ಇತಿಹಾಸದ ದುರಂತ ನಾಯಕ ಅಶೋಕ; ಪುಸ್ತಕ ಪ್ರೇಮಿ ಶೋಭಾ ರಾವ್ ಅವರಿಂದ ಮಾಗಧ ಐತಿಹಾಸಿಕ ಕಾದಂಬರಿ ವಿಮರ್ಶೆ
ಸಹನಾ ವಿಜಯ್ ಕುಮಾರ್ ವಿರಚಿತ ಮಾಗಧ ಐತಿಹಾಸಿಕ ಕಾದಂಬರಿ ಬಗ್ಗೆ ಬರಹಗಾರ್ತಿ ಶೋಭಾ ರಾವ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಈ ಪುಸ್ತಕವನ್ನು ಓದಿದ ಖುಷಿ ನನಗೆ ಯಾವ ಕನ್ನಡ ಕಾದಂಬರಿಯಲ್ಲೂ ದಕ್ಕಿರಲಿಲ್ಲ ಎಂದು ಶೋಭಾ, ಮಾಗಧ ಪುಸ್ತಕದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಅಶೋಕ ಚಕ್ರವರ್ತಿ, ಮಗಧ ಸಾಮ್ರಾಜ್ಯದ ಖ್ಯಾತ ರಾಜ, ದೇವನಾಂಪ್ರಿಯ ಮತ್ತು ಪ್ರಿಯದರ್ಶಿ ಎಂದೇ ಹೆಸರಾಗಿದ್ದ. ಮಗಧ ಸಾಮ್ರಾಜ್ಯವನ್ನು ಬೃಹದ್ರಥ, ಹರ್ಯಾಂಕ, ಶೈಶುನಾಗ, ನಂದ , ಮೌರ್ಯ ಸೇರಿ ಅನೇಕ ರಾಜವಂಶಗಳು ಆಳಿದವು. ಇದು ಈಗಿನ ಬಿಹಾರದಲ್ಲಿದೆ. ಸಾಹಿತಿ ಸಹನಾ ವಿಜಯ್ ಕುಮಾರ್, ತಮ್ಮ ಮಾಗಧ ಪುಸ್ತಕದಲ್ಲಿ ಬಿಂದುಸಾರ, ಅಶೋಕ ಸೇರಿದಂತೆ ಇನ್ನಿತರ ವಿಚಾರಗಳ ಬಗ್ಗೆ ಬರೆದಿದ್ದಾರೆ. ಪುಸ್ತಕ ಪ್ರೇಮಿ, ಬರಹರಾರ್ತಿ ಶೋಭಾ ರಾವ್, ಮಾಗಧ ಪುಸ್ತಕದ ಬಗ್ಗೆ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಮಾಗಧ ಪುಸ್ತಕದಲ್ಲಿ ಇತಿಹಾಸದ ಪಾತ್ರಗಳು ಮೆರೆದಿವೆ
ಮಾಗಧ ಒಂದು ಸಮೃದ್ಧ ಓದು ಖುಷಿ ಕೊಟ್ಟಿದೆ, ಓದುಗನಾಗಿ, ಸಾಹಿತ್ಯ ಪ್ರೇಮಿಯಾಗಿ ಸಂತೋಷಪಟ್ಟಿದ್ದೇನೆ ಇತ್ತೀಚಿನ ವರ್ಷಗಳಲ್ಲಿ ಇಷ್ಟು ಓದಿನ ಸುಖ ನನಗೆ ಯಾವ ಕನ್ನಡ ಕಾದಂಬರಿಯಲ್ಲೂ ದಕ್ಕಿರಲಿಲ್ಲ. ಖುಷಿಯಾಗಿದೆ. ಇತಿಹಾಸದ ಹಿನ್ನೆಲೆಯ ಕಾದಂಬರಿಗಳು ಹಲವು ಬಂದಿವೆ. ಎಲ್ಲವೂ ಸಾಧಾರಣವೇ. ಘಟನೆಗಳು ಇತಿಹಾಸದಾದ್ದರೆ, ಪಾತ್ರ ಸನ್ನಿವೇಶ ಸಾಹಿತಿಯ ಸೃಷ್ಟಿ. ಸಾಹಿತಿ ತಾನು ನಂಬಿದ ಸತ್ಯವನ್ನು, ಸಿದ್ಧಾಂತ ಮತ್ತು ಧೋರಣೆಗಳನ್ನು ಪ್ರತಿಪಾದಿಸುವ ಪುರಾವೆಗಳನ್ನು ಮುನ್ನಲೆಯಲ್ಲಿಟ್ಟು ಕಥನ ಕ್ರಿಯೆಯಲ್ಲಿ ತೊಡಗಿದ್ದೇ ಹೆಚ್ಚು. ಕಾದಂಬರಿಯುದ್ದಕ್ಕೂ ಸಾಹಿತಿಯೇ ವಿಜೃಂಭಿಸಿ ಇದು ಅವರ ಇತಿಹಾಸ ಅನ್ನಿಸಿದಿದ್ದಿದೆ. ಮಾಗಧ ಇದಕ್ಕೆ ಅಪವಾದ. ಇತಿಹಾಸದ ಪಾತ್ರಗಳು ಮೆರೆದಿವೆ. ನನ್ನ ಇತಿಹಾಸ ಅನ್ನಿಸಿದೆ.
ವರ್ಣಕ ಕಾದಂಬರಿಯ ಮುನ್ನುಡಿಯಲ್ಲಿ ಶ್ರೀಯುತ ಕೆಪಿ ರಾವ್ ಬರೀತಾರೆ “There is nothing called absolute truth”, ನಿರೂಪಾಧಿತ ಸತ್ಯ ಅನ್ನೋದು ಇಲ್ಲವೇ ಇಲ್ಲ. ಬುದ್ಧಿಯ ಸತ್ಯಗಳು ಬೇರೆ, ಭಾವದ ಸತ್ಯಗಳು ಬೇರೆ, ಪ್ರಜ್ಞೆಯ ಕೆದಕುವ ಸತ್ಯಗಳೇ ಬೇರೆ. ಮಾಗಧ ಬುದ್ಧಿ ಭಾವಗಳನ್ನು ಮೀರಿ ಪ್ರಜ್ಞೆಯನ್ನು ತಟ್ತುತ್ತೆ. ಪುರುಷ ಸೃಷ್ಟಿಯ ಸ್ತ್ರೀ ಪಾತ್ರಗಳು ನಮಗೆ ಪರಿಚಿತ. ಇಲ್ಲಿಯ ಸ್ತ್ರೀ ಪಾತ್ರಗಳು ಸ್ತ್ರೀ ಸೃಷ್ಟಿ. ಅಲ್ಲಿ ತಾಯಿ, ತಂಗಿ, ಹೆಂಡತಿ, ಪ್ರೇಯಸಿ ಹೀಗಿದ್ದರೆ ಚೆಂದ ಅನ್ನಿಸಿದರೆ ಇಲ್ಲಿ ಹೀಗೆಯೇ ಇದ್ದಾರೆ ಅನ್ನಿಸುತ್ತೆ. ಅಲ್ಲಿ ಸ್ತ್ರೀ ಪಾತ್ರಗಳು ಪ್ರಭಾವಳಿ ಕಟ್ಟಿ ಕುಣಿದರೆ ಇಲ್ಲಿಯವರು ಸ್ವಯಂಪ್ರಭೆಯರು.
ಅಶೋಕ ಇತಿಹಾಸದ ದುರಂತ ನಾಯಕ
ಮೋಕ್ಷವನ್ನರಿಸಿ ಹೆಣವನ್ನು ಸುಡುವ ಕಾಯಕದವನು ವಿಹಾರ ಸೇರ್ತಾನೆ. ಕಾಯಕದಲ್ಲಿರುವ ಆನಂದ ಧ್ಯಾನದಲ್ಲಿ ದಕ್ಕದಾಗ ವಿಹಾರ ತ್ಯಜಿಸಿ ಕಾಯಕಕ್ಕೆ ಮರಳುತ್ತಾನೆ. ಭಿಕ್ಷೆಗೆ ಹೊರಟ ಯುವ ಜೈನ ಸನ್ಯಾಸಿ ಕುರುಡು ಹುಡುಗಿ ಒಬ್ಬಳ ಅಸಹಾಯಕತೆಗೆ ಮರುಗಿ ಸಹಾನುಭೂತಿಯಲ್ಲಿ ದೀಕ್ಷೆ ತೊರೆದು ಅವಳಿಗೆ ಆಸರೆ ಆಗುತ್ತಾನೆ. ಮಿಕ್ಕ ಜೈನ ಮುನಿಗಳು ಅವನಿಗೆ ಆಶೀರ್ವದಿಸಿ ಹೋಗಗೊಡುತ್ತಾರೆ. ಇದು ಧರ್ಮದ ವಿಸ್ತಾರವೂ ಹೌದು, ಮತಗಳ ಮಿತಿಯೂ ಹೌದು. ಇಲ್ಲಿಯ ಮಾಗಧ ಅಶೋಕ ಸಾಲು ಮರಗಳನ್ನು ನೆಡಸಿದ, ಅರವಟ್ಟಿಗೆಗಳನ್ನು ಸ್ಥಾಪಿಸಿದ, ಅಧಿಕಾರ ಲಾಲಸೆಯಲ್ಲಿ ಒಡಹುಟ್ಟಿದವರನ್ನು ಕೊಂದು ತಂದೆಯ ಸಾವಿಗೆ ಕಾರಣನಾಗಿ ಸಿಂಹಾಸನವೇರಿದ. ಸಾಮ್ರಾಜ್ಯ ದಾಹದಲ್ಲಿ ಕಳಿಂಗದ ಮೇಲೇರಿ ಹೋಗಿ ಅಪರಿಮಿತ ಕ್ರೌರ್ಯದಲ್ಲಿ ಮಹಾನದಿಯನ್ನು ಕೆಂಪಾಗಿಸಿದ ಚಂಡ ಅಶೋಕ ಅಲ್ಲ.
ಗಡಿ ಭದ್ರವಾಗಿದ್ದರೆ ಗಣಗಳಿಗೆ ಸ್ವಾತಂತ್ರ್ಯ. ಅಲೆಗ್ಸಾಂಡರ್‌ನಿಂದ ಶುರುವಾದ ಯವನ ದಾಳಿಗೆ ತಡೆಯಾಗಿ ಚಾಣಕ್ಯ ಚಂದ್ರಗುಪ್ತರ ಸಾಮ್ರಾಜ್ಯ, ಮುಂದುವರಿದು ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದವರು ಬಿಂದುಸಾರ ಮತ್ತು ಅಶೋಕ. ಇಲ್ಲಿಯ ಅಶೋಕ ಗಣಗಳಿಗೆ ಹಿರಿಯಣ್ಣ. ಜಂಬೂದ್ವೀಪ, ಭರತವರ್ಷ, ಭರತಖಂಡದ ಜವಾಬ್ದಾರಿಯನ್ನು ಹೊತ್ತವ, ಗಣಗಳ ಸ್ವಾತಂತ್ರ್ಯ ಕಳಿಂಗನ ಆಯ್ಕೆ, ರಾಷ್ಟ್ರದ ಭದ್ರತೆ ಅಶೋಕನ ಆಯ್ಕೆ. ಕಳಿಂಗನದು ಮಹತ್ವಾಕಾಂಕ್ಷೆ, ಅಶೋಕನದು ಕರ್ತವ್ಯ. ಇಲ್ಲಿ ಅಶೋಕ ನನ್ನ ಪಠ್ಯಗಳ ಅಶೋಕನಿಗಿಂತ ಭಿನ್ನವಾಗ್ತಾನೇ, ಪ್ರಾಯಶಃ ಇತಿಹಾಸದ ದುರಂತ ನಾಯಕ ಅಶೋಕ.
ಮತ್ತೆ ಮತ್ತೆ ಓದಬೇಕು ಎನಿಸುವ ಪುಸ್ತಕ ಮಾಗಧ
ಅಲೆಗ್ಸಾಂಡರ್ ಮತ್ತೆ ಮತ್ತೆ ಬರುತ್ತಿರಬೇಕು, ವಿಂಧ್ಯವನ್ನು ದಾಟಿ ಬರಬೇಕು, ಆಗ ಮೂಡುತ್ತೆ ಐಕ್ಯಮತ್ಯ. ಜಂಬೂ ದ್ವೀಪ, ಭರತ ವರ್ಷ, ಭರತ ಖಂಡದ ಮೂಲನಿವಾಸಿಗಳ ಮನಸ್ಥಿತಿಯನ್ನು ಇದಕ್ಕಿಂತ ಮಾರ್ಮಿಕವಾಗಿ ಮಾತುಗಳಲ್ಲಿ ಹಿಡಿದಿಡುವುದು ಕಷ್ಟ. ಮಾಗಧದ ಸಾರ, ಹೂರಣ, ಧೋರಣೆ ಪ್ರಸ್ತುತತೆಯೂ ಇದೇ. ಕನ್ನಡದಲ್ಲಿ ಓದುಗರಿಲ್ಲ ಎನ್ನುವುದು ಇತ್ತೀಚಿನ ಆರೋಪ. ನಾನು ಬರೆದು ಪ್ರಕಟಿಸಿದ ಪುಸ್ತಕಗಳು ನಾನಂದುಕೊಂಡಷ್ಟು ಮಾರಾಟವಾಗಲಿಲ್ಲ ಅನ್ನಿಸಿದಾಗ ಈ ಭಾವ ಸಹಜ. ಎಲ್ಲ ಕಾಲದಲ್ಲಿಯೂ ಓದುಗ ಸಾಹಿತಿಗಿಂತ ಪ್ರಬುದ್ಧ. ಆಯ್ಕೆಗೆ ಆರೇಳು ದಶಕದ ಸಾಹಿತ್ಯ ಲಭ್ಯವಿದೆ. ಅವನ ಆಯ್ಕೆ ನಾನಲ್ಲದಿರಬಹುದು.
ಮಾಗಧ ಮರು ಮುದ್ರಣದಲ್ಲಿದೆ. ಪ್ರಬುದ್ಧ ಓದುಗರಿದ್ದಾರೆ. ಇದು ಸ್ಪಷ್ಟ. ಪುಸ್ತಕದ ಮುಖ ಬೆಲೆ ಹೆಚ್ಚು ಅನ್ನುವ ಮಾತಿದೆ. 760 ಪುಟಗಳ ಸಮೃದ್ಧ ಸಾಹಿತ್ಯ. ಮರು ಓದು, ಮತ್ತೆ ಮತ್ತೆ ಓದಿಗೆ ದಕ್ಕುವ ಪುಸ್ತಕ. ಹತ್ತರ ಬದಲಿಗೆ ಇದೊಂದು. ಓದು ಮುಗಿಸಿದ ನಂತರ ಮುಖ ಬೆಲೆ ಹೆಚ್ಚು ಅಂತ ಅನ್ನಿಸುವುದಿಲ್ಲ.
ಎಂದು ಶೋಭಾರಾವ್, ಪುಸ್ತಕದ ಬಗ್ಗೆ ಬರೆದುಕೊಂಡಿದ್ದಾರೆ.