ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ಮಕ್ಕಳನ್ನು ಮಾನಸಿಕವಾಗಿ ಗಟ್ಟಿಯಾಗಿಸುವ ಆಸೆಯಿರುವ ಪೋಷಕರಿಗೆ ಈ 6 ಟಿಪ್ಸ್ ಗೊತ್ತಿರಲೇಬೇಕು -ಮನದ ಮಾತು

Parenting Tips: ಮಕ್ಕಳನ್ನು ಮಾನಸಿಕವಾಗಿ ಗಟ್ಟಿಯಾಗಿಸುವ ಆಸೆಯಿರುವ ಪೋಷಕರಿಗೆ ಈ 6 ಟಿಪ್ಸ್ ಗೊತ್ತಿರಲೇಬೇಕು -ಮನದ ಮಾತು

ಕಣ್ಣೆದುರು ಬೆಳೆಯುತ್ತಿರುವ ಮಕ್ಕಳು ದೊಡ್ಡವರಾದ ಮೇಲೆ ಸೋಲುಗಳನ್ನು, ವೈಫಲ್ಯಗಳನ್ನು ಹೇಗೆ ಎದುರಿಸುತ್ತಾರೆಯೋ ಎಂಬ ಪ್ರಶ್ನೆ ಎಲ್ಲ ಪೋಷಕರನ್ನು ಕಾಡುತ್ತದೆ. ಈ ಪ್ರಶ್ನೆಗೆ ಮುಂಚಿತವಾಗಿ ಉತ್ತರ ಕಂಡುಕೊಂಡರೆ, ಇಲ್ಲಿರುವ ಅಂಶಗಳನ್ನು ಅನುಸರಿಸಿದರೆ ಮಕ್ಕಳನ್ನು ಖಂಡಿತ ಮಾನಸಿಕವಾಗಿ ಸದೃಢರಾಗಿಸಬಹುದು.

ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು
ಭವ್ಯಾ ವಿಶ್ವನಾಥ್‌ ಅವರ ಅಂಕಣ ಮನದ ಮಾತು

ಪ್ರಶ್ನೆ: ನನಗೆ ಇಬ್ಬರು ಮಕ್ಕಳಿದ್ದಾರೆ. ಮಗಳು ಚಿಕ್ಕವಳು, ಮಗ ದೊಡ್ಡವನು. ಮಗಳಿಗಿಂತಲೂ ಮಗ ಮಾನಸಿಕವಾಗಿ ವೀಕ್ ಅನ್ನಿಸುತ್ತೆ. ಸಣ್ಣಪುಟ್ಟದಕ್ಕೂ ಅಳುತ್ತಾನೆ, ಅವನಿಗೆ ಏನು ಅನ್ನಿಸುತ್ತಿದೆ ಎಂದು ಸರಿಯಾಗಿ ಹೇಳಿಕೊಳ್ಳುವುದಿಲ್ಲ. ಅವನ ಭವಿಷ್ಯ ಹೇಗಿರುತ್ತೆ ಎನ್ನುವುದೇ ದೊಡ್ಡ ಯೋಚನೆಯಾಗಿದೆ. ಅವನನ್ನು ಮಾನಸಿಕವಾಗಿ ಸದೃಢಗೊಳಿಸಲು ಏನು ಮಾಡಬೇಕು? ದಯವಿಟ್ಟು ಮಾರ್ಗದರ್ಶನ ಮಾಡಿ ಮೇಡಂ. -ಲಲಿತಾ, ಯಲಹಂಕ

ಟ್ರೆಂಡಿಂಗ್​ ಸುದ್ದಿ

ಉತ್ತರ: ಪ್ರತಿ ಮಕ್ಕಳೂ ಭಿನ್ನ. ಅವರನ್ನು ಅಮ್ಮ-ಅಪ್ಪನಷ್ಟು ಚೆನ್ನಾಗಿ ಬೇರೆ ಯಾರೂ ಅರ್ಥ ಮಾಡಿಕೊಳ್ಳಲು ಆಗುವುದಿಲ್ಲ. ಆಪ್ತಸಮಾಲೋಚಕರು ಅಧ್ಯಯನ ಮತ್ತು ಅನುಭವದಿಂದ ಮಕ್ಕಳ ಮನಸ್ಸಿನ ಆಳಕ್ಕಿಳಿದು ಅವರ ಸಮಸ್ಯೆ ವಿಶ್ಲೇಷಿಸಬಲ್ಲರು. ಪೋಷಕರಿಗೆ ಸಲಹೆ ಕೊಡಬಲ್ಲರು. ಆದರೆ ಅಂತಿಮವಾಗಿ ಅದನ್ನು ಅರ್ಥಮಾಡಿಕೊಂಡು ಅನುಸರಿಸುವ ಹೊಣೆ ನಿಮ್ಮದೇ ಆಗಿರುತ್ತೆ. ನಿಮ್ಮ ಮಗನ ಬಗ್ಗೆ ನಿಮಗಿರುವ ಪ್ರೀತಿ, ಕಾಳಜಿ ಅರ್ಥವಾಗುತ್ತೆ. ಅದು ಸಹಜವೂ ಹೌದು. ನೀವು ಧೈರ್ಯವಾಗಿ ಪ್ರಶ್ನೆ ಕೇಳಿದ್ದೀರಿ, ಅಭಿನಂದನೆಗಳು. ಪ್ರಶ್ನೆ ಕೇಳಲು ಸಾಧ್ಯವಾಗದ ಪೋಷಕರೂ ದೊಡ್ಡ ಸಂಖ್ಯೆಯಲ್ಲಿ ಇರಬಹುದು. ಅಂಥವರಿಗೂ ಈ ಉತ್ತರದಿಂದ ಅನುಕೂಲವಾಗಬಹುದು. ಮಕ್ಕಳನ್ನು ಮಾನಸಿಕವಾಗಿ ಸದೃಢರಾಗಿಸುವುದು ಎಲ್ಲ ಪೋಷಕರ ಆದ್ಯತೆಯಾಗಿರಬೇಕು. ಈ ನಿಟ್ಟಿನಲ್ಲಿ ಪೋಷಕರು ಗಮನಿಸಬೇಕಾದ 6 ಅಂಶಗಳು ಹೀಗಿವೆ.

1) ಕಷ್ಟ ಮತ್ತು ಸೋಲು: ಮಕ್ಕಳು ಸೋಲು ಮತ್ತು ಸಂಕಷ್ಟ ಎದುರಿಸುವುದು ಬಹಳ ಮುಖ್ಯ. ಬಹಳ ಅಲ್ಲದಿದ್ದರೂ ಸ್ವಲ್ಪಮಟ್ಟಿಗಾದರೂ ಸವಾಲುಗಳನ್ನು ಎದುರಿಸುವುದನ್ನು ಕಲಿಯಬೇಕು. ತನಗೆ ಬೇಕಾದ್ದು ಸಿಗದಿದ್ದರೆ ಯಾವ ರೀತಿಯಲ್ಲಿ ಅದನ್ನು ಸ್ವೀಕರಿಸಬೇಕು, ಸೋಲೆಂಬುದು ಬದುಕಿನ ಕೊನೆಯಲ್ಲ, ಬದಲು ಗೆಲುವಿನ ಹಾದಿಯ ಮೆಟ್ಟಿಲು ಎನ್ನುವುದನ್ನು ತಿಳಿಸಬೇಕು.

ಸದಾ ಯಶಸ್ಸು ಮತ್ತು ಗೆಲುವನ್ನೇ ಗುರಿಯಾಗಿಸಿಕೊಳ್ಳುವುದು, ಅತಿಯಾದ ಸೌಲಭ್ಯ, ಸವಲತ್ತು ಒದಗಿಸುವುದು, ಮಕ್ಕಳ ಮನಸ್ಸಿಗೆ ಸ್ವಲ್ಪವೂ ಬೇಸರವಾಗದಂತೆ ನೋಡಿಕೊಳ್ಳುವುದು ಮಾಡಿದಾಗ ಭವಿಷ್ಯದಲ್ಲಿ ಮಕ್ಕಳಿಗೆ ಸವಾಲುಗಳನ್ನು ನಿಭಾಯಿಸಲು ಸಾಧ್ಯವಾಗದಿಲ್ಲ. ಮುಂದೆ ಕುಟುಂಬ, ಉದ್ಯೋಗದಲ್ಲಿ ಸಮಸ್ಯೆ ಉಂಟಾದರೆ ಮಾನಸಿಕ ಒತ್ತಡ ಮತ್ತು ಆತಂಕದಿಂದ ಬಳಲಬಹುದು.

2) ಭಯ: ಮಕ್ಕಳು ಅವರ ಭಯವನ್ನು ಎದುರಿಸುವುದಕ್ಕೆ ಪ್ರೋತ್ಸಾಹಕೊಡಿ. ಬಹಳಷ್ಟು ಮಕ್ಕಳು ತಮ್ಮ ಭಯವನ್ನು ತಮ್ಮ ದೌರ್ಬಲ್ಯವೆಂದು ಒಪ್ಪಿಕೊಂಡು ಸುಮ್ಮನಾಗುತ್ತಾರೆ. ಗಿಡವಾಗಿ ಬಗ್ಗದ್ದು ಮರವಾಗಿ ಬಗ್ಗೀತೆ ಎಂಬಂತೆ ಭಯವೂ ಕೂಡ ಮಕ್ಕಳಿಗೆ ಜೊತೆಯಾಗಿ ಬೆಳೆದು ಹೆಮ್ಮರವಾಗಿ ಬೆಳೆದು ನಿಲ್ಲುತ್ತದೆ. ಮುಂದಿನ ದಿನಗಳಲ್ಲಿ ಅವರ ಭಯವೇ ಒಂದು ಮಿತಿಯಾಗುತ್ತದೆ (limitation). ಭಯವನ್ನು ಜಯಿಸಲು ಇರುವ ಏಕೈಕ ಮಾರ್ಗವೆಂದರೆ ಅದನ್ನು ಎದುರಿಸುವುದು. ಆದ್ದರಿಂದ ಮಕ್ಕಳಿಗೆ ಭಯವನ್ನು ಎದುರಿಸಲು ಮಾರ್ಗವನ್ನು ತೋರಿಸಿಕೊಡಿ. ಉದಾ: ಆಟ ಪಾಠಗಳಲ್ಲಿ ಸೋಲುವ ಭಯ, ಸಾರ್ವಜನಿಕವಾಗಿ ಮಾತನಾಡಲು ಭಯ, ತಮ್ಮ ಭಾವನೆ ವ್ಯಕ್ತಪಡಿಸುವ ಭಯ, ನೀರಿನಲ್ಲಿ ಈಜಾಡುವ ಭಯ, ಅನಿಸಿಕೆಗಳನ್ನು ಇತರರ ಬಳಿ ವ್ಯಕ್ತಪಡಿಸುವ ಭಯ ಇತ್ಯಾದಿ ಮಕ್ಕಳಿಗೆ ಇರುತ್ತದೆ. ಇವುಗಳನ್ನು ಮೀರಿಕೊಳ್ಳಲು ಏನು ಮಾಡಬೇಕು ಎನ್ನುವುದನ್ನು ಮಕ್ಕಳಿಗೆ ತಿಳಿಸಿಕೊಡಬೇಕು.

3) ಕೃತಜ್ಞತಾ ಮನೋಭಾವ: ಮಕ್ಕಳಿಗೆ ಪ್ರತಿನಿತ್ಯ ಸದ್ಯಕ್ಕಿರುವ ಎಲ್ಲ ಸುಖ ಸೌಕರ್ಯಗಳಿಗೆ ಕೃತಜ್ಞತೆ ಸಲ್ಲಿಸಲು ಉತ್ತೇಜನ ಕೊಡಿ. ಪೋಷಕರು ಸಹ ಇದನ್ನು ಮಾಡಿದರೆ ಮಕ್ಕಳಿಗೆ ಆದರ್ಶವಾಗುತ್ತಾರೆ. ಉದಾ: ಬದುಕಲು ಮನೆ, ಆಹಾರ, ಬಟ್ಟೆ, ಪೋಷಿಸಲು ಪೋಷಕರು, ವಿದ್ಯೆ, ಆರೋಗ್ಯವನ್ನು ಪಡೆದಿರುವ ಕಾರಣ ನಿತ್ಯವೂ ಕೃತಜ್ಞತೆ ಸಲ್ಲಿಸಿದರೆ ಸಂತೋಷ, ತೃಪ್ತಿ ಹಾಗೂ ಮೌಲ್ಯವು ಹೆಚ್ಚಾಗುತ್ತದೆ.

4) ಸ್ವ ಅರಿವು: ಮಕ್ಕಳಿಗೆ ತಮ್ಮ ಬಗ್ಗೆ ಅರಿವು / ಜಾಗೃತಿಯನ್ನು ಮೂಡಿಸುವುದು ಮುಖ್ಯ. ತಮ್ಮ ಅಸ್ತಿತ್ವವನ್ನು ಸಂಪೂಣ೯ವಾಗಿ ತಿಳಿದುಕೊಳ್ಳಲು ಹಾಗೂ ವ್ಯಕ್ತಿತ್ವ ನಿಮಾ೯ಣ ಮಾಡಿಕೊಳ್ಳಲು ಸ್ವ-ಜಾಗೃತಿ ಸಹಾಯ ಮಾಡುತ್ತದೆ. ತನ್ನ ಸ್ವಭಾವ, ಸಾಮರ್ಥ್ಯಗಳು, ದೌರ್ಬಲ್ಯಗಳು, ಆಯ್ಕೆಗಳು, ಇಷ್ಟ ಮತ್ತು ಸೇರದಿರುವುದನ್ನು ಸಂಪೂಣ೯ವಾಗಿ ತಿಳಿದುಕೊಂಡು ಬದುಕಿನಲ್ಲಿ ನೆಮ್ಮದಿ ಹಾಗೂ ಯಶಸ್ಸನ್ನು ಸಾಧಿಸಲು ಅಣಿಮಾಡಿಕೊಡುತ್ತದೆ. ಅಧಿಕವಾಗಿ ಕಷ್ಟದ ಸಂದರ್ಭಗಳನ್ನು ಎದುರಿಸುವಲ್ಲಿ ಅನುಕೂಲ ಮಾಡಿಕೊಡುತ್ತದೆ.

5) ಭಾವನೆಗಳನ್ನು ವ್ಯಕ್ತಪಡಿಸುವುದು ಮತ್ತು ನಿಭಾಯಿಸುವುದು: ಮಕ್ಕಳು ತಮ್ಮ ಭಾವನೆಗಳನ್ನು ಸರಿಯಾಗಿ ಗುರುತಿಸಿ, ಸರಿಯಾದ ರೀತಿಯಲ್ಲಿ ವ್ಯಕ್ತಪಡಿಸಿ, ನಿಭಾಯಿಸುವಷ್ಟು ಭಾವನಾತ್ಮಕ ಸಮತೋಲನ, ಮಾನಸಿಕ ಸ್ಥಿರತೆ ಮತ್ತು ಆತ್ಮವಿಶ್ವಾಸ ರೂಢಿಸಬೇಕು. ಮಾನಸಿಕ ಸಮತೋಲನ ರೂಢಿಸಿಕೊಂಡವರಿಗೆ ಸ್ನೇಹಿತರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ. ಸಂಬಂಧಗಳಲ್ಲಿ ಕಲಹಗಳೂ ಕಡಿಮೆ ಇರುತ್ತವೆ. ಉದ್ಯೋಗದಲ್ಲಿಯೂ ಕೂಡ ಇಂಥವರು ಯಶಸ್ಸು ಕಾಣುತ್ತಾರೆ.

6) ವೈಯಕ್ತಿಕ, ಸಾಮಾಜಿಕ ಜವಾಬ್ಧಾರಿ ಮತ್ತು ನೈತಿಕ ಪ್ರಜ್ಞೆ: ಸ್ವಾತಂತ್ರ್ಯವೆಂದರೆ ಆಯ್ಕೆಗಳ ಅವಕಾಶ. ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕು ಆದರೆ ಅದರೊಂದಿಗೆ ಸರಿಯಾದ ಆಯ್ಕೆ ಮಾಡುವ ಜವಾಬ್ಧಾರಿಯೂ ಇರುತ್ತದೆ ಎಂಬುದನ್ನು ನೆನಪಿಡಬೇಕು. ಈ ಜವಾಬ್ಧಾರಿಯ ಸರಿಯಾದ ನಿರ್ವಹಣೆ ಬಹಳ ಮುಖ್ಯ. ಉದಾ: ಸಣ್ಣ ವಿಚಾರಗಳ ನಿರ್ಧಾರದ ಆಯ್ಕೆ, ವೃತ್ತಿಯ ಆಯ್ಕೆ, ಚಲನಶೀಲತೆ, ಸಂವಹನೆ, ಮಾಹಿತಿಗಳ ಲಭ್ಯತೆ ಇತ್ಯಾದಿ. ಧೃಢವಾದ ನೈತಿಕ ಪ್ರಜ್ಞೆ, ಸಾಮಾಜಿಕ ಪ್ರಜ್ಞೆಗಳನ್ನು ಬೆಳೆಸಿಕೊಳ್ಳಲು ಅವಕಾಶಗಳನ್ನು ನೀಡಬೇಕು.

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)