Monsoon Health tips: ರೋಗ ನಿರೋಧಕ ಶಕ್ತಿ ಹೆಚ್ಚಿದ್ರೆ ಮಾತ್ರ ಮಳೆಗಾಲದಲ್ಲಿ ಸೋಂಕು ನಿಮ್ಮ ಬಳಿ ಸುಳಿಯಲ್ಲ; ಈ ಸಲಹೆಗಳು ನಿಮಗಾಗಿ
ಕನ್ನಡ ಸುದ್ದಿ  /  ಜೀವನಶೈಲಿ  /  Monsoon Health Tips: ರೋಗ ನಿರೋಧಕ ಶಕ್ತಿ ಹೆಚ್ಚಿದ್ರೆ ಮಾತ್ರ ಮಳೆಗಾಲದಲ್ಲಿ ಸೋಂಕು ನಿಮ್ಮ ಬಳಿ ಸುಳಿಯಲ್ಲ; ಈ ಸಲಹೆಗಳು ನಿಮಗಾಗಿ

Monsoon Health tips: ರೋಗ ನಿರೋಧಕ ಶಕ್ತಿ ಹೆಚ್ಚಿದ್ರೆ ಮಾತ್ರ ಮಳೆಗಾಲದಲ್ಲಿ ಸೋಂಕು ನಿಮ್ಮ ಬಳಿ ಸುಳಿಯಲ್ಲ; ಈ ಸಲಹೆಗಳು ನಿಮಗಾಗಿ

Monsoon Health tips: ಮಳೆಗಾಲದಲ್ಲಿ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲವಾಗಿದ್ದರೆ ಸೋಂಕುಗಳಿಗೆ ಭಯಪಡುವ ಅಗತ್ಯವಿರುವುದಿಲ್ಲ. ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಾವು ಏನೆಲ್ಲಾ ಕ್ರಮಗಳನ್ನು ಪಾಲಿಸಬೇಕೆಂದು ನೋಡೋಣ.

Monsoon Health tips: ರೋಗ ನಿರೋಧಕ ಶಕ್ತಿ ಹೆಚ್ಚಿದ್ರೆ ಮಾತ್ರ ಮಳೆಗಾಲದಲ್ಲಿ ಸೋಂಕು ನಿಮ್ಮ ಬಳಿ ಸುಳಿಯಲ್ಲ
Monsoon Health tips: ರೋಗ ನಿರೋಧಕ ಶಕ್ತಿ ಹೆಚ್ಚಿದ್ರೆ ಮಾತ್ರ ಮಳೆಗಾಲದಲ್ಲಿ ಸೋಂಕು ನಿಮ್ಮ ಬಳಿ ಸುಳಿಯಲ್ಲ

ಮಳೆಗಾಲದ ವಾತಾವರಣ ಮನಸ್ಸಿಗೆ ಹಿತ ಎನಿಸುತ್ತದೆ. ಆದರೆ ಇದೇ ಋತುವಿನಲ್ಲಿ ಅನೇಕ ಕಾಯಿಲೆಗಳು, ರೋಗಗಳು ದೇಹಕ್ಕೆ ಅಂಟಿಕೊಳ್ಳುವ ಸಾಧ್ಯತೆ ಹೆಚ್ಚು. ಆ ಕಾಯಿಲೆಗಳಿಂದ ದೂರ ಇರಬೇಕೆಂದರೆ ಹಾಗೂ ಅವುಗಳ ವಿರುದ್ಧ ಹೋರಾಡಬೇಕೆಂದರೆ ನಮಗೆ ರೋಗ ನಿರೋಧಕ ಶಕ್ತಿ ಇರಬೇಕು. ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲವಾಗಿದ್ದರೆ ಸೋಂಕುಗಳಿಗೆ ಭಯಪಡುವ ಅಗತ್ಯವಿರುವುದಿಲ್ಲ. ಮಳೆಗಾಲದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಾವು ಏನೆಲ್ಲಾ ಕ್ರಮಗಳನ್ನು ಪಾಲಿಸಬೇಕೆಂದು ನೋಡೋಣ..

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಹೈಡ್ರೇಟೆಡ್ ಆಗಿರುವುದು

ಹೆಚ್ಚಿನ ಜನರು ಮಾಡುವ ತಪ್ಪೇನೆಂದರೆ ಮಳೆಗಾಲದಲ್ಲಿ ಹೆಚ್ಚು ನೀರು ಕುಡಿಯುವುದೇ ಇಲ್ಲ. ಅವರ ತಪ್ಪು ಎನ್ನುವುದಕ್ಕಿಂತ ಮಳೆಗಾಲದ ತಂಪು ವಾತಾವರಣದಲ್ಲಿ ಬಾಯಾರಿಕೆ ಆಗುವುದೇ ಕಡಿಮೆ. ಹೀಗಾಗಿ ನೀರು ಕುಡಿಯಲು ಮನಸ್ಸೇ ಆಗುವುದಿಲ್ಲ. ಆದರೆ ಮಳೆಗಾಲ ಇರಲಿ, ಚಳಿಗಾಲ ಇರಲಿ, ಬೇಸಿಗೆ ಇರಲಿ, ದೇಹದ ಎಲ್ಲಾ ಅಂಗಗಳು ಸರಿಯಾಗಿ ಕಾರ್ಯನಿರ್ವಹಿಸಲು ಸಾಕಷ್ಟು ಪ್ರಮಾಣದ ನೀರು ಬೇಕೇ ಬೇಕು. ನೀರು ದೇಹದ ಎಲ್ಲಾ ಅಂಗಗಳಿಗೆ ಪೋಷಕಾಂಶಗಳು ತಲುಪುವಂತೆ ಮಾಡಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ. ದೇಹದಲ್ಲಿನ ವಿಷವನ್ನು ಹೊರಹಾಕಲು ಕೂಡ ನೀರು ಸಹಕಾರಿ. ಹೀಗಾಗಿ ಮಳೆಗಾಲದಲ್ಲಿ ಬಾಯಾರಿಕೆ ಆಗದಿದ್ದರೂ ಕೂಡ ದಿನಕ್ಕೆ 2 ರಿಂದ 3 ಲೀಟರ್ ನೀರು ಕುಡಿಯಬೇಕು.

ಮಸಾಲೆಯುಕ್ತ ಮತ್ತು ಕರಿದ ಆಹಾರವನ್ನು ತಪ್ಪಿಸಿ

ಮಳೆಗಾಲದಲ್ಲಿ ಬಿಸಿಬಿಸಿ ಖಾರ ಖಾರವಾದ ತಿನಿಸುಗಳನ್ನು ತಿನ್ನುವ ಬಯಕೆಯಾಗುವುದು ಸಹಜ. ಆದರೆ ಎಣ್ಣೆಯಲ್ಲಿ ಕರಿದ ಹಾಗೂ ಮಸಾಲೆಯುಕ್ತ ಆಹಾರ ಪದಾರ್ಥಗಳು ಮಳೆಗಾಲದಲ್ಲಿ ಹಾನಿಕಾರಕವಾಗಿದ್ದು, ಅವು ಉರಿಯೂತ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡುತ್ತವೆ. ಈ ಆಹಾರಗಳು ನಮ್ಮ ಕರುಳಿನ ಆರೋಗ್ಯವನ್ನು ಸಹ ಕೆಡಿಸುತ್ತದೆ. ಸೋಂಕುಗಳ ವಿರುದ್ಧ ದೇಹವನ್ನು ರಕ್ಷಿಸುವ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಸಾಮರ್ಥ್ಯವನ್ನು ದುರ್ಬಲಗೊಳಿಸಬಹುದು.

ಸಮತೋಲಿತ ಆಹಾರ ಸೇವನೆ

ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆ ಬಲವಾಗಿರಬೇಕೆಂದರೆ ನಾವು ಸೇವಿಸುವ ಆಹಾರ ಸಮತೋಲಿತವಾಗಿರಬೇಕು. ಅಂದರೆ ನಾವು ತೆಗೆದುಕೊಳ್ಳುವ ಆಹಾರದಲ್ಲಿ ವಿಟಮಿನ್ಗಳು, ಪ್ರೋಟೀನ್, ಖನಿಜಾಂಶ, ಕಾರ್ಬೋಹೈಡ್ರೇಟ್‌, ಫೈಬರ್ ಸೇರಿದಂತೆ ಎಲ್ಲಾ ರೀತಿಯ ಪೋಷಕಾಂಶಗಳು ಇರಬೇಕು. ಇದಕ್ಕಾಗಿ ನೀವು ತರಕಾರಿಗಳು, ಹಣ್ಣುಗಳು, ಧಾನ್ಯಗಳನ್ನು ಹೆಚ್ಚು ಸೇವಿಸಬೇಕು. ಕೋಳಿ, ಮೀನು, ಮೊಟ್ಟೆ, ಡೈರಿ ಉತ್ಪನ್ನಗಳನ್ನು ಸೇವಿಸಿ. ಶುಂಠಿ, ತುಳಸಿ ಮತ್ತು ದಾಲ್ಚಿನ್ನಿಗಳಂತಹ ಗಿಡಮೂಲಿಕೆಯ ಟೀ ಕುಡಿಯಿರಿ.

ಜಂಕ್ ಫುಡ್ ಸೇವನೆ ತ್ಯಜಿಸಿ

ಮಳೆಗಾದಲ್ಲಿ ಶಾಲೆ ಬಿಟ್ಟು ಮನೆಗೆ ಹೋಗುವ ವೇಳೆ, ಕೆಲಸ ಮುಗಿಸಿ ಮನೆಗೆ ಹೋಗುವ ವೇಳೆ, ಟೀ ಬ್ರೇಕ್ ಸಮಯದಲ್ಲಿ ಅನೇಕರಿಗೆ ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್ ತಿನ್ನಬೇಕೆನಿಸುತ್ತದೆ. ಆದರೆ ಈ ಆಹಾರಗಳು ನಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಹದಗೆಡಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡುತ್ತದೆ. ಈ ವೇಳೆ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಬೇಗನೆ ಚೇತರಿಸಿಕೊಳ್ಳಲು ಆಗುವುದಿಲ್ಲ. ಹೀಗಾಗಿ ಜಂಕ್ ಫುಡ್ ಹಾಗೂ ಫಾಸ್ಟ್ ಫುಡ್ ಸೇವನೆ ಸಂಪೂರ್ಣ ತ್ಯಜಿಸಿ.

ದಿನವೂ ವ್ಯಾಯಾಮ ಮಾಡಿ

ನಿಯಮಿತ ದೈಹಿಕ ಚಟುವಟಿಕೆಯು ಉತ್ತಮ ರಕ್ತ ಪರಿಚಲನೆ ಮೂಲಕ ನಿಮ್ಮ ದೇಹದಲ್ಲಿ ರೋಗನಿರೋಧಕ ಕಾರ್ಯವನ್ನು ಹೆಚ್ಚಿಸುತ್ತದೆ. ಹೀಗಾಗಿ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯನ್ನು ಬಲವಾಗಿಡಲು ನೀವು ಪ್ರತಿದಿನ ವಾಕಿಂಗ್, ಜಾಗಿಂಗ್ ಮತ್ತು ಸ್ಟ್ರೆಚಿಂಗ್‌ನಂತಹ ವ್ಯಾಯಾಮಗಳನ್ನು ಮಾಡಬೇಕು. ಯೋಗ, ಧ್ಯಾನ ಮಾಡಿ. ಇದು ಒತ್ತಡವನ್ನು ನಿರ್ವಹಿಸಲು ಕೂಡ ಸಹಾಯ ಮಾಡುತ್ತದೆ. ಒತ್ತಡ ಕೂಡ ಪ್ರತಿರಕ್ಷಣಾ ವ್ಯವಸ್ಥೆ ಮೇಲೆ ಪರಿಣಾಮ ಬೀರುತ್ತದೆ.

ಲೇಖನ: ಮೇಘನಾ

Whats_app_banner