ಉಪ್ಪು, ಕಾಫಿಪುಡಿ, ಬಿಸ್ಕತ್ತು ಬೇಗನೆ ಕೆಡುತ್ತೆ ಅನ್ನುವ ಚಿಂತೆ ಇದ್ರೆ ಈ ಟಿಪ್ಸ್ ಫಾಲೋ ಮಾಡಿ: ಬಹಳ ದಿನ ಹಾಳಾಗದಂತೆ ಇರುತ್ತೆ-kitchen tips food storing tips how to prevent food items from moisture in rainy season arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಉಪ್ಪು, ಕಾಫಿಪುಡಿ, ಬಿಸ್ಕತ್ತು ಬೇಗನೆ ಕೆಡುತ್ತೆ ಅನ್ನುವ ಚಿಂತೆ ಇದ್ರೆ ಈ ಟಿಪ್ಸ್ ಫಾಲೋ ಮಾಡಿ: ಬಹಳ ದಿನ ಹಾಳಾಗದಂತೆ ಇರುತ್ತೆ

ಉಪ್ಪು, ಕಾಫಿಪುಡಿ, ಬಿಸ್ಕತ್ತು ಬೇಗನೆ ಕೆಡುತ್ತೆ ಅನ್ನುವ ಚಿಂತೆ ಇದ್ರೆ ಈ ಟಿಪ್ಸ್ ಫಾಲೋ ಮಾಡಿ: ಬಹಳ ದಿನ ಹಾಳಾಗದಂತೆ ಇರುತ್ತೆ

ಅಡುಗೆಮನೆಯಲ್ಲಿ ಬಳಕೆಯಾಗುವ ಅನೇಕ ವಸ್ತುಗಳು ತೇವಾಂಶದ ಕಾರಣದಿಂದ ಹಾಳಾಗುತ್ತವೆ. ಅವುಗಳಲ್ಲಿ ಉಪ್ಪು, ಕಾಫಿಪುಡಿ, ಅಕ್ಕಿ, ಬೇಳೆ ಮುಂತಾದವುಗಳು ಬಹಳ ಬೇಗನೆ ಕೆಡುತ್ತವೆ. ಅದಕ್ಕೆ ಕೆಲವು ಸಿಂಪಲ್ ಟ್ರಿಕ್ಸ್ ಫಾಲೋ ಮಾಡುವುದರಿಂದ ಅವುಗಳು ಹಾಳಾಗುವುದನ್ನು ತಪ್ಪಿಸಬಹುದು.

ಮಳೆಗಾಲದಲ್ಲಿ ಥಟ್ ಅಂತ ಹಾಳಾಗುವ ಉಪ್ಪು, ಕಾಫಿಪುಡಿ, ಬಿಸ್ಕೀಟ್: ಈ ಟಿಪ್ಸ್ ಫಾಲೊ ಮಾಡಿದ್ರೆ ಸಾಲ್ವ್ ಆಗುತ್ತೆ ಪ್ರಾಬ್ಲಂ
ಮಳೆಗಾಲದಲ್ಲಿ ಥಟ್ ಅಂತ ಹಾಳಾಗುವ ಉಪ್ಪು, ಕಾಫಿಪುಡಿ, ಬಿಸ್ಕೀಟ್: ಈ ಟಿಪ್ಸ್ ಫಾಲೊ ಮಾಡಿದ್ರೆ ಸಾಲ್ವ್ ಆಗುತ್ತೆ ಪ್ರಾಬ್ಲಂ (PC: Freepik)

ಮಳೆಗಾಲದ ದಿನಗಳ ಎಲ್ಲಡೆ ತೇವಾಂಶ ತುಂಬಿರುತ್ತದೆ. ಇದೀಗ ಮಳೆಗಾಲ ಮುಗಿಯುತ್ತಾ ಬಂದಿದೆ. ಆದರೂ ಅಲ್ಲೊಮ್ಮೆ, ಇಲ್ಲೊಮ್ಮೆ ಮಳೆಯಾಗುತ್ತಿದೆ. ಹೀಗಾಗಿ ತೇವಾಂಶ ತುಂಬಿರುವುದು ಸಾಮಾನ್ಯ. ಈ ಕಾರಣದಿಂದ ಅನೇಕ ವಸ್ತುಗಳಿಗೆ ತಂಪು ತಗುಲಿ ಹಾಳಾಗುತ್ತವೆ. ಅದರಲ್ಲೂ ಆಹಾರ ಪದಾರ್ಥಗಳು ಇನ್ನೂ ಬೇಗ ಕೆಡುತ್ತವೆ. ಡಬ್ಬದಲ್ಲಿರುವ ಕಾಫಿ ಪುಡಿ, ಟೇಬಲ್ ಮೇಲೆ ಇಟ್ಟ ಉಪ್ಪು, ಬಿಸ್ಕತ್ತು, ಬೇಳೆ, ಅಕ್ಕಿ ಮುಂತಾದವುಗಳು ಹಾಳಾಗುತ್ತವೆ. ಪದೇ ಪದೇ ಅಂಗಡಿಗೆ ಹೋಗುವ ಕಿರಿಕಿರಿಯಿಂದ ದೂರವಿರಲು ಹೆಚ್ಚಿನ ಪ್ರಮಾಣದಲ್ಲಿ ಸಾಮಾನುಗಳನ್ನು ಖರೀದಿಸಿ ತಂದಾಗ ಅವುಗಳು ಹಾಳಾದರೆ ಬಹಳ ಬೇಸರವಾಗುತ್ತದೆ. ಅಂತಹ ಸಂದರ್ಭದಲ್ಲಿ ಏನು ಮಾಡುವುದು? ಖರೀದಿಸಿ ತಂದ ಸಾಮಾನುಗಳನ್ನು ಕೆಡದಂತೆ ಶೇಖರಿಸುವುದು ಹೇಗೆ ಎಂಬ ಚಿಂತೆ ಕಾಡುತ್ತದೆ. ಅದಕ್ಕೆ ಕೆಲವು ಸರಳ ವಿಧಾನಗಳಿವೆ. ಅಡುಗೆಮನೆಯ ಕೆಲವು ವಸ್ತುಗಳು ತೇವಾಂಶವನ್ನು ಹೀರಿಕೊಳ್ಳುವ ಗುಣವನ್ನು ಹೊಂದಿರುತ್ತವೆ. ಅವುಗಳು ಆಹಾರ ಪದಾರ್ಥಗಳು ಕೆಡದಂತೆ ರಕ್ಷಿಸಲು ಸಹಾಯ ಮಾಡುತ್ತವೆ. ಅವುಗಳನ್ನು ಬಳಸಿಕೊಂಡು ಆಹಾರ ಪದಾರ್ಥಗಳನ್ನು ಕೆಡದಂತೆ ಸಂಗ್ರಹಿಸಿಟ್ಟುಕೊಳ್ಳಬಹುದು.

ತೇವಾಂಶದಿಂದ ಹಾಳಾಗದಂತೆ ತಡೆಯಲು ಆಹಾರ ಪದಾರ್ಥಗಳನ್ನು ಹೀಗೆ ಸಂಗ್ರಹಿಸಿ

1) ಕಾಫಿಪುಡಿಯ ಡಬ್ಬದಲ್ಲಿ ಸ್ವಲ್ಪ ತೇವಾಂಶ ಸೇರಿದರೆ ಸಾಕು ಎಲ್ಲವೂ ಕೆಟ್ಟು ಹೋಗುತ್ತವೆ. ಅದನ್ನು ತಪ್ಪಿಸಲು, ಕಾಫಿಪುಡಿ ಬಳಸುವಾಗ ಒಣಗಿದ ಚಮಚವನ್ನೇ ಬಳಸಿ. ಕಾಫಿಪುಡಿ ಡಬ್ಬದಲ್ಲಿರುವ ಚಮಚವನ್ನೂ ಬಳಸಬೇಡಿ. ಏಕೆಂದರೆ ಡಬ್ಬದಲ್ಲಿರುವ ಚಮಚವನ್ನು ಪದೇ ಪದೇ ಬಳಸುವುದರಿಂದ ಅದಕ್ಕೆ ತೇವಾಂಶ ತಾಗುವ ಸಂಭವವಿರುತ್ತದೆ. ಇನ್ನೊಂದು ಉತ್ತಮ ಉಪಾಯವೆಂದರೆ ಕಾಫಿಪುಡಿ ಡಬ್ಬವನ್ನು ಫ್ರಿಜ್‌ನಲ್ಲಿಡಿ. ಅದರಿಂದ ಕಾಫಿಪುಡಿ ಬೇಗನೆ ಹಾಳಾಗುವುದಿಲ್ಲ.

2) ಮಳೆಗಾಲದಲ್ಲಿ ಉಪ್ಪಿಗೆ ತೇವಾಂಶ ತಗುಲುವುದು ಹೆಚ್ಚು. ಅದರಲ್ಲೂ ಟೇಬಲ್ ಮೇಲಿಟ್ಟ ಉಪ್ಪಿನ ಡಬ್ಬಿಗೆ ಇನ್ನೂ ಬೇಗನೆ ತಗುಲುತ್ತದ. ಈ ಸಮಸ್ಯೆಯಿಂದ ಪಾರಾಗಲು ಉಪ್ಪಿನ ಡಬ್ಬಿಗೆ ಸ್ವಲ್ಪ ಅಕ್ಕಿಯನ್ನು ಸೇರಿಸಿ. ಅಕ್ಕಿ ತೇವಾಂಶವನ್ನು ಹೀರಿಕೊಳ್ಳುತ್ತದೆ.

3) ಬೇಳೆಕಾಳುಗಳಿಗೆ ತೇವಾಂಶ ತಗುಲಿದರೆ ಅದರಲ್ಲಿ ಹುಳಗಳಾಗುತ್ತವೆ. ಅದಕ್ಕಾಗಿ ಬೇಳೆಕಾಳುಗಳ ಡಬ್ಬದಲ್ಲಿ ಒಂದೆರಡು ಪಲಾವ್‌ ಎಲೆಗಳನ್ನು ಹಾಕಿ. ಇದು ಬೇಳೆಕಾಳುಗಳು ಹಾಳಾಗುವುದನ್ನು ತಡೆಯುತ್ತದೆ.

4) ಮಳೆಗಾಲದಲ್ಲಿ ಅಕ್ಕಿಗೆ ಹುಳು ಹಿಡಿಯುವುದು ಹೆಚ್ಚು. ಅದಕ್ಕೆ ಅಕ್ಕಿಯಲ್ಲೂ ಪಲಾವ್‌ ಎಲೆಗಳನ್ನು ಹಾಕಿ. ಇದು ಅಕ್ಕಿಯು ತಾಜಾತನದಿಂದ ಕೂಡಿರುವಂತೆ ನೋಡಿಕೊಳ್ಳುತ್ತದೆ.

5) ಸೂಜಿ ರವೆ, ಶ್ಯಾವಿಗೆ ಮುಂತಾದವುಗಳಲ್ಲಿ ಹುಳದ ಚಿಕ್ಕ ಚಿಕ್ಕ ಗೂಡು ಅಥವಾ ಹುಳುಗಳು ಕಂಡುಬರುತ್ತವೆ. ಅದಕ್ಕೆ ಅಂಗಡಿಯಿಂದ ಖರೀದಿಸಿ ತಂದ ರವೆ, ಶ್ಯಾವಿಗೆ ಮುಂತಾದವುಗಳನ್ನು ಡಬ್ಬದಲ್ಲಿ ಶೇಖರಿಸುವ ಮೊದಲು ಸ್ವಲ್ಪ ಬಿಸಿ ಮಾಡಿ, ಆರಿದ ನಂತರ ಡಬ್ಬದಲ್ಲಿ ಶೇಖರಿಸಿ.

6) ಮಳೆಗಾಲದಲ್ಲಿ ತೇವಾಂಶ ತಗುಲಿ ಹಾಳಾಗುವುದರಲ್ಲಿ ಸಾಂಬಾರ ಪದಾರ್ಥಗಳು ಒಂದು. ಅವುಗಳನ್ನು ಫ್ರಿಜ್‌ನಲ್ಲಿ ಶೇಖರಿಸಿಡುವುದೇ ಉತ್ತಮವಾಗಿದೆ.

7) ಗರಿಗರಿಯಾದ ಬಿಸ್ಕತ್ತು ಎಲ್ಲರಿಗೂ ಇಷ್ಟ. ಅವುಗಳಿಗೆ ತೇವಾಂಶ ತಾಗಿದರೆ ಅವು ಮೆತ್ತಗಾಗಿ ತಿನ್ನಲು ರುಚಿಸುವುದಿಲ್ಲ. ಹಾಗಾಗಿ ಬಿಸ್ಕತ್ತಿನ ಡಬ್ಬಕ್ಕೆ ಒಂದು ಚಮಚ ಸಕ್ಕರೆಯನ್ನು ಸೇರಿಸಿ. ಆಗ ಅವು ತಾಜಾತನದಿಂದ ಕೂಡಿರುತ್ತವೆ.

mysore-dasara_Entry_Point