2050ರ ವೇಳೆಗೆ ಪಾರ್ಶ್ವವಾಯುವಿನ ಪಾಶಕ್ಕೆ ಬಲಿಯಾಗಲಿದ್ದಾರೆ 10 ಮಿಲಿಯನ್ ಮಂದಿ; ಸ್ಟ್ರೋಕ್‌ಗೆ ಕಾರಣ, ತಡೆಯುವ ಪರಿಹಾರ ಮಾರ್ಗ ಇಲ್ಲಿದೆ
Stroke Could Cause 10 Million Deaths By 2050: ಪಾರ್ಶ್ವವಾಯು ಕಳೆದ ವರ್ಷಗಳಿಂದ ಜನರನ್ನು ಹೆಚ್ಚು ಕಾಡುತ್ತಿರುವ ಸಮಸ್ಯೆ. ಇತ್ತೀಚೆಗೆ ಯುವಜನರೂ ಪಾರ್ಶ್ವವಾಯುವಿಗೆ ತುತ್ತಾಗುವ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣವೇನು, ಸ್ಟ್ರೋಕ್ ತಡೆಯಲು ನಮ್ಮ ಜೀವನಶೈಲಿ ಹೇಗಿರಬೇಕು? ಮಾಹಿತಿ ಇಲ್ಲಿದೆ.
ಇತ್ತೀಚೆಗೆ ವರ್ಲ್ಡ್ ಸ್ಟ್ರೋಕ್ ಆರ್ಗನೈಜೇಶನ್ ಮತ್ತು ಲ್ಯಾನ್ಸೆಟ್ ನ್ಯೂರಾಲಜಿ ಆಯೋಗವು ಜಂಟಿಯಾಗಿ ನಡೆಸಿದ ಅಧ್ಯಯನದ ಪ್ರಕಾರ 2050ರ ವೇಳೆಗೆ ಕಡಿಮೆ ಹಾಗೂ ಮಧ್ಯಮ ಆದಾಯ ಹೊಂದಿರುವ ದೇಶಗಳಲ್ಲಿ ಪಾರ್ಶ್ವವಾಯು (ಸ್ಟ್ರೋಕ್) ಸಮಸ್ಯೆಯಿಂದ ಮರಣ ಹೊಂದುವವರ ಸಂಖ್ಯೆ ಶೇ 86 ರಿಂದ 91 ರಷ್ಟಾಗಬಹುದು ಎಂಬ ಆಘಾತಕಾರಿ ಸುದ್ದಿಯೊಂದು ಹೊರ ಬಿದಿದ್ದೆ.
ಈ ವರದಿಯ ಪ್ರಕಾರ 2020ರ ವೇಳೆಗೆ ಸ್ಟ್ರೋಕ್‌ನಿಂದ ಸಾಯುವವರ ಸಂಖ್ಯೆ 6.6 ಮಿಲಿಯನ್ ಎಂದು ವರದಿಯಾಗಿತ್ತು. ಇದು 2050ರ ವೇಳೆಗೆ 9.7 ಮಿಲಿಯನ್‌ಗೆ ಏರುವ ನಿರೀಕ್ಷೆಯಿದೆ ಎಂದು ವರದಿ ಹೇಳುತ್ತದೆ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಲೇಖನಗಳಲ್ಲಿ ಇಲ್ಲಿ ಕ್ಲಿಕ್ ಮಾಡಿ
ಮೆದುಳಿಗೆ ಭಾಗಕ್ಕೆ ರಕ್ತ ಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಅಥವಾ ರಕ್ತ ಪೂರೈಕೆ ಕಡಿಮೆಯಾದಾಗ ಜೊತೆಗೆ ಮೆದುಳಿನ ಅಂಗಾಂಶಕ್ಕೆ ರಕ್ತ ಹಾಗೂ ಆಮ್ಲಜನಕ ಪಡೆಯಲು ಸಾಧ್ಯವಾಗದೇ ಇದ್ದಾಗ ಪಾರ್ಶ್ವವಾಯು ಉಂಟಾಗುತ್ತದೆ. ಸ್ಟ್ರೋಕ್ ಆದರೆ ನಡೆದಾಡಲು, ಮಾತನಾಡಲು ಹಾಗೂ ಇತರರ ಮಾತುಗಳನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾಗಬಹುದು. ಮುಖ, ತೋಳು ಹಾಗೂ ಕಾಲಿನಲ್ಲಿ ಮರಗಟ್ಟುವಿಕೆಯ ಲಕ್ಷಣಗಳು ಕಾಣಿಸಬಹುದು.
ಪಾರ್ಶ್ವವಾಯುವನ್ನು ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ ಚಿಕಿತ್ಸೆ ನೀಡಬಹುದು ಮತ್ತು ಕೆಲವು ಜೀವನಶೈಲಿಗೆ ಕ್ರಮಗಳಿಂದ ಇದನ್ನು ತಡೆಯಬಹುದು ಎನ್ನುತ್ತಾರೆ ತಜ್ಞರು.
ʼವಿಶ್ವದಾದ್ಯಂತ ಅಂಗವೈಕಲ್ಯ ಮತ್ತು ಸಾವಿನ ಸಂಖ್ಯೆ ಏರಿಕೆಯಾಗಲು ಪಾರ್ಶ್ವವಾಯು ಪ್ರಮುಖ ಕಾರಣವಾಗಿದೆ. ಇದರಿಂದ ಇದ್ದಕ್ಕಿದ್ದಂತೆ ಮಾತನಾಡುವ ಸಾಮರ್ಥ್ಯ, ಚಲನಾ ಸಾಮರ್ಥ್ಯ, ದೃಷ್ಟಿ ಸಮಸ್ಯೆ ಹಾಗೂ ಪ್ರಜ್ಞೆ ತಪ್ಪುವುದು ಇಂತಹ ಸಮಸ್ಯೆಗಳು ಎದುರಾಗುತ್ತವೆ. ಸುಮಾರು 1.25 ಕೋಟಿ ಹೊಸ ಪಾರ್ಶ್ವವಾಯು ಪ್ರಕರಣಗಳಿವೆ. 10 ಕೋಟಿಗೂ ಅಧಿಕ ಮಂದಿ ಯಾವುದೇ ಸಮಯದಲ್ಲಿ ಕೂಡ ಸ್ಟ್ರೋಕ್ ಹೊಡೆಯಬಹುದು ಎಂಬ ಪರಿಸ್ಥಿತಿಯಲ್ಲಿ ಬದುಕುತ್ತಿದ್ದಾರೆ. 1990ರಿಂದ 2020ರವರೆಗೆ ಹೊಸ ಪಾರ್ಶ್ವವಾಯು ರೋಗಿಗಳ ಸಂಖ್ಯೆ ಶೇ 70 ಪ್ರತಿಶತದಷ್ಟು ಏರಿಕೆಯಾಗಿದೆ.
70 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಪಾರ್ಶ್ವವಾಯು ಸಂಖ್ಯೆಯು ಸುಮಾರು 20 ಪ್ರತಿಶತದಷ್ಟು ಹೆಚ್ಚಾಗಿದೆ. ಇದು ಒಂದು ಕಾಯಿಲೆಯ ರೂಪವಾಗಿದ್ದು, ವಯಸ್ಸಾದಂತೆ ಹೆಚ್ಚು ಕಾಣಿಸುತ್ತದೆ, ಆದರೆ ಇದು ಯಾವ ವಯಸ್ಸಿನವರಲ್ಲೂ ಕೂಡ ಕಾಣಿಸಬಹುದುʼ ಎಂದು ಹಿಂದೂಸ್ತಾನ್ ಟೈಮ್ಸ್‌ಗೆ ನೀಡಿದ ಸಂದರ್ಶನದಲ್ಲಿ ತಿಳಿಸಿದ್ದಾರೆ ನೋಯ್ಡಾದ ಫೋರ್ಟೀಸ್ ಆಸ್ಪತ್ರೆಯ ವೈದ್ಯ ಡಾ. ಕಪಿಲ್ ಸಿಂಘಾಲ್.
ಸ್ಟ್ರೋಕ್‌ಗೆ ಕಾರಣವಾಗುವ ಅಂಶಗಳು
ಮೆದುಳಿನ ಪಾರ್ಶ್ವವಾಯುವಿಗೆ ಈ ಕೆಳಗಿನ ಕೆಲವು ಅಂಶಗಳು ಪ್ರಮುಖ ಕಾರಣವಾಗಿವೆ, ಇವುಗಳಲ್ಲಿ ಹಲವನ್ನು ನಿಯಂತ್ರಣ ಮಾಡಬಹುದು.
ಅಧಿಕ ರಕ್ತದೊತ್ತಡ
ಅಧಿಕ ರಕ್ತದೊತ್ತಡವು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟುವುದು (ಇಸ್ಕೆಮಿಕ್) ಅಥವಾ ರಕ್ತಸ್ರಾವ (ಹೆಮೊರಾಜಿಕ್) ಈ ಕಾರಣಗಳಿಂದ ಪಾರ್ಶ್ವವಾಯು ಉಂಟಾಗಲು ಪ್ರಮುಖ ಕಾರಣವಾಗಿದೆ. ರಕ್ತದೊತ್ತಡವು ಮೆದುಳು ಮತ್ತು ಹೃದಯದ ನಾಳಗಳ ಮೇಲೆ ಪರಿಣಾಮ ಬೀರುತ್ತದೆ. ಇದು ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಲು ಮತ್ತು ರಕ್ತ ಸಂಚಾರದ ಅಡಚಣೆಗೆ ಕಾರಣವಾಗಬಹುದು.
ಹೃದ್ರೋಗ
ಹೃದಯದಕ್ಕೆ ಸಂಬಂಧಿಸಿದ ಸಮಸ್ಯೆಗಳು ಕೂಡ ಸ್ಟ್ರೋಕ್‌ಗೆ ಕಾರಣವಾಗಬಹುದು. ಅದರಲ್ಲೂ ಅನಿಯಮಿತ ಹೃದಯ ಬಡಿತದಿಂದ ಹೃದಯದಲ್ಲಿ ರಕ್ತ ಹೆಪ್ಪುಗಟ್ಟಲು ಕಾರಣವಾಗಬಹುದು. ಇದು ರಕ್ತನಾಳಗಳಲ್ಲಿ ಅಡಚಣೆಯನ್ನು ಉಂಟು ಮಾಡಬಹುದು.
ಬೊಜ್ಜು
ದೈಹಿಕ ಚಟುವಟಿಕೆಯ ಕೊರತೆಯು ಪಾರ್ಶ್ವವಾಯು ಉಂಟಾಗಲು ಒಂದು ಪ್ರಮುಖ ಕಾರಣವಾಗಿದೆ. ವಾರದಲ್ಲಿ 4 ರಿಂದ 5 ದಿನ ಕನಿಷ್ಠ ಅರ್ಧ ಗಂಟೆಗಳ ಕಾಲ ತಪ್ಪದೇ ವ್ಯಾಯಾಮ ಮಾಡುವುದು ಬಹಳ ಅವಶ್ಯ. ಬೊಜ್ಜು ಬೆಳೆಯುವುದರಿಂದ ಕೂಡ ಸ್ಟ್ರೋಕ್ ಉಂಟಾಗುವ ಸಾಧ್ಯತೆ ಹೆಚ್ಚಿದೆ.
ಮಧುಮೇಹ
ಮಧುಮೇಹವನ್ನು ನಿಯಂತ್ರಣ ಮಾಡದೇ ಇದ್ದರೆ ಇದು ಮೆದುಳಿನ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಅಲ್ಲದೆ ಮೆದುಳಿಗೆ ಸಂಬಂಧಿಸಿದ ಸಮಸ್ಯೆಗಳ ಅಪಾಯವನ್ನು ಹೆಚ್ಚಿಸುತ್ತದೆ.
ಧೂಮಪಾನ
ಸಕ್ರಿಯ ಹಾಗೂ ನಿಷ್ಕ್ರೀಯ ಎರಡೂ ಧೂಮಪಾನ ಹಾನಿಕಾರಕ ಮತ್ತು ಇದು ಸ್ಟ್ರೋಕ್‌ನ ಅಪಾಯವನ್ನು ಹೆಚ್ಚಿಸುತ್ತದೆ.
ಪರಿಸರ ಮಾಲಿನ್ಯ
ಪರಿಸರ ಮಾಲಿನ್ಯ ಇತ್ತೀಚೆಗೆ ಹಲವು ಆರೋಗ್ಯ ಸಮಸ್ಯೆಗಳಿಗೆ ಮೂಲವಾಗಿದೆ. ನಮ್ಮ ಸುತ್ತಲಿನ ಪರಿಸರದ ಮಾಲಿನ್ಯವು ಹಾನಿಕಾರಕವಾಗಿದೆ. ಇದು ಕೂಡ ಪಾರ್ಶ್ವವಾಯು ಸಮಸ್ಯೆ ಉಂಟಾಗಲು ಕಾರಣವಾಗಬಹುದು.
ಸ್ಟ್ರೋಕ್ ತಡೆಯಲು ಈ ಜೀವನಕ್ರಮ ಪಾಲಿಸಿ
ʼಡಯೆಟ್ ನಮ್ಮ ಆರೋಗ್ಯದ ಮೇಲೆ ಪ್ರಮುಖ ಪಾತ್ರ ವಹಿಸುತ್ತದೆ. ನಾವು ಏನನ್ನು ತಿನ್ನುತ್ತೇವೆ ಅದು ನಮ್ಮ ದೇಹದ ಮೇಲೆ ಪ್ರತಿಫಲಿಸುತ್ತದೆ. ರೆಡ್ ಮೀಟ್ ಅತಿಯಾದ ಸೇವನೆಯು ಆರೋಗ್ಯಕ್ಕೆ ಹಾನಿಕರ. ಹಸಿರು ಸೊಪ್ಪು, ತರಕಾರಿ ಹಾಗೂ ಹಣ್ಣುಗಳನ್ನು ನಮ್ಮ ಡಯೆಟ್ ಕ್ರಮದಲ್ಲಿ ಪಾಲಿಸುವುದರಿಂದ ಅಪಾಯವನ್ನು ಕಡಿಮೆ ಮಾಡಬಹುದು. ಹಣ್ಣು ಹಾಗೂ ತರಕಾರಿಗಳನ್ನು ನಮ್ಮ ಆಹಾರದಲ್ಲಿ ಹೆಚ್ಚು ಹೆಚ್ಚು ಸೇವಿಸುವುದರಿಂದ ನಮ್ಮ ದೀರ್ಘಾಯಸ್ಸಿಗೆ ವರವಾಗಬಹುದುʼ ಎನ್ನುತ್ತಾರೆ ಡಾ. ಸಿಂಘಾಲ್.
ಸ್ಟ್ರೋಕ್ ತಡೆಯಲು ನೀವು ಅನುಸರಿಸಬೇಕಾದ ಕ್ರಮಗಳು
ಉಪ್ಪಿನ ಸೇವನೆ ಕಡಿಮೆ ಮಾಡುವುದು: ಉಪ್ಪು ಹಾಗೂ ಉಪ್ಪಿನಾಂಶ ಇರುವ ಆಹಾರಗಳ ಸೇವನೆಯನ್ನು ಮಿತಿಗೊಳಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ ಮತ್ತು ಕಿಡ್ನಿ ಸಮಸ್ಯೆಗಳನ್ನು ದೂರ ಮಾಡುತ್ತದೆ. ಫಾಸ್ಟ್‌ಫುಡ್, ಸಂಸ್ಕರಿತ ಆಹಾರಗಳು, ಕೆಲವು ಚಿಪ್ಸ್‌ನಂತರ ಉಪ್ಪಿನಾಂಶ ಅಧಿಕ ಇರುವ ಆಹಾರಗಳು ದೇಹಕ್ಕೆ ಹಾನಿಕಾರಕವಾಗಿವೆ. ಇವುಗಳನ್ನು ತ್ಯಜಿಸಬೇಕು.
ತೂಕ ಇಳಿಕೆ: ವ್ಯಾಯಾಮ ಮಾಡದೇ ಇರುವುದು, ಕಡಿಮೆ ಪ್ರಮಾಣದ ವ್ಯಾಯಾಮ, ಜಡ ಜೀವನಶೈಲಿ ಮತ್ತು ಅತಿಯಾದ ತೂಕವು ಸ್ಟ್ರೋಕ್‌ನೊಂದಿಗೆ ನೇರವಾದ ಸಂಬಂಧವನ್ನು ಹೊಂದಿವೆ. ಆ ಕಾರಣಕ್ಕೆ ತೂಕ ಇಳಿಕೆ ಮಾಡಿಕೊಳ್ಳುವುದು ಮತ್ತು ಸಮತೂಕ ಕಾಯ್ದುಕೊಳ್ಳುವುದು ಬಹಳ ಅವಶ್ಯ.
ಧೂಮಪಾನ ತ್ಯಜಿಸುವುದು: ಸಿಗರೇಟ್ ಸೇದುವುದು ಸ್ಟ್ರೋಕ್‌ಗೆ ಪ್ರಮುಖ ಕಾರಣ. ಇದನ್ನು ತ್ಯಜಿಸುವುದು ಬಹಳ ಉತ್ತಮ.
ಮಧ್ಯಪಾನ: ಅತಿಯಾಗಿ ಮಧ್ಯಪಾನ ಮಾಡುವುದು ರಕ್ತದೊತ್ತಡವನ್ನು ಹೆಚ್ಚಿಸಬಹುದು. ಇದು ಸ್ಟ್ರೋಕ್‌ಗೆ ಕಾರಣವಾಗುತ್ತದೆ.
ಮಧುಮೇಹ ಹಾಗೂ ಕೊಲೆಸ್ಟ್ರಾಲ್ ನಿಯಂತ್ರಣ: ಮಧುಮೇಹಿಗಳು, ಹೃದ್ರೋಗ ಸಮಸ್ಯೆ ಇರುವವರು ಹಾಗೂ ಅಧಿಕ ಕೊಲೆಸ್ಟ್ರಾಲ್ ಅಂಶ ಹೊಂದಿರುವ ವ್ಯಕ್ತಿಗಳ ಇವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಇದರಿಂದ ಸ್ಟ್ರೋಕ್ ಅಪಾಯವನ್ನು ಕಡಿಮೆ ಮಾಡಬಹುದು.
ಪಾರ್ಶ್ವವಾಯು ಕೇವಲ ರೋಗಿಗಳ ಮೇಲೆ ಮಾತ್ರವಲ್ಲ ಇದು ಅವರ ಕುಟುಂಬದವರ ಮೇಲೂ ಪರಿಣಾಮ ಬೀರುತ್ತದೆ. ಇತ್ತೀಚಿನ ದಿನಗಳಲ್ಲಿ ಹಲವರು ಕುಳಿತು ಕೆಲಸ ಮಾಡುವ ಕಾರಣ ದೈಹಿಕ ಚಟುವಟಿಕೆ ಕೊರತೆ ಕಾಡುತ್ತಿದೆ. ಇದರೊಂದಿಗೆ ನಾವು ಸೇವಿಸುವ ಆಹಾರ, ಪರಿಸರ ಈ ಎಲ್ಲವೂ ಸ್ಟ್ರೋಕ್‌ಗೆ ಕೊಡುಗೆ ನೀಡುತ್ತಿವೆ, ಹಾಗಾಗಿ ಈ ಎಲ್ಲದರ ಮೇಲೆ ಗಮನ ಹರಿಸುವುದು ಬಹಳ ಮುಖ್ಯವಾಗುತ್ತದೆ.
ವಿಭಾಗ