ಹಬ್ಬ ಹರಿದಿನಗಳ ಅಕ್ಟೋಬರ್ 2024; ಮಹಾಲಯ, ನಾಡಹಬ್ಬ ಮೈಸೂರು ದಸರಾ ಮತ್ತೇನಿವೆ ಹಬ್ಬಗಳು- ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಅಕ್ಟೋಬರ್ ತಿಂಗಳು ಈ ಸಲ ಹಬ್ಬ ಹರಿದಿನಗಳದ್ದೇ ತಿಂಗಳಾಗಿ ಬಂದಿದೆ. ಅಕ್ಟೋಬರ್ 3 ರಂದು ನವರಾತ್ರಿ ಶುರು. ಹೀಗೆ ಮೈಸೂರು ದಸರಾದೊಂದಿಗೆ ತಿಂಗಳು ಶುರುವಾಗುತ್ತಿದ್ದು, ಮಧ್ಯೆ ಕಾವೇರಿ ಸಂಕ್ರಮಣ ಬರುತ್ತದೆ. ದೀಪಾವಳಿಯೊಂದಿಗೆ ತಿಂಗಳು ಕೊನೆಯಾಗುತ್ತಿದ್ದು, ಹಬ್ಬ ಹರಿದಿನಗಳ ದಿನಾಂಕ ಮತ್ತು ಆಚರಣೆಗಳ ವಿವರ ಇಲ್ಲಿದೆ.
ಮಹಾಲಯ ಅಮಾವಾಸ್ಯೆಯೊಂದಿಗೆ ಪಿತೃಪಕ್ಷ ಕೊನೆಯಾಗುತ್ತಿದ್ದಂತೆ ನವರಾತ್ರಿ ಶುರುವಾಗುತ್ತದೆ. ಮೈಸೂರು ದಸರಾ ಸಂಭ್ರಮವೂ ನಾಡಿನ ಉದ್ದಗಲಕ್ಕೂ ಪಸರಿಸಲಿದೆ. ತಿಂಗಳ ಕೊನೆಗೆ ದೀಪಾವಳಿಯ ಸಂಭ್ರಮ ನಾಡನ್ನು ಆವರಿಸಲಿದೆ. ಹೀಗೆ ಈ ಸಲ ಹಬ್ಬ ಹರಿದಿನಗಳದ್ದೇ ತಿಂಗಳು ಅಕ್ಟೋಬರ್.
ಭಾರತದಾದ್ಯಂತ ಮಹತ್ವದ ಸಾಂಸ್ಕೃತಿಕ ಮತ್ತು ಧಾರ್ಮಿಕ ಆಚರಣೆಗಳ ಸಂಭ್ರಮ ವ್ಯಾಪಿಸಲಿದ್ದು, ಜನಜೀವನದಲ್ಲೂ ಉತ್ಸಾಹ ಹುಮ್ಮಸ್ಸು ಕಾಣಲಿದೆ. ಆದ್ದರಿಂದ ಅಕ್ಟೋಬರ್ ತಿಂಗಳ ಪ್ರಮುಖ ಹಬ್ಬಗಳು ಯಾವ ದಿನ ಬರುತ್ತಿವೆ ಎಂಬುದನ್ನು ಮುಂಚಿತವಾಗಿ ತಿಳಿದುಕೊಳ್ಳೋಣ. ಕಾರ್ಯಕ್ರಮ ಆಯೋಜಿಸುವುದಕ್ಕೆ, ಸುಗಮ ಆಚರಣೆೆ ಯೋಜಿಸುವುದಕ್ಕೂ ಇದು ನೆರವಾದೀತು.
ಅಕ್ಟೋಬರ್ 2024 ಪ್ರಮುಖ ಹಬ್ಬಗಳ ವಿವರ
ಅಕ್ಟೋಬರ್ 2 ರಂದು ಮಹಾಲಯ ಅಮಾವಾಸ್ಯೆಯೊಂದಿಗೆ ತಿಂಗಳು ಶುರುವಾಗುತ್ತದೆ. ಹಿಂದೂಗಳಿಗೆ ಈ ದಿನ ಅತ್ಯಂತ ಪ್ರಮುಖವಾದುದು. ಸರ್ವ ಪಿತೃಗಳಿಗೆ ಮಹಾಲಯ ಅಮಾವಾಸ್ಯೆ ದಿನ ಪಿಂಡ ಪ್ರದಾನ ಮಾಡುವುದು ವಾಡಿಕೆ.
ಅಕ್ಟೋಬರ್ 3 ರಂದು ನವರಾತ್ರಿ ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ, ದುರ್ಗಾ ಪೂಜೆಯ ಆಚರಣೆ ಶುರುವಾತನ್ನು ಗಮನಿಸಬಹುದು. ಉತ್ತರ ಭಾರತದಲ್ಲಿ ಈ ನವರಾತ್ರಿಯನ್ನು ಶಾರದೀಯ ನವರಾತ್ರಿ ಎಂದು ಆಚರಿಸುತ್ತಾರೆ. ಇದು ಒಂಬತ್ತು ದಿನಗಳ ಉತ್ಸವ. ಈ ಅವಧಿಯು ದುರ್ಗಾ ದೇವಿಯ ಆರಾಧನೆಗೆ ಸಮರ್ಪಿತವಾಗಿದೆ. ಇದು ದುಷ್ಟ ಶಕ್ತಿಗಳ ವಿರುದ್ಧ ಶಿಷ್ಟ ಶಕ್ತಿಗಳ ವಿಜಯವನ್ನು ಪ್ರತಿನಿಧಿಸುತ್ತದೆ. ಹೀಗಾಗಿ ಈ ಅವಧಿಯಲ್ಲಿ ನಿತ್ಯವೂ ದೇವಿಯ ವಿಭಿನ್ನ ರೂಪಗಳನ್ನು ಭಕ್ತರು ಆರಾಧಿಸುತ್ತಾರೆ. ಉಪವಾಸವನ್ನೂ ಆಚರಿಸುತ್ತಾರೆ. ಪೂಜೆ ಪುನಸ್ಕಾರಗಳು, ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ. ನವರಾತ್ರಿಯು ಅಕ್ಟೋಬರ್ 10ಕ್ಕೆ ಸರಸ್ವತಿ ಪೂಜೆ, ಅಕ್ಟೋಬರ್ 11 ರಂದು ಮಹಾ ನವಮಿ. ಆಯುಧ ಪೂಜೆಯೊಂದಿಗೆ ಅಂತಿಮ ಘಟ್ಟ ತಲುಪುತ್ತದೆ.
ಅಕ್ಟೋಬರ್ 12 ರಂದು ಆಚರಿಸಲಾಗುವ ದಸರಾ ಹಬ್ಬವು ವಿಜಯ ದಶಮಿಯ ದಿನ ನಡೆಯುತ್ತಿದದು, ಇದು ರಾವಣನ ವಿರುದ್ಧ ಶ್ರೀರಾಮನ ವಿಜಯವನ್ನು ಸಂಕೇತಿಸುತ್ತದೆ. ಈ ಹಬ್ಬವನ್ನು ರೋಮಾಂಚಕ ಮೆರವಣಿಗೆಗಳು, ನಾಟಕೀಯ ಪುನರಾವರ್ತನೆಗಳು ಮತ್ತು ಪ್ರತಿಕೃತಿಗಳ ದಹನ ಮುಂತಾದ ಆಚರಣೆಗಳೊಂದಿಗೆ ನೆರವೇರಿಸಲಾಗುತ್ತದೆ.
ತಿಂಗಳ ಶುರುವಿಗೆ ಮೈಸೂರು ದಸರಾ, ಮಧ್ಯದಲ್ಲಿ ಕಾವೇರಿ ಸಂಕ್ರಮಣ, ತಿಂಗಳ ಕೊನೆಗೆ ದೀಪಾವಳಿ ಶುರು
ಮೈಸೂರು ದಸರಾ ಆಚರಣೆ: ಮಾರನೇ ದಿನ ಅಕ್ಟೋಬರ್ 3 ರಿಂದ ನವರಾತ್ರಿ ಶುರು. ಕರ್ನಾಟಕದಲ್ಲಿ ವಿಶ್ವ ವಿಖ್ಯಾತ ಮೈಸೂರು ದಸರಾ ಎಂದೇ ಖ್ಯಾತಿ ಪಡೆದಿರುವ ನಾಡ ಹಬ್ಬ ಶುರುವಾಗುತ್ತದೆ. ಮೈಸೂರು ದಸರಾಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಬಹುದು.
ಅಕ್ಟೋಬರ್ 16 ರಂದು ಶರದ್ ಪೂರ್ಣಿಮೆ. ಈ ರಾತ್ರಿಯಲ್ಲಿ, ಚಂದ್ರ ದೇವನು ತನ್ನ ದೈವಿಕ ಮಕರಂದವನ್ನು ಸುರಿಸುತ್ತಾನೆ ಎಂಬ ನಂಬಿಕೆ ಇದೆ. ಹೀಗಾಗಿ ಈ ದಿನ ಚಂದ್ರನಿಗೆ ಅರ್ಪಿಸಲು ಮತ್ತು ಸುಗ್ಗಿಯನ್ನು ಆಚರಿಸಲು ಖೀರ್‌ನಂತಹ ವಿಶೇಷ ಭಕ್ಷ್ಯಗಳನ್ನು ತಯಾರಿಸುತ್ತಾರೆ. ಇದು ಉತ್ತರ ಭಾರತದಲ್ಲಿ ಹೆಚ್ಚು ಚಾಲ್ತಿಯಲ್ಲಿರುವ ಹಬ್ಬ.
ಅಕ್ಟೋಬರ್ 17ರ ಗುರುವಾರ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಇದೆ.
ಕಾವೇರಿ ಸಂಕ್ರಮಣ: ಅಕ್ಟೋಬರ್ 17 ತುಲಾ ಸಂಕ್ರಮಣ. ಇದನ್ನು ಕರ್ನಾಟಕದಲ್ಲಿ ಕಾವೇರಿ ಸಂಕ್ರಮಣ ಎಂದೂ ಕರೆಯುತ್ತಾರೆ. ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ 2024ರ ಅಕ್ಟೋಬರ್ 17ರಂದು ಬೆಳಗ್ಗೆ 7.40ಕ್ಕೆ ಕಾವೇರಿ ತುಲಾ ಸಂಕ್ರಮಣ ಪವಿತ್ರ ತೀರ್ಥೋದ್ಭವ ಆಗಲಿದೆ. ಪ್ರತಿ ವರ್ಷ ತುಲಾ ಸಂಕ್ರಮಣದಂದು ಕಾವೇರಿ ಮಾತೆ ತೀರ್ಥರೂಪಿಣಿಯಾಗಿ ಕಾಣಿಸಿಕೊಳ್ಳುತ್ತಾಳೆ. ತಲಕಾವೇರಿಯ ಬ್ರಹ್ಮಕುಂಡಿಕೆಯಲ್ಲಿ ಕಾವೇರಿ ತಾಯಿ ಭಕ್ತರಿಗೆ ದರ್ಶನ ನೀಡುತ್ತಾಳೆ. ಈ ಪವಿತ್ರ ಘಳಿಗೆಯನ್ನು ಕಣ್ತುಂಬಿಕೊಳ್ಳಲು ಭಕ್ತರು ಕಾಯುತ್ತಿರುತ್ತಾರೆ. ಹೆಚ್ಚಿನ ವಿವರಕ್ಕೆ ಇಲ್ಲಿ ಕ್ಲಿಕ್ ಮಾಡಿ
ಅಕ್ಟೋಬರ್ 28 ರಂದು ಗೋವತ್ಸ ದ್ವಾದಶಿ ಆಚರಣೆ ಇದ್ದು, ಮಾರನೇ ದಿನವೇ ಧನತ್ರಯೋದಶಿ ಅಥವಾ ಧನ್‌ತೇರಸ್. ದೀಪಾವಳಿಯ ಭಾಗವಾಗಿ ಭಾರತದಾದ್ಯಂತ ಆಚರಿಸಲ್ಪಡುವ ಪ್ರಮುಖ ಹಬ್ಬ. ಹಿಂದು ಕ್ಯಾಲೆಂಡರ್ ಪ್ರಕಾರ ಆಶ್ವೀಜ ಅಥವಾ ಕಾರ್ತಿಕ ಮಾಸದ ಕೃಷ್ಣಪಕ್ಷದ ತ್ರಯೋದಶಿ ದಿನ ಅಂದರೆ ಹದಿಮೂರನೇ ದಿನ ಆಚರಿಸುವ ಹಬ್ಬ. ಚಿನ್ನವನ್ನು ಖರೀದಿಸಲು ಇದು ಅತ್ಯಂತ ಮಂಗಳಕರ ದಿನವೆಂದು ಪರಿಗಣಿಸಲಾಗಿದೆ.
ಅಕ್ಟೋಬರ್ 31ಕ್ಕೆ ದೀಪಾವಳಿ ಹಬ್ಬದ ನರಕ ಚತುರ್ದಶಿ ಆಚರಣೆ