ಅಡುಗೆ ಮನೆಯಲ್ಲಿರುವ ಈ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಬದಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ: ಇರಲಿ ಸ್ವಚ್ಛತೆ ಕಡೆಗೆ ಗಮನ-kitchen tips kitchen cleaning tips replace these kitchen items to maintain hygiene and protect home from bacteria arc ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಅಡುಗೆ ಮನೆಯಲ್ಲಿರುವ ಈ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಬದಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ: ಇರಲಿ ಸ್ವಚ್ಛತೆ ಕಡೆಗೆ ಗಮನ

ಅಡುಗೆ ಮನೆಯಲ್ಲಿರುವ ಈ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಬದಲಿಸದಿದ್ದರೆ ಅಪಾಯ ತಪ್ಪಿದ್ದಲ್ಲ: ಇರಲಿ ಸ್ವಚ್ಛತೆ ಕಡೆಗೆ ಗಮನ

ಮನೆ ಸ್ವಚ್ಛವಾಗಿದ್ದರೆ ಎಲ್ಲರೂ ಆರೋಗ್ಯವಂತರಾಗಿರುತ್ತಾರೆ. ಸ್ವಚ್ಛತೆಯ ಕಡೆಗೆ ಸಾಕಷ್ಟು ತಿಳುವಳಿಕೆಯಿದ್ದರೂ ಸಹ ಕೆಲವು ವಸ್ತುಗಳ ಬಗ್ಗೆ ಗಮನಹರಿಸುವುದು ಕಡಿಮೆ ಎಂದರೂ ತಪ್ಪಾಗುವುದಿಲ್ಲ. ಮನೆಮಂದಿಯಲ್ಲಾ ಆರೋಗ್ಯದಿಂದಿರಲು ಅಡುಗೆಮನೆಯೇ ಮುಖ್ಯ ಕಾರಣವಾಗಿದೆ. ಅಡುಗೆಮನೆಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಲು ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ.

ಅಡುಗೆಮನೆಯಲ್ಲಿರುವ ಈ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಬದಲಿಸಿದ್ದರೆ ಅಪಾಯ ತಪ್ಪಿದ್ದಲ್ಲ
ಅಡುಗೆಮನೆಯಲ್ಲಿರುವ ಈ ವಸ್ತುಗಳನ್ನು ಸಮಯಕ್ಕೆ ಸರಿಯಾಗಿ ಬದಲಿಸಿದ್ದರೆ ಅಪಾಯ ತಪ್ಪಿದ್ದಲ್ಲ (pixabay)

ಮನೆಯ ಹೃದಯ ಎಂದೇ ಕರೆಯಲಾಗುವ ಅಡುಗೆಮನೆ ಎಲ್ಲರ ಹೊಟ್ಟೆ ತುಂಬಿಸುವ, ಆರೋಗ್ಯ ಕಾಪಾಡುವ ಜಾಗ. ಅಡುಗೆಮನೆ ಸ್ವಚ್ಛ ಸುಂದರವಾಗಿದ್ದರೆ ಮನೆಮಂದಿಯೆಲ್ಲ ಆರೋಗ್ಯದಿಂದ ಇರಲು ಸಾಧ್ಯ. ಆದ್ದರಿಂದ ಅಡುಗೆಮನೆಯ ಸ್ವಚ್ಛತೆ ಬಹಳ ಅವಶ್ಯಕವಾಗಿದೆ. ಏಕೆಂದರೆ ಅತಿ ಹೆಚ್ಚು ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುವುದು ಅಲ್ಲಿಯೇ. ಹಾಗಾಗಿ ಪ್ರತಿದಿನ ಅದರ ಸ್ವಚ್ಛತೆಯ ಕಡೆಗೆ ವಿಶೇಷ ಗಮನ ಹರಿಸಲಾಗುತ್ತದೆ. ಅದರಲ್ಲೂ ಅಡುಗೆಮನೆಯ ಕೆಲವು ವಸ್ತುಗಳು ಕಡ್ಡಾಯವಾಗಿ ಸ್ವಚ್ಛವಾಗಿರಲೇಬೇಕು. ಇಲ್ಲವಾದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಅಡುಗೆಮನೆಯ ಸ್ವಚ್ಛಗೊಳಿಸಲು ಕೆಲವು ವಸ್ತುಗಳನ್ನು ಬಳಸಲಾಗುತ್ತದೆ. ಅವೆಲ್ಲವುಗಳನ್ನು ಕಾಲಕಾಲಕ್ಕೆ ಬದಲಿಸುವುದು ಅಗತ್ಯವಾಗಿದೆ. ಏಕೆಂದರೆ ಅವುಗಳಲ್ಲಿ ಬಹು ಬೇಗನೆ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ. ನೀವೂ ಅಡುಗೆಮನೆಯ ಈ ವಸ್ತುಗಳನ್ನು ಬಹಳ ದಿನಗಳಿಂದ ಬಳಸುತ್ತಿದ್ದರೆ ಇಂದೇ ಅವುಗಳನ್ನು ಬದಲಿಸಿ. ಕಾಲಕಾಲಕ್ಕೆ ವಸ್ತುಗಳನ್ನು ಬದಲಿಸುವುದರಿಂದ ಅನಾರೋಗ್ಯದಿಂದ ನಿಮ್ಮನ್ನು ಮತ್ತು ನಿಮ್ಮ ಕುಟುಂಬವನ್ನು ಕಾಪಾಡಿಕೊಳ್ಳಬಹುದು.

ಅಡುಗೆಮನೆಯಲ್ಲಿ ಕಾಲಕಾಲಕ್ಕೆ ಬದಲಿಸಬೇಕಾದ ವಸ್ತುಗಳು

ಪಾತ್ರೆ ತೊಳೆಯುವ ಸ್ಪಂಜ್‌: ಪ್ರತಿನಿತ್ಯ ಅಡುಗೆಮನೆಯಲ್ಲಿ ಅಡುಗೆ ಮಾಡಿದ ಪಾತ್ರೆಗಳು, ಊಟದ ತಟ್ಟೆ, ಚಮಚ, ತವಾ, ಹೀಗೆ ತೊಳೆಯುವ ಪಾತ್ರೆಗಳ ರಾಶಿಯೇ ಸಿಂಕ್‌ನಲ್ಲಿ ಬಿದ್ದಿರುತ್ತದೆ. ಅವೆಲ್ಲವುಗಳನ್ನು ಪಾತ್ರೆ ತೊಳೆಯುವ ಲಿಕ್ವಿಡ್‌ ಅಥವಾ ಸೋಪು ಬಳಸಿ, ಸ್ಪಂಜ್‌ನಿಂದ ಉಜ್ಜಿ ಶುಚಿಗೊಳಿಸಲಾಗುತ್ತದೆ. ಆದರೆ ಬಹಳಷ್ಟು ಮನೆಗಳಲ್ಲಿ ಸ್ವಚ್ಛತೆಯ ಬಗ್ಗೆ ಗಮನವಿದ್ದರೂ ಸಹ ಪಾತ್ರೆ ತೊಳೆಯುವ ಸ್ವಂಜ್‌ನ ಬಗ್ಗೆ ಗಮನಹರಿಸುವುದೇ ಇಲ್ಲ. ನೀವು ಪಾತ್ರ ತೊಳೆಯುವ ಸ್ಪಾಂಜ್‌ ಅನ್ನು ಸುಮಾರು 15 ರಿಂದ 20 ದಿನಗಳವರೆಗೆ ನಿರಂತರವಾಗಿ ಬಳಸುತ್ತಿದ್ದರೆ ತಕ್ಷಣ ಅದನ್ನು ಬದಲಾಯಿಸಿ. ಏಕೆಂದರೆ ಮೇಲ್ನೋಟಕ್ಕೆ ಸರಿಯಾಗಿಯೇ ಕಾಣಿಸಿದರೂ ಅವುಗಳಲ್ಲಿ ಅಂಟಿದ ಆಹಾರದ ಕಣಗಳಲ್ಲಿ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾಗಳು ಹಾನಿಕಾರವಾಗಿರುತ್ತವೆ. ಹಾಗಾಗಿ ಬಹಳ ದಿನಗಳವರೆಗೆ ಒಂದೇ ಸ್ವಂಜ್‌ ಅನ್ನು ಬಳಸಬೇಡಿ.

ಸಿಲಿಕಾನ್ ಸ್ಪಿಚ್ಯುಲಾ: ಇತ್ತೀಚಿನ ದಿನಗಳಲ್ಲಿ ಆಧುನಿಕ ಪಾತ್ರೆಗಳನ್ನು ಬಳಸಲು ತೊಡಗಿದ್ದಾರೆ. ಅವುಗಳಲ್ಲಿ ಸ್ಪಿಚ್ಯುಲಾ ಸಹ ಒಂದು. ಇದನ್ನು ಸಿಲಿಕಾನ್‌ ನಿಂದ ತಯಾರಿಸುತ್ತಾರೆ. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಇರುವ ಸ್ಪಿಚ್ಯುಲಾಗಳು ಒಂದು ವೇಳೆ ಕಟ್‌ ಆಗಿದ್ದರೆ ಅದನ್ನು ಬದಲಾಯಿಸಿ. ಇಲ್ಲವಾದರೆ ಅದರ ಸೂಕ್ಷ್ಮ ಕಣಗಳು ಆಹಾರದಲ್ಲಿ ಸೇರಿಕೊಳ್ಳಲು ಪ್ರಾರಂಭಿಸುತ್ತವೆ. ಅವು ಆರೋಗ್ಯಕ್ಕೆ ಹಾನಿಕಾರಕ.

ಅಡುಗೆಮನೆ ಡಸ್ಟ್‌ಬಿನ್: ಅಡುಗೆ ಮನೆಯಲ್ಲಿಟ್ಟ ಡಸ್ಟ್‌ಬಿನ್‌ ಪ್ರತಿದಿನ ಕೊಳಕಾಗುತ್ತದೆ. ಅದರ ಸ್ವಚ್ಛತೆಯ ಕಡೆಗೆ ಎಲ್ಲರೂ ಗಮನವಹಿಸುತ್ತಾರೆ. ಆದರೆ ಅದೇ ಡಸ್ಟ್‌ಬಿನ್‌ ಬಹಳ ಹಳೆಯದಾಗಿದ್ದರೆ ಅದನ್ನು ಖಂಡಿತ ಬದಲಾಯಿಸಿ. ಏಕೆಂದರೆ ಹಳೆಯ ಡಸ್ಟ್‌ಬಿನ್‌ಗಳಲ್ಲಿ ಅತಿ ಕಡಿಮೆ ಸಮಯದಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತವೆ.

ಕಿಚನ್‌ ಟವಲ್‌: ಅಡುಗೆ ಮನೆಯಲ್ಲಿ ಪಾತ್ರೆಗಳನ್ನು ಒರೆಸಲು ಅಥವಾ ಕೈಗಳನ್ನು ಸ್ವಚ್ಛಗೊಳಿಸಲು ಟವಲ್‌ಗಳನ್ನು ಇಟ್ಟಿರುತ್ತಾರೆ. ಆ ಬಟ್ಟೆಗಳನ್ನು ಕಾಲ ಕಾಲಕ್ಕೆ ಶುಚಿಗೊಳಿಸಿ. ಅವುಗಳನ್ನು ತೊಳೆದು ಬಿಸಿಲಿನಲ್ಲಿ ಒಣಗಿಸಿ. ಕೊಳಕಾದ ಟವಲ್‌ನಿಂದ ಕೈ ಸ್ವಚ್ಛಗೊಳಿಸಿದರೆ ಅದರಲ್ಲಿರುವ ಬ್ಯಾಕ್ಟೀರಿಯಾಗಳು ನಿಮ್ಮ ಕೈಗೆ ಅಂಟಿಕೊಂಡು ಸುಲಭವಾಗಿ ಆಹಾರಕ್ಕೆ ಸೇರುತ್ತವೆ. ಬಹಳ ಹಳೆಯಾದಾದ ಟವಲ್‌ಗಳನ್ನು ಎಂದಿಗೂ ಬಳಸಬೇಡಿ.

ನಾನ್‌ಸ್ಟಿಕ್‌ ಪಾತ್ರೆಗಳು: ಸ್ಟೀಲ್‌ ಪಾತ್ರೆಗಳನ್ನು ಎಷ್ಟೇ ಹಳೆಯದಾದರೂ ಬಳಸಬಹುದು. ಆದರೆ ನಾನ್‌ಸ್ಟಿಕ್‌ ಪಾತ್ರೆಗಳನ್ನಲ್ಲ. ನಾನ್‌ಸ್ಟಿಕ್‌ ಪ್ಯಾನ್‌ಗಳನ್ನು ಬಹಳ ವರ್ಷಗಳಿಂದ ಬಳಸುತ್ತಿದ್ದರೆ ಅವುಗಳನ್ನು ಬದಲಿಸಿ ಹೊಸದನ್ನು ಕೊಂಡುಕೊಳ್ಳಿ. ಇಷ್ಟೇ ಅಲ್ಲದೇ ನಾನ್‌ಸ್ಟಿಕ್‌ ಪಾತ್ರೆಗಳ ಮೇಲಿನ ಕೋಟಿಂಗ್‌ ಮಾಸಿ ಹೋಗಿದ್ದರೆ ಅಥವಾ ಪ್ಯಾನ್‌ನ ಕೋಟಿಂಗ್‌ ಹೊರಟುಹೋಗಿದ್ದರೆ ತಕ್ಷಣ ಅವುಗಳನ್ನು ಬದಲಿಸಿ.

mysore-dasara_Entry_Point