ಹಾರ್ನ್‌ಬಿಲ್‌ನಿಂದ ರಣ್ ಉತ್ಸವದವರೆಗೆ, ಭಾರತದಲ್ಲಿ ಚಳಿಗಾಲದಲ್ಲಿ ನಡೆಯುವ ವಿಭಿನ್ನ ಹಬ್ಬ, ಆಚರಣೆಗಳಿವು; ಒಮ್ಮೆಯಾದ್ರೂ ಇದರ ಅನುಭವ ಪಡೆಯಿರಿ
ಭಾರತದಲ್ಲಿ ಚಳಿಗಾಲದಲ್ಲಿ ಕೆಲವೊಂದು ವಿಶೇಷ ಹಬ್ಬಗಳನ್ನು ಆಯೋಜಿಸಲಾಗುತ್ತದೆ. ಚಳಿಗಾಲದ ಋತುವಿನಲ್ಲಿ ನಡೆಯುವ ಈ ಹಬ್ಬಗಳು ವಿಭಿನ್ನ ಹಾಗೂ ವಿಶಿಷ್ಟವಾಗಿರುತ್ತವೆ. ಹಾರ್ನ್‌ಬಿಲ್‌ನಿಂದ ರಣ್ ಉತ್ಸವದವರೆಗೆ ಚಳಿಗಾಲದಲ್ಲಿ ಭಾರತದ ವಿವಿಧ ರಾಜ್ಯಗಳಲ್ಲಿ ನಡೆಯುವ ಹಬ್ಬಗಳ ಬಗ್ಗೆ ತಿಳಿಯೋಣ
ಭಾರತ ವೈವಿಧ್ಯತೆಯ ನಾಡು, ಇಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಆಚರಣೆ, ಉತ್ಸವ, ಹಬ್ಬಗಳು ನಡೆಯತ್ತವೆ. ಈಗ ಚಳಿಗಾಲ, ಈ ಸಮಯದಲ್ಲಿ ಮೈ ನಡುಗುವ ಚಳಿ ಮಾತ್ರವಲ್ಲ ನಮ್ಮ ದೇಶದ ಸಾಂಪ್ರದಾಯ, ಸಂಸ್ಕೃತಿಯನ್ನು ಬಿಂಬಿಸುವ ಕೆಲ ಉತ್ಸವಗಳೂ ನಡೆಯುತ್ತವೆ. ಚಳಿಗಾಲದಲ್ಲಿ ವಿಶೇಷವಾಗಿರುವ ಈ ಹಬ್ಬಗಳು ಭಾರತದ ಶ್ರೀಮಂತ ಪರಂಪರೆಯನ್ನು ಬಿಂಬಿಸುವುದು ಸುಳ್ಳಲ್ಲ.
ನಾಗಾಲ್ಯಾಂಡ್‌ನಲ್ಲಿ ಆಚರಿಸುವ ಹಾರ್ನ್‌ಬಿಲ್ ಉತ್ಸವದಿಂದ ಗುಜರಾತ್‌ನ ರಣ್ ಉತ್ಸವದವರೆಗೆ ಭಾರತದಲ್ಲಿ ಚಳಿಗಾಲದಲ್ಲಿ ಆಚರಿಸುವ ವಿಶೇಷ ಹಬ್ಬಗಳು ಯಾವುದು ನೋಡಿ. ನೀವು ಕಲೆ, ಸಂಗೀತ, ಆಹಾರ ಪ್ರೇಮಿಯಾಗಿದ್ದರೆ ಚಳಿಗಾಲದಲ್ಲಿ ಭಾರತದಲ್ಲಿ ನಡೆಯುವ ಈ ಹಬ್ಬಗಳಿಗೆ ಜೀವನದಲ್ಲಿ ಒಮ್ಮೆಯಾದ್ರೂ ಭೇಟಿ ನೀಡಬೇಕು. ಅಂತಹ ಉತ್ಸವಗಳ ಬಗ್ಗೆ ಇಲ್ಲಿದೆ ಮಾಹಿತಿ.
ರಣ್ ಉತ್ಸವ
ಇದು ಗುಜರಾತ್‌ನ ರೋಮಾಂಚಕ ಸಂಸ್ಕೃತಿ ಮತ್ತು ಸಂಪ್ರದಾಯಗಳ ಭವ್ಯವಾದ ಆಚರಣೆಯಾಗಿದೆ.ನವೆಂಬರ್ 1, 2024 ರಿಂದ ಫೆಬ್ರವರಿ 28, 2025 ರವರೆಗೆ ನಡೆಯುವ ಈ ಉತ್ಸವವು ಗುಜರಾತಿ ಕಲೆ, ಕರಕುಶಲ, ಸಂಗೀತ ಮತ್ತು ನೃತ್ಯದ ಶ್ರೀಮಂತಿಕೆಯನ್ನು ಎತ್ತಿ ತೋರಿಸುತ್ತದೆ, ಪ್ರವಾಸಿಗರಿಗೆ ಸ್ಥಳೀಯ ಜಾನಪದ ಪರಂಪರೆಯ ಅಧಿಕೃತ ಸೊಬಗನ್ನು ತೋರಿಸುತ್ತದೆ. ಈ ಉತ್ಸವದಲ್ಲಿ ಉದ್ದಕ್ಕೂ ಹರಡಿರುವ ಟೆಂಟ್‌ಗಳು, ಸ್ಟಾಲ್‌ಗಳು ನಿಮಗೆ ವಿಭಿನ್ನ ಅನುಭವ ನೀಡುವುದು ಸುಳ್ಳಲ್ಲ.
ಹಾರ್ನ್‌ಬಿಲ್ ಉತ್ಸವ
‘ಹಬ್ಬಗಳ ಹಬ್ಬ‘ ಎಂದು ಕರೆಯಲ್ಪಡುವ ಹಾರ್ನ್‌ಬಿಲ್ ಉತ್ಸವವು ನಾಗಾ ಪರಂಪರೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಅದ್ಭುತ ಆಚರಣೆಯಾಗಿದೆ. ಈ ವರ್ಷ ಹಾರ್ನ್‌ಬಿಲ್ ಹಬ್ಬದ 25ನೇ ವರ್ಷದ ಆಚರಣೆ. ನಾಗಾಲ್ಯಾಂಡ್‌ನಲ್ಲಿ ನೆಲೆಯಾಗಿರುವ 16 ಬುಡಕಟ್ಟುಗಳನ್ನು ಸಾಂಪ್ರದಾಯಿಕ ಸಂಗೀತ, ನೃತ್ಯ, ಪಾಕಪದ್ಧತಿ ಮತ್ತು ಕರಕುಶಲ ವಸ್ತುಗಳ ರೋಮಾಂಚಕ ಪ್ರದರ್ಶನದಲ್ಲಿ ಈ ಉತ್ಸವ ಒಂದುಗೂಡಿಸುತ್ತದೆ. ಇದರಲ್ಲಿ ಮೈ ನವಿರೇಳಿಸುವ ಸಾಂಪ್ರದಾಯಿಕ ಕ್ರೀಡೆಗಳು ಮತ್ತು ಅತಿ ಖಾರದ ನಾಗಾ ಮೆಣಸಿನಕಾಯಿ ತಿನ್ನುವ ಸ್ಪರ್ಧೆಯು ಒಳಗೊಂಡಿರುತ್ತದೆ. ಈ ಉತ್ಸವವು ಡಿಸೆಂಬರ್ 1 ರಿಂದ 10ರವರೆಗೆ ನಡೆಯುತ್ತದೆ.
ಜೈಸಲ್ಮೇರ್ ಮರುಭೂಮಿ ಉತ್ಸವ, ರಾಜಸ್ಥಾನ
ರಾಜಸ್ಥಾನವು ತನ್ನ ರಾಜಮನೆತನದ ಪರಂಪರೆ ಮತ್ತು ರೋಮಾಂಚಕ ಸಂಸ್ಕೃತಿಗೆ ಹೆಸರುವಾಸಿಯಾಗಿದೆ, ಇಲ್ಲಿ ಪ್ರತಿವರ್ಷ ಅದ್ಭುತವಾದ ಜೈಸಲ್ಮೇರ್ ಮರುಭೂಮಿ ಉತ್ಸವ ನಡೆಯುತ್ತದೆ. ಇದನ್ನು ಮಾರು ಮಹೋತ್ಸವ ಎಂದೂ ಕರೆಯಲಾಗುತ್ತದೆ. ವಾರ್ಷಿಕವಾಗಿ ಚಳಿಗಾಲದಲ್ಲಿ ನಡೆಯುವ ಈ ಮೂರು ದಿನಗಳ ಸಂಭ್ರಮವು ಜೈಸಲ್ಮೇರ್‌ನಿಂದ 42 ಕಿಲೋಮೀಟರ್ ದೂರದಲ್ಲಿರುವ ಸ್ಯಾಮ್ ಸ್ಯಾಂಡ್ ಡ್ಯೂನ್ಸ್‌ನಲ್ಲಿ ಥಾರ್ ಮರುಭೂಮಿಯ ಮಿನುಗುವ ಮರಳಿನ ಮೇಲೆ ನಡೆಯುತ್ತದೆ. 2025 ರ ಆವೃತ್ತಿಯು ಫೆಬ್ರವರಿ 22 ರಿಂದ ಫೆಬ್ರವರಿ 24 ರವರೆಗೆ ನಡೆಯಲಿದೆ.
ಜೈಪುರ ಸಾಹಿತ್ಯ ಉತ್ಸವ, ರಾಜಸ್ಥಾನ
ಜೈಪುರ ಸಾಹಿತ್ಯ ಉತ್ಸವ ಸಾಹಿತ್ಯಿಕ ಪ್ರಪಂಚವನ್ನು ತೆರೆದಿಡುವ ಹಬ್ಬವಾಗಿದೆ. ಈ ಬಾರಿ ಜೈಪುರ ಸಾಹಿತ್ಯ ಉತ್ಸವವು 2025 ರ ಜನವರಿ 30ರಿಂದ ಫೆಬ್ರವರಿ 3ರವರೆಗೆ ನಡೆಯಲಿದೆ. ಈ ಸಾಂಪ್ರದಾಯಿಕ ಈವೆಂಟ್ ಪ್ರಪಂಚದಾದ್ಯಂತದ ಹೆಸರಾಂತ ಲೇಖಕರು, ಚಿಂತಕರು ಮತ್ತು ಕಲಾವಿದರನ್ನು ಒಟ್ಟುಗೂಡಿಸುತ್ತದೆ. ಇಲ್ಲಿ ಚರ್ಚೆ, ಪುಸ್ತಕ ಓದುವುದು, ಸಂಗೀತ ಪ್ರದರ್ಶನ ಮುಂತಾದ ಕಾರ್ಯಕ್ರಮಗಳು ನಡೆಯುತ್ತವೆ. ಸಾಹಿತ್ಯ ಮತ್ತು ಕಲಾ ಉತ್ಸಾಹಿಗಳು ಈ ಉತ್ಸವಕ್ಕೆ ಒಮ್ಮೆಯಾದ್ರೂ ಭೇಟಿ ನೀಡಲೇಬೇಕು.
ಮನಾಲಿ ವಿಂಟರ್ ಕಾರ್ನಿವಲ್, ಹಿಮಾಚಲ ಪ್ರದೇಶ
ಈ ಹಬ್ಬವು ಹಿಮಾಚಲ ಪ್ರದೇಶದ ಹೊಸ ವರ್ಷದ ಹಬ್ಬದ ಅಂಗೀಕಾರವಾಗಿದೆ, ಇದು 2025ರ ಜನವರಿ 2ರಿಂದ ಜನವರಿ 6ರವರೆಗೆ ನಡೆಯುತ್ತದೆ. 1977ರಿಂದ ಆ ಹಬ್ಬವನ್ನು ಆಚರಿಸಲಾಗುತ್ತಿದೆ. ಈ ವಾರ್ಷಿಕ ಕಾರ್ಯಕ್ರಮವು ಸ್ಕೀಯಿಂಗ್ ಸ್ಪರ್ಧೆಯಿಂದ ಬ್ಯಾಂಡ್ ಪ್ರದರ್ಶನಗಳು, ಆಹಾರ ಉತ್ಸವಗಳು, ಬೀದಿ ನಾಟಕಗಳು, ಜಾನಪದ ನೃತ್ಯಗಳು ಮತ್ತು ಸಾಹಸ ಕ್ರೀಡೆಗಳನ್ನು ಒಳಗೊಂಡಿದೆ.