ನಾಗರಿಕ ಸಮಾಜದಿಂದ ದೂರ ಸರಿದ ಕಂಬಳಿ; ಸಾಂಸ್ಕೃತಿಕ ಆಚರಣೆಗಳಲ್ಲಿ ಇಂದಿಗೂ ಜೀವಂತ: ರಹಮತ್ ತರಿಕೆರೆ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ನಾಗರಿಕ ಸಮಾಜದಿಂದ ದೂರ ಸರಿದ ಕಂಬಳಿ; ಸಾಂಸ್ಕೃತಿಕ ಆಚರಣೆಗಳಲ್ಲಿ ಇಂದಿಗೂ ಜೀವಂತ: ರಹಮತ್ ತರಿಕೆರೆ ಬರಹ

ನಾಗರಿಕ ಸಮಾಜದಿಂದ ದೂರ ಸರಿದ ಕಂಬಳಿ; ಸಾಂಸ್ಕೃತಿಕ ಆಚರಣೆಗಳಲ್ಲಿ ಇಂದಿಗೂ ಜೀವಂತ: ರಹಮತ್ ತರಿಕೆರೆ ಬರಹ

ಜಗತ್ತಿನ ಎಲ್ಲ ಪಶುಪಾಲಕ ಸಮಾಜಗಳಲ್ಲೂ ಕಂಬಳಿ ನೇಕಾರಿಕೆ ಸಹಕಸುಬಾಗಿದೆ ಮತ್ತು ಕಂಬಳಿ ಸಾಂಸ್ಕೃತಿಕ ಆಚರಣೆಗಳಲ್ಲಿ ಸೇರಿಹೋಗಿದೆ. ನಾಜೂಕಾದ ರಗ್ಗುಗಳು, ಸೊಲ್ಲಾಪುರದ ಬೆಡ್‌ಶೀಟುಗಳೂ ಬಂದ ಬಳಿಕ ಕಂಬಳಿ ಬಳಕೆ ಕಡಿಮೆಯಾಗಿ, ನಾಗರಿಕ ಸಮಾಜದಿಂದ ದೂರ ಸರಿದಿವೆ ಎಂದು ಲೇಖಕ ರಹಮತ್‌ ತರೀಕೆರೆ ಹೇಳಿದ್ದಾರೆ.

ಕನಕರ ಹೆಗಲ ಕಂಬಳಿ: ರಹಮತ್ ತರಿಕೆರೆ ಬರಹ (ಫೋಟೋ: ಲೇಖಕರದ್ದು)
ಕನಕರ ಹೆಗಲ ಕಂಬಳಿ: ರಹಮತ್ ತರಿಕೆರೆ ಬರಹ (ಫೋಟೋ: ಲೇಖಕರದ್ದು)

ಚಳಿಗಾಲ ಬಂದಾಗ ಬ್ಲಾಂಕೆಟ್‌ಗೆ ಬೇಡಿಕೆ ಜಾಸ್ತಿ. ಚಳಿಗೆ ದಪ್ಪದ ಬೆಡ್‌ಶೀಟ್‌ ಹೊದ್ದು ಮಲಗಿದರೆ ನೆಮ್ಮದಿಯ ನಿದ್ದೆ. ಅನಾದಿಕಾಲದಿಂದಲೂ ಬ್ಲಾಂಕೆಟ್‌ಗಳು ರೂಪಾಂತರಗೊಂಡ ಬಗೆ ರೋಚಕ. ಹಿಂದೆಲ್ಲಾ ಕಂಬಳಿಗೆ ಭಾರಿ ಬೇಡಿಕೆ ಇತ್ತು. ಕ್ರಮೇಣ ರಗ್ಗುಗಳು, ಬೆಡ್‌ಶೀಟ್‌ಗಳು ಮಾರುಕಟ್ಟೆ ಆಕ್ರಮಿಸಿಕೊಂಡಂತೆಲ್ಲಾ ಕಂಬಳಿಗಳು ನೇಪಥ್ಯಕ್ಕೆ ಸರಿದವು. ಆದರೆ, ಈಗಲೂ ಹಲವು ಭಾಗಗಳಲ್ಲಿ ಕಂಬಳಿಗಳು ಸಾಂಸ್ಕೃತಿಕ ಆಚರಣೆಗಳ ಭಾಗವಾಗಿದೆ. ಕೆಲವು ಕಡೆ ಪಶುಪಾಲಕ ಸಮಾಜಗಳಲ್ಲೂ ಕಂಬಳಿ ನೇಕಾರಿಕೆ ಈಗಲೂ ಕಸುಬಾಗಿದೆ. ಕಂಬಳಿಯ ಬಳಕೆ ಕುರಿತಾಗಿ ಲೇಖಕ ರಹಮತ್‌ ತರೀಕೆರೆ ಬರೆದ ಲೇಖನ ಇಲ್ಲಿದೆ. ಫೇಸ್‌ಬುಕ್‌ನಲ್ಲಿ ಲೇಖಕರು ಪ್ರಕಟಿಸಿದ ಬರಹ ಇದಾಗಿದ್ದು, ಮುಂದಿರುವ ಬರಹ ಲೇಖಕರದ್ದು.

ಬಾಲ್ಯದಲ್ಲಿ ನಮ್ಮನೆಯಲ್ಲಿ ಕಂಬಳಿಗಳಿದ್ದವು. ಬೇಸಿಗೆಯಲ್ಲಿ ದೂರೀಕರಣಕ್ಕೆ ಒಳಗಾಗುತಿದ್ದ ಅವಕ್ಕೆ, ಚಳಿಗಾಲದಲ್ಲಿ ಭಯಂಕರ ಡಿಮ್ಯಾಂಡು. ನಮ್ಮನ್ನು ತಾಯ ಹೊಟ್ಟೆಯಲ್ಲಿದ್ದಂತೆ ಬೆಚ್ಚಗೆ ಇಡುತ್ತಿದ್ದವು ಅವು. ಕಂಬಳಿಗಳು ನಮ್ಮೂರಿಗೆ ರಾಯದುರ್ಗ ಮೊಳಕಾಲ್ಮೂರುಗಳಿಂದ ಬರುತ್ತಿದ್ದವು. ನುಣುಪಾದ ನಾಜೂಕಾದ ರಗ್ಗುಗಳೂ, ಸೊಲ್ಲಾಪುರದ ಬೆಡ್‌ಶೀಟುಗಳೂ ಬಂದ ಬಳಿಕ ಅವುಗಳ ಬಳಕೆ ಕಡಿಮೆಯಾಯಿತು. ಅವು ನಾಗರಿಕ ಸಮಾಜದಿಂದ ದೂರ ಸರಿದವು.

ಕರ್ನಾಟಕ ಅಧ್ಯಯನಗಳನ್ನು ಶುರುಮಾಡಿದ ಬಳಿಕ, ಕಂಬಳಿ ಹೊದಿಕೆಯಾಗಿ, ಮಳೆಗಾಲದಲ್ಲಿ ಕೊಪ್ಪೆಯಾಗಿ ಮಾತ್ರವಲ್ಲ. ನಾನಾ ಆಚರಣೆಗಳಲ್ಲಿ ಹಾಸುಹೊಕ್ಕಾಗಿರುವುದು ತಿಳಿಯಿತು. ಮದುಮಕ್ಕಳಿಗೆ ದೇವರಿಗೆ ಕುಲದ ಗುರಿಕಾರರಿಗೆ ಕಂಬಳಿಗದ್ದಿಗೆಯ ಮೇಲೆ ಕೂರಿಸುವರು. ರಾಜಸ್ಥಾನದಲ್ಲಿ ಉಣ್ಣೆನೂಲಿನ ಪಟಗ ಸುತ್ತಿ ನಾಥದೀಕ್ಷೆ ಕೊಡುವುದುಂಟು. ಕರ್ನಾಟಕದ ಕುರುಬರಲ್ಲಿ ಉಣ್ಣೆಕಂಕಣದ ಪಣದವರಿದ್ದಾರೆ. ಕಂಬಳಿ ಹೊದೆಸಿ‌ ಗೌರವಿಸುವ ಸಂಪ್ರದಾಯವೂ ಇದೆ. ಕನಕದಾಸರೂ ಕಂಬಳಿ ಹೊದ್ದರು. 'ಎದ್ದೇನೊ ದಾಸಪ್ಪ ಅಂದರೆ ಹೆಗಲ ಮ್ಯಾಲೆ‌ಕಂಬಳಿ' ಗಾದೆಯು ಕಂಬಳಿ ತಿರುಗಾಡಿ ಸಂತರ ಸಂಗಾತಿಯಾಗಿ ಪಾತ್ರವಹಿಸಿದ್ದರ‌ ಸಂಕೇತವಾಗಿದೆ.

ಜಗತ್ತಿನ ಎಲ್ಲ ಪಶುಪಾಲಕ ಸಮಾಜಗಳಲ್ಲೂ ಕಂಬಳಿ ನೇಕಾರಿಕೆ ಸಹಕಸುಬಾಗಿದೆ ಮತ್ತು ಕಂಬಳಿ ಸಾಂಸ್ಕೃತಿಕ ಆಚರಣೆಗಳಲ್ಲಿ ಸೇರಿಹೋಗಿದೆ. ಪ್ಯಾಲೆಸ್ತೇನಿಗೆ ಹೋದಾಗ, ನಜರೆತ್ ನಗರದಲ್ಲಿ ಏಸು ಹುಟ್ಟಿದ ಕುರಿರೊಪ್ಪವಿದ್ದ ಜಾಗದಲ್ಲಿ ಕಂಬಳಿ ನೇಕಾರಿಕೆಯನ್ನು ಸಾಂಕೇತಿಕವಾಗಿ ಉಳಿಸಿಕೊಂಡಿರುವುದನ್ನು ಕಂಡೆವು. ಮಹಮದ್ ಪೈಗಂಬರ್ ಕೂಡ ಬಾಲ್ಯದಲ್ಲಿ ಕುರಿಗಾಹಿ ಆಗಿದ್ದವರು. ಅವರನ್ನು ಖವಾಲಿ ಹಾಡುಗಳಲ್ಲಿ ಕಾಲಿ ಕಂಬಲಿವಾಲೆ ಎಂದು ಬಣ್ಣಿಸುವರು.

ಲೇಖಕರ ಬರಹ ಇಲ್ಲಿದೆ

ಕರಿಕಂಬಳಿಯಿಂದ ಗುಡಾರ

ಅರೇಬಿಯಾದ ಮರುಭೂಮಿಯಲ್ಲಿ ತಿರುಗುವಾಗ, ಒಂಟೆ‌-ಕುರಿ ಸಾಕುವ ಅಲೆಮಾರಿ ಪಶುಪಾಲರು(ಬೆದೊಯಿನರು) ತಮ್ಮ ಗುಡಾರಗಳನ್ನು ಕರಿಕಂಬಳಿಯಿಂದ ನಿರ್ಮಿಸಿದ್ದನ್ನು ಕಂಡೆವು. ತಮ್ಮ ರೋಮದಿಂದ ಏನೆಲ್ಲ ಸರಕು ಉತ್ಪತ್ತಿಯಾಗಿ ಎಲ್ಲೆಲ್ಲಿಗೆ ಪಯಣಿಸುತ್ತವೆ ಎಂಬ ಖಬರಿಲ್ಲದೆ, ಕುರಿಗಳು ಹುಲ್ಲು ಮೇಯುತ್ತಿದ್ದವು. ಅಂಗೈದಪ್ಪದ ಗುಡಾರದ ಕಂಬಳಿ ಹಲವಾರು ಮೀಟರ್ ಉದ್ದವಿತ್ತು. ಇದುವೇ ಮುಂದೆ ಉಣ್ಣೆ ರೇಷ್ಮೆ ಹತ್ತಿಯನ್ನು ಬೆರೆಸಿ ಪರ್ಶಿಯನ್ ರತ್ನಗಂಬಳಿ ತಯಾರಿಕೆಗೆ ಬುನಾದಿ ಹಾಕಿರಬೇಕು. ಈ ರತ್ನಗಂಬಳಿಗಳು ಸಿಲ್ಕರೂಟಿನಲ್ಲಿ‌ ಸಾಗಿ ಯೂರೋಪು ಚೀನಾ ಮತ್ತು ಭಾರತದ ಅರಮನೆಗಳ‌ ನೆಲಹಾಸುಗಳಾದವು. ಕರಿಯ ಕಂಬಳಿ ಮಾತ್ರ ಕುರಿಗಾಹಿಗಳ ಗುಡಾರದಲ್ಲೇ ಉಳಿಯಿತು. ಪಿತೃಹತ್ಯೆಯ ಗುಣ ಆಧುನಿಕ ತಂತ್ರಜ್ಞಾನದಲ್ಲಿ ಮಾತ್ರವಲ್ಲ, ಪಾರಂಪರಿಕ ಕಸುಬುಗಳಲ್ಲೂ ಇದೆ.

Whats_app_banner