Parenting Tips: ಮಕ್ಕಳು ಇಷ್ಟಪಟ್ಟು ಓದ್ತಿಲ್ಲ ಅಂತ ಕೊರಗಬೇಡಿ, ಈ 6 ಟಿಪ್ಸ್ ಅನುಸರಿಸಿದ ಮೇಲೆ ರಿಸಲ್ಟ್ ಹೇಗಾಯ್ತು ಅಂತ ಹೇಳಿ -ಮನದ ಮಾತು
Exam Preparation: ಓದಿನಲ್ಲಿ ಆಸಕ್ತಿಯಿರುವ ಮಕ್ಕಳಿದ್ದರೆ ಖುಷಿ ಸಹಜ. ಆದರೆ ಎಲ್ಲ ಮಕ್ಕಳೂ ಒಂದೇ ರೀತಿ ಇರುವುದಿಲ್ಲ. ಕೆಲ ಮಕ್ಕಳಿಗೆ ಓದಿನಲ್ಲಿ ಆಸಕ್ತಿ ಅಷ್ಟಕ್ಕಷ್ಟೇ. ಇನ್ನೂ ಕೆಲವರಿಗೆ ಓದಿದ್ದು ನೆನಪಿರುವುದಿಲ್ಲ. ಇಂಥ ಪುಟಾಣಿಗಳನ್ನು ನಿಭಾಯಿಸುವುದು ಹೇಗೆ? ಈ ಸಂಚಿಕೆಯಲ್ಲಿ ಉತ್ತರಿಸಿದ್ದಾರೆ ಆಪ್ತಸಮಾಲೋಚಕಿ ಮತ್ತು ಮನಃಶಾಸ್ತ್ರಜ್ಞೆ ಭವ್ಯಾ ವಿಶ್ವನಾಥ್
ಪ್ರಶ್ನೆ: ಮಗಳು ಈಗ 4ನೇ ಕ್ಲಾಸ್ ಓದ್ತಿದ್ದಾಳೆ. ಸ್ಕೂಲ್‌ಗೆ ಆಸೆಪಟ್ಟು ಹೋಗ್ತಾಳೆ. ಆದರೆ ಅಷ್ಟೇ ಇಷ್ಟದಿಂದ ಓದಲ್ಲ. ಯಾವಾಗ್ಲೂ ಕಡಿಮೆ ಮಾರ್ಕ್ಸ್ ತೆಗೀತಾಳೆ. ಅವಳಿಗೆ ಓದಿನಲ್ಲಿ ಆಸಕ್ತಿ ಬರಲು ಏನು ಮಾಡಬೇಕು? ದಯವಿಟ್ಟು ತಿಳಿಸಿ.
ಉತ್ತರ: ಕೆಲ ಮಕ್ಕಳಿಗೆ ಓದುವುದರಲ್ಲಿ ಒಟ್ಟಾರೆಯಾಗಿ ಆಸಕ್ತಿ ಇರುವುದಿಲ್ಲ. ಬೇರೆ ಚಟುವಟಿಕೆಗಳಲ್ಲಿ ಆಸಕ್ತಿ ಇರುತ್ತದೆ. ಆದ್ದರಿಂದ ಓದುವುದಿಲ್ಲ. ಇನ್ನು ಕೆಲವು ಮಕ್ಕಳಿಗೆ ಓದುವುದರಲ್ಲಿ ಆಸಕ್ತಿಯಿರುತ್ತದೆ, ಶ್ರಮಪಟ್ಟು ಓದುತ್ತಾರೆ ಆದರೆ ಓದಿದ್ದು ಅರ್ಥವೇ ಆಗುವುದಿಲ್ಲ. ಅಥವಾ ಓದಿದ್ದು ನೆನಪೇ ಇರುವುದಿಲ್ಲ. ಈ ಕಾರಣದಿಂದಾಗಿ ಓದುವುದರಲ್ಲಿ ಆಸಕ್ತಿ ಕಳೆದುಕೊಳ್ಳಬಹುದು. ಕೆಲ ಮಕ್ಕಳಿಗೆ ಓದುವುದರಲ್ಲಿ ಆಸಕ್ತಿ ಇರುತ್ತದೆ. ಆದ್ದರಿಂದ ಏಕಾಗ್ರತೆಯಿಂದ ಓದಿ ನೆನಪಿಟ್ಟುಕೊಳ್ಳುತ್ತಾರೆ. ಇಂತಹ ಮಕ್ಕಳಿಗೆ ಬಲವಂತವಾಗಿ ಓದಿಸುವ, ಪ್ರೋತ್ಸಾಹಿಸುವ ಅಗತ್ಯ ಇರುವುದಿಲ್ಲ.
ಪೋಷಕರು ಮೇಲಿನ ಅಂಶಗಳನ್ನು ಪರಿಗಣಿಸಿ ಅದರ ತಕ್ಕ ಹಾಗೆ ತಮ್ಮ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಬಲವಂತವಾಗಿ ಮಕ್ಕಳನ್ನು ಓದಿಸುವುದಕ್ಕೆ ಪ್ರಯತ್ನಿಸುವುದರಿಂದ ಮಕ್ಕಳು ಓದುವುದಿಲ್ಲ. ಇದರಿಂದ ನಿಮ್ಮ ಮತ್ತು ಮಕ್ಕಳ ನಡುವೆ ಮನಸ್ಥಾಪಗಳು ಮತ್ತು ಘರ್ಷಣೆ ಉಂಟಾಗುತ್ತದೆ. ಮಕ್ಕಳಿಗೆ ಓದುವುದರ ಮೇಲೆ ಇನ್ನಷ್ಟು ಬೇಸರ ತಾತ್ಸಾರ ಹೆಚ್ಚಾಗುತ್ತದೆ.
1) ಸಹಾನುಭೂತಿ: ಮಕ್ಕಳು ಓದುತ್ತಿಲ್ಲ ಎಂದು ಅವರನ್ನು ಬೈಯುವುದು, ಹಂಗಿಸುವುದಕ್ಕಿಂತ ಮಕ್ಕಳ ಮನಃಸ್ಥಿತಿಯನ್ನು ಅರ್ಥಮಾಡಿಕೊಂಡು ಬೆಂಬಲ ನೀಡುವುದು ಉತ್ತಮ. ಅವರು ಎದುರಿಸುತ್ತಿರುವ ವೈಯಕ್ತಿಕ ಸಮಸ್ಯೆ ಏನು? ಅವರ ಭಾವನೆಗಳೇನು ಎಂದು ತಿಳಿದುಕೊಂಡರೆ ಮಕ್ಕಳಿಗೆ ಪೋಷಕರಿಂದ ಬಹಳ ದೊಡ್ಡ ಮಾನಸಿಕ ಬೆಂಬಲ ಸಿಕ್ಕಂತೆ ಆಗುತ್ತದೆ.
2) ನಿಮ್ಮ ಭಾವನೆ ವ್ಯಕ್ತಪಡಿಸಿ: ಮಕ್ಕಳನ್ನು ದೂಷಿಸದೆ ನಿಮ್ಮ ಭಾವನೆ, ಅನಿಸಿಕೆಗಳನ್ನು ಸೂಕ್ತ ರೀತಿಯಲ್ಲಿ ವ್ಯಕ್ತಪಡಿಸಿ. ಉದಾ: ನಿಮ್ಮ ಮಕ್ಕಳು ಪರೀಕ್ಷೆ ಸಮಯ ಸಮೀಪದಲ್ಲೇ ಇಟ್ಟುಕೊಂಡು ಸದಾ ಟಿವಿ/ ಮೊಬೈಲ್ ನೋಡುತ್ತಿದ್ದರೆ ಅವರನ್ನು ನಿಂದಿಸದೇ ಹೀಗೆ ಹೇಳಿ “ನನಗೆ ಚಿಂತೆ ಮತ್ತು ಆತಂಕವಾಗುತ್ತಿದೆ. ಯಾಕೆಂದರೆ ನಿನ್ನ ಪರೀಕ್ಷೆ ಸಮೀಪಿಸುತ್ತಿದೆ. ಆದರೆ ನೀನು 2 ತಾಸು ಫೋನ್‌ನಲ್ಲಿಯೇ ಕಾಲ ಕಳೆಯುತ್ತಿದ್ದೀ. ನೀನು ಪರೀಕ್ಷೆಗೆ ಚೆನ್ನಾಗಿ ಸಿದ್ಧವಾಗುವುದಿಲ್ಲವೇನೋ ಎಂದು ಆತಂಕವಾಗುತ್ತಿದೆ” ಎಂದು ನಿಮ್ಮ ಭಾವನೆಯನ್ನು ವ್ಯಕ್ತಪಡಿಸಿ.
3) ಪ್ರಗತಿಯ ಮೇಲೆ ಗಮನ ಕೇಂದ್ರೀಕರಿಸಿ, ಪರಿಪೂರ್ಣತೆಯ ಮೇಲೆ ಅಲ್ಲ: ಕಲಿಕೆಯ ವಿಚಾರದಲ್ಲಿ ಮಕ್ಕಳ ಪ್ರಯತ್ನ ಮತ್ತು ಸುಧಾರಣೆಗಳನ್ನು ಗುರುತಿಸಿ. ಯಾಕೆಂದರೆ ಈ ಸುಧಾರಣೆಗಳೇ ನಾಳಿನ ಏಳಿಗೆಯ ಮೆಟ್ಟಿಲಾಗಿರುತ್ತದೆ. ಮಕ್ಕಳಿಗೆ ನಿಮ್ಮ ಪ್ರಶಂಸೆಯಿಂದ ಹುಮ್ಮಸ್ಸು ಸಿಗುತ್ತದೆ. ಮಕ್ಕಳು ಮಾಡುವ ಕೆಲಸ ಕಾರ್ಯಗಳಲ್ಲಿ ಪರಿಪೂರ್ಣತೆ ಹುಡುಕುವ ಬದಲು, ಪರಿಶ್ರಮ ಮತ್ತು ಪ್ರಗತಿಗೆ ಮೆಚ್ಚುಗೆ ನೀಡಿ.
ಉದಾ: ನಿನ್ನ ಪರಿಶ್ರಮದಿಂದ ಇಂದು ನಿನ್ನ ರೂಮ್ ಅಚ್ಚುಕಟ್ಟಾಗಿ ಮತ್ತು ಸ್ವಚ್ಚವಾಗಿ ಕಾಣುತ್ತಿದೆ. ಓದಿನಲ್ಲಿ ನೀನು ಮಾಡುತ್ತಿರುವ ಪರಿಶ್ರಮ ದೊಡ್ಡದು. ಅಂಕಗಳ ಬಗ್ಗೆ ತಲೆ ಕೆಡಸಿಕೊಳ್ಳಬೇಡ (ಈ ಥರ ನೀವೇ ಯೋಚಿಸಿ, ಮಕ್ಕಳಿಗೆ ಮೆಚ್ಚುಗೆ ಸೂಚಿಸಿ)
4) ಹೀಯಾಳಿಕೆಯನ್ನು ಹೊಗಳಿಕೆಗೆ ವರ್ಗಾಯಿಸಿ: ಸದಾ ಮಕ್ಕಳ ಕೊರತೆಗಳನ್ನು ಎತ್ತಿಹಿಡಿದು ನಿಂದಿಸುವುದು ಅಥವಾ ಆಕ್ಷೇಪಣೆ ಮಾಡುವ ಬದಲು ಮಕ್ಕಳ ಸಣ್ಣಪುಟ್ಟ ಕೆಲಸ ಕಾರ್ಯಗಳು, ಪ್ರಯತ್ನ, ಶ್ರಮಗಳನ್ನು ಗುರುತಿಸಿ ಪ್ರಶಂಸೆ ಮಾಡಿ. ಇದರಿಂದ ಮಕ್ಕಳ ಮನಸ್ಸಿಗೆ ಮುದವಾಗಿ ಪೋಷಕರಿಗೆ ನನ್ನ ಬಗ್ಗೆ ಹೆಮ್ಮೆಯಿದೆ ಎಂದು ತಿಳಿದು ನಿಮ್ಮ ಅನಿಸಿಕೆ, ನಿರೀಕ್ಷೆಗಳನ್ನು ಗೌರವಿಸುತ್ತಾರೆ. ನಿಮ್ಮ ಬಯಕೆಯಂತೆ ಓದಿನ ಕಡೆಗೆ ಗಮನ ಕೊಡಲು ಸಿದ್ದರಾಗುತ್ತಾರೆ.
5) ಮಕ್ಕಳ ಆಸಕ್ತಿಗಳಿಗೆ ಸ್ಪಂದಿಸಿ: ಕೇವಲ ಶೈಕ್ಷಣಿಕ ಅಂಕವಲ್ಲದೇ ಮಕ್ಕಳ ಇತರ ಪ್ರತಿಭೆಗಳ ಕಡೆಗೂ ಮೆಚ್ಚುಗೆ ತೋರಿಸಿ. ಇದರಿಂದ ಮಕ್ಕಳಿಗೆ ಪ್ರೋತ್ಸಾಹವೂ ಸಿಗುತ್ತದೆ. ನೀವು ಅವರ ಇತರ ಆಸಕ್ತಿಗಳನ್ನು ಗೌರವಿಸುತ್ತೀತಿ, ಬೆಲೆ ಕೊಡುತ್ತೀರಿ ಎಂದು ಅವರು ಭಾವಿಸಿ ಸಮಾಧಾನಕ್ಕೆ ಬರುತ್ತಾರೆ. ನಂತರ ನಿಮ್ಮ ಮಾತನ್ನು ಓದುವ ವಿಷಯದಲ್ಲಿ ಕೇಳುವ ಸಾಧ್ಯತೆ ಅಧಿಕವಾಗಿರುತ್ತದೆ. ನಿಮ್ಮ ನಡುವೆ ಪರಸ್ಪರರ ಬಾಂಧವ್ಯವೂ ಸುಧಾರಿಸುತ್ತದೆ.
ಉದಾ: ನಿಮ್ಮ ಮಕ್ಕಳಿಗೆ ಇಷ್ಟವಾದ ವಿಡಿಯೊ ಗೇಮ್ಸ್, ಮ್ಯೂಸಿಕ್ ವಿಡಿಯೊಗಳು, ಆಟ , ಚಟುವಟಿಕೆಗಳ ಕುರಿತು ಮಾತನಾಡಿ.
6) ಮಕ್ಕಳು ಭಾವನೆ ಹಂಚಿಕೊಂಡಾಗ ಗೌರವಿಸಿ: ನಿಮ್ಮ ಮಕ್ಕಳು ನಿಮ್ಮ ಬಗ್ಗೆ ಅವರ ಅನಿಸಿಕೆ ಅಥವಾ ಭಾವನೆಗಳನ್ನು ಹಂಚಿಕೊಂಡಾಗ, ಪೋಷಕರು ಮಕ್ಕಳ ಅನಿಸಿಕೆಯನ್ನು ಸಮಂಜಸವಾಗಿ ಅರ್ಥ ಮಾಡಿಕೊಂಡಿದ್ದೇವೆ ಎಂದು ಮನವರಿಕೆ ಮಾಡಿಕೊಡಬೇಕು. ಇದರಿಂದ ಮಕ್ಕಳ ಮನಸ್ಸಿಗೆ ಸಮಾಧಾನವಾಗಿ ನಿಮ್ಮ ಓದುವ ನಿರೀಕ್ಷೆಯನ್ನು ಅವರು ಪೂರ್ಣಗೊಳಿಸಲು ಪ್ರಯತ್ನಿಸುತ್ತಾರೆ. ಓದುವುದಕ್ಕೆ ಅವರಿಗೆ ಉತ್ತೇಜನವೂ ಸಿಗುತ್ತದೆ.
ಉದಾಹರಣೆಗೆ ಈ ಸಾಲುಗಳನ್ನು ಗಮನಿಸಿ, "ನಿನಗೆ ನಾನು ಓದುವ ವಿಚಾರದಲ್ಲಿ ಬಹಳ ಬಲವಂತ ಮಾಡುತ್ತೇನೆ ಎಂದು ಅನ್ನಿಸಬಹುದು. ಜೊತೆಗೆ, ಹೆಚ್ಚು ಅಂಕ ಗಳಿಸಿಲ್ಲವೆಂದು ಹೀಯಾಳಿಸುತ್ತೇನೆ ಅನ್ನಿಸಬಹುದು. ಪರೀಕ್ಷೆಯಲ್ಲಿ ಅಂಕಗಳು ಹೆಚ್ಚು ಬರುವುದೊಂದೆ ನನಗೆ ಮುಖ್ಯ, ಉಳಿದ್ದದ್ದು ಮಹತ್ವವಲ್ಲ ಎನ್ನಿಸುತ್ತಿದೆ. ನನ್ನ ಅಭಿಪ್ರಾಯ ಸರಿಯಿದೆಯೇ“ - ನಿಮ್ಮ ಮಕ್ಕಳ ಎದುರು ಹೀಗೊಂದು ಸಂವಾದ ಆರಂಭಿಸಿ. ಪರಿಸ್ಥಿತಿ ಹೇಗೆ ಬದಲಾಗುತ್ತದೆ ಎನ್ನುವುದು ನಿಮಗೇ ಅರ್ಥವಾಗುತ್ತೆ.
ಮಕ್ಕಳಿಗಷ್ಟೇ ಅಲ್ಲ, ಹೆತ್ತವರಿಗೂ ಪರೀಕ್ಷೆ ಎನ್ನುವುದು ಮುಖ್ಯ. ಆದರೆ ಪರೀಕ್ಷೆಯೇ ಸರ್ವಸ್ವವಲ್ಲ. ಈ ಮಾತು ಸಹ, ಮಕ್ಕಳಿಗಷ್ಟೇ ಅಲ್ಲ; ಹೆತ್ತವರಿಗೂ ಅನ್ವಯಿಸುತ್ತದೆ. ಎಲ್ಲರಿಗೂ ಶುಭವಾಗಲಿ.
ಇದನ್ನೂ ಓದಿ: ಮಗ ಹೇಳಿದ ಮಾತು ಕೇಳಲ್ಲ, ನಿಭಾಯಿಸೋದು ಹೇಗೆ; ಮನದ ಮಾತು
---
ಗಮನಿಸಿ: ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542.
ಭವ್ಯಾ ವಿಶ್ವನಾಥ್: ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.