ಮುರಿದು ಬೀಳುವ ಸಂಬಂಧಕ್ಕೆ ತೇಪೆ ಹಚ್ಚಿ, ಸಂಸಾರದ ನೌಕೆ ಸುಗಮವಾಗಿ ಸಾಗಿಸಿಕೊಂಡು ಹೋಗಲು ಸಂಗಾತಿಗಳಿಗೆ ಇಲ್ಲಿವೆ ಬೆಸ್ಟ್ ಟಿಪ್ಸ್
ಸಂಬಂಧ ಎಂದ ಮೇಲೆ ಜಗಳ ಸಹಜ. ಎಷ್ಟೋ ಬಾರಿ ಅನ್ಯೋನ್ಯವಾಗಿದ್ದ ದಂಪತಿಗಳ ನಡುವೆಯೂ ಕಾರಣವಿಲ್ಲದೇ ವಿರಸ ಮೂಡಬಹುದು. ಜಗಳ ತಾರಕಕ್ಕೇರಿದರೆ ನೀವು ಒಂಟಿ ಎನ್ನಿಸಬಹುದು. ಇದರಿಂದ ರಿಲೇಷನ್ ಡಿಪ್ರೆಷನ್ ಎದುರಾಗಬಹುದು. ಹಾಗಾದ್ರೆ ಸಂಬಂಧದಲ್ಲಿನ ತಪ್ಪುಗಳನ್ನು ಸರಿದೂಗಿಸಿಕೊಂಡು, ಸಂತೋಷದಿಂದ ಬದುಕಲು ಏನು ಮಾಡಬೇಕು? ಸಂಗಾತಿಗಳಿಗೆ ಇಲ್ಲಿದೆ ಮಹತ್ವದ ಟಿಪ್ಸ್.
ಸಂಬಂಧ ಎಂದರೆ ಎರಡು ಜೋಡಿ ಜೀವಗಳ ಅನುಬಂಧ. ಎರಡು ಜೀವಗಳ ಬಂಧವನ್ನು ಸಂಬಂಧ ಬೆಸೆಯುತ್ತದೆ. ಒಮ್ಮೊಮೆ ಸಂಗಾತಿಗಳಿಬ್ಬರ ನಡುವೆ ಅದೆಷ್ಟೇ ಅನ್ಯೋನ್ಯತೆ ಇದ್ದರೂ ವಿರಸ ಮೂಡುವುದು ಸಹಜ. ಆದರೆ ಈ ಕೋಪ, ತಾಪ ನಿರಂತರವಾಗಿ ಅಂತ್ಯವಿಲ್ಲದೇ ಸಾಗಿದಾಗ ಸಂಬಂಧಕ್ಕೆ ಅಂತ್ಯ ಹಾಡಬೇಕು ಎಂಬ ಭಾವ ಮನಸ್ಸಿನಲ್ಲೇ ಮೂಡುತ್ತದೆ. ಸಂಬಂಧದ ಬಿರುಕು ಕೆಲವೊಮ್ಮೆ ಖಿನ್ನತೆಗೂ ಕಾರಣವಾಗಬಹುದು. ಇದನ್ನ ಆಂಗ್ಲ ಭಾಷೆಯಲ್ಲಿ ʼರಿಲೇಷನ್‌ಶಿಪ್ ಡಿಪ್ರೆಷನ್ʼ ಎನ್ನುತ್ತಾರೆ. ಇದರಿಂದ ಸಂಗಾತಿಯಲ್ಲಿ ಒಂಟಿತನದ ಭಾವ ಕಾಡಬಹುದು.
ಸಂಬಂಧದಲ್ಲಿ ಒಬ್ಬರಿಗೊಬ್ಬರು ಗಮನ ಹರಿಸದೇ ಇದ್ದಾಗ, ಎಲ್ಲಾ ಸಮಯದಲ್ಲೂ ಕಿರಿಕಿರಿ, ಒಂಟಿತನ ಅನುಭವಿಸಿದಾಗ, ಸಂಬಂಧದಲ್ಲಿದ್ದೂ ಸಂಗಾತಿಯಿಂದ ಪ್ರೀತಿ ಸಿಗದೇ ಇದ್ದಾಗ ರಿಲೇಷನ್ ಡಿಪ್ರೆಷನ್ ಕಾಡಬಹುದು. ಇದರಿಂದ ಸಂಬಂಧವೇ ಬೇಡ ಎನ್ನಿಸುವ ಸ್ಥಿತಿ ಕೂಡ ಉದ್ಭವಿಸಬಹುದು. ಇಂತಹ ಖಿನ್ನತೆಯಿಂದ ಹೊರ ಬರುವುದು ಅಸಾಧ್ಯವೆಂದು ತೋರಿದರೂ ಕೂಡ ಇದನ್ನು ಸರಿಪಡಿಸಿ ಸಂಬಂಧವನ್ನು ಗಟ್ಟಿಗೊಳಿಸಿಕೊಂಡು ಹೋಗಲು ಕೆಲವು ಉಪಾಯಗಳಿವೆ.
ಮೆಡಿಕಲ್ ನ್ಯೂಸ್‌ಟುಡೆಯಲ್ಲಿ ಪ್ರಕಟವಾದ ವರದಿಯ ಪ್ರಕಾರ ಸಂಬಂಧದಲ್ಲಿನ ಖಿನ್ನತೆಯನ್ನು ತಪ್ಪಿಸಲು ವ್ಯಕ್ತಿಗಳು ಅನುಸರಿಸಬೇಕಾದ ಕೆಲವು ವಿಧಾನಗಳು ಇಲ್ಲಿವೆ.
ಮುಕ್ತವಾಗಿರಿ ಅಥವಾ ಅರ್ಥ ಮಾಡಿಕೊಳ್ಳಿ: ನೀವು ರಿಲೇಷನ್ ಡಿಪ್ರೆಷನ್‌ನಲ್ಲಿದ್ದರೆ ಅಥವಾ ನಿಮ್ಮ ಸಂಗಾತಿ ಇಂತಹ ಸಮಸ್ಯೆ ಎದುರಿಸುತ್ತಿದ್ದರೆ, ಮೊದಲು ಮಾಡಬೇಕಾಗಿರುವುದು ನೀವು ಪ್ರಾಮಾಣಿಕವಾಗಿರುವುದು. ಸಂಗಾತಿಯೊಂದಿಗೆ ನೀವು ಹೇಗೆ ಇರುತ್ತೀರಿ ಎಂಬುದರ ಬಗ್ಗೆ ಮುಕ್ತವಾಗಿರಬೇಕು. ಹಾಗೂ ಅವರಿಗೂ ಅದೇ ರೀತಿ ಇರುವಂತೆ ಪ್ರೋತ್ಸಾಹಿಸಬೇಕು. ಇದು ತಪ್ಪು ತಿಳಿವಳಿಕೆಯನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಇದು ಸಂಗಾತಿಗೆ ಇರುವ ಸಮಸ್ಯೆಯನ್ನು ತಿಳಿದುಕೊಂಡು ಪರಿಹರಿಸಲು ಸಹಾಯ ಮಾಡುತ್ತದೆ.
ಬೆಂಬಲ ನೀಡಿ: ಯಾವುದೇ ಸಂಬಂಧವಾಗಲಿ ಸಂಗಾತಿಯ ಸಮಯ ಕೆಟ್ಟಾಗ ನೀವು ಬೆಂಬಲ ನೀಡಬೇಕು. ಪರಸ್ಪರ ಬೆಂಬಲ ನೀಡುವುದು ಸಂಬಂಧದಲ್ಲಿ ಬಹಳ ಮುಖ್ಯ. ನೀವು ಕೆಲವು ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗದಿರಬಹುದು ಅಥವಾ ಕೆಲಸಗಳನ್ನು ಮಾಡಲು ಆಸಕ್ತಿಯಿಲ್ಲದಿರಬಹುದು. ಅಂತಹ ಸಮಯದಲ್ಲಿ, ನಿಮ್ಮ ಸಂಗಾತಿ ಅವುಗಳನ್ನು ಮಾಡುವ ಮೂಲಕ ಸಹಾಯ ಮಾಡಬಹುದು. ಇದಲ್ಲದೆ, ಒಂಟಿತನವನ್ನು ಜಯಿಸಲು ಮತ್ತು ಒಳಗಿನಿಂದ ಸಂತೋಷವನ್ನು ಅನುಭವಿಸಲು ಸಾಧ್ಯವಾದಷ್ಟು ಗುಣಮಟ್ಟದ ಸಮಯವನ್ನು ಒಟ್ಟಿಗೆ ಕಳೆಯಿರಿ. ಜೊತೆಯಾಗಿ ಸಮಯ ಕಳೆಯುವುದು ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ನೀಡುತ್ತದೆ.
ಆಲಿಸಿ: ಯಾವುದೇ ಸಂಬಂಧದಲ್ಲಿ ಅತಿ ಮುಖ್ಯ ಎಂದರೆ ಸಂವಹನ. ಪರಸ್ಪರದ ಅಗತ್ಯಗಳನ್ನು ಆಲಿಸುವ ಹಾಗೂ ಪ್ರತಿಕ್ರಿಯುಸುವ ಮೂಲಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಿ. ಈ ವಿಚಾರದಲ್ಲಿ ಅಹಂ ತೋರದೇ ಇಬ್ಬರೂ ಮುಂದುವರಿಯಲು ಪ್ರಯತ್ನಿಸಿ.
ದಂಪತಿಗಳ ಸಮಾಲೋಚನೆಯಲ್ಲಿ ತೊಡಗಿಸಿಕೊಳ್ಳಿ: ಸಮಸ್ಯೆ ಇನ್ನೂ ಪರಿಹಾರವಾಗದಿದ್ದರೆಮ ತಜ್ಞರಿಂದ ಸಹಾಯ ಪಡೆಯಿರಿ. ಇಬ್ಬರೂ ಸೇರಿ ರಿಲೇಷನ್‌ಶಿಪ್ ತಜ್ಞರಿಂದ ಸಲಹೆ ಪಡೆಯಿರಿ. ನಿಮ್ಮ ನಡುವೆ ಇರುವುದು ಯಾವ ರೀತಿಯ ಸಮಸ್ಯೆ ಎಂಬುದು ತಜ್ಞರಿಗೆ ತಿಳಿಯಲು ನೀವಿಬ್ಬರೂ ಆಪ್ತಸಮಾಲೋಕರು ಅಥವಾ ತಜ್ಞರನ್ನು ಭೇಟಿಯಾಗುವುದು ಉತ್ತಮ. ಇದರಿಂದ ಅವರು ನಿಮ್ಮ ಸಮಸ್ಯೆಗೆ ಪರಿಹಾರ ಹೇಳುವುದು ಮಾತ್ರವಲ್ಲ, ಸಂಬಂಧ ಗಟ್ಟಿಯಾಗಿಸುವ ಸಲಹೆಯನ್ನೂ ನೀಡುತ್ತಾರೆ.
ವಿಭಾಗ