Viral Fever: ಬೆಂಗಳೂರಿನಲ್ಲಿ ಸದ್ದಿಲ್ಲದೆ ಹೆಚ್ಚುತ್ತಿದೆ ವೈರಲ್ ಜ್ವರ, ಮುನ್ನೆಚ್ಚರಿಕೆ ವಹಿಸಿ ಎಂದ ವೈದ್ಯರು ಕೊಟ್ಟ ಸಲಹೆಗಳಿವು-bengaluru news viral fever on rise in bengaluru doctors give suggestions to mitigate viral fever dengue danger mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Viral Fever: ಬೆಂಗಳೂರಿನಲ್ಲಿ ಸದ್ದಿಲ್ಲದೆ ಹೆಚ್ಚುತ್ತಿದೆ ವೈರಲ್ ಜ್ವರ, ಮುನ್ನೆಚ್ಚರಿಕೆ ವಹಿಸಿ ಎಂದ ವೈದ್ಯರು ಕೊಟ್ಟ ಸಲಹೆಗಳಿವು

Viral Fever: ಬೆಂಗಳೂರಿನಲ್ಲಿ ಸದ್ದಿಲ್ಲದೆ ಹೆಚ್ಚುತ್ತಿದೆ ವೈರಲ್ ಜ್ವರ, ಮುನ್ನೆಚ್ಚರಿಕೆ ವಹಿಸಿ ಎಂದ ವೈದ್ಯರು ಕೊಟ್ಟ ಸಲಹೆಗಳಿವು

ಒಟ್ಟಾರೆ ಬೆಂಗಳೂರು ನಗರದ ಹವಾಮಾನದಲ್ಲಿ ವೈಪರೀತ್ಯವಿದೆ. ಯಾವಾಗ ಬಿಸಿಲು ಬರುತ್ತದೆ? ಯಾವಾಗ ಚಳಿಯಾಗುತ್ತದೆ? ಯಾವಾಗ ಮಳೆಯಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಆದ್ದರಿಂದ ಸಾರ್ವಜನಿಕರು ಆದಷ್ಟೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. (ವರದಿ: ಮಾರುತಿ ಎಚ್‌.)

ಬೆಂಗಳೂರಿನಲ್ಲಿ ವೈರಲ್ ಸೋಂಕು ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ವೈರಲ್ ಸೋಂಕು ಹೆಚ್ಚಾಗುತ್ತಿದ್ದು ಮುನ್ನೆಚ್ಚರಿಕೆ ವಹಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ. (ಪ್ರಾತಿನಿಧಿಕ ಚಿತ್ರ)

ಬೆಂಗಳೂರು: ನಗರದಲ್ಲಿ ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಹೆಚ್ಚಾಗುತ್ತಿದೆ. ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೆ ಬರುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಜ್ವರ ಹೆಚ್ಚಿನ ಜನರನ್ನು ತೀವ್ರವಾಗಿ ಬಾಧಿಸುತ್ತಿದೆ. ನಗರದಲ್ಲಿ ವರದಿಯಾಗುತ್ತಿರುವ 10 ಜ್ವರದ ಪ್ರಕರಣಗಳ ಪೈಕಿ 7 ವೈರಲ್ ಸೋಂಕಿನಿಂದ ಬಂದಿರುತ್ತವೆ ಎಂದು ವೈದ್ಯರು ಖಾಸಗಿ ಮಾತುಕತೆಯ ವೇಳೆ ತಿಳಿಸುತ್ತಾರೆ.

15 ದಿನಗಳ ಹಿಂದೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಹವಾಮಾನ ಬದಲಾವಣೆಯಾಗಿದೆ. ಕಳೆದ ಒಂದು ವಾರದಿಂದ ನಿರಂತರ ತಾಪಮಾನ ಹೆಚ್ಚಾಗುತ್ತಿದೆ. ಏಕಾಏಕಿ ಬದಲಾಗುತ್ತಿರುವ ಹವಾಮಾನಕ್ಕೆ ಜನರು ಹೊಂದಿಕೊಳ್ಳಲು ಆಗುತ್ತಿಲ್ಲ. ಶ್ರಾವಣ ಮಾಸ ಆರಂಭವಾದ ನಂತರ ಮದುವೆ, ಗೃಹ ಪ್ರವೇಶ ಸೇರಿದಂತೆ ಹಲವು ಶುಭ ಸಮಾರಂಭಗಳೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಇಂತಲ್ಲಿ ಊಟ ಮಾಡಿದವರು ಸಹ ಹೊಟ್ಟೆನೋವಿನಿಂದ ಬಳಲುತ್ತಿದ್ದಾರೆ. ನೀರಿನ ವ್ಯತ್ಯಾಸ, ಹೆಚ್ಚು ಜನಸಂದಣಿ ಇರುವೆಡೆ ಇರುವುದು ಸಹ ವೈರಲ್ ಜ್ವರಕ್ಕೆ ಮುಖ್ಯ ಕಾರಣವಾಗಿದೆ.

ವೈರಲ್ ಜ್ವರದ ಬಗ್ಗೆ ಹುಷಾರಾಗಿರಿ: ವೈದ್ಯರ ಕಿವಿಮಾತು

ಬೆಂಗಳೂರಿನಲ್ಲಿ ಹೆಚ್ಚಾಗುತ್ತಿರುವ ವೈರಲ್ ಜ್ವರದ ಕುರಿತು ಪ್ರತಿಕ್ರಿಯಿಸಿದ ವಿಕ್ಟೋರಿಯಾ ಆಸ್ಪತ್ರೆಯ ಆಡಳಿತಧಿಕಾರಿ ಮತ್ತು ಆಡಳಿತ ಸಂಯೋಜಕ ಡಾ ಸೋಮಸುಂದರ್‌ ಕೆ., 'ಹವಾಮಾನದಲ್ಲಿ ಬದಲಾವಣೆಯಾಗಿದೆ. ಆಸ್ಪತ್ರೆಗಳಿಗೆ ಬರುವ ಬಹುತೇಕ ರೋಗಿಗಳು ಜ್ವರ, ಮೈಕೈ ನೋವು, ಸ್ನಾಯು ಸೆಳೆತ, ಉಸಿರಾಟದ ತೊಂದರೆ, ವಾಂತಿ-ಭೇದಿ, ಒಣ ಕೆಮ್ಮು, ವಿಪರೀತ ಚಳಿ, ತಲೆನೋವು, ಕಟ್ಟಿಕೊಳ್ಳುವ ಮೂಗು, ಗಂಟಲು, ಕೆರೆತ ಮೊದಲಾದ ಲಕ್ಷಣಗಳಿಂದ ಬಳಲುತ್ತಿರುತ್ತಾರೆ ಎಂದರು.

'ಕೆಲವರಲ್ಲಿ ಉಸಿರಾಟದ ತೊಂದರೆಯೂ ಕಾಣಿಸಿಕೊಳ್ಳುತ್ತಿದೆ. ಈ ಲಕ್ಷಣಗಳೆಲ್ಲವೂ ವೈರಲ್‌ ಜ್ವರದ ಮುನ್ಸೂಚನೆ ಆಗಿರಬಹುದು. ಆದ್ದರಿಂದ ಸಾರ್ವಜನಿಕರು ಎಚ್ಚರ ವಹಿಸಬೇಕು. ಆಕಸ್ಮಾತ್‌ ಜ್ವರ ಕಾಣಿಸಿಕೊಂಡಾಗ ಮನೆಯಲ್ಲೇ ಒಂದೆರಡು ದಿನ ಮಾತ್ರ ಸೇವಿಸಿದರೆ ತೊಂದರೆ ಇಲ್ಲ. ಆದರೆ ಮೂರನೆಯ ದಿನವೂ ಕಡಿಮೆಯಾಗದಿದ್ದರೆ ವೈದ್ಯರನ್ನು ಭೇಟಿಯಾಗಬೇಕು. ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡರೆ ತುಂಬಾ ಎಚ್ಚರಿಕೆ ವಹಿಸಬೇಕು. ಮಕ್ಕಳು ಮನೆ, ಅಥವಾ ಶಾಲೆಗಳಲ್ಲಿ ಎಚ್ಚರವಹಿಸುವುದುಕಡಿಮೆ. ಮಕ್ಕಳಿಗೆ ಜ್ವರದ ಲಕ್ಷಣಗಳು ಕಾಣಿಸಿಕೊಂಡರೆ ವೈದ್ಯರ ಸಲಹೆ ಪಡೆಯುವುದು ಉತ್ತಮ' ಎಂದು ಅವರು ಕಿವಿಮಾತು ಹೇಳಿದರು.

ವೈರಲ್ ಜ್ವರದ ಲಕ್ಷಣ ಕಾಣಿಸಿಕೊಂಡರೆ ತಕ್ಷಣ ಹೀಗೆ ಮಾಡಿ

ಬೆಂಗಳೂರಿನಲ್ಲಿ ಇತ್ತೀಚೆಗೆ ಡೆಂಗ್ಯೂ ಹೆಚ್ಚಳವಾಗುತ್ತಿದೆ. ಡೆಂಗ್ಯೂ ರೋಗಿಗಳಲ್ಲಿ ವೈರಲ್‌ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ. ಇಂಥವರು ವಹಿಸಬೇಕಾದ ಮುನ್ನೆಚ್ಚರಿಕೆ, ಕ್ರಮಗಳು ಹೀಗಿವೆ ಎಂದು ವಿವರಿಸಿದ್ದಾರೆ ಡಾ ಕವಿತಾ ಗೋವಿಂದರಾಜು.

1) ಮನೆಯೂಟ: ವೈರಲ್‌ ಜ್ವರ ಕಾಣಿಸಿಕೊಂಡರೆ ಆದಷ್ಟೂ ಮನೆಯೂಟವನ್ನು ಮಾಡಬೇಕು. ಹೋಟೆಲ್‌, ಸಭೆ ಸಮಾರಂಭಗಳ ಆಹಾರವನ್ನು ಸೇವಿಸಬಾರದು.

2) ಮಳೆ, ಗಾಳಿಯಲ್ಲಿ ಪ್ರಯಾಣ ಮಾಡಬಾರದು.

3) ಕುದಿಸಿ ಆರಿಸಿದ ನೀರು ಕುಡಿಯಿರಿ. ಆಹಾರ ಸೇವನೆಗೆ ಮೊದಲು ಮತ್ತು ನಂತರ ಕೈಗಳನ್ನು ಸ್ವಚ್ಛವಾಗಿ ತೆಗೆದುಕೊಳ್ಳಿ.

4) ಸೊಳ್ಳೆ ಪರದೆಗಳನ್ನು ಬಳಸಿ. ಮನೆಯ ಒಳಗೆ ಮತ್ತು ಸುತ್ತಲೂ ಸ್ವಚ್ಛತೆ ಕಾಪಾಡಿಕೊಳ್ಳಿ.

5) ಬೆಚ್ಚಗಿರಿ, ಚಳಿಗೆ ಮೈಕೊಡಬೇಡಿ.

6) ಕೆಮ್ಮು ಅಥವಾ ಸೀನು ಬಂದಾಗ ಬಾಯಿ ಮುಚ್ಚಿಕೊಳ್ಳಿ.

ಎಲ್ಲ ಜ್ವರವೂ ಡೆಂಗ್ಯೂ ಅಲ್ಲ

ಜನರಲ್ಲಿ ಕಾಣಿಸಿಕೊಳ್ಳುತ್ತಿರುವ ಎಲ್ಲ ಜ್ವರ ಅಥವಾ ಅನಾರೋಗ್ಯಕ್ಕೆ ಡೆಂಗ್ಯೂ ಒಂದೇ ಕಾರಣವಾಗಿರಬೇಕು ಎಂದೇನೂ ಇಲ್ಲ. ಕೆಲವೊಮ್ಮೆ ಡೆಂಗ್ಯೂ ವರದಿ ನೆಗೆಟಿವ್ ಬಂದರೂ, ವೈರಲ್‌ ಜ್ವರದ ಲಕ್ಷಣಗಳು ದೇಹದಲ್ಲಿ ಇದ್ದೇ ಇರುತ್ತವೆ. ಆದ್ದರಿಂದ ವೈದ್ಯರ ಸಲಹೆ ಪಡೆದು ಮುಂದುವರಿಯುವುದು ಒಳ್ಳೆಯದು.

ಒಟ್ಟಾರೆ ಬೆಂಗಳೂರು ನಗರದ ಹವಾಮಾನದಲ್ಲಿ ವೈಪರೀತ್ಯವಿದೆ. ಯಾವಾಗ ಬಿಸಿಲು ಬರುತ್ತದೆ? ಯಾವಾಗ ಚಳಿಯಾಗುತ್ತದೆ? ಯಾವಾಗ ಮಳೆಯಾಗುತ್ತದೆ ಎಂದು ಹೇಳಲು ಆಗುವುದಿಲ್ಲ. ಆದ್ದರಿಂದ ಸಾರ್ವಜನಿಕರು ಆದಷ್ಟೂ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅನಿವಾರ್ಯವಾದಲ್ಲಿ ಮಾತ್ರ ಮನೆಗಳಿಂದ ಹೊರಗೆ ಹೋಗಬೇಕು. ಜನಸಂದಣಿಯಿಂದ ಸಾಧ್ಯವಾದಷ್ಟೂ ದೂರ ಇರಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಮುಂಜಾಗ್ರತೆಯ ಮಹತ್ವ ಅರಿತುಕೊಳ್ಳಬೇಕು.