ತಟ್ಟೆ ಇಡ್ಲಿ, ರವೆ ಇಡ್ಲಿ, ರಾಗಿ ಇಡ್ಲಿ ತಿಂದಿರುವಿರಿ: ಬೀಟ್ರೂಟ್ ಇಡ್ಲಿ ರೆಸಿಪಿ ಟ್ರೈ ಮಾಡಿದ್ದೀರಾ, ಇಲ್ಲದಿದ್ದರೆ ಇಂದೇ ಪ್ರಯತ್ನಿಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ತಟ್ಟೆ ಇಡ್ಲಿ, ರವೆ ಇಡ್ಲಿ, ರಾಗಿ ಇಡ್ಲಿ ತಿಂದಿರುವಿರಿ: ಬೀಟ್ರೂಟ್ ಇಡ್ಲಿ ರೆಸಿಪಿ ಟ್ರೈ ಮಾಡಿದ್ದೀರಾ, ಇಲ್ಲದಿದ್ದರೆ ಇಂದೇ ಪ್ರಯತ್ನಿಸಿ

ತಟ್ಟೆ ಇಡ್ಲಿ, ರವೆ ಇಡ್ಲಿ, ರಾಗಿ ಇಡ್ಲಿ ತಿಂದಿರುವಿರಿ: ಬೀಟ್ರೂಟ್ ಇಡ್ಲಿ ರೆಸಿಪಿ ಟ್ರೈ ಮಾಡಿದ್ದೀರಾ, ಇಲ್ಲದಿದ್ದರೆ ಇಂದೇ ಪ್ರಯತ್ನಿಸಿ

ಬಹುತೇಕ ಮಂದಿ ಬೆಳಗಿನ ಉಪಹಾರವಾಗಿ ಇಡ್ಲಿಯನ್ನು ಚಟ್ನಿ ಅಥವಾ ತರಕಾರಿ ಸಾಂಬಾರ್ ಜತೆ ಸವಿಯಲು ಇಷ್ಟಪಡುತ್ತಾರೆ. ಇಡ್ಲಿಯಲ್ಲಿ ಅನೇಕ ವೆರೈಟಿಗಳಿವೆ. ನೀವು ತಟ್ಟೆ ಇಡ್ಲಿ, ರವೆ ಇಡ್ಲಿ, ರಾಗಿ ಇಡ್ಲಿ, ಮಲ್ಲಿಗೆ ಇಡ್ಲಿಯನ್ನು ತಿಂದಿರಬಹುದು. ಆದರೆ, ಎಂದಾದರೂ ಬೀಟ್ರೂಟ್ ಇಡ್ಲಿ ರೆಸಿಪಿ ಟ್ರೈ ಮಾಡಿದ್ದೀರಾ? ಇಲ್ಲದಿದ್ದರೆ ಇಂದೇ ಪ್ರಯತ್ನಿಸಿ.

ತಟ್ಟೆ ಇಡ್ಲಿ, ರವೆ ಇಡ್ಲಿ, ರಾಗಿ ಇಡ್ಲಿ ತಿಂದಿರುವಿರಿ: ಬೀಟ್ರೂಟ್ ಇಡ್ಲಿ ರೆಸಿಪಿ ಟ್ರೈ ಮಾಡಿದ್ದೀರಾ, ಇಲ್ಲದಿದ್ದರೆ ಇಂದೇ ಪ್ರಯತ್ನಿಸಿ
ತಟ್ಟೆ ಇಡ್ಲಿ, ರವೆ ಇಡ್ಲಿ, ರಾಗಿ ಇಡ್ಲಿ ತಿಂದಿರುವಿರಿ: ಬೀಟ್ರೂಟ್ ಇಡ್ಲಿ ರೆಸಿಪಿ ಟ್ರೈ ಮಾಡಿದ್ದೀರಾ, ಇಲ್ಲದಿದ್ದರೆ ಇಂದೇ ಪ್ರಯತ್ನಿಸಿ (PC: Pinterest )

ಇಡ್ಲಿಯು ದಕ್ಷಿಣ ಭಾರತದ ಅತ್ಯಂತ ಪ್ರಸಿದ್ಧ ಉಪಹಾರ ಖಾದ್ಯ ಎಂದರೆ ತಪ್ಪಿಲ್ಲ. ಇಡ್ಲಿಗೆ ತನ್ನದೇ ಆದ ವಿಶೇಷ ಸ್ಥಾನಮಾನವಿದೆ. ಬಹುಷಃ ಇಡ್ಲಿ ತಯಾರಿಸದ ದಕ್ಷಿಣ ಭಾರತದ ಅಡುಗೆ ಮನೆಗಳೇ ಇರಲಿಕ್ಕಿಲ್ಲ ಎನ್ನಬಹುದು. ಹೋಟೆಲ್‌ಗಳಿಗೆ ಹೋದರೆ ಬೆಳಗಿನ ತಿಂಡಿಯಾಗಿ ಇಡ್ಲಿಯನ್ನೇ ಆರ್ಡರ್ ಮಾಡಿ ತಿನ್ನುವವರು ಅನೇಕರಿದ್ದಾರೆ. ಇಡ್ಲಿಯನ್ನು ಚಟ್ನಿ, ಸಾಂಬಾರ್ ಜತೆ ಸವಿಯಬಹುದು. ಅಷ್ಟೇ ಅಲ್ಲ, ಮಾಂಸಾಹಾರ ಪ್ರಿಯರಾಗಿದ್ದರೆ ಚಿಕನ್ ಸಾಂಬಾರ್ ಜತೆಗೂ ಸವಿಯಲು ರುಚಿಕರವಾಗಿರುತ್ತದೆ. ಆದರೆ, ಬಹುತೇಕ ಮಂದಿ ಬೆಳಗಿನ ಉಪಹಾರವಾಗಿ ಇಡ್ಲಿಯನ್ನು ಚಟ್ನಿ ಅಥವಾ ತರಕಾರಿ ಸಾಂಬಾರ್ ಜತೆ ಸವಿಯಲು ಇಷ್ಟಪಡುತ್ತಾರೆ. ಇಡ್ಲಿಯಲ್ಲಿ ಅನೇಕ ವೆರೈಟಿಗಳಿವೆ. ನೀವು ತಟ್ಟೆ ಇಡ್ಲಿ, ರವೆ ಇಡ್ಲಿ, ರಾಗಿ ಇಡ್ಲಿ, ಮಲ್ಲಿಗೆ ಇಡ್ಲಿಯನ್ನು ತಿಂದಿರಬಹುದು. ಆದರೆ, ಎಂದಾದರೂ ಬೀಟ್ರೂಟ್ ಇಡ್ಲಿಯನ್ನು ಪ್ರಯತ್ನಿಸಿದ್ದೀರಾ? ಈ ರೆಸಿಪಿಯನ್ನು ತಯಾರಿಸುವುದು ತುಂಬಾ ಸುಲಭ.

ಸಾಮಾನ್ಯವಾಗಿ ಇಡ್ಲಿ ಬಿಳಿ ಬಣ್ಣದಲ್ಲಿರುತ್ತದೆ. ಆದರೆ, ಈ ಬೀಟ್ರೂಟ್ ಇಡ್ಲಿಯು ಗುಲಾಬಿ ಬಣ್ಣದಲ್ಲಿರುತ್ತದೆ. ಇದು ಬಹಳ ಆರೋಗ್ಯಕರ ಆಹಾರವಾಗಿದ್ದು, ಮಕ್ಕಳಿಗೆ ಆಗಾಗ ಮಾಡಿ ಕೊಡಬಹುದು. ವಿಶಿಷ್ಟ ಬಣ್ಣ ಹಾಗೂ ರುಚಿಯಿಂದ ಇದು ಆಕರ್ಷಿಸುತ್ತದೆ. ಬಹಳ ತ್ವರಿತವಾಗಿ ತಯಾರಿಸಬಹುದಾದ ಈ ಪಾಕವಿಧಾನವು ಕೇವಲ 30 ನಿಮಿಷಗಳಿಗಿಂತ ಕಡಿಮೆ ಅವಧಿಯಲ್ಲಿ ಸಿದ್ಧವಾಗಲಿದೆ. ತ್ವರಿತವಾಗಿ ತಯಾರಿಸಬಹುದಾದ ಇಡ್ಲಿ ರೆಸಿಪಿಗೆ ಹುದುಗುವಿಕೆಯ ಅಗತ್ಯವಿಲ್ಲ. ಈ ಬೀಟ್ರೂಟ್ ಇಡ್ಲಿಯನ್ನು ಇಡ್ಲಿ ಮೇಕರ್‌ನಲ್ಲೇ ಬೇಯಿಸಬಹುದು ಅಥವಾ ಪ್ರೆಶರ್ ಕುಕ್ಕರ್‌ನಲ್ಲೂ ಸೀಟಿಯಿಲ್ಲದೆ ಇರಿಸಬಹುದು. ಹಾಗಿದ್ದರೆ ಇದನ್ನು ಮಾಡುವುದು ಹೇಗೆ, ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.

ಬೀಟ್ರೂಟ್ ಇಡ್ಲಿ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ಹುರಿದ ರವೆ- 2 ಕಪ್, ಮೊಸರು- 1 ಕಪ್, ಸಣ್ಣ ಬೀಟ್ರೂಟ್- 1, ರುಚಿಗೆ ತಕ್ಕಷ್ಟು ಉಪ್ಪು, ನೀರು- ಅಗತ್ಯವಿದ್ದಷ್ಟು.

ಮಾಡುವ ವಿಧಾನ: ಹಂತ-1: ಮೊದಲಿಗೆ ಒಂದು ಪಾತ್ರೆಯಲ್ಲಿ ಹುರಿದ ರವೆ, ಮೊಸರು, 1 ಕಪ್ ನೀರು ಸೇರಿಸಿ. ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಬೇಕಾಗುವಷ್ಟು ನೀರು ಹಾಕಿ ಚೆನ್ನಾಗಿ ಬೆರೆಸಿ. ಇದನ್ನು 10 ನಿಮಿಷಗಳ ಕಾಲ ಪಕ್ಕಕ್ಕೆ ಇರಿಸಿ.

ಹಂತ-2: ಇನ್ನೊಂದೆಡೆ ಬೀಟ್ರೂಟ್ ಸಿಪ್ಪೆ ತೆಗೆದು, ಸಣ್ಣ ತುಂಡುಗಳಾಗಿ ಕತ್ತರಿಸಿ. ಇದನ್ನು ಮಿಕ್ಸಿ ಜಾರಿಗೆ ಹಾಕಿ ಪೇಸ್ಟ್ ತಯಾರಿಸಿಕೊಳ್ಳಿ.

ಹಂತ-3: ಈ ಬೀಟ್ರೂಟ್ ಪೇಸ್ಟ್ ಅನ್ನು ಇಡ್ಲಿ ಹಿಟ್ಟಿಗೆ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ಇಡ್ಲಿ ಹಿಟ್ಟು ತುಂಬಾ ದಪ್ಪವಾಗಿದ್ದರೆ ಅಗತ್ಯವಿದ್ದಷ್ಟು ನೀರು ಸೇರಿಸಬಹುದು.

ಹಂತ-4: ಇಡ್ಲಿ ಅಚ್ಚುಗಳಿಗೆ ಸ್ವಲ್ಪ ಎಣ್ಣೆ ಹಚ್ಚಿ. ಅಚ್ಚುಗಳಿಗೆ ಇಡ್ಲಿ ಹಿಟ್ಟು ಸುರಿಯಿರಿ. 12 ರಿಂದ 14 ನಿಮಿಷಗಳ ಕಾಲ ಸ್ಟೀಮ್ ಮಾಡಿ.

ಹಂತ-5: 15 ನಿಮಿಷಗಳಲ್ಲಿ ಇಡ್ಲಿ ಚೆನ್ನಾಗಿ ಬೆಂದಿರುತ್ತದೆ. ಇಡ್ಲಿಯನ್ನು ಅಚ್ಚುಗಳಿಂದ ಬೇರ್ಪಡಿಸಿ ಸರ್ವಿಂಗ್ ಪ್ಲೇಟ್‍ಗೆ ವರ್ಗಾಯಿಸಿ, ಚಟ್ನಿಯೊಂದಿಗೆ ಬಡಿಸಿರಿ.

ಬೀಟ್ರೂಟ್ ಪೊಟ್ಯಾಸಿಯಮ್, ವಿಟಮಿನ್ ಎ, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿದೆ. ಬೀಟ್ರೂಟ್ ಇಡ್ಲಿಯನ್ನು ಬೆಳಗಿನ ಉಪಹಾರ ಮಾತ್ರವಲ್ಲದೆ ಮಧ್ಯಾಹ್ನ ಹಾಗೂ ರಾತ್ರಿಯೋ ಭೋಜನಕ್ಕೂ ಮಾಡಿ ಸವಿಯಬಹುದು. ತೆಂಗಿನಕಾಯಿ ಚಟ್ನಿಯೊಂದಿಗೆ ತಿನ್ನಲು ಬಹಳ ರುಚಿಕರವಾಗಿರುತ್ತದೆ.

Whats_app_banner