ಖಾಲಿ ಹೊಟ್ಟೆಯಲ್ಲಿ ಅಂಜೂರದ ಜ್ಯೂಸ್‌ ಕುಡಿದು ನೋಡಿ: ಆರೋಗ್ಯದ ಬಗ್ಗೆ ನಿಮಗಿರುವ ಅಂಜಿಕೆ ದೂರಮಾಡುತ್ತೆ ಈ ಒಣ ಹಣ್ಣು
ಕನ್ನಡ ಸುದ್ದಿ  /  ಜೀವನಶೈಲಿ  /  ಖಾಲಿ ಹೊಟ್ಟೆಯಲ್ಲಿ ಅಂಜೂರದ ಜ್ಯೂಸ್‌ ಕುಡಿದು ನೋಡಿ: ಆರೋಗ್ಯದ ಬಗ್ಗೆ ನಿಮಗಿರುವ ಅಂಜಿಕೆ ದೂರಮಾಡುತ್ತೆ ಈ ಒಣ ಹಣ್ಣು

ಖಾಲಿ ಹೊಟ್ಟೆಯಲ್ಲಿ ಅಂಜೂರದ ಜ್ಯೂಸ್‌ ಕುಡಿದು ನೋಡಿ: ಆರೋಗ್ಯದ ಬಗ್ಗೆ ನಿಮಗಿರುವ ಅಂಜಿಕೆ ದೂರಮಾಡುತ್ತೆ ಈ ಒಣ ಹಣ್ಣು

ಒಣ ಹಣ್ಣುಗಳಲ್ಲೊಂದಾದ ಅಂಜೂರವು ಅಗಾಧ ಪೋಷಕಾಂಶಗಳನ್ನು ಹೊಂದಿದೆ. ಅಂಜೂರವನ್ನು ನಿಯಮಿತವಾಗಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ. ಆದರೆ ಕಡಿಮೆ ಸಮಯದಲ್ಲಿ ಹೆಚ್ಚಿನ ಆರೋಗ್ಯ ಪ್ರಯೋಜನ ಪಡೆದುಕೊಳ್ಳಬೇಕೆಂದರೆ ಅಂಜೂರವನ್ನು ಈ ರೀತಿಯಾಗಿ ಸೇವಿಸಿ.

ಒಣ ಅಂಜೂರವನ್ನು ನಿಯಮಿತವಾಗಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ.
ಒಣ ಅಂಜೂರವನ್ನು ನಿಯಮಿತವಾಗಿ ತಿನ್ನುವುದರಿಂದ ಅನೇಕ ಆರೋಗ್ಯ ಪ್ರಯೋಜನಗಳು ಲಭಿಸುತ್ತವೆ. (freepik)

ಒಣ ಹಣ್ಣುಗಳನ್ನು ಸೂಪರ್‌ ಫುಡ್‌ ಎಂದು ಕರೆಯಲಾಗುತ್ತದೆ. ಅವುಗಳಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನಗಳಿವೆ. ಒಣ ಹಣ್ಣುಗಳ ಸಾಲಿಗೆ ಅಂಜೂರವು ಸೇರುತ್ತದೆ. ಫಿಗ್‌ ಎಂದೂ ಕರೆಯಲ್ಪಡುವ ಅಂಜೂರ ಮೂಲತಃ ಮಧ್ಯ ಏಷ್ಯಾ, ಮೆಡಿಟರೇನಿಯನ್‌ ಹಾಗೂ ಉತ್ತರ ಭಾರತದ ಹಣ್ಣಾಗಿದೆ. ಚಿಕ್ಕ ಚಿಕ್ಕ ಬೀಜಗಳಿಂದ ತುಂಬಿರುವ ಅಂಜೂರವು ಫೈಬರ್‌, ಜೀವಸತ್ವ ಹಾಗೂ ಖನಿಜಗಳಿಂದ ಸಮೃದ್ಧವಾಗಿದೆ. ಇದು ಜೀರ್ಣಕ್ರಿಯೆಯನ್ನು ಬೆಂಬಲಿಸುವುದರ ಜೊತೆಗೆ ಮಲಬದ್ಧತೆ ಮತ್ತು ಅತಿಸಾರವನ್ನು ತಡೆಯುತ್ತದೆ. ಅಂಜೂರವು ಆಂಟಿಆಕ್ಸಿಡೆಂಟ್‌ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿದೆ. ಇದರಿಂದಾಗಿ ಉರಿಯೂತ ನಿವಾರಿಸಲು ಶಮನಕಾರಿಯಾಗಿದೆ. ಇಷ್ಟೇ ಅಲ್ಲದೇ ಅಂಜೂರವು ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳಿಂದಲೂ ರಕ್ಷಣೆ ಒದಗಿಸುತ್ತದೆ.

ಅಂಜೂರವು ಖನಿಗಳಿಂದ ಸಮೃದ್ಧವಾಗಿರುವ ಹಣ್ಣಾಗಿದೆ. ಇದರಲ್ಲಿರುವ ಪೊಟ್ಯಾಸಿಯಂ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೂಳೆಗಳ ಆರೋಗ್ಯವನ್ನು ಹೆಚ್ಚಿಸಲು ಬೇಕಾಗುವ ಕ್ಯಾಲ್ಸಿಯಂ ಹಾಗೂ ರಂಜಕವು ಅಂಜೂರದಲ್ಲಿದೆ. ಒಟ್ಟಾರೆಯಾಗಿ ಅಂಜೂರದಿಂದ ಆರೋಗ್ಯಕ್ಕೆ ಹೆಚ್ಚಿನ ಪ್ರಯೋಜನವಿದೆ. ಆದರೆ ಇದನ್ನು ಯಾವ ರೀತಿಯಲ್ಲಿ ತಿಂದರೆ ಹೆಚ್ಚು ಲಾಭ ಪಡೆದುಕೊಳ್ಳಬಹುದು ಎಂಬ ಪ್ರಶ್ನೆ ಎಲ್ಲರಲ್ಲೂ ಇದೆ. ದೇಹಕ್ಕೆ ಚೈತನ್ಯ ನೀಡುವ ಪೋಷಕಾಂಶಭರಿತ ಅಂಜೂರದಿಂದ ಪಾನೀಯವನ್ನು ತಯಾರಿಸಲಾಗುತ್ತದೆ. ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರಿಂದ ಹೆಚ್ಚಿನ ಪ್ರಯೋಜನಗಳು ಸಿಗುತ್ತವೆ ಎಂದು ಹೇಳಲಾಗುತ್ತದೆ. ಹಾಗಾದರೆ ಖಾಲಿ ಹೊಟ್ಟೆಯಲ್ಲಿ ಅಂಜೂರದ ಜ್ಯೂಸ್‌ ಅನ್ನು ಕುಡಿಯುವುದರಿಂದ ಯಾವೆಲ್ಲಾ ಪ್ರಯೋಜನಗಳು ಸಿಗುತ್ತವೆ ಎಂಬುದನ್ನು ಇಲ್ಲಿ ತಿಳಿದುಕೊಳ್ಳೋಣ.

ಖಾಲಿ ಹೊಟ್ಟೆಯಲ್ಲಿ ಅಂಜೂರದ ಜ್ಯೂಸ್‌ ಕುಡಿಯುವುದರಿಂದ ಸಿಗುವ ಪ್ರಯೋಜನಗಳು

ತೂಕ ನಷ್ಟಕ್ಕೆ ಸಹಕಾರಿ: ಅಂಜೂರವು ತೂಕ ನಷ್ಟಕ್ಕೆ ಅತ್ಯುತ್ತಮ ಎನಿಸಿರುವ ಒಣಹಣ್ಣಾಗಿದೆ. ಇದರಲ್ಲಿರುವ ಫೈಬರ್‌ ಮತ್ತು ಆಂಟಿಆಕ್ಸಿಡೆಂಟ್‌ಗಳು ಜೀರ್ಣಕ್ರಿಯೆಯನ್ನು ಉತ್ತೇಜಿಸುತ್ತದೆ. ಇದು ಹಸಿವನ್ನು ನಿಗ್ರಹಿಸುವುದರ ಜೊತೆಗೆ ಕರುಳಿನ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಅಂಜೂರದ ಜ್ಯೂಸ್‌ ಕುಡಿಯುವುದರಿಂದ ಹೊಟ್ಟೆಯ ಕೊಬ್ಬು ಕರಗಿಸಲು ಸಹಾಯ ಮಾಡುತ್ತದೆ. ಈ ಮೂಲಕ ಅದು ತೂಕ ನಿರ್ವಹಣೆಗೆ ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ ಹೆಚ್ಚಿಸುತ್ತದೆ: ಅಂಜೂರವು ಉರಿಯೂತ ಹಾಗೂ ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ. ಇದರಿಂದ ಹೃದಯದ ಆರೋಗ್ಯವನ್ನು ಕಾಪಾಡುವಲ್ಲಿ ಸಹಕಾರಿಯಾಗಿದೆ. ಅಂಜೂರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುವ ಪೊಟ್ಯಾಸಿಯಂ, ಫೈಬರ್‌ ಮತ್ತು ಆಂಟಿಆಕ್ಸಿಡೆಂಟ್‌ಗಳು ರಕ್ತದೊತ್ತಡ ಹಾಗೂ ಹೃದಯದ ರಕ್ತನಾಳಗಳ ಖಾಯಿಲೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲದೇ ಇದು ರಕ್ತಪರಿಚಲನೆಯನ್ನು ಹೆಚ್ಚಿಸುವುದರಿಂದ ಹೃದಯದ ಆರೋಗ್ಯವನ್ನು ಉತ್ತೇಜಿಸುತ್ತದೆ.

ತ್ವಚೆಯ ಆರೋಗ್ಯ: ಅಂಜೂರದ ಜ್ಯೂಸ್‌ ಸೇವನೆಯು ಆರೋಗ್ಯಪೂರ್ಣ ತ್ವಚೆಯನ್ನು ನೀಡುತ್ತದೆ. ಇದು ಚರ್ಮದ ಸುಕ್ಕುಗಳನ್ನು ತಡೆಗಟ್ಟುತ್ತದೆ. ಇದರಿಂದ ವಯಸ್ಸಾಗುವಿಕೆಯ ಚಿಹ್ನೆ ತಡೆಗಟ್ಟುವಲ್ಲಿ ಸಹಕಾರಿ. ಅಂಜೂರವು ಆಂಟಿಆಕ್ಸಿಡೆಂಟ್‌, ಜೀವಸತ್ವ ಮತ್ತು ಖನಿಜಗಳಿಂದ ಸಮೃದ್ಧವಾಗಿರುವುದರಿಂದ ಚರ್ಮಕ್ಕೆ ಟೋನ್‌ ನೀಡುತ್ತದೆ. ತ್ವಚೆಯನ್ನು ಹೈಡ್ರೇಟ್‌ ಆಗಿರಿಸುತ್ತದೆ. ತ್ವಚೆಗೆ ಹೊಳಪು ನೀಡುವ ಅಂಜೂರವು ಮೊಡವೆ, ಹೈಪರ್‌ಪಿಗ್ಮೆಂಟೇಶನ್‌ ಮತ್ತು ಉರಿಯೂತವನ್ನು ಕಡಿಮೆ ಮಾಡುತ್ತದೆ. ಇದರಿಂದ ಕಾಂತಿಯುತ ತ್ವಚೆ ಪಡೆಯಬಹುದು.

ಜೀರ್ಣಕ್ರಿಯೆ ಸುಧಾರಿಸುತ್ತದೆ: ಅಂಜೂರವು ಜೀರ್ಣಕ್ರಿಯೆ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ. ಅಂದರೆ ಮಲಬದ್ಧತೆ, ಹೊಟ್ಟೆಯುಬ್ಬರ, ಕರುಳಿನ ತೊಂದರೆಗಳನ್ನು ನಿವಾರಿಸುತ್ತದೆ. ಫೈಬರ್, ಆಂಟಿಆಕ್ಸಿಡೆಂಟ್‌ ಮತ್ತು ಕಿಣ್ವಗಳನ್ನು ಹೊಂದಿರುವುದರಿಂದ ಕರುಳಿನ ಚಲನೆಯನ್ನು ಉತ್ತೇಜಿಸುತ್ತದೆ. ಇದು ಉರಿಯೂತವನ್ನು ಕಡಿಮೆ ಮಾಡಿ, ದೇಹವು ಹೆಚ್ಚಿನ ಜೀವಸತ್ವಗಳನ್ನು ಹೀರಿಕೊಳ್ಳುವಂತೆ ಮಾಡುತ್ತದೆ.

ಮೂಳೆಯ ಆರೋಗ್ಯ ಸುಧಾರಿಸುತ್ತದೆ: ಅಂಜೂರದಲ್ಲಿರುವ ಕ್ಯಾಲ್ಸಿಯಂ, ರಂಜಕ ಮತ್ತು ಮ್ಯಾಗ್ನೇಸಿಯಂಗಳು ಮೂಳೆಯ ಆರೋಗ್ಯವನ್ನು ಸುಧಾರಿಸುತ್ತದೆ. ನಿಯಮಿತವಾಗಿ ಅಂಜೂರದ ಜ್ಯೂಸ್‌ ಅನ್ನು ಕುಡಿಯುವುದರಿಂದ ಎಲುಬಿನ ತೂಕ ಹೆಚ್ಚುತ್ತದೆ. ಇದು ಒಸ್ಟಿಯೋಪೊರೊಸಿಸ್‌ನ ರಿಸ್ಕ್‌ ಅನ್ನು ಕಡಿಮೆ ಮಾಡುತ್ತದೆ. ಒಟ್ಟಾರೆಯಾಗಿ ಅಂಜೂರವು ಆರೋಗ್ಯವಂತ ಮೂಳೆಯನ್ನು ಪಡೆಯಲು ಸಹಾಯ ಮಾಡುತ್ತದೆ.

ಅಂಜೂರದ ಜ್ಯೂಸ್‌ ತಯಾರಿಸುವುದು ಹೇಗೆ?

2 ರಿಂದ 3 ಅಂಜೂರವನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿ. ಮರುದಿನ ಬೆಳಿಗ್ಗೆ ಅದನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಆ ಮಿಶ್ರಣಕ್ಕೆ ಅಗತ್ಯವಿದ್ದಷ್ಟು ನೀರನ್ನು ಸೇರಿಸಿ. ಸ್ವಲ್ಪ ಬೆಲ್ಲ ಸೇರಿಸಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.

Whats_app_banner