ಕನ್ನಡ ಸುದ್ದಿ  /  ಜೀವನಶೈಲಿ  /  Intrusive Thoughts: ಜೀವನವಿಡೀ ಕಾಡುವ ಭಗ್ನ ಪ್ರೇಮದಿಂದ ಹೊರಬರಲು ಇದೆ ಉಪಾಯ, ಅಪೂರ್ಣ ಕಥೆಯ ಹಾಳೆಗಳನ್ನು ಹರಿಯುವುದು ಅಪರಾಧವಲ್ಲ -ಕಾಳಜಿ

Intrusive Thoughts: ಜೀವನವಿಡೀ ಕಾಡುವ ಭಗ್ನ ಪ್ರೇಮದಿಂದ ಹೊರಬರಲು ಇದೆ ಉಪಾಯ, ಅಪೂರ್ಣ ಕಥೆಯ ಹಾಳೆಗಳನ್ನು ಹರಿಯುವುದು ಅಪರಾಧವಲ್ಲ -ಕಾಳಜಿ

ಡಾ ರೂಪಾ ರಾವ್: ಕಾಲೇಜು ದಿನಗಳಲ್ಲಿ ಅರಳುವ ಏಕಮುಖ ಪ್ರೇಮ ಎಷ್ಟೋ ಜನರಿಗೆ ಇಡೀ ಜೀವನದಲ್ಲಿ ಕಾಡುವ ಭಾರವಾಗಿ ಉಳಿದುಬಿಡುತ್ತದೆ. ಮನಸ್ಸಿಗೆ ಆಗಾಗ ಮಂಕು ಕವಿದಂತೆ ಆಗಲು ಇದೂ ಒಂದು ಕಾರಣವಾಗಿಬಿಡುತ್ತದೆ. ಏಕಮುಖ ಭಗ್ನಪ್ರೇಮದ ತೊಳಲಾಟದಿಂದ ಹೊರಬರುವುದು ಹೇಗೆ?

 ಡಾ ರೂಪಾ ರಾವ್ ಅಂಕಣ
ಡಾ ರೂಪಾ ರಾವ್ ಅಂಕಣ

ಪ್ರಶ್ನೆ: ನಾನು ಡಿಗ್ರಿ ಓದುವಾಗ ಒಂದು ಹುಡುಗಿಯನ್ನು ತುಂಬ ಪ್ರೀತಿಸಿದ್ದೆ. ಆದರೆ ಪ್ರಪೋಸ್ ಮಾಡಿರಲಿಲ್ಲ. ಅವಳು ನನ್ನ ಪ್ರೀತಿಯನ್ನು ಒಪ್ಪಿಕೊಂಡಂತೆ ವರ್ತಿಸಿದ್ದಳು. ನಾನು ಕೊಟ್ಟಿದ್ದ ಗಿಫ್ಟ್ ಎಲ್ಲ ಪಡೆದುಕೊಂಡಿದ್ದಳು. ನನ್ಹತ್ರ ನೋಟ್ಸ್ ಬರೆಸಿಕೊಳ್ತಿದ್ಳು, ಎಕ್ಸಾಂನಲ್ಲಿ ಕಾಪಿ ಕೂಡ ಹೊಡೆದಿದ್ಳು. ಆದರೆ ಮಾಸ್ಟರ್‌ ಡಿಗ್ರಿ ಹಂತದಲ್ಲಿ ನನ್ನನ್ನು ಡಂಪ್ ಮಾಡಿದ್ಳು. ಡಂಪ್ ಮಾಡೋದು ಅಂದ್ರೆ ನಿಮಗೆ ಗೊತ್ತಿದೆ ಅಲ್ವಾ ಮೇಡಂ. ಅಕ್ಷರಶಃ ಹಾಗೆಯೇ ಮಾಡಿದ್ಳು. ಇದೆಲ್ಲ ಆಗಿ 20 ವರ್ಷಗಳ ಮೇಲಾಗಿದೆ. ಈಗ ನನಗೂ ಮದುವೆಯಾಗಿ ಮೂವರು ಮಕ್ಕಳಿದ್ದಾರೆ. ಬದುಕು ಸುಸೂತ್ರವಾಗಿ ಸಾಗುತ್ತಿದೆ. ಆದರೆ ಅವಳು ಹಾಗ್ಯಾಕೆ ನನ್ನನ್ನು ಡಂಪ್ ಮಾಡಿದ್ಳು ಅಂತ ಯೋಚನೆ ಬರುತ್ತೆ. ಇದ್ದಕ್ಕಿದ್ದಂತೆ ಡಲ್ ಆಗ್ತೀನಿ. ಉಳಿದಂತೆ ನಾರ್ಮಲ್ ಇರ್ತೀನಿ. ಈ 20 ವರ್ಷಗಳಲ್ಲಿ ಕೆಲವೊಮ್ಮೆ ಅವಳೂ-ನಾನು ಮುಖಾಮುಖಿ ಆಗಿದ್ದೂ ಉಂಟು. ಆಗೆಲ್ಲಾ ಅವಳ ಬಗ್ಗೆ ಸಿಟ್ಟು ಬರ್ತಿತ್ತು. ಆದರೆ ಒಂದು ಸಲ ಅವಳು ಯಾವುದೋ ಕಷ್ಟದಲ್ಲಿದ್ದಾಳೆ ಅಂತ ತಿಳಿದು ತುಂಬಾ ನೋವಾಯ್ತು. ಇದೆಲ್ಲ ಏನು? ನನಗೆ ನನ್ನನ್ನೇ ಅರ್ಥ ಮಾಡಿಕೊಳ್ಳೋಕೆ ಆಗ್ತಿಲ್ಲ. ದಯವಿಟ್ಟು ಸಹಾಯ ಮಾಡಿ.

ಟ್ರೆಂಡಿಂಗ್​ ಸುದ್ದಿ

- ಹೆಸರು ಮತ್ತು ಊರು ಬೇಡ

ಉತ್ತರ: ಇಲ್ಲಿ ಸುಮಾರು ಪದರಗಳಿವೆ. ‌ಮೊದಲನೆಯದು ಅವಳನ್ನು ಪ್ರೀತಿಸಿದ್ದೆ ಆದರೆ ಪ್ರಪೋಸ್ ಮಾಡಿರಲಿಲ್ಲ. ಎರಡನೆಯದು ಅವಳೂ ನನ್ನ ಪ್ರೀತಿಯನ್ನು ಒಪ್ಪಿಕೊಂಡಂತೆ ವರ್ತಿಸಿದ್ದಳು. ಮೂರನೆಯದ್ದು ಕೊನೆಗೆ ಡಂಪ್ ಮಾಡಿದಳು. ನಾಲ್ಕನೆಯದು ಈಗಲೂ ಅವಳ ನೆನಪಾದಾಗ ಡಲ್ ಆಗುತ್ತೇನೆ. ಮೊದಲನೆಯ ಪದ ಅವಳನ್ನು ಪ್ರೀತಿಸಿದ್ದಿರಿ ಆದರೆ ಹೇಳಿರಲಿಲ್ಲ ಆದರೆ ಅವಳಿಗೆ ಬೇಕಾದ ಸಹಾಯಗಳನ್ನೆಲ್ಲಾ ಮಾಡುತ್ತಿದ್ದಿರಿ. 'ಅಮೆರಿಕ ಅಮೆರಿಕ' ಸಿನಿಮಾದಲ್ಲಿ ರಮೇಶ್ ಮಾಡಿದ್ದಂತೆ. ಅಲ್ಲಿ ರಮೇಶ್ ಅವರಿಗೆ ಕಾಡಿದ ಭಯವೇ ನಿಮಗೂ ಕಾಡಿದೆ. ಹೌದು ಅದು ನಿರಾಕರಿಸಲ್ಪಡುವ ಭಯ.

ಎರಡನೆಯ ಪದ, 'ಆಕೆ ಒಪ್ಪಿಕೊಂಡಂತೆ ವರ್ತಿಸಿದ್ದಳು' -ಇದು ನಿಜವೇ? ಇದು ನಿಜವೇ ಆಗಿದ್ದಿದ್ದರೇ ಆಕೆಗೆ ಪ್ರಪೋಸ್ ಮಾಡಲು ನಿಮಗೆ ಯಾವ ಅಡ್ಡಿಯೂ ಇರುತ್ತಿರಲಿಲ್ಲ. ಆದರೆ ನೀವು ಪ್ರಪೋಸ್ ಮಾಡುವುದನ್ನು ಮುಂದೂಡುತ್ತಾ ಬಂದಿರಿ. ಇದರ ಅರ್ಥ ಅವಳು ಪ್ರೀತಿಸಿದಂತೆ ವರ್ತಿಸಿರಲಿಲ್ಲ. ಆದರೆ ನಿಮಗೆ ಹಾಗೆ ಅನಿಸುತ್ತಿತ್ತು ನಿಮ್ಮ ಗಿಫ್ಟ್‌ಗಳನ್ನು, ಸಹಾಯವನ್ನು ಪಡೆದಳು ಎನ್ನುವುದರ ಅರ್ಥ ಅವರು ಪ್ರೀತಿಸಿದ್ದರು ಎಂದೇ ಅಲ್ಲ‌.‌ ಒಂದು ವೇಳೆ ಪ್ರೀತಿಸಿದ್ದರೂ ಅವರ ಆದ್ಯತೆ, ಅಗತ್ಯಗಳಿಗೆ ಏನು ಅನಿವಾರ್ಯ ಎಂಬುದನ್ನು ಆರಿಸಿ ಹೊರಟಿದ್ದರು. ದರರ್ಥ ನಿಮ್ಮನ್ನು ಡಂಪ್ ಮಾಡಿ ಅಲ್ಲ. ಡಂಪ್ ಎನ್ನುವುದರ ಇನ್ನೊಂದು ಅರ್ಥ ನಿರಾಕರಿಸುವುದು. ಅಂದರೆ ಅವರಿಗೆ ಯಾವುದೋ ಒಂದು ಕಾರಣದಿಂದ ನಿಮ್ಮನ್ನು ಒಪ್ಪಿಕೊಳ್ಳಲು ಸಾಧ್ಯವಾಗಲಿಲ್ಲ. ಹಾಗಂತ ನಿಮ್ಮನ್ನು ಡಂಪ್ (ಎಸೆದು ಹೋದರು) ಮಾಡಿದರು ಎಂದಾಗುವುದಿಲ್ಲ.

ನಿಮಗೆ ಈಗಲೂ ಆ ಹುಡುಗಿ ನೆನಪಾಗುವುದು ಅವರು ನಿಮ್ಮನ್ನು ಉಪಯೋಗಿಸಿಕೊಂಡು ಬಿಟ್ಟು ಹೋದರು ಎಂಬ ನೋವಿಗೆ ಎನಿಸುತ್ತದೆ. ಈಗ ಹೇಳುವೆ‌ ಕೇಳಿ ಅವರು ನಿಮ್ಮನ್ನು ಉಪಯೋಗಿಸಿಕೊಳ್ಳಲಿಲ್ಲ ನೀವಾಗಿಯೇ ಉಪಯೋಗಿಸಲ್ಪಟ್ಟಿರಿ. ಇದು ನಿಮಗಂತ ಅಲ್ಲ ನಿಮ್ಮಂತೆ ಪ್ರೀತಿಸುತ್ತಿರುವ ಹುಡುಗಿಗೆ ಗಿಫ್ಟ್ ಹಾಗು ಸಹಾಯ ಮಾಡುವ ಎಲ್ಲಾ ಹುಡುಗರಿಗೂ ಅನ್ವಯವಾಗುತ್ತದೆ. ಹುಡುಗಿಯರಿಗೆ ಗಿಫ್ಟ್ ಕೊಟ್ಟರೆ ಹಾಗೂ ಸಹಾಯ ಮಾಡಿದ ಮಾತ್ರಕ್ಕೆ ಅವರು ನಿಮ್ಮ ಪ್ರೀತಿಯನ್ನು ಒಪ್ಪಿಕೊಳ್ಳುತ್ತಾರೆ ‌ಎಂಬ ಭ್ರಮೆ ಬೇಡ. ಅಥವಾ ಒಪ್ಪಿಕೊಳ್ಳಲೇಬೇಕು ಎಂಬ ಆಗ್ರಹವೂ ಬೇಡ. ಅವರನ್ನು ಇಂಪ್ರೆಸ್ ಮಾಡಲು ನೀವು ಮಾಡುವ ಹಲವು ತಂತ್ರಗಳಲ್ಲಿ ಗಿಫ್ಟ್ ಮತ್ತು ಸಹಾಯವೂ ಒಂದು. ಕೊಟ್ಟಿದ್ದನ್ನೆಲ್ಲ ಪಡೆದುಕೊಂಡು ಕೊನೆಗೆ ಕೈಕೊಟ್ಟು‌ ಹೋದಳು ಎನ್ನುವುದೂ ಸರಿ ಅಲ್ಲ. ನಿಮ್ಮ ಪ್ರೀತಿ ನಿಷ್ಕಲ್ಮಶವಾಗಿದ್ದರೆ ಆಕೆಗೆ ಕೊಡುವ ಗಿಫ್ಟ್, ಮಾಡುವ ಸಹಾಯದ ಬದಲಿಗೆ‌ ನೀವು ಏನೂ ಬಯಸುವುದಿಲ್ಲ.

ನೀವೀಗ ನಿಮ್ಮದು ಆಗ ನಿಷ್ಕಲ್ಮಶ ಪ್ರೀತಿಯಾಗಿತ್ತು ಅಂದುಕೊಳ್ಳಿ. ಅದು ದಕ್ಕಲಿಲ್ಲ. ಆದರೂ ಅದಕ್ಕಿಂತ ಒಳಿತಾದುದೇ ನಿಮಗೀಗ ಹೆಂಡತಿ ಮಕ್ಕಳ ರೂಪದಲ್ಲಿ ದಕ್ಕಿದೆ. ಅದನ್ನು ಎಂಜಾಯ್ ಮಾಡಿ. ಈಗ ಆ ಹುಡುಗಿಗೆ‌ ತೊಂದರೆ ಆಯಿತು ಎಂದು‌ ಸಹಾಯ‌ ಮಾಡುವ ಗುಣ ಒಳ್ಳೆಯದೇ. ಆದರೆ ಅದರ ಹಿಂದೊಂದು ಸ್ವಾರ್ಥ ಇರುತ್ತೆ ನೋಡಿ, ಆಗ ಸಿಗಲಿಲ್ಲ ಈಗಲಾದರೂ ಆ ಕಳೆದು ಹೋದ ಪ್ರೀತಿ ಸಿಗುತ್ತದೆಯೇನೋ ಎಂಬ ಸ್ವಾರ್ಥ ಅದು ಬೇಡ ಎಂದರೂ ಬಂದುಬಿಡುತ್ತದೆ.

ಈ ಮೇಲಿನ ನಿಮ್ಮ ಎಲ್ಲಾ ಯೋಚನೆಗಳು ತಪ್ಪೇ? ಸರಿಯೇ? ಏಕೆ ಬರುತ್ತವೆ?

ನಿಮ್ಮ ಎಲ್ಲಾ ಯೋಚನೆಗಳೂ ಬಹುತೇಕ ನಿಮ್ಮಂತ‌ಹ ಸ್ಥಿತಿಯಲ್ಲಿರುವ ಎಲ್ಲರ ಮನಸ್ಸಿನಲ್ಲಿಯೂ ಬರುವ ಆಲೋಚನೆಗಳೇ. ಇವುಗಳು ಏಕೆ ಬರುತ್ತವೆ ಅಂದರೆ ನಿಮ್ಮ ಮನಸಿನಲ್ಲಿ ಒಂದು ಆ ಪ್ರೇಮ‌ ಒಂದು ಅಪೂರ್ಣ ಕಥೆ. ಯಾವುದೇ ಅಪೂರ್ಣ ಕಥೆ ಅಥವಾ ಅರ್ಧಕ್ಕೆ ಬಿಟ್ಟು ಹೋದ ಕೆಲಸಗಳು ಆಗಾಗ ನೆನಪಾಗುತ್ತಲೇ ಇರುತ್ತವೆ. ಇಂತಹ ಆಲೋಚನೆಗಳನ್ನು 'ಇಂಟ್ರೂಸಿವ್ ಥಾಟ್ಸ್' ಎಂದೂ‌ ಈ ಅಪೂರ್ಣ ಕಥೆ, ಕೆಲಸ ಘಟನೆಗಳನ್ನು ನೆನಪಿಸಿಕೊಳ್ಳುವುದನ್ನು 'ಜಿಗರ್ನೇಕ್ ಎಫೆಕ್ಟ್' ಎಂದೂ ಕರೆಯುತ್ತೇವೆ.

ಈ ಆಲೋಚನೆಗಳು ಸರಿಯೇ? ತಪ್ಪೇ?

ಮನಃಶಾಸ್ತ್ರದಲ್ಲಿ ನಿಮ್ಮ ಯಾವುದೇ ಆಲೋಚನೆಗಳು ಕಾರ್ಯರೂಪಕ್ಕೆ ಬರದಿದ್ದಲ್ಲಿ ಯಾವ ಆಲೋಚನೆಯೂ‌ ತಪ್ಪಲ್ಲ. ಆದರೆ ಈ ಆಲೋಚನೆಗಳು ನಿಮ್ಮ ಮಾರಲ್ (ನೈತಿಕ) ಮನಸಿನೊಂದಿಗೆ ಹೋರಾಟ ನಡೆಸುತ್ತಿದ್ದರೆ ನಿಮ್ಮ ಆಲೋಚನೆಗಳೂ ಹಾಗೂ ನಿಮ್ಮ‌ ನಂಬಿಕೆಗಳಿಗೂ ಒಂದಕ್ಕೊಂದು ತಾಳಮೇಳವಿಲ್ಲವಾಗಿ ನೀವೀಗ ಇರುವ ದ್ವಂದ್ವ (ಕಾಗ್ನಿಟೀವ್ ಡಿಸೋನೆನ್ಸ್) ಪರಿಸ್ಥಿತಿಗೆ ನಿಮ್ಮನ್ನು ತಂದು ನಿಲ್ಲಿಸುತ್ತದೆ. ಹಾಗಾಗಿ ಈ ಆಲೋಚನೆಗಳನ್ನು ನಿಲ್ಲಿಸುವ ಬದಲು ಬದಲಾಯಿಸಿಕೊಳ್ಳಿ.

ಆಲೋಚನೆಗಳನ್ನು ಹೇಗೆ ಬದಲಾಯಿಸಿಕೊಳ್ಳುವುದು?

1) ಅವರ ಬಗ್ಗೆ ಯೋಚನೆ ಬಂದ ಕೂಡಲೇ ನಿಮ್ಮ ಕೆಲಸ ಅಥವಾ ಮಕ್ಖಳ‌ ಬಗ್ಗೆ ಯೋಚಿಸುವಂತೆ ನಿಮ್ಮ ಮನಸನ್ನು ಪ್ರೊಗ್ರಾಮ್‌ ಮಾಡಿಕೊಳ್ಳಿ.‌ (ಅಭ್ಯಾಸದ ಮೂಲಕ)

2) ಅವರು ಪ್ರೊಫೈಲ್ ಅಥವಾ ಅವರನ್ನು ನೋಡಿದ ಕೂಡಲೇ ಬರುವ ಆಲೋಚನೆ ಏನು? ನಿಮ್ಮ ಫೀಲಿಂಗ್‌ಗಳನ್ನು ಒಂದೆಡೆ ಬರೆದು ಅದರ ವಿರುದ್ಧ ಏನಿದೆ ಎಂದು ಯೋಚಿಸಿ, ಅದನ್ನೂ ಬರೆಯಿರಿ. ಉದಾಹರಣೆಗೆ ಅವಳು ಲಂಚ್‌ ಸಮಯಕ್ಕೆ ಸಿಕ್ಕರೆ ಊಟಕ್ಕೆ ಕರೆಯಬಹುದಿತ್ತೇನೋ ಎಂಬುದರ ಬದಲಿಗೆ ಲಂಚ್ ಸಮಯಕ್ಕೆ ನಾನು ಬೇರೆಡೆ ಬ್ಯುಸಿ ಇರುತ್ತೇನೆ‌. ಹಾಗಾಗಿ ನಾನು ಕರೆಯುವುದಿಲ್ಲ ಎಂಬಂಥವುಗಳು.

3) ದೀರ್ಘವಾದ ನೀಳ ಉಸಿರಾಟದ ಅಭ್ಯಾಸದಿಂದ ಮೇಲಿನ ತಂತ್ರಗಳನ್ನು ಸುಲಭವಾಗಿ ಸಾಧಿಸಬಹುದು.

4) ಕೆಲವು ಅಪೂರ್ಣ ಅಧ್ಯಾಯಗಳ‌ನ್ನು ಹರಿದು ಹಾಕಿದರಷ್ಟೇ ಜೀವನದ ಪುಸ್ತಕ ಚೆಂದ. ಹರಿದು ಹಾಕದೆ ಅದನ್ನು ಓದಿದಷ್ಟೂ ಮತ್ತೆ‌ಮತ್ತೆ ಆ ಅಧ್ಯಾಯಗಳ‌ ಬಗ್ಗೆ ಅದೇ ಪ್ರಶ್ನಾರ್ಥಕ ಚಿಹ್ನೆಗಳು‌ ಕಾಣುತ್ತಿರುತ್ತವೆ. ಇಡೀ ಪುಸ್ತಕಕ್ಕೇ ಕಪ್ಪು ಮಸಿಯಂತೆ. -ಆಯ್ಕೆ ನಿಮ್ಮದು.

ಡಾ. ರೂಪಾ ರಾವ್‌
ಡಾ. ರೂಪಾ ರಾವ್‌

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ನಿವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ 20ಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990.