ಕರ್ನಾಟಕದ ಪ್ರಕೃತಿ ಸೌಂದರ್ಯ ಸವಿಯಲು ದಸರಾ ರಜೆಯೇ ಸೂಕ್ತ ಸಮಯ; ಅಕ್ಟೋಬರ್‌ ತಿಂಗಳಲ್ಲಿ ಭೇಟಿ ನೀಡಬಹುದಾದ ಗಿರಿಧಾಮಗಳಿವು-popular hill stations in karnataka to visit in october month during dasara holidays nature kemmangundi coorg jra ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಕರ್ನಾಟಕದ ಪ್ರಕೃತಿ ಸೌಂದರ್ಯ ಸವಿಯಲು ದಸರಾ ರಜೆಯೇ ಸೂಕ್ತ ಸಮಯ; ಅಕ್ಟೋಬರ್‌ ತಿಂಗಳಲ್ಲಿ ಭೇಟಿ ನೀಡಬಹುದಾದ ಗಿರಿಧಾಮಗಳಿವು

ಕರ್ನಾಟಕದ ಪ್ರಕೃತಿ ಸೌಂದರ್ಯ ಸವಿಯಲು ದಸರಾ ರಜೆಯೇ ಸೂಕ್ತ ಸಮಯ; ಅಕ್ಟೋಬರ್‌ ತಿಂಗಳಲ್ಲಿ ಭೇಟಿ ನೀಡಬಹುದಾದ ಗಿರಿಧಾಮಗಳಿವು

ಕರ್ನಾಟಕದ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಎರಡು ಕಣ್ಣುಗಳು ಸಾಲದು. ರಾಜ್ಯದಲ್ಲಿ ಬೆಟ್ಟ-ಗುಡ್ಡ, ಗಿರಿಧಾಮಗಳು ಹಲವು ಇವೆ. ಬಹುತೇಕ ಎಲ್ಲಾ ಗಿರಿಧಾಮಗಳನ್ನು ನೋಡಲು ಅಕ್ಟೋಬರ್‌ ಸೂಕ್ತ ಸಮಯ. ಸುದೀರ್ಘ ದಸರಾ ರಜೆಗೆ ಈ ಬಾರಿಯ ನಿಮ್ಮ ಟ್ರಿಪ್‌ ಪ್ಲಾನ್‌ ಗಿರಿಧಾಮಗಳತ್ತ ಸಾಗಲಿ.

ಅಕ್ಟೋಬರ್‌ ತಿಂಗಳಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳಿವು
ಅಕ್ಟೋಬರ್‌ ತಿಂಗಳಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳಿವು (karnataka tourism)

ಕರ್ನಾಟಕವು ನೈಸರ್ಗಿಕ ಸಂಪನ್ಮೂಲಗಳ ತವರು. ಕಪ್ಪು ಮಣ್ಣಿನ ನಾಡಿನಲ್ಲಿ ಭಿನ್ನ ವಿಭಿನ್ನ ಪರಿಸರ ವ್ಯವಸ್ಥೆ ಹಾಗೂ ವಾತಾವರಣವಿರುವ ಭೂಭಾಗಗಳಿವೆ. ಗಿರಿಧಾಮಗಳು, ಬೆಟ್ಟಗುಡ್ಡಗಳು, ಸಮುದ್ರ ತೀರ, ನದಿ-ಜಲಪಾತಗಳು, ಮಲೆನಾಡು, ಬಯಲುಸೀಮೆ ಹೀಗೆ ಭೂಪ್ರದೇಶಗಳಲ್ಲಿ ವ್ಯತ್ಯಾಸಗಳಿವೆ. ‘ಒಂದು ರಾಜ್ಯ ಹಲವು ಜಗತ್ತು’ ಎಂಬ ಕರ್ನಾಟಕ ಪ್ರವಾಸೋದ್ಯಮದ ಘೋಷವಾಕ್ಯದಂತೆ, ಕರ್ನಾಟಕ ಸುತ್ತಿದರೆ ವಿಶ್ವವನ್ನೇ ನೋಡಬಹುದು. ಇದೀಗ ಅಕ್ಟೋಬರ್‌ ತಿಂಗಳಲ್ಲಿ ದಸರಾ ರಜೆಯನ್ನು ಸವಿಯುವ ಕಾಲ. ನಿಮ್ಮ ಮಕ್ಕಳೊಂದಿಗೆ ಪರಿಸರ ವೀಕ್ಷಣೆ ಮಾಡುವ ಯೋಚನೆ ನಿಮಗಿದ್ದರೆ, ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳಿಗೆ ಭೇಟಿ ನೀಡುವುದು ಒಳ್ಳೆಯದು.

ಕರ್ನಾಟಕದಲ್ಲಿ ನಿಮ್ಮ ಕಣ್ಣುಗಳಿಗೆ ಮುದ ನೀಡುವ, ಪಚ್ಚೆಸೀರೆಯುಟ್ಟ ಪ್ರಕೃತಿಮಾತೆಯ ನೈಸರ್ಗಿಕ ಸೌಂದರ್ಯ ಸವಿಯಬಹುದಾದ ಹಲವು ಗಿರಿಧಾಮಗಳಿವೆ. ಈ ಕುರಿತ ವಿವರ ಇಲ್ಲಿದೆ.

ಮುಳ್ಳಯ್ಯನಗಿರಿ

ಕರ್ನಾಟಕದ ಕಾಫಿ ನಾಡು ಚಿಕ್ಕಮಗಳೂರು ಪರಿಸರ ಸೌಂದರ್ಯಕ್ಕೆ ಹೆಸರುವಾಸಿ. ಹಲವು ಗರಿಧಾಮಗಳು ಇಲ್ಲಿವೆ. ಪ್ರಕೃತಿಯೊಂದಿಗೆ ಬೆಸೆದುಕೊಂಡಿರುವ ಜಿಲ್ಲೆಯಲ್ಲಿರುವ ಮುಳ್ಳಯ್ಯನಗಿರಿಗೆ ಅಕ್ಟೋಬರ್‌ ತಿಂಗಳ ರಜೆಯಲ್ಲಿ ಭೇಟಿ ನೀಡಬಹುದು. ಕರ್ನಾಟಕದಲ್ಲಿ ಅತ್ಯುನ್ನತ ಶಿಖರವಾಗಿರುವ ಮುಳ್ಳಯ್ಯನಗಿರಿಗೆ ಟ್ರೆಕ್ಕಿಂಗ್‌ ಮಾಡಬಹುದು. ಪ್ರಕೃತಿಯ ಸೌಂದರ್ಯಕ್ಕೆ ನಿಮ್ಮ ಕಣ್ಣುಗಳನ್ನು ನೀವೇ ನಂಬದಂತಾಗುತ್ತದೆ. ಚಿಕ್ಕಮಗಳೂರಿಗೆ ವರ್ಷದ ಯಾವ ಕಾಲದಲ್ಲೂ ಹೋಗಬಹುದು. ಮುಳ್ಳಯನಗಿರಿ ಶಿಖರಕ್ಕೆ ಭೇಟಿ ನೀಡಲು ಮತ್ತು ಟ್ರೆಕ್ಕಿಂಗ್‌ ಮಾಡಲಯ ಸೆಪ್ಟೆಂಬರ್‌ನಿಂದ ಮೇ ಅತ್ಯುತ್ತಮ ಸಮಯ. ಹೀಗಾಗಿ ದಸರಾ ರಜೆಗೆ ಈ ಸ್ಥಳ ಸೂಕ್ತ.

ಕೆಮ್ಮಣ್ಣುಗುಂಡಿ

ಚಿಕ್ಕಮಗಳೂರಿನ ಮತ್ತೊಂದು ಜನಪ್ರಿಯ ಗಿರಿಧಾಮ ಕೆಮ್ಮನಗುಂಡಿ ಬೆಟ್ಟಗಳು ಪ್ರಕೃತಿ ಪ್ರಿಯರ ನೆಚ್ಚಿನ ತಾಣ. ಚಿಕ್ಕಮಗಳೂರಿನ ಪ್ರಮುಖ ಪ್ರವಾಸಿ ಸ್ಥಳವಿದು. ಬೇಸಿಗೆಯಲ್ಲಿ ಈ ಸ್ಥಳಕ್ಕೆ ಹೋಗುವುದು ಇನ್ನೂ ಉತ್ತಮ. ಹೀಗಾಗಿ ಸೆಪ್ಟೆಂಬರ್‌ನಿಂದ ಮಾರ್ಚ್‌ವರೆಗೆ ಕೆಮ್ಮಣ್ಣುಗುಂಡಿ ಹೋಗಲು ಸೂಕ್ತ ಸಮಯ. ಇಲ್ಲಿಗೆ ಯಾವುದೇ ಎಂಟ್ರಿ ಫೀಸ್‌ ಇಲ್ಲ. ಮಕ್ಕಳ ಜೊತೆಗೂ ಹೋಗಬಹುದು. ಪ್ರತಿದಿನ ಬೆಳಗ್ಗೆ 6 ಗಂಟೆಯಿಂದ ಸಂಜೆ 6ರವರೆಗೆ ಪ್ರವೇಶವಿದೆ.

ನಂದಿಬೆಟ್ಟ

ರಾಜಧಾನಿ ಬೆಂಗಳೂರಿನ ಆಸುಪಾಸಿನಲ್ಲಿ ಇರುವವರು ನಂದಿ ಬೆಟ್ಟಕ್ಕೆ ಹೋಗಿ ಪ್ರಕೃತಿಯನ್ನು ಸವಿಯಬಹುದು. ನಂದಿ ಬೆಟ್ಟದ ತಪ್ಪಲಿಗೆ ಕಾರಿನಲ್ಲೇ ಹೋಗಿ, ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ವೀಕ್ಷಿಸಬಹುದು. ಬೆಟ್ಟದ ತುದಿಗೆ ಸುಲಭ ಚಾರಣ ಮಾಡಿ ಪರಿಸರದ ಸೌಂದರ್ಯವನ್ನು ಆಸ್ವಾದಿಸಬಹುದು. ಅಕ್ಟೋಬರ್‌ ತಿಂಗಳು ನಂದಿ ಬೆಟ್ಟ ವೀಕ್ಷಿಸಲು ಸೂಕ್ತ ಸಮಯ.

ಬಿಳಿಗಿರಿರಂಗನ ಬೆಟ್ಟ

ಪೂರ್ವ ಘಟ್ಟಗಳನ್ನು ಪಶ್ಚಿಮ ಘಟ್ಟಗಳಿಗೆ ಸಂಪರ್ಕಿಸುವ ವನ್ಯಜೀವಿಗಳ ಮಾರ್ಗ ಎಂದು ಕರೆಯಲ್ಪಡುವ ಬಿಳಿಗಿರಿರಂಗನಬೆಟ್ಟವು, ಚಾಮರಾಜನಗರ ಜಿಲ್ಲೆಯಲ್ಲಿದೆ. ಬಿಆರ್ ಹಿಲ್ಸ್ ಎಂದು ಜನಪ್ರಿಯವಾಗಿರುವ ಬೆಟ್ಟ ಪರಿಸರ ಹಾಗೂ ಪ್ರಾಣಿಪ್ರಿಯರ ಮೆಚ್ಚಿನ ತಾಣ. ಬಿಳಿಗಿರಿ ರಂಗಸ್ವಾಮಿ ದೇವಾಲಯ ಹಾಗೂ ವನ್ಯಜೀವಿ ಅಭಯಾರಣ್ಯಕ್ಕೆ ಈ ಪ್ರದೇಶ ಹೆಸರುವಾಸಿ. ಮೈಸೂರಿನಿಂದ 85 ಕಿಮೀ ಮತ್ತು ಚಾಮರಾಜನಗರದಿಂದ 40 ಕಿಮೀ ದೂರವಿದೆ. ಇದನ್ನು ವನ್ಯಜೀವಿ ಕಾರಿಡಾರ್ ಎಂದು ಪರಿಗಣಿಸಲಾಗಿದೆ. ಕಾವೇರಿ ಮತ್ತು ಕಪಿಲಾ ನದಿಗಳು ಈ ಬೆಟ್ಟಗಳ ಮೂಲಕ ಹರಿಯುತ್ತವೆ.

ಆಗುಂಬೆ

ಕರ್ನಾಟಕದಲ್ಲಿ ಅತಿಹೆಚ್ಚು ಮಳೆಬೀಳುವ ಪ್ರದೇಶಗಳಲ್ಲಿ ಒಂದಾಗಿರುವ ಆಗುಂಬೆ, ಬಯಲು ಪ್ರದೇಶವನ್ನು ಕರಾವಳಿಯೊಂದಿಗೆ ಸಂಪರ್ಕಿಸುವ ಪರ್ವತ ಹಾದಿ. ಇಲ್ಲಿನ ಕಡಿದಾದ ರಸ್ತೆಯಲ್ಲಿ ಪ್ರಯಾಣಿಸುವುದೇ ರೋಚಕ ಅನುಭವ. ಆಗುಂಬೆಯ ರಮಣೀಯ ಸೌಂದರ್ಯವನ್ನು ಮಳೆಗಾಲದಲ್ಲೂ ಕಣ್ತುಂಬಿಕೊಳ್ಳಬಹುದು. ದಟ್ಟ ಹಸಿರು ಕಾಡುಗಳು, ಅಲ್ಲಲ್ಲಿ ಹರಿಯುವ ಸಣ್ಣ ಸಣ್ಣ ತೊರೆಗಳು ಕಾಣಿಸುತ್ತದೆ. ಹೆಚ್ಚು ಮಳೆ ಬೀಳುವ ಪ್ರದೇಶವಾಗಿರುವುದರಿಂದ ದಕ್ಷಿಣ ಭಾರತದ ಚಿರಾಪುಂಜಿ ಎಂದು ಕರೆಯಲಾಗುತ್ತದೆ. ಅಕ್ಟೋಬರ್‌ ತಿಂಗಳಲ್ಲಿ ಪ್ರವಾಸಕ್ಕೆ ಇದು ಸೂಕ್ತ ಸ್ಥಳ.

ಕೂರ್ಗ್‌/ಕೊಡಗು

ಭಾರತದ ಸ್ಕಾಟ್‌ಲ್ಯಾಂಡ್ ಎಂದೇ ಜನಪ್ರಿಯವಾಗಿರುವ ಕೂರ್ಗ್‌ ದಕ್ಷಿಣ ಭಾರತದ ಪ್ರಮುಖ ಗಿರಿಧಾಮಗಳಲ್ಲಿ ಒಂದು. ಕೊಡಗು ಜಿಲ್ಲೆಯು ಬೆಂಗಳೂರು ನಗರದಿಂದ ಸುಮಾರು 265 ಕಿಮೀ ದೂರದಲ್ಲಿದೆ. ಭಾರತದಲ್ಲೇ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಬೆಳೆಯುವ ಜಿಲ್ಲೆಯು ಪ್ರವಾಸಿಗರ ಸ್ವರ್ಗ. ಇಲ್ಲಿ ಹಲವು ಗಿರಿಧಾಮಗಳಿವೆ. ಪ್ರಸಿದ್ಧ ಕಾವೇರಿ ನದಿಯು ತಲಕಾವೇರಿಯ ಕೂರ್ಗ್ ಬೆಟ್ಟಗಳಲ್ಲಿ ಹುಟ್ಟುತ್ತದೆ. ಬೆಟ್ಟಗುಡ್ಡಗಳ ಹೊರತಾಗಿ ಮಡಿಕೇರಿ ನಗರದಲ್ಲಿ ರಾಜಾ ಸೀಟ್, ಅಬ್ಬೆ ಫಾಲ್ಸ್, ಓಂಕಾರೇಶ್ವರ ದೇವಸ್ಥಾನ, ಬೈಲಕುಪ್ಪೆ, ತಲಕಾವೇರಿ ಮತ್ತು ದುಬಾರೆ ರಕ್ಷಿತಾರಣ್ಯ ದೇರಿದಂತೆ ಹಲವು ಸ್ಥಳಗಳಿವೆ.

mysore-dasara_Entry_Point