ಕನ್ನಡ ಸುದ್ದಿ  /  ಜೀವನಶೈಲಿ  /  Flu Influenza: ಮುಂಗಾರಿನೊಂದಿಗೆ ಬರಲಿದೆ ಫ್ಲೂ ಇನ್ಫ್ಲುಯೆಂಜಾ; ಫ್ಲೂ ಜ್ವರದ ಬಗ್ಗೆ ಯಾರು ಹೆಚ್ಚು ಎಚ್ಚರ ವಹಿಸಬೇಕು ನೋಡಿ

Flu Influenza: ಮುಂಗಾರಿನೊಂದಿಗೆ ಬರಲಿದೆ ಫ್ಲೂ ಇನ್ಫ್ಲುಯೆಂಜಾ; ಫ್ಲೂ ಜ್ವರದ ಬಗ್ಗೆ ಯಾರು ಹೆಚ್ಚು ಎಚ್ಚರ ವಹಿಸಬೇಕು ನೋಡಿ

Rain and Flu Season: ಮುಂಗಾರುಮಳೆ ಆರಂಭವಾಯಿತು ಎಂದರೆ ಕಾಯಿಲೆಗಳು ಜೊತೆಯಾಗಿಯೇ ಬರುತ್ತವೆ. ಮಳೆ ಹನಿಯಲು ಆರಂಭವಾದ ತಕ್ಷಣ ವೈರಲ್‌ ಜ್ವರ ಹಾಗೂ ಫ್ಲೂ ಹೆಚ್ಚುತ್ತದೆ. ಇದಕ್ಕೆ ಕಾರಣವೇನು, ಫ್ಲೂ ಜ್ವರದ ರೋಗಲಕ್ಷಣಗಳೇನು, ಯಾರು ಈ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕು, ಚಿಕಿತ್ಸೆ ಏನು ಈ ಎಲ್ಲದರ ಕುರಿತ ಮಾಹಿತಿ ಇಲ್ಲಿದೆ.

ಮುಂಗಾರಿನೊಂದಿಗೆ ಬರಲಿದೆ ಫ್ಲೂ ಜ್ವರ
ಮುಂಗಾರಿನೊಂದಿಗೆ ಬರಲಿದೆ ಫ್ಲೂ ಜ್ವರ

ಅತಿಯಾದ ಬಿಸಿಲಿನ ತಾಪದಿಂದ ಜನರು ತತ್ತರಿಸುತ್ತಿದ್ದಾರೆ. ಜೂನ್‌ ತಿಂಗಳು ಆರಂಭವಾದರೂ ಮಳೆಯ ಸುಳಿವೇ ಇಲ್ಲ. ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಒಂದಿಷ್ಟು ಮಳೆಯಾಗಿದೆ. ಆದರೆ ಬಿಸಿಲಿನ ಪ್ರಮಾಣ ಹೆಚ್ಚಿದೆ. ಬಿಸಿಲಿನ ಜೊತೆಗೆ ಮೋಡ ಕವಿದ ವಾತಾವರಣವು ಆರೋಗ್ಯ ಸಮಸ್ಯೆಯನ್ನು ತಂದೊಡ್ಡುತ್ತಿದೆ.

ಅದರೊಂದಿಗೆ ಮುಂಗಾರಿನ ಋತು (Rainy Season) ಆರಂಭವಾಯಿತು ಎಂದರೆ ಫ್ಲೂ (ಇನ್ಫ್ಲುಯೆಂಜಾ), ವೈರಲ್‌ ಫ್ಲೂ(Viral Flu) ಗಳ ಪ್ರಮಾಣ ಹೆಚ್ಚಲು ಆರಂಭವಾಗುತ್ತದೆ. ಹವಾಮಾನ ಬದಲಾವಣೆಯೊಂದಿಗೆ ಸೊಳ್ಳೆಗಳ ಹರಡುವಿಕೆಯೂ ಇಂತಹ ಜ್ವರಕ್ಕೆ ಕಾರಣವಾಗಬಹುದು. ವೈರಲ್‌ ಜ್ವರ ಅಪಾಯವಲ್ಲದಿದ್ದರೂ ಒಬ್ಬರಿಂದ ಒಬ್ಬರಿಗೆ ಬೇಗನೆ ಹರಡುತ್ತದೆ. ಈ ವೈರಲ್‌ ಫ್ಲೂ ಅಥವಾ ಜ್ವರದ ರೋಗಲಕ್ಷಣಗಳು, ಕಾರಣಗಳು ಹಾಗೂ ಚಿಕಿತ್ಸೆಯ ಕುರಿತು ಒಂದಿಷ್ಟು ಮಾಹಿತಿ ಇಲ್ಲಿದೆ.

ಫ್ಲೂ ಅಥವಾ ಇನ್ಫ್ಲುಯೆಂಜಾ ಎಂದರೇನು?

ಫ್ಲೂ ಜ್ವರವು ಇನ್ಫ್ಲುಯೆಂಜಾ ವೈರಸ್‌ (Flu Influenza) ನಿಂದ ಹರಡುವ ಕಾಯಿಲೆಯಾಗಿದೆ. ಇದು ತಲೆ ಮತ್ತು ಮೈ ಕೈ ನೋವು, ಗಂಟಲು ನೋವು, ಜ್ವರ ಮತ್ತು ಉಸಿರಾಟದ ಸಮಸ್ಯೆಯಂತಹ ರೋಗಲಕ್ಷಣಗಳನ್ನು ಹೊಂದಿರುತ್ತದೆ. ಮಳೆಗಾಲದಲ್ಲಿ ಈ ಫ್ಲೂ ಜ್ವರ ಪರಿಣಾಮ ಹೆಚ್ಚು. ಇದರಿಂದ ಏಕಕಾಲಕ್ಕೆ ಮನೆಯಲ್ಲಿ ಇರುವವರೆಲ್ಲ ಅನಾರೋಗ್ಯಕ್ಕೆ ಒಳಗಾಗಬಹುದು.

ಮಳೆಗಾಲದಲ್ಲಿ ಸಾಮಾನ್ಯ

ಮಳೆಗಾಲದಲ್ಲಿ ಈ ಇನ್ಫ್ಲುಯೆಂಜಾ ಜ್ವರದ ಪರಿಣಾಮ ಹೆಚ್ಚಿರುತ್ತದೆ. ಇದು ಉಸಿರಾಟ ವ್ಯವಸ್ಥೆಯ ಮೇಲೆ ಪರಿಣಾಮ ಬೀರಬಹುದು. ವೈರಸ್‌ನಿಂದ ಹರಡುವ ಈ ಕಾಯಿಲೆಯು ಒಬ್ಬರಿಂದೊಬ್ಬರಿಗೆ ಬೇಗನೆ ಹರಡುತ್ತದೆ. ಸೋಂಕಿತ ವ್ಯಕ್ತಿಯ ಕೆಮ್ಮು ಅಥವಾ ಸೀನುವಿಕೆಯಿಂದ ಇದು ಹರಡಬಹುದು. ಆದರೆ ಇದಕ್ಕೆ ಭಯ ಪಡುವ ಅಗತ್ಯವಿಲ್ಲ. ಮನೆಯಲ್ಲೇ ಸರಿಯಾಗಿ ವಿಶ್ರಾಂತಿ ಪಡೆಯುವ ಮೂಲಕ ಜ್ವರವನ್ನು ಗುಣಪಡಿಸಿಕೊಳ್ಳಬಹುದು.

ಇನ್ಫ್ಲುಯೆಂಜಾ ಬಗೆಗಿನ ಸಾಮಾನ್ಯ ಸಂಗತಿಗಳು

* ವೈರಲ್‌ ಫ್ಲೂ ಹಾಗೂ ಇನ್ಫ್ಲುಯೆಂಜಾ ಫ್ಲೂ ಹರಡಲು ಯಾವುದೇ ನಿರ್ದಿಷ್ಟ ಸೀಸನ್‌ ಇಲ್ಲದೇ ಇದ್ದರೂ ಮುಂಗಾರಿನಲ್ಲಿ ಇದು ಹೆಚ್ಚು ಜನರನ್ನು ಬಾಧಿಸುತ್ತದೆ.

* ವೈರಲ್‌ ಅಥವಾ ಇನ್ಫ್ಲುಯೆಂಜಾ ಅಪಾಯಕಾರಿ ಅಲ್ಲದಿದ್ದರೂ ಇದು ಬೇಗನೆ ಹರಡುತ್ತದೆ.

* ಈ ಜ್ವರವನ್ನು ತಡೆಯಲು ಹಾಗೂ ನಿಯಂತ್ರಿಸಲು ಪ್ರತಿವರ್ಷ ಲಸಿಕೆಯನ್ನು ಪಡೆಯುವುದು ಉತ್ತಮ ಎನ್ನುತ್ತಾರೆ ತಜ್ಞರು.

ಫ್ಲೂ ಜ್ವರದ ಲಕ್ಷಣಗಳು

ಶೀತದ ಲಕ್ಷಣಗಳನ್ನು ಫ್ಲೂ ಜ್ವರದ ಲಕ್ಷಣಗಳು ಎಂದು ಪರಿಗಣಿಸಲಾಗುತ್ತದೆ. ಶೀತ ಹಾಗೂ ಜ್ವರ ಎರಡರ ಸಂದರ್ಭದಲ್ಲೂ ಗಂಟಲು ನೋವು, ಕೆಮ್ಮು ಹಾಗೂ ಮೂಗು ಸೋರುವುದು ಸಾಮಾನ್ಯ. ಇದನ್ನು ಹೊರತು ಪಡಿಸಿಯೂ ಕೆಲವೊಂದು ರೋಗಲಕ್ಷಣಗಳಿವೆ.

* ಜ್ವರ

* ತಲೆನೋವು

* ಚಳಿ ಹಾಗೂ ನಡುಕ

* ದೇಹ ತಣ್ಣಗಿದ್ದರೂ ಮೈ ಬೆವರುವುದು

* ಆಯಾಸ

* ಮೈ ಕೈ ನೋವು

* ಕೀಲುನೋವು

* ಅತಿಸಾರ

* ವಾಂತಿ ಇಂತಹ ರೋಗಲಕ್ಷಣಗಳು ಕಾಣಿಸಬಹುದು.

ಮಕ್ಕಳಲ್ಲಿ ಫ್ಲೂ ಜ್ವರ ಇದ್ದಾಗ ಅತಿಸಾರ ಹಾಗೂ ವಾಂತಿಯ ಲಕ್ಷಣಗಳು ಹೆಚ್ಚಿರುತ್ತವೆ.

ರೋಗಲಕ್ಷಣಗಳು ವ್ಯಕ್ತಿಯಿಂದ ವ್ಯಕ್ತಿಗೆ ಭಿನ್ನವಾಗಿದ್ದರೂ, ಸಾಮಾನ್ಯ ಈ ರೋಗಲಕ್ಷಣಗಳು ಒಂದು ವಾರದವರೆಗೆ ಮುಂದುವರಿಯುತ್ತದೆ.

ಜ್ವರ ಹಾಗೂ ಸಾಮಾನ್ಯ ಶೀತದ ನಡುವಿನ ವ್ಯತ್ಯಾಸ

ಜ್ವರ ಮತ್ತು ನೆಗಡಿಯು ಮೂಗು ಸೋರುವುದು ಮತ್ತು ಕೆಮ್ಮ ಮುಂತಾದ ಲಕ್ಷಣಗಳನ್ನು ಹೊಂದಿರಬಹುದು. ಆದರೆ ಶೀತದ ರೋಗಲಕ್ಷಣಗಳು ಸೌಮ್ಯವಾಗಿರುತ್ತದೆ. ಜ್ವರದ ರೋಗಲಕ್ಷಣಗಳು ತೀವ್ರವಾಗಿರುತ್ತದೆ ಮತ್ತು ಗಂಭೀರ ತೊಡಕುಗಳಿಗೆ ಕಾರಣವಾಗಬಹುದು.

ಇನ್ಫ್ಲುಯೆಂಜಾ ಯಾರನ್ನು ಹೆಚ್ಚು ಕಾಡುತ್ತದೆ?

ಕೆಲವೊಂದು ಆರೋಗ್ಯ ಸಮಸ್ಯೆ ಇರುವವರಿಗೆ ಈ ಫ್ಲೂ ವೈರಸ್‌ ಹೆಚ್ಚು ಸಮಸ್ಯೆ ನೀಡುತ್ತದೆ. ಹಾಗಾಗಿ ಈ ಕೆಳಗಿನ ಸಮಸ್ಯೆ ಇರುವವರು ಹೆಚ್ಚು ಜಾಗೃತೆ ವಹಿಸಬೇಕು.

* ಆಸ್ತಮಾ, ಸಿಒಪಿಡಿ (ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶದ ಕಾಯಿಲೆ) ಸೇರಿದಂತೆ ದೀರ್ಘಕಾಲದ ಶ್ವಾಸಕೋಶದ ಸಮಸ್ಯೆ ಇರುವವರು ಹೆಚ್ಚು ಜಾಗೃತೆ ವಹಿಸಬೇಕು.

* ಸ್ಟ್ರೋಕ್‌ ಸೇರಿದಂತೆ ಮೂತ್ರಪಿಂಡ, ಯಕೃತ್ತು, ನರವೈಜ್ಞಾನಿಕ, ಹೃದಯ ಮತ್ತು ರಕ್ತನಾಳಗಳ ಕಾಯಿಲೆ ಇರುವವರು ಎಚ್ಚರ ವಹಿಸಬೇಕು.

* ಮಧುಮೇಹಿಗಳು

* ರೋಗನಿರೋಧಕ ಶಕ್ತಿ ಕಡಿಮೆ ಇರುವವರು

* ರಕ್ತಕ್ಕೆ ಸಂಬಂಧಿಸಿದ ಸಮಸ್ಯೆ ಇರುವವರು

* 5 ವರ್ಷಕ್ಕಿಂತ ಕಡಿಮೆ ಹಾಗೂ 65 ವರ್ಷಕ್ಕಿಂತ ಜಾಸ್ತಿ ಇರುವವರು

* ಗರ್ಭಿಣಿಯರು

ಫ್ಲೂ ಹರಡುವುದು ಹೇಗೆ?

ಫ್ಲೂ ವೈರಸ್‌ ಸೋಂಕಿತ ವ್ಯಕ್ತಿಯಿಂದ ನೇರವಾಗಿ ಅಥವಾ ಪರೋಕ್ಷವಾಗಿ ಹರಡಬಹುದು. ಸಾಮಾನ್ಯವಾಗಿ ಜ್ವರ ಈ ರೀತಿ ಹರಡಬಹುದು.

* ಸೋಂಕಿತ ವ್ಯಕ್ತಿಯ ಕೆಮ್ಮು ಹಾಗೂ ಎಂಜಲು ಹನಿಯಿಂದ ಹರಡುವ ಸಾಧ್ಯತೆ ಇದೆ.

* ಸೋಂಕಿತ ಬಳಸಿದ ವಸ್ತುಗಳನ್ನು ಬಳಸುವುದರಿಂದ

* ಸೋಂಕಿತ ವ್ಯಕ್ತಿಯೊಂದಿಗೆ ಹಸ್ತಲಾಘವ ಮಾಡಿ ಅದೇ ಕೈಯಿಂದ ಮೂಗು, ಬಾಯಿ ಮುಟ್ಟಿಕೊಳ್ಳುವುದರಿಂದ

ಫ್ಲೂ ಜ್ವರ ಬಂದಾಗ ಏನು ಮಾಡಬೇಕು?

* ಸಾಕಷ್ಟು ವಿಶ್ರಾಂತಿ ಪಡೆಯಬೇಕು.

* ನಿರ್ಜಲೀಕರಣ ತಪ್ಪಿಸಲು ಸಾಕಷ್ಟು ನೀರು ಸೇರಿದಂತೆ ದ್ರವಾಹಾರ ಸೇವಿಸಬೇಕು.

* ಸ್ನಾಯುಗಳಿಗೆ ಬಿಸಿನೀರಿನ ಶಾಖ ನೀಡಬೇಕು.

* ತಲೆಯ ಮೇಲೆ ಒದ್ದೆ ಬಟ್ಟೆ ಇರಿಸುವುದು.

* ಉಪ್ಪು ನೀರಿನಿಂದ ಬಾಯಿ ಮುಕ್ಕಳಿಸುವುದು

* ಬೆಚ್ಚನೆಯ ಆಹಾರ ಸೇವನೆ

* ಮಸಾಲೆ ರಹಿತ ಆಹಾರ ಸೇವನೆ

ಇದರೊಂದಿಗೆ ಕಷಾಯ, ತುಳಸಿ ಚಹಾ, ಕಾಳುಮೆಣಸಿನ ಕಪಾಯ, ಜೀರಿಗೆ ಕಷಾಯದಂತಹ ಮನೆಮದ್ದು ಕೂಡ ಜ್ವರಕ್ಕೆ ಔಷಧಿ. ಇದೆಲ್ಲದರ ಜೊತೆಗೆ ಸಾಕಷ್ಟು ವಿಶ್ರಾಂತಿ ತೆಗೆದುಕೊಳ್ಳುವುದು ಅವಶ್ಯ.

ವಿಭಾಗ