Unhealthy Food: ಮಕ್ಕಳು ಆರೋಗ್ಯವಾಗಿರಬೇಕು ಅಂದ್ರೆ ಈ ಆಹಾರಗಳನ್ನು ಎಂದಿಗೂ ಕೊಡಬೇಡಿ
ಮಕ್ಕಳ ಆರೋಗ್ಯದಲ್ಲಿ ಆಹಾರವು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಕೆಲವೊಂದು ಆಹಾರಗಳನ್ನು ಮಕ್ಕಳಿಗೆ ಕೊಡಬಾರದು. ಇದರಿಂದ ಅವರಲ್ಲಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎನ್ನುತ್ತಾರೆ ತಜ್ಞರು. ಹಾಗಾದ್ರೆ ಯಾವೆಲ್ಲಾ ಆಹಾರಗಳನ್ನು ಮಕ್ಕಳು ಸೇವಿಸಬಾರದು ನೋಡಿ.
ಮಕ್ಕಳಿಗೆ ಸಿಕ್ಕ ಸಿಕ್ಕದ್ದನ್ನೆಲ್ಲಾ ತಿನ್ನುವುದು ಇಷ್ಟವಾಗುತ್ತದೆ. ಬಾಯಿಗೆ ರುಚಿಸಿದ್ದೆಲ್ಲವೂ ಬೇಕು ವಯೋಮಾನವದು. ಸಾಮಾನ್ಯವಾಗಿ ಆರೋಗ್ಯಕರ ಆಹಾರ ಮಕ್ಕಳಿಗೆ ಇಷ್ಟವಾಗುವುದಿಲ್ಲ. ಆ ಕಾರಣಕ್ಕೆ ಪೋಷಕರು ನೀಡುವ ಆಹಾರಗಳು ಅವರ ಬಾಯಿಗೆ ರುಚಿಸುವುದಿಲ್ಲ. ಹಾಗಾಗಿ ತಕ್ಷಣವೇ ತಿನ್ನಲು ನಿರಾಕರಿಸುತ್ತಾರೆ. ಸಿಹಿ ಅಂಶ ಇರುವ ಆಹಾರ ಪದಾರ್ಥಗಳು ಮಕ್ಕಳಿಗೆ ಬಹಳ ಇಷ್ಟವಾಗುತ್ತದೆ. ಪೋಷಕಾಂಶ ರಹಿತ ಜಂಕ್‌ಫುಡ್‌ಗಳನ್ನು ಮಕ್ಕಳು ಮೆಚ್ಚಿ ತಿನ್ನುತ್ತಾರೆ.
ಮಕ್ಕಳು ಒಂದು ವರ್ಷದವರಿದ್ದಾಗಿನಿಂದಲೂ ಅವರಿಗೆ ಸಮತೋಲಿತ ಆಹಾರ ನೀಡುವುದು ಮುಖ್ಯವಾಗುತ್ತದೆ. ಮಕ್ಕಳು ಚಿಕ್ಕ ವಯಸ್ಸಿನಲ್ಲೇ ಸರಿಯಾಗಿ ತಿನ್ನದೇ ಇರುವುದು ದೀರ್ಘಾವಧಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎನ್ನುತ್ತಾರೆ ತಜ್ಞರು.
ರೋಗನಿರೋಧಕ ಶಕ್ತಿ ಹೆಚ್ಚಲು, ಕಾಲೋಚಿತ ಸೋಂಕುಗಳಿಂದ ರಕ್ಷಿಸಲು, ಮೆದುಳು ಮತ್ತು ದೇಹದ ಬೆಳವಣಿಗೆ, ಮಗುವಿನ ಶಕ್ತಿಯ ಮಟ್ಟವನ್ನು ಕಾಪಾಡಿಕೊಳ್ಳಲು ಉತ್ತಮ ಆಹಾರ ಖಂಡಿತ ಮುಖ್ಯ.
ಪೋಷಕಾಂಶ ಸಹಿತ ಆಹಾರ ಪದಾರ್ಥಗಳನ್ನು ರುಚಿಕರವಾಗಿ, ಭಿನ್ನ ತಯಾರಿಸಿ ತಿನ್ನುವಂತೆ ಮಾಡುವುದು ಮುಖ್ಯವಾಗುತ್ತದೆ. ವೆಜ್ ಮಿಕ್ಸ್ ಪರೋಠ, ಪನೀರ್ ರೋಲ್, ಮಿಕ್ಸೆಡ್ ಫ್ರೂಟ್ ರೆಸಿಪಿಗಳಿ ಮಕ್ಕಳಿಗೆ ಹೆಚ್ಚು ಇಷ್ಟವಾಗುತ್ತದೆ. ಮಕ್ಕಳ ಆರೋಗ್ಯ ಹಾಗೂ ಆಹಾರಕ್ಕೆ ಸಂಬಂಧಿಸಿ ಪೋಷಕರು ಸಾಕಷ್ಟು ಗಮನ ವಹಿಸಬೇಕು. ಬಾಲ್ಯವಸ್ಥೆಯಲ್ಲಿ ಮಕ್ಕಳ ಆಹಾರದ ಮೇಲೆ ನಿಗಾ ವಹಿಸದೇ ಇದ್ದರೆ ಇದು ಪ್ರೌಢಾವಸ್ಥೆ ಹಾಗೂ ನಂತರದ ದಿನಗಳಲ್ಲೂ ಮುಂದುವರಿಯಬಹುದು.
ಚಂಡೀಗಢದ ಕ್ಲೌಡ್‌ನೈನ್ ಗ್ರೂಪ್ ಆಫ್ ಹಾಸ್ಪಿಟಲ್ಸ್‌ನ ಹಿರಿಯ ಕ್ಲಿನಿಕಲ್ ನ್ಯೂಟ್ರಿಷನಿಸ್ಟ್ ಗುರ್‌ಪ್ರೀತ್ ಕೌರ್ ಅವರ ಪ್ರಕಾರ ಎಲ್ಲಾ ರೀತಿಯ ಜಂಕ್‌ಫುಡ್‌ಗಳು ಹಾಗೂ ಕರಿದ ಪದಾರ್ಥಗಳು ಮಕ್ಕಳು ಸೇರಿದಂತೆ ಎಲ್ಲರಿಗೂ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ ಮಾಡುವುದು ಸಹಜ. ಆದರೆ ಕೆಲವು ಆಹಾರಗಳನ್ನು ಮಕ್ಕಳಿಗೆ ಎಂದಿಗೂ ನೀಡಬಾರದು. ಇದರಿಂದ ಹಲವು ರೀತಿ ವೈದ್ಯಕೀಯ ಸಮಸ್ಯೆಗಳು ಹಾಗೂ ಆಹಾರದ ಅಲರ್ಜಿ ಉಂಟಾಗಬಹುದು.
ಇದನ್ನೂ ಓದಿ: Child Health: ನೂಡಲ್ಸ್‌ನಿಂದ ಪಿಜ್ಜಾದವರೆಗೆ ಮಕ್ಕಳ ಆರೋಗ್ಯ ಕೆಡಿಸುವ 10 ಜನಪ್ರಿಯ ಜಂಕ್ ಫುಡ್‌ಗಳಿವು
ಮಕ್ಕಳಿಗೆ ಯಾವೆಲ್ಲಾ ಆಹಾರಗಳನ್ನು ನೀಡಲೇಬಾರದು ನೋಡಿ
ಹಸಿ ಹಾಲು ಹಾಗೂ ಸಾಫ್ಟ್ ಚೀಸ್: ಪಾಶ್ಚರೀಕರಿಸಿದ ಆಹಾರಗಳು ಹಾಗೂ ಪಾನೀಯಗಳು ಹಾನಿಕಾರಕ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ಇದು ತೀವ್ರತರದ ಅತಿಸಾರ ಮತ್ತು ಗಂಭೀರ ಸಾಂಕ್ರಾಮಿಕ ಕಾಯಿಲೆಗೆ ಕಾರಣವಾಗಬಹುದು. ಇದು ಮಗುವಿನ ಕರುಳಿನ ಆರೋಗ್ಯವನ್ನು ದುರ್ಬಲಗೊಳಿಸುತ್ತದೆ. ಪ್ರತಿರಕ್ಷಣಾ ವ್ಯವಸ್ಥೆಗೂ ಹಾನಿ ಮಾಡುತ್ತದೆ. ಆ ಕಾರಣಕ್ಕೆ ಈ ಆಹಾರಗಳ ಸೇವನೆಯನ್ನು ತಪ್ಪಿಸುವುದು ಉತ್ತಮ. ಸಾಶಿಮಿ, ಸುಶಿಯಂತಹ ಕಚ್ಚಾ ಮಾಂಸಗಳ ಸೇವನೆಯನ್ನೂ ತಪ್ಪಿಸಬೇಕು.
ಚಿಪ್ಸ್‌ನಂತಹ ತಿನಿಸುಗಳು: ಹೆಚ್ಚುವರಿ ಉಪ್ಪು ಬೆಳೆಯುತ್ತಿರುವ ಮೂತ್ರಪಿಂಡಗಳಿಗೆ ಒಳ್ಳೆಯದಲ್ಲ. ಪ್ರೊಸೆಸ್ಡ್ ಫುಡ್, ಫ್ರೋಜನ್ ಫುಡ್, ಹೆಪ್ಪುಗಟ್ಟಿದ ಆಹಾರ ಪದಾರ್ಥಗಳು, ಸಾಸೇಜ್‌ಗಳು, ಚಿಪ್ಸ್, ಕ್ರ್ಯಾಕರ್‌ಗಳು, ಕ್ರಿಸ್ಟ್‌ಗಳು, ಉಪ್ಪಿನಕಾಯಿ ಇಂತಹ ಆಹಾರಗಳನ್ನು ಮಕ್ಕಳಿಗೆ ನಿಯಮಿತವಾಗಿ ನೀಡುವುದನ್ನು ತಪ್ಪಿಸಬೇಕು.
ಬಿಸ್ಕತ್ತು, ಕೇಕ್, ಚಾಕೊಲೇಟ್: ಬಹುತೇಕರು ಮಕ್ಕಳು ಇಷ್ಟಪಡುತ್ತಾರೆ ಎಂಬ ಕಾರಣಕ್ಕೆ ಅವರ ಡಬ್ಬಿಗೆ ಈ ರೀತಿಯ ಆಹಾರಗಳನ್ನು ಹಾಕುತ್ತಾರೆ. ಆದರೆ ಇದು ಖಂಡಿತ ಒಳ್ಳೆಯದಲ್ಲ. ಮಕ್ಕಳು ಇಷ್ಟಪಟ್ಟಿದ್ದನ್ನು ಕೊಡಿಸುವ ಪೋಷಕರು ನಂತರ ಮಕ್ಕಳ ಆರೋಗ್ಯಕ್ಕೆ ಚಿಂತಿಸುತ್ತಾರೆ. ಈ ರೀತಿಯ ಆಹಾರಗಳು ಬೊಜ್ಜು, ಮಧುಮೇಹ, ಹೃದ್ರೋಗದಂತಹ ಅಪಾಯಗಳಿಗೆ ಕಾರಣವಾಗಬಹುದು. ಅತಿಯಾದ ಸಕ್ಕರೆ ಅಂಶ ಇರುವ ಆಹಾರಗಳು ಹಾಗೂ ಪಾನೀಯಗಳು ಹಲ್ಲು ಹುಳುಕಿಗೆ ಕಾರಣವಾಗಬಹುದು. ಪ್ಯಾಕೇಟ್ ಜ್ಯೂಸ್, ಮಫಿನ್, ಬಿಸ್ಕತ್, ಕೇಕ್, ಚಾಕೊಲೇಟ್, ಸ್ಟಾಫ್ಟ್ ಡ್ರಿಂಕ್ಸ್, ಫ್ಲೇವರ್ಡ್ ಮಿಲ್ಕ್ ಇಂತಹ ಆಹಾರಗಳು ಮಕ್ಕಳಿಗೆ ಖಂಡಿತ ಒಳ್ಳೆಯದಲ್ಲ.
ಕೆಫೀನ್: ಅತಿಯಾದ ಕೆಫೀನ್ ಅಂಶವುಳ್ಳ ಆಹಾರ ಪದಾರ್ಥಗಳು ಹೃದಯ ಬಡಿತ, ಆತಂಕ, ನಿದ್ರೆಯ ಕೊರತೆಗೆ ಕಾರಣವಾಗಬಹುದು. ಕೆಫೀನ್ ಅಂಶವು ಮಕ್ಕಳಿಗೆ ವಿಷಕಾರಿಯಾಗಿದೆ. ಇದು ಕ್ಯಾಲ್ಸಿಯಂ ಹೀರುಕೊಳ್ಳುವಿಕೆಗೆ ಅಡ್ಡಿಪಡಿಸುತ್ತದೆ. ಇದು ಬೆಳವಣಿಗೆಯ ಹಂತದಲ್ಲಿ ಮೂಳೆಗಳ ಬೆಳವಣಿಗೆಗೆ ಅಡ್ಡಿಪಡಿಸುತ್ತದೆ.
ಪ್ಯಾಕೇಟ್ ಆಹಾರ ಹಾಗೂ ಡೀಪ್ ಫ್ರೈ ಮಾಡಿದ ಆಹಾರ: ಸ್ಯಾಚುರೇಟೆಡ್ ಕೊಬ್ಬು ಹಾಗೂ ಟ್ರಾನ್ಸ್ ಕೊಬ್ಬಿನಾಂಶ ಇರುವ ಆಹಾರ ಪದಾರ್ಥಗಳು ಮಗುವಿನ ಆರೋಗ್ಯಕ್ಕೆ ಅನಾರೋಗ್ಯಕರ. ಇದು ಬೊಜ್ಜು ಹಾಗೂ ಅದಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಕಾರಣವಾಗಬಹುದು. ಇದು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸಬಹುದು. ಬೇಕರಿ ಉತ್ಪನ್ನಗಳು, ಜಂಕ್‌ಫುಡ್, ಪ್ಯಾಕ್‌ನಲ್ಲಿ ಇರಿಸುವ ಆಹಾರಗಳು, ಡೀಪ್ ಫ್ರೈ ಮಾಡಿದ ಆಹಾರ ಪದಾರ್ಥಗಳಲ್ಲಿ ಕಂಡುಬರುತ್ತದೆ. ಒಣಹಣ್ಣು, ಅವಕಾಡೊ, ಸೋಯಾ, ಹಣ್ಣು, ತರಕಾರಿ ಒಣ ಬೀಜಗಳು ಆರೋಗ್ಯಕರ ಕೊಬ್ಬಿನಾಂಶ ಹೊಂದಿರುತ್ತವೆ, ಆ ಕಾರಣಕ್ಕೆ ಮಕ್ಕಳಿಗೆ ಆಗಾಗ ತಿನ್ನಬಹುದು.
ಹಸಿ ತರಕಾರಿ: ಕೋಸುಗೆಡ್ಡೆ, ದೊಣ್ಣೆಮೆಣಸು, ಬಟಾಣಿ, ಹೂಕೋಸು, ಬೀನ್ಸ್, ಬೆಂಡೆಕಾಯಿ ಮುಂತಾದ ಹಸಿ ತರಕಾರಿಗಳು ಸಾಕಷ್ಟು ಪ್ರಮಾಣದಲ್ಲಿ ನೈಟ್ರೇಟ್ ಅಂಶವನ್ನು ಹೊಂದಿರುತ್ತದೆ. ಇದು ಚಿಕ್ಕ ಮಕ್ಕಳಿಗೆ ಖಂಡಿತ ಒಳ್ಳೆಯದಲ್ಲ. ತರಕಾರಿಯನ್ನು ಚೆನ್ನಾಗಿ ತೊಳೆದು ಬೇಯಿಸಿ ತಿನ್ನಿಸುವುದು ಉತ್ತಮ.
ದುಂಡಗಿನ ಆಹಾರಗಳು: ದ್ರಾಕ್ಷಿ, ಒಣದ್ರಾಕ್ಷಿ, ಬಾದಾಮಿ, ಗಟ್ಟಿಯಾದ ಬಟಾಣಿ ಮುಂತಾದ ಆಹಾರಗಳು ಮಗುವಿನ ಶ್ವಾಸನಾಳದಲ್ಲಿ ಸಿಲುಕಿ ತೊಂದರೆ ಉಂಟು ಮಾಡಬಹುದು. ಹಾಗಾಗಿ ಮಗುವಿಗೆ 5 ವರ್ಷ ಆಗುವವರೆಗೂ ಇಂತಹ ಆಹಾರ ಪದಾರ್ಥಗಳನ್ನು ತಿನ್ನಸದೇ ಇರುವುದು ಉತ್ತಮ.
ಸಿಗಡಿ, ಕಡಲೆಕಾಯಿಯಂತಹ ಅಲರ್ಜಿ ಉಂಟು ಮಾಡುವ ಆಹಾರಗಳು: ನಿಮ್ಮ ಮಗು ಕೆಲವು ಆಹಾರದ ಅಲರ್ಜಿಗಳಿಂತ ಬಳಲಬಹುದು. ಕೆಲವು ಸಾಮಾನ್ಯ ಆಹಾರಗಳಾದ ಹಾಲು, ಸಿಗಡಿ, ಮೊಟ್ಟೆ, ಕಡಲೆಕಾಯಿ, ಸೋಯಾಬೀನ್, ಮೀನು ಮುಂತಾದ ಆಹಾರಗಳು ಆಹಾರದ ಅಲರ್ಜಿಯನ್ನು ಉಂಟು ಮಾಡುತ್ತವೆ. ಇವುಗಳನ್ನು ಸೇವಿಸದ ನಂತರ ಹೈವ್ಸ್, ದದ್ದು ಇಂತಹ ಲಕ್ಷಣ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.