ಸಿಂಕ್‌ನಲ್ಲಿ ಕೊಳಕು ಪಾತ್ರೆಗಳ ರಾಶಿ ನೋಡಿ ತಲೆಬಿಸಿಯಾಗುತ್ತಾ: ಹೊಸದರಂತೆ ಹೊಳೆಯುಲು ಈ ಟ್ರಿಕ್ಸ್ ಬಳಸಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸಿಂಕ್‌ನಲ್ಲಿ ಕೊಳಕು ಪಾತ್ರೆಗಳ ರಾಶಿ ನೋಡಿ ತಲೆಬಿಸಿಯಾಗುತ್ತಾ: ಹೊಸದರಂತೆ ಹೊಳೆಯುಲು ಈ ಟ್ರಿಕ್ಸ್ ಬಳಸಿ

ಸಿಂಕ್‌ನಲ್ಲಿ ಕೊಳಕು ಪಾತ್ರೆಗಳ ರಾಶಿ ನೋಡಿ ತಲೆಬಿಸಿಯಾಗುತ್ತಾ: ಹೊಸದರಂತೆ ಹೊಳೆಯುಲು ಈ ಟ್ರಿಕ್ಸ್ ಬಳಸಿ

ಹಬ್ಬಗಳಲ್ಲಿ, ಮನೆಗೆ ಸಂಬಂಧಿಕರು ಬಂದಾಗ ಬಹಳಷ್ಟು ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಈ ಕಾರಣದಿಂದಾಗಿ ಪಾತ್ರೆಗಳು ಸಹ ತುಂಬಾ ಕೊಳಕಾಗಿರುತ್ತವೆ. ಅವುಗಳನ್ನು ತೊಳೆಯುವುದು ಸುಲಭವಲ್ಲ. ಅಂತಹ ಪರಿಸ್ಥಿತಿಯಲ್ಲಿ, ಇಲ್ಲಿ ನಿಮಗಾಗಿ ಕೆಲವು ಸಲಹೆಗಳನ್ನು ನೀಡಿದ್ದೇವೆ. ಈ ಟ್ರಿಕ್ಸ್ ಬಳಸಿ ಸುಲಭವಾಗಿ ಹಾಗೂ ಕ್ಷಣಾರ್ಧದಲ್ಲಿ ಪಾತ್ರೆಗಳನ್ನು ತೊಳೆಯಬಹುದು.

ಈ ಟ್ರಿಕ್ಸ್‌ಗಳನ್ನು ಬಳಸಿ ಚಿಟಿಕೆ ಹೊಡೆಯುವಷ್ಟರಲ್ಲಿ ಪಾತ್ರೆಗಳನ್ನು ತೊಳೆಯಬಹುದು.
ಈ ಟ್ರಿಕ್ಸ್‌ಗಳನ್ನು ಬಳಸಿ ಚಿಟಿಕೆ ಹೊಡೆಯುವಷ್ಟರಲ್ಲಿ ಪಾತ್ರೆಗಳನ್ನು ತೊಳೆಯಬಹುದು. (Shutterstock)

ಪಾತ್ರೆಗಳನ್ನು ತೊಳೆಯುವ ಕೆಲಸವು ಅತ್ಯಂತ ನೀರಸ. ಅಡುಗೆ ಮಾಡುವುದಾದರೂ ಸರಿ, ಪಾತ್ರೆ ತೊಳೆಯುವುದಲ್ಲ ಅಂತಾ ಅದೆಷ್ಟೋ ಮಂದಿಯ ಮನದಾಳದ ಮಾತು. ಯಾಕೆಂದರೆ ಪಾತ್ರೆಗಳ ರಾಶಿ ಬಿದ್ದರಂತೂ ಅದನ್ನೆಲ್ಲಾ ತೊಳೆದು ಇಡಲು ತುಂಬಾ ಸಮಯ ತೆಗೆದುಕೊಳ್ಳುತ್ತದೆ. ಕೆಲವೊಮ್ಮೆ ಅಡುಗೆ ಮನೆಯ ಎಲ್ಲಾ ಕೆಲಸಗಳಿಗಿಂತ ಇದು ತುಂಬಾ ಕಷ್ಟಕರವಾಗಿರುತ್ತದೆ. ಅದರಲ್ಲೂ ವಿಶೇಷವಾಗಿ ಹಬ್ಬಗಳ ಸಮಯದಲ್ಲಿ, ಅಥವಾ ಮನೆಗೆ ಯಾರಾದರೂ ಸಂಬಂಧಿಕರು ಬಂದರೆ ಈ ಸಮಸ್ಯೆಯನ್ನು ಹೆಚ್ಚು ಎದುರಿಸಬೇಕಾಗುತ್ತದೆ. 

ಹಬ್ಬ ಅಥವಾ ಮನೆಗೆ ಸಂಬಂಧಿಕರು ಬಂದಂತಹ ಸಮಯದಲ್ಲಿ ಮನೆಯಲ್ಲಿ ವಿವಿಧ ರೀತಿಯ ಭಕ್ಷ್ಯಗಳನ್ನು ತಯಾರಿಸಲಾಗುತ್ತದೆ. ಇದರಿಂದ ಸಾಕಷ್ಟು ಪಾತ್ರೆಗಳು ಸಿಂಕ್ ತುಂಬುತ್ತವೆ. ಜಿಡ್ಡು ತುಂಬಿದ ಪಾತ್ರೆಗಳು, ಕುಕ್ಕರ್‌ಗಳು, ಹಾಲಿನ ಪಾತ್ರೆ ಮತ್ತು ಇತ್ಯಾದಿ ಪಾತ್ರೆಗಳನ್ನು ತೊಳೆಯುವುದು ಎಂದರೆ ಅಬ್ಬಬ್ಬಾ ಎಂದಾಗಿಬಿಡುತ್ತದೆ. ಪಾತ್ರೆಗಳ ರಾಶಿ ಇದ್ದರಂತೂ ಎಲ್ಲಾ ತೊಳೆದು ಮುಗಿಸುವಷ್ಟರಲ್ಲಿ ಸೊಂಟ ಬಿದ್ದು ಹೋದಂತಹ ಅನುಭವವಾಗುತ್ತದೆ. ಛೆ.. ಮಂತ್ರದಂಡವೊಂದಿದ್ದರೆ ಚೆನ್ನಾಗಿರುತ್ತಿತ್ತು. ಕ್ಷಣಮಾತ್ರದಲ್ಲಿ ಪಾತ್ರೆಗಳನ್ನು ತೊಳೆದುಹಾಕುತ್ತಿತ್ತು ಎಂದೆಲ್ಲಾ ಯೋಚನೆ ಬರುವುದು ಸಹಜ. ಆದರೆ, ಕೆಲವು ಟ್ರಿಕ್ಸ್‌ಗಳನ್ನು ಬಳಸಿ ಚಿಟಿಕೆ ಹೊಡೆಯುವಷ್ಟರಲ್ಲಿ ಪಾತ್ರೆಗಳನ್ನು ತೊಳೆಯಬಹುದು.

ಹೆಚ್ಚು ಶ್ರಮವಿಲ್ಲದೆ ಪಾತ್ರೆಗಳನ್ನು ಈ ರೀತಿ ತೊಳೆಯಿರಿ

ಪಾತ್ರೆಗಳನ್ನು ತೊಳೆಯುವಲ್ಲಿ ಸೋಮಾರಿಯಾಗಿದ್ದಲ್ಲಿ ಹೆಚ್ಚಿನ ಶ್ರಮವಿಲ್ಲದೆ ನಿಮಿಷಗಳಲ್ಲಿ ಪಾತ್ರೆಗಳನ್ನು ಪಳಪಳನೇ ಹೊಳೆಯುವಂತೆ ಮಾಡಬಹುದು. ಇದಕ್ಕಾಗಿ ನೀವು ಮಾಡಬೇಕಿರುವುದಪ ಇಷ್ಟೇ. ಒಂದು ದೊಡ್ಡ ಟಬ್‌ನಲ್ಲಿ ಸಾಕಷ್ಟು ನೀರನ್ನು ತೆಗೆದುಕೊಂಡು ಅದಕ್ಕೆ ಎರಡು ಟೀ ಚಮಚ ಅಡುಗೆ ಸೋಡಾ ಮತ್ತು ಎರಡು ಕಪ್ ವಿನೆಗರ್ ಅನ್ನು ಬೆರೆಸಿ. ನಂತರ, ಎಲ್ಲಾ ಕೊಳಕು ಪಾತ್ರೆಗಳನ್ನು ಅದರಲ್ಲಿ ಮುಳುಗಿಸಿ, ಸುಮಾರು 15 ನಿಮಿಷಗಳ ಕಾಲ ಹಾಗೆಯೇ ಇಡಿ. ಬಳಿಕ ಎಲ್ಲಾ ಪಾತ್ರೆಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ಈ ರೀತಿ ಮಾಡುವುದರಿಂದ ಪಾತ್ರೆಗಳು ಒಂದೇ ಬಾರಿಗೆ ಸ್ವಚ್ಛಗೊಳ್ಳುವುದು ಮಾತ್ರವಲ್ಲದೆ, ಜಿಡ್ಡಿನಂಶವೆಲ್ಲಾ ಹೋಗಿ ಪಳಪಳ ಹೊಳೆಯುತ್ತದೆ.

ತವಾ ಮತ್ತು ಕುಕ್ಕರ್ ಅನ್ನು ಈ ರೀತಿ ಸ್ವಚ್ಛಗೊಳಿಸಿ

ಅಲ್ಯೂಮಿನಿಯಂ ತವಾಗಳು, ಪಾತ್ರಗಳು ಮತ್ತು ಕುಕ್ಕರ್ ಅನ್ನು ಗ್ಯಾಸ್‌ನಲ್ಲಿ ಅಡುಗೆ ಮಾಡಲು ಬಳಸಿದಾಗ ಅವು ಸುಟ್ಟಂತಹ ಕಪ್ಪು ಕಲೆಗಳನ್ನು ಹೊಂದಿರುತ್ತವೆ. ಈ ಕಲೆಗಳನ್ನು ಸ್ವಚ್ಛಗೊಳಿಸಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಟ್ರಿಕ್ಸ್ ಬಳಸಿ ಸುಲಭವಾಗಿ ತೊಳೆಯಬಹುದು. ಇದಕ್ಕಾಗಿ ಈ ಪಾತ್ರೆಗಳಿಗೆ ನೀರು ಹಾಕಿ ಅದಕ್ಕೆ 2 ಟೀ ಚಮಚ ಉಪ್ಪು ಮತ್ತು ಒಂದು ಟೀ ಚಮಚ ಡಿಟರ್ಜೆಂಟ್ ಅನ್ನು ಮಿಶ್ರಣ ಮಾಡಿ. ನಂತರ ಅದನ್ನು ಸ್ಟೌವ್ ಮೇಲಿಟ್ಟು ಕುದಿಯಲು ಬಿಡಿ. ನಂತರ ಸ್ಟೌವ್‌ನಿಂದ ತೆಗೆದು ಸಾಮಾನ್ಯ ಸ್ಕ್ರಬ್ ಸಹಾಯದಿಂದ ತೊಳೆಯಿರಿ. ಕಲೆ ಇನ್ನೂ ಹೋಗದಿದ್ದರೆ, ಅವುಗಳನ್ನು ಸ್ವಚ್ಛಗೊಳಿಸುವಾಗ, ಕಪ್ಪು ಕಲೆಗಳ ಮೇಲೆ ಸ್ವಲ್ಪ ನಿಂಬೆಯನ್ನು ಉಜ್ಜಿದರೆ ಸಾಕು ಪಾತ್ರೆ ಹೊಸದರಂತೆ ಹೊಳೆಯುತ್ತದೆ.

ಪಾತ್ರೆಯಲ್ಲಿರುವ ಎಣ್ಣೆಯಂಶವನ್ನು ಈ ರೀತಿ ಸ್ವಚ್ಛಗೊಳಿಸಿ

ಪಾತ್ರೆಗಳಲ್ಲಿರುವ ಎಣ್ಣೆ, ತುಪ್ಪ, ಮಸಾಲೆ ಮುಂತಾದ ಜಿಡ್ಡಿನಂಶವನ್ನು ಹೋಗಲಾಡಿಸಲು ಬಿಸಿ ನೀರನ್ನು ಬಳಸಬಹುದು. ಎಣ್ಣೆ-ತುಪ್ಪದ ಜಿಡ್ಡಿನ ಪಾತ್ರೆಗಳನ್ನು ಬಿಸಿ ನೀರಿನಿಂದ ಸ್ವಚ್ಛಗೊಳಿಸಲು ಹೆಚ್ಚು ಶ್ರಮ ಬೇಕಾಗಿಲ್ಲ. ಇವು ಪಾತ್ರೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಲಾಗುತ್ತದೆ. ಇದಕ್ಕಾಗಿ, ಪಾತ್ರೆಗಳನ್ನು ಬಿಸಿ ನೀರಿನಲ್ಲಿ ಮುಳುಗಿಸಬೇಕು. ಬಿಸಿ ನೀರಿಗೆ ಸ್ವಲ್ಪ ಡಿಶ್ವಾಶ್ ಅನ್ನು ಸಹ ಸೇರಿಸಬಹುದು.

ಗಾಜು ಮತ್ತು ಸೆರಾಮಿಕ್ ಪಾತ್ರೆಗಳನ್ನು ಈ ರೀತಿ ಸ್ವಚ್ಛಗೊಳಿಸಿ

ದೀರ್ಘಕಾಲದ ಬಳಕೆಯಿಂದ ಗಾಜು ಮತ್ತು ಸೆರಾಮಿಕ್ ಪಾತ್ರೆಗಳಲ್ಲಿ ಕೊಳಕು ಸಂಗ್ರಹವಾಗುತ್ತದೆ. ಇದರಿಂದಾಗಿ ಈ ಪಾತ್ರೆಗಳ ಹೊಳಪು ಮಸುಕಾಗುತ್ತದೆ. ಡಿಶ್ ವಾಶ್ ಸೋಪ್ ಮತ್ತು ವಿನೆಗರ್ ಸಹಾಯದಿಂದ, ಇವುಗಳಿಗೆ ಮತ್ತೆ ಮೆರುಗು ತರಬಹುದು. ಇದಕ್ಕಾಗಿ, ಒಂದು ದೊಡ್ಡ ಟಬ್‌ನಲ್ಲಿ ಬಿಸಿ ನೀರನ್ನು ತೆಗೆದುಕೊಂಡು ಅದನ್ನು ಡಿಶ್ ವಾಶ್ ಲಿಕ್ವಿಡ್ ಅಥವಾ ಸೋಪ್ ಮತ್ತು ವಿನೆಗರ್‌ನೊಂದಿಗೆ ಬೆರೆಸಿ. ನಂತರ ಗಾಜಿನ ಪಾತ್ರೆಗಳನ್ನು ಹಾಗೂ ಸೆರಾಮಿಕ್ ಪಾತ್ರೆಗಳನ್ನು ಅದರಲ್ಲಿ ನೆನೆಸಿಡಿ. ಸ್ವಲ್ಪ ಸಮಯದ ನಂತರ, ನೀರಿನಿಂದ ತೊಳೆದರೆ ಹೊಸದರಂತೆ ಕಾಣುತ್ತದೆ. ಇದನ್ನು ತೊಳೆಯಲು ಹೆಚ್ಚಿನ ಶ್ರಮ ಬೇಕಿಲ್ಲ. ಬಹಳ ಸುಲಭದಲ್ಲಿ ಸ್ವಚ್ಛಗೊಳಿಸಬಹುದಾದ ವಿಧಾನ ಇದು.

Whats_app_banner