ಕನ್ನಡ ಸುದ್ದಿ  /  Lifestyle  /  Menopause How To Take Care Of Mental Physical Health During Menopause Women Health Tips Rsa

Menopause: ಋತುಬಂಧದ ಅವಧಿಯಲ್ಲಿ ಬೇಡ ನಿರ್ಲಕ್ಷ್ಯ: ಮಹಿಳೆಯರ ಮಾನಸಿಕ ದೈಹಿಕ ಆರೋಗ್ಯದ ಮೇಲಿರಲಿ ಕಾಳಜಿ

Menopause: ಸಾಮಾನ್ಯವಾಗಿ 40ರ ಪ್ರಾಯ ದಾಟುತ್ತಿದ್ದಂತೆ ಮಹಿಳೆಯರಿಗೆ ಋತುಬಂಧದ ಅವಧಿ ಆರಂಭಗೊಳ್ಳುತ್ತದೆ. ಋತುಚಕ್ರ ನಿಲ್ಲುವ ಈ ಸಮಯದಲ್ಲಿ ಮಹಿಳೆಯರು ಅತೀವ ಮಾನಸಿಕ ಅನಾರೋಗ್ಯ ಹಾಗೂ ದೈಹಿಕ ನಿತ್ರಾಣವನ್ನು ಅನುಭವಿಸುತ್ತಾರೆ.

ಮೆನೋಪಾಸ್‌ ಸಮಯದಲ್ಲಿ ಮಹಿಳೆಯರು ಹೇಗಿರಬೇಕು?
ಮೆನೋಪಾಸ್‌ ಸಮಯದಲ್ಲಿ ಮಹಿಳೆಯರು ಹೇಗಿರಬೇಕು? (PC: Freepik)

Menopause: ಮಹಿಳೆಯರ ಆರೋಗ್ಯದ ವಿಚಾರ ಬಂದಾಗ ಸಾಕಷ್ಟು ಅಂಶಗಳ ಬಗ್ಗೆ ಚರ್ಚೆಗಳು ನಡೆಯುತ್ತದೆ. ಆದರೆ ಹೆಚ್ಚಿನ ಜನರು ಋತುಬಂಧದ ಬಗ್ಗೆ ಹಾಗೂ ಆ ಸಮಯದಲ್ಲಿ ಮಹಿಳೆಯರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಯಾರೂ ಅಷ್ಟಾಗಿ ಮಾತನಾಡಲು ಹೋಗುವುದೇ ಇಲ್ಲ.

ಮಹಿಳೆಯರ ಮುಟ್ಟಿನ ದಿನಗಳು ಅಂತ್ಯಗೊಳ್ಳುವ ಸಮಯ ಎದುರಾದಾಗ ಸಾಕಷ್ಟು ಮಂದಿ ನಿದ್ರಾಹೀನತೆ, ರಾತ್ರಿ ವೇಳೆ ಚಡಪಡಿಸುವಿಕೆ, ಯೋನಿಯ ಆರೋಗ್ಯದಲ್ಲಿ ಸಮಸ್ಯೆ, ಅನಿಯಮಿತ ಅವಧಿಯ ಋತುಸ್ರಾವ ಹಾಗೂ ಹಾರ್ಮೋನ್‌ಗಳಲ್ಲಿ ವಿಪರೀತ ಏರುಪೇರು ಮತ್ತು ಖಿನ್ನತೆಗೆ ಒಳಗಾಗುವ ಅಪಾಯ ಹೆಚ್ಚಿರುತ್ತದೆ.

ಖಿನ್ನತೆಯ ಅಪಾಯ ಹೆಚ್ಚು

ಇದೊಂದು ತಾತ್ಕಾಲಿಕ ಹಂತವಾಗಿದ್ದರೂ ಸಹ ಈ ಸಮಯದಲ್ಲಿ ಮಹಿಳೆಯರು ಹೆಚ್ಚು ಯಾತನೆ ಅನುಭವಿಸುತ್ತಾರೆ. ಆದರೆ ಸೂಕ್ತ ಮುನ್ನೆಚ್ಚರಿಕಾ ಕ್ರಮ ಹಾಗೂ ವೈದ್ಯಕೀಯ ಸವಾಲುಗಳನ್ನು ಪಾಲಿಸುವ ಮೂಲಕ ಈ ಸವಾಲನ್ನು ಮಹಿಳೆಯರು ಸುಲಭದಲ್ಲಿ ಎದುರಿಸಬಹುದಾಗಿದೆ. ಅಧ್ಯಯನಗಳು ಹೇಳುವ ಪ್ರಕಾರ ಋತುಬಂಧದ ಸಂದರ್ಭದಲ್ಲಿ ಮಹಿಳೆಯರಲ್ಲಿ ಖಿನ್ನತೆಯ ಅಪಾಯ ದ್ವಿಗುಣಗೊಂಡಿರುತ್ತದೆ ಎನ್ನಲಾಗಿದೆ. ಈ ಮೊದಲು ಖಿನ್ನತೆಯಂತಹ ಸಮಸ್ಯೆಗೆ ಒಳಗಾದ ಮಹಿಳೆಯರಿಗೆ ಈ ಸಮಸ್ಯೆ ಋತುಬಂಧದ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಾಗಿ ಕಾಡುತ್ತದೆ ಎನ್ನಲಾಗಿದೆ.

ಕೆಲಸಕ್ಕೆ ಹೋಗುವ ಮಹಿಳೆಯರು ಋತುಬಂಧದ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಕಷ್ಟ ಅನುಭವಿಸುತ್ತಾರೆ. ಕಚೇರಿ ಕೆಲಸದ ಜೊತೆ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳುವುದು ಎಂದರೆ ಖಂಡಿತವಾಗಿಯೂ ಸುಲಭದ ಮಾತಲ್ಲ. ಋತುಬಂಧದ ಸಂದರ್ಭದಲ್ಲಿ ಮಹಿಳೆಯರ ದೇಹದಲ್ಲಿ ಸಾಕಷ್ಟು ರೀತಿಯ ಬದಲಾವಣೆಗಳು ಉಂಟಾಗುತ್ತದೆ. ಆದರೆ ಮಾನಸಿಕ ಆರೋಗ್ಯದ ಮೇಲೆ ಇನ್ನೂ ಹೆಚ್ಚಿನ ಅಪಾಯ ಉಂಟು ಮಾಡುತ್ತದೆ. ಋತುಬಂಧ ಆರಂಭಗೊಳ್ಳುವ ವರ್ಷದಲ್ಲಿ ಮಹಿಳೆಯರು ಭಾವನಾತ್ಮಕವಾಗಿ ತುಂಬಾನೇ ಸೂಕ್ಷ್ಮವಾಗಿರುತ್ತಾರೆ. ಖಿನ್ನತೆಯ ಅಪಾಯ ಹೆಚ್ಚಾಗಿ ಕಾಡುತ್ತಿರುತ್ತದೆ. ಈ ಮೊದಲು ಖಿನ್ನತೆಗೆ ಒಳಗಾದ ಮಹಿಳೆಯರು ಇನ್ನಷ್ಟು ಅಪಾಯಗಳನ್ನು ಎದುರಿಸಬೇಕಾಗಿ ಬರಬಹುದು.

ಸಾಮಾನ್ಯವಾಗಿ 40-50ನೇ ವಯಸ್ಸಿನ ಒಳಗೆ ಋತುಬಂಧದ ಅವಧಿ ಇರುತ್ತದೆ. ಋತುಚಕ್ರ ಕೊನೆಗೊಳ್ಳುವ ಸಮಯವಿದು. ಸುಮಾರು ಒಂದು ವರ್ಷಗಳ ಕಾಲ ನಿಮಗೆ ಋತುಚಕ್ರವಾಗಲಿಲ್ಲವೆಂದರೆ ನೀವು ಋತುಬಂಧದಲ್ಲಿದ್ದೀರಿ ಎಂದು ಭಾವಿಸಬಹುದಾಗಿದೆ. ಈ ಸಮಯದಲ್ಲಿ ಉಂಟಾಗುವ ಭಾವನಾತ್ಮಕ ತೊಳಲಾಟಗಳಿಂದ ಮಹಿಳೆಯು ಹೇಗೆ ಬಚಾವಾಗಬೇಕು ಎನ್ನುವುದಕ್ಕೆ ಮಾಹಿತಿ ಇಲ್ಲಿದೆ

ಋತುಬಂಧದ ಅವಧಿಯನ್ನು ಮುಚ್ಚಿಡಬೇಡಿ: ನಿಮಗೆ ಅನಿಯಮಿತ ಮುಟ್ಟು ಸಂಭವಿಸುತ್ತಿದೆ ಎಂದಾಗ ಅದನ್ನು ನಿರ್ಲಕ್ಷಿಸಬೇಡಿ. ಇದನ್ನು ನಿಮ್ಮ ಋತುಬಂಧದ ಅವಧಿಯನ್ನು ಸೂಚಿಸುತ್ತಿರಬಹುದು. ಈ ಸಮಯದಲ್ಲಿ ನಿಮಗೆ ಮಾನಸಿಕವಾಗಿ ಉಂಟಾಗುತ್ತಿರುವ ಸವಾಲುಗಳ ಬಗ್ಗೆ ನಿಮ್ಮ ಪ್ರೀತಿಪಾತ್ರರಲ್ಲಿ ಮುಕ್ತವಾಗಿ ಮಾತನಾಡಬೇಕು.

ಏಕಾಂತದಲ್ಲಿರಬೇಡಿ: ಒಬ್ಬರೇ ಕೂರುವುದು, ಏನನ್ನೋ ಯೋಚಿಸುವುದು ಈ ರೀತಿ ಮಾಡಬೇಡಿ . ಒಂಟಿತನ ನಿಮ್ಮನ್ನು ಇನ್ನಷ್ಟು ಖಿನ್ನತೆಗೆ ದೂಡಿಬಿಡಬಹುದು. ಹೀಗಾಗಿ ಎಲ್ಲರೊಂದಿಗೆ ಬೆರೆಯಲು ಯತ್ನಿಸಿ. ನಿಮಗೆ ಯಾರೊಂದಿಗೆ ಮಾತನಾಡಿದರೆ ಹಿತ ಎನಿಸುತ್ತದೆಯೋ ಅವರೊಂದಿಗೆ ಹೆಚ್ಚು ಸಮಯ ಕಳೆಯಿರಿ.

ಮಾನಸಿಕ ಆರೋಗ್ಯವನ್ನು ನಿರ್ಲ್ಯಕ್ಷಿಸಬೇಡಿ: ಮಹಿಳೆಗೆ 40 ವರ್ಷ ಪ್ರಾಯವಾಗುತ್ತಿದ್ದಂತೆಯೇ ಅಕೆಯ ಹಾರ್ಮೋನ್‌ಗಳಲ್ಲಿ ವಿಪರೀತ ಏರುಪೇರು ಉಂಟಾಗಲು ಆರಂಭಗೊಳ್ಳುತ್ತದೆ. ಈ ಸಮಯದಲ್ಲಿ ಅತಿಯಾದ ಕೋಪ, ಕಿರಿಕಿರಿ ಹಾಗೂ ಅತಿಯಾದ ದುಃಖದಂಥ ಅನುಭವಗಳು ಮಹಿಳೆಯರಿಗೆ ಆಗುತ್ತಿರುತ್ತದೆ. ಇದನ್ನು ನಿಮ್ಮಿಂದ ನಿಯಂತ್ರಣ ಮಾಡಲು ಸಾಧ್ಯವಾಗುತ್ತಿಲ್ಲ ಎಂಬುದು ನಿಮ್ಮ ಗಮನಕ್ಕೆ ಬಂದ ಕೂಡಲೇ ವೈದ್ಯರನ್ನು ಭೇಟಿ ಮಾಡಿ

ದೈಹಿಕ ಆರೋಗ್ಯ: ಈ ಸಮಯದಲ್ಲಿ ಮಾನಸಿಕ ಆರೋಗ್ಯದ ಜೊತೆಯಲ್ಲಿ ದೈಹಿಕ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಪೋಷಕಾಂಶದಿಂದ ಸಮೃದ್ಧವಾದ ಆಹಾರ ಸೇವನೆ ಮಾಡಿ. ಜಂಕ್‌ ಫುಡ್‌ಗಳ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಿ. ನಿಮ್ಮ ನಿದ್ರೆಯ ಬಗ್ಗೆ ಗಮನವಿರಲಿ. ನಿದ್ರಾಹೀನತೆ ಕಾಡುತ್ತಿದ್ದರೆ ಕೂಡಲೇ ವೈದ್ಯರನ್ನು ಕಾಣುವುದು ಒಳ್ಳೆಯದು. ಆಗಾಗ ಬಿಪಿ ತಪಾಸಣೆ ಕೂಡಾ ಮಾಡಿಸುತ್ತಿರಿ.