ. ಇದನ್ನು ಎಣ್ಣೆ ಸವರಿದ ಕವರ್ ಮೇಲೆ ಇಟ್ಟು ಚೆನ್ನಾಗಿ ತಟ್ಟಿಕೊಂಡು ರೊಟ್ಟಿ ಆಕಾರ ಕೊಡಿ. ನಂತರ ಕಾದಿರುವ ತವಾ ಮೇಲೆ ರೊಟ್ಟಿ ಹಾಕಿ, ಎರಡೂ ಕಡೆ ಚೆನ್ನಾಗಿ ಕಾಯಿಸಿ. ಈ ರಾಗಿ ತಾಲಿಪಟ್ಟಿನ ಜೊತೆ ಕಾಯಿಚಟ್ನಿ ಸಖತ್ ಕಾಂಬಿನೇಷನ್.
ಸೆಪ್ಟೆಂಬರ್ 12 ರಂದು Swathi Kai Ruchi ಫೇಸ್‌ಬುಕ್ ಪುಟದ ಅಡ್ಮಿನ್ ಈ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈಗಾಗಲೇ 4 ಲಕ್ಷಕ್ಕೂ ಅಧಿಕ ಮಂದಿ ಈ ವಿಡಿಯೊವನ್ನು ನೋಡಿದ್ದು 2 ಸಾವಿರಕ್ಕೂ ಅಧಿಕ ಮಂದಿ ಲೈಕ್ ಮಾಡಿದ್ದಾರೆ. ಹಲವರು ಈ ವಿಡಿಯೊಗೆ ಕಾಮೆಂಟ್ ಮಾಡಿ ಸೂಪರ್ ರೆಸಿಪಿ ಎಂದಿದ್ದಾರೆ. ‘ತಾಲಿ ಪಟ್ಟು ಓಕೆ.ಆದ್ರೆ ಅದು ಅದು ದಕ್ಷಿಣ ಕರ್ನಾಟಕದ ರುಚಿಯಾದ ಮಸಾಲ ರೊಟ್ಟಿ‘ ಎಂದು ಸಾವಿತ್ರಿ ಹಿರಿಯಣ್ಣಯ್ಯ ಅವರು ಕಾಮೆಂಟ್ ಮಾಡಿದ್ದಾರೆ. ತಾಲಿಪಟ್ಟು ಅಥವಾ ಮಸಾಲ ರೊಟ್ಟೆ ಹೆಸರು ಏನೇ ಇರಲಿ, ಈ ರೆಸಿಪಿಯನ್ನ ನೀವು ಒಮ್ಮೆ ಮನೆಯಲ್ಲಿ ಮಾಡಿ ತಿನ್ನಿ, ರುಚಿ ಹೇಗಿರುತ್ತದೆ ನೋಡಿ. ಹೆಸರಿಗಿಂತ ರುಚಿ ಮುಖ್ಯ.
ರಾಗಿ ಮಧುಮೇಹಿಗಳಿಂದ ಹಿಡಿದು ಹಲವು ರೀತಿಯ ಆರೋಗ್ಯ ಸಮಸ್ಯೆ ಇರುವವರಿಗೂ ಪ್ರಯೋಜನಕಾರಿ. ರಾಗಿ ತಿನ್ನುವುದರಿಂದ ಅಡ್ಡಪರಿಣಾಮಗಳೂ ಕಡಿಮೆ. ತೂಕ ಇಳಿಸಿಕೊಳ್ಳಲು ಬಯಸುವವರಿಗೂ ರಾಗಿ ಉತ್ತಮ. ಇದರಿಂದ ರಾಗಿಮುದ್ದೆ ಫೇಮಸ್ ಅಂತಾದ್ರೂ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಬಹುದು. ಮೊಳಕೆ ಬರಿಸಿದ ರಾಗಿ ಆರೋಗ್ಯಕ್ಕೆ ಇನ್ನೂ ಉತ್ತಮ. ಇದರಿಂದಲೂ ವಿವಿಧ ರೀತಿಯ ಖಾದ್ಯಗಳನ್ನ ತಯಾರಿಸಿ ತಿನ್ನಬಹುದು.
ವಿಭಾಗ