Lung Cancer Day: ಧೂಮಪಾನ ತ್ಯಜಿಸಿ, ಉಸಿರು ಉಳಿಸಿ; ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನದ ಇತಿಹಾಸ, ಆಚರಣೆಯ ಮಹತ್ವ ತಿಳಿಯಿರಿ
ಜಗತ್ತಿನ ಮಾರಣಾಂತಿಕ ಕಾಯಿಲೆಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕೂಡ ಒಂದು. ಶ್ವಾಸಕೋಶದಲ್ಲಿ ಕ್ಯಾನ್ಸರ್ ಕೋಶಗಳು ಬೆಳೆಯಲು ಆರಂಭಿಸಿದಾಗ ಕ್ಯಾನ್ಸರ್ ಸಂಭವಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಶ್ವಾಸಕೋಶದ ಕ್ಯಾನ್ಸರ್ ಪ್ರಮಾಣ ಹೆಚ್ಚುತ್ತಿದ್ದು ಈ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ವಿಶ್ವ ಶ್ವಾಸಕೋಶ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತಿದೆ.
ಕೆಲವೊಮ್ಮೆ ನಮ್ಮಲ್ಲದ ತಪ್ಪಿಗೆ ನಾವು ತಲೆ ಕೊಡಬೇಕಾಗುತ್ತದೆ. ಇನ್ನೂ ಕೆಲವೊಮ್ಮೆ ನಾವು ಮಾಡದ ತಪ್ಪಿಗೆ ನಮ್ಮ ಪ್ರಾಣವೇ ಹೋಗುತ್ತದೆ. ಇದಕ್ಕೆ ಬೆಸ್ಟ್ ಉದಾಹರಣೆ ಎಂದರೆ ಶ್ವಾಸಕೋಶದ ಕ್ಯಾನ್ಸರ್. ಧೂಮಪಾನ ಹಾಗೂ ತಂಬಾಕಿನ ಕಾರಣದಿಂದ ಉಂಟಾಗುವ ಶ್ವಾಸಕೋಶದ ಕ್ಯಾನ್ಸರ್‌ಗೆ ನಾವು ನೇರ ಹೊಣೆ ಅಲ್ಲ ಎಂದರೂ ಇದಕ್ಕೆ ತಲೆಕೊಡಬೇಕಾಗುತ್ತದೆ. ಪರೋಕ್ಷವಾಗಿ ಧೂಮಪಾನದ ಹೊಗೆಗೆ ಒಡ್ಡಿಕೊಂಡರು ಮಾರಕ ಕ್ಯಾನ್ಸರ್ ನಮ್ಮನ್ನು ಕಾಡಬಹುದು ಎಚ್ಚರವಿರಲಿ.
ಶ್ವಾಸಕೋಶದ ಕ್ಯಾನ್ಸರ್ ಅತ್ಯಂತ ಸಾಮಾನ್ಯವಾದ ಕ್ಯಾನ್ಸರ್. ಪ್ರಪಂಚದಾದ್ಯಂತ ಕ್ಯಾನ್ಸರ್ ಕಾರಣದಿಂದ ಸಾವನ್ನಪ್ಪುವವರ ಸಾಲಿನಲ್ಲಿ ಈ ಕ್ಯಾನ್ಸರ್‌ಗೆ ಅಗ್ರಸ್ಥಾನವಿದೆ. ಪ್ರತಿ ವರ್ಷ ಸುಮಾರು 1.6 ಮಿಲಿಯನ್ ಜನರು ಈ ಕ್ಯಾನ್ಸರ್‌ಗೆ ಬಲಿಯಾಗುತ್ತಿದ್ದಾರೆ. ಶ್ವಾಸಕೋಶದ ಕ್ಯಾನ್ಸರ್‌ಗೆ ಮುಖ್ಯ ಕಾರಣ ತಂಬಾಕು ಸೇವನೆ. ಆದರೆ ಇದು ಎಂದಿಗೂ ಧೂಮಪಾನ ಮಾಡದ ಜನರಲ್ಲೂ ಸಹ ಸಂಭವಿಸಬಹುದು. ಶೇ 15ರಷ್ಟು ಶ್ವಾಸಕೋಶದ ಕ್ಯಾನ್ಸರ್ ರೋಗಿಗಳಿಗೆ ಯಾವುದೇ ತಂಬಾಕು ಬಳಕೆಯ ಇತಿಹಾಸವಿಲ್ಲ ಎಂದು ಸಂಶೋಧನೆ ಹೇಳುತ್ತದೆ.
ಧೂಮಪಾನಿಗಳಲ್ಲದವರಲ್ಲಿ ಶ್ವಾಸಕೋಶದ ಕ್ಯಾನ್ಸರ್‌ಗೆ ಸಾಮಾನ್ಯ ಕಾರಣಗಳೆಂದರೆ ವಾಯುಮಾಲಿನ್ಯ, ಹೊರಾಂಗಣ ಮತ್ತು ಒಳಾಂಗಣದಲ್ಲಿ ಧೂಮಪಾನದ ಹೊಗೆಗೆ ಒಡ್ಡಿಕೊಳ್ಳುವುದು. ಶ್ವಾಸಕೋಶದ ಕ್ಯಾನ್ಸರ್ ಕಾಣಿಸಿದ 20 ಪ್ರತಿಶತ ಮಹಿಳೆಯರು ಎಂದಿಗೂ ಧೂಮಪಾನ ಮಾಡಿಲ್ಲ. ಬಹುತೇಕ ಮಂದಿ ಧೂಮಪಾನಿಗಳಲ್ಲದವರು ಕೂಡ ಶ್ವಾಸಕೋಶದ ಕ್ಯಾನ್ಸರ್‌ಗೆ ಒಳಗಾಗಲು ಪ್ರಮುಖ ಕಾರಣ ಪರೋಕ್ಷವಾಗಿ ಒಡ್ಡಿಕೊಳ್ಳುವುದು.
ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನದ ಇತಿಹಾಸ
ಶ್ವಾಸಕೋಶದ ಕ್ಯಾನ್ಸರ್ ಹರಡುವಿಕೆ ಮತ್ತು ಪ್ರಭಾವದ ಬಗ್ಗೆ ಜನರಿಗೆ ಅರಿವು ಮೂಡಿಸಲು ವಿಶ್ವ ಶ್ವಾಸಕೋಶದ ಕ್ಯಾನ್ಸರ್ ದಿನವನ್ನು ಸ್ಥಾಪಿಸಲಾಯಿತು. ಫೋರಮ್ ಆಫ್ ಇಂಟರ್ನ್ಯಾಷನಲ್ ರೆಸ್ಪಿರೇಟರಿ ಸೊಸೈಟೀಸ್ (FIRS) ಮತ್ತು ಇಂಟರ್ನ್ಯಾಷನಲ್ ಅಸೋಸಿಯೇಷನ್ ಫಾರ್ ದಿ ಸ್ಟಡಿ ಆಫ್ ಲಂಗ್ ಕ್ಯಾನ್ಸರ್ (IASLC) ನಡುವಿನ ಸಹಯೋಗದ ಮೂಲಕ 2012 ರಲ್ಲಿ ಮೊದಲ ಬಾರಿ ಈ ದಿನವನ್ನು ಆಚರಿಸಲಾಯಿತು. ಅಂದಿನಿಂದ, ಶ್ವಾಸಕೋಶದ ಕ್ಯಾನ್ಸರ್ ದಿನವನ್ನು ವಾರ್ಷಿಕವಾಗಿ ಆಗಸ್ಟ್ 1 ರಂದು ಆಚರಿಸಲಾಗುತ್ತದೆ.
ಈ ದಿನವು ಸಂಸ್ಥೆಗಳು, ಆರೋಗ್ಯ ವೃತ್ತಿಪರರು, ಸಂಶೋಧಕರು ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸಲು ತಮ್ಮ ಪ್ರಯತ್ನಗಳನ್ನು ಒಂದುಗೂಡಿಸಲು ವೇದಿಕೆಯಾಗಿ ಕಾರ್ಯನಿರ್ವಹಿಸುತ್ತದೆ. ಶ್ವಾಸಕೋಶದ ಕ್ಯಾನ್ಸರ್‌ನಿಂದ ಬಾಧಿತರಾದವರಿಗೆ ಆರಂಭಿಕ ಪತ್ತೆ ಮತ್ತು ಬೆಂಬಲವನ್ನು ಉತ್ತೇಜಿಸುತ್ತದೆ. ಈ ದಿನದಂದು, ಶ್ವಾಸಕೋಶದ ಕ್ಯಾನ್ಸರ್ ಅನ್ನು ಎದುರಿಸಲು ನಡೆಯುತ್ತಿರುವ ಸಂಶೋಧನೆ ಮತ್ತು ನಾವೀನ್ಯತೆಗಳ ಪ್ರಾಮುಖ್ಯತೆಯನ್ನು ಎತ್ತಿ ಹಿಡಿಯಲು ಪ್ರಪಂಚದಾದ್ಯಂತ ಹಲವಾರು ಅಭಿಯಾನಗಳು ಮತ್ತು ಚಟುವಟಿಕೆಗಳು ನಡೆಯುತ್ತವೆ.
ವಿಶ್ವ ಶ್ವಾಸಕೋಶ ದಿನದ ಮಹತ್ವ
ಪ್ರಪಂಚದಾದ್ಯಂತ ಪ್ರತಿವರ್ಷ ಶ್ವಾಸಕೋಶದ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತದೆ, ಇದು ಪ್ರಪಂಚದಾದ್ಯಂತದ ಕ್ಯಾನ್ಸರ್‌ನ ಅತ್ಯಂತ ಸಾಮಾನ್ಯ ರೂಪವಾದ ಶ್ವಾಸಕೋಶದ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುತ್ತದೆ. ಇದು ಶ್ವಾಸಕೋಶದ ಕ್ಯಾನ್ಸರ್, ಅದರ ಅಪಾಯಗಳು ಮತ್ತು ತಡೆಗಟ್ಟುವಿಕೆ ಮತ್ತು ರೋಗಲಕ್ಷಣಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ ಏಕೆಂದರೆ ಇದು ಆರಂಭಿಕ ಪತ್ತೆಗೆ ಸಹಾಯ ಮಾಡುತ್ತದೆ.
ಶ್ವಾಸಕೋಶದ ಕ್ಯಾನ್ಸರ್ ವಿಧಗಳು
ಶ್ವಾಸಕೋಶದ ಕ್ಯಾನ್ಸರ್ ಅನ್ನು ಸಾಮಾನ್ಯವಾಗಿ ಎರಡು ವಿಧದ ಶ್ವಾಸಕೋಶದ ಕ್ಯಾನ್ಸರ್ ಎಂದು ವಿಂಗಡಿಸಲಾಗಿದೆ, ಅಂದರೆ, ಸಣ್ಣ-ಅಲ್ಲದ ಜೀವಕೋಶದ ಶ್ವಾಸಕೋಶದ ಕ್ಯಾನ್ಸರ್ (NSCLC) ಮತ್ತು ಸಣ್ಣ-ಕೋಶ ಶ್ವಾಸಕೋಶದ ಕ್ಯಾನ್ಸರ್ (SCLC).