ಮಕ್ಕಳು ಬೇಕಾ ಬೇಡ್ವಾ ಡಿಸೈಡ್ ಮಾಡೋದು ಹೇಗೆ? ಈ ಪ್ರಶ್ನೆಗಳಿಗೆ ನಿಮ್ಮ ಉತ್ತರ ಏನಿರಬಹುದು? -ಮಕ್ಕಳು ಬೇಕು ಅನ್ನೋರು ಓದಬೇಕಾದ ವಿವರ ಇದು
ಮಕ್ಕಳೇಕೆ ಬೇಕು, ಇಂದಿನ ಮಿಲೇನಿಯಲ್ ಮಂದಿ ಕೇಳುವ ಸಾಮಾನ್ಯ ಪ್ರಶ್ನೆಯಿದು. ಇಂದಿನ ತಲೆಮಾರಿನವರು ಮಕ್ಕಳು ಬೇಕು ಹಾಗೂ ಬೇಡ ಎನ್ನುವ ವಿಚಾರದಲ್ಲಿ ಸಾಕಷ್ಟು ಜಿಜ್ಞಾಸೆ ಹೊಂದಿದ್ದಾರೆ. ಹಾಗಾದರೆ ಮಕ್ಕಳು ಏಕೆ ಬೇಕು? ಎನ್ನುವ ಪ್ರಶ್ನೆ ನಿಮ್ಮದಾದರೆ ಅದಕ್ಕೆ ಉತ್ತರ ಇಲ್ಲಿದೆ.
ʼಮಕ್ಕಳಿರಲವ್ವ ಮನೆ ತುಂಬಾʼ ಎಂಬ ಗಾದೆ ಮಾತೊಂದಿದೆ. ಮನೆಯಲ್ಲಿ ಮಕ್ಕಳಿದ್ದರೆ ಅದೇನೋ ಆನಂದ. ಮನದಲ್ಲಿ ಅದೆಷ್ಟೇ ದುಗುಡ, ನೋವು ಇದ್ದರೂ ಮಕ್ಕಳ ಜೊತೆ ಸಮಯ ಕಳೆದಾಗ ಅದೆಲ್ಲವೂ ಮಾಯವಾಗಿ ಬಿಡುತ್ತದೆ. ಹಿಂದಿನ ಕಾಲದಲ್ಲಿ ಹತ್ತಾರು ಮಕ್ಕಳನ್ನು ಹೆರುತ್ತಿದ್ದ ಕಾಲ ಈಗ ಬದಲಾಗಿ, ಮನೆಗೊಂದು ಮಗು ಎಂಬ ಪರಿಸ್ಥಿತಿ ಬಂದಿತ್ತು. ಆದರೆ ಈಗಿನ ಯುವ ತಲೆಮಾರು ಮಕ್ಕಳನ್ನು ಹೊಂದುವ ವಿಚಾರದಲ್ಲಿ ಅರ್ಧಂಬರ್ಧ ಮನಸ್ಸು ಮಾಡುತ್ತಿದ್ದಾರೆ. ವಿದೇಶಗಳಲ್ಲಿ ನೋ ಕಿಡ್ಸ್ ಎಂಬ ಟ್ರೆಂಡ್ ಕೂಡ ಚಾಲ್ತಿಯಲ್ಲಿದೆ. ʼಡಬಲ್ ಇನ್‌ಕಮ್ ನೋ ಕಿಡ್ಸ್ - ಡಿಂಕ್ʼ ಟ್ರೆಂಡ್ ಮಕ್ಕಳು ಬೇಡ ಎನ್ನುವುದನ್ನೇ ಒತ್ತಿ ಹೇಳುತ್ತದೆ.
ಈ ಎಲ್ಲದರ ನಡುವೆ ಮಿಲೇನಿಯಲ್ ಜಮಾನದ ಮಂದಿ ಮಕ್ಕಳು ಬೇಕೋ ಬೇಡವೂ ಎಂಬ ನಿರ್ಧಾರ ತೆಗೆದುಕೊಳ್ಳುವಲ್ಲಿ ಗೊಂದಲಕ್ಕೆ ಒಳಗಾಗುತ್ತಿದ್ದಾರೆ. ನೀವು ಈ ತಲೆಮಾರಿನವರಾಗಿದ್ದು ಮಕ್ಕಳು ಬೇಕು-ಬೇಡ ಎನ್ನುವ ಗೊಂದಲ ನಿಮ್ಮಲ್ಲೂ ಇದ್ದರೆ ಈ ಲೇಖನ ಓದಿ.
ಮಕ್ಕಳು ಬೇಕು ಎನ್ನುವುದಕ್ಕೆ 10 ಕಾರಣಗಳಿವು
ವಂಶವನ್ನು ಬೆಳೆಸಲು: ಮಕ್ಕಳನ್ನು ಹೊಂದುವ ಪ್ರಮುಖ ಕಾರಣವಿದು. ಮಕ್ಕಳಿಲ್ಲ ಎಂದರೆ ತಮ್ಮ ವಂಶ ಇಲ್ಲಿಗೆ ಕೊನೆಯಾಗುತ್ತದೆ, ಮುಂದೆ ನಮ್ಮ ವಂಶದ ಹೆಸರು ಕೂಡ ಉಳಿಯುವುದಿಲ್ಲ ಎಂಬ ಕಾರಣಕ್ಕೆ ಮಕ್ಕಳನ್ನು ಹೊಂದಲು ಬಯಸುತ್ತಾರೆ. ಕುಟುಂಬವನ್ನು ಕಟ್ಟಲು ಬಯಸುವವರು ಮಕ್ಕಳನ್ನು ಬಯಸುತ್ತಾರೆ. ತಮ್ಮ ಹೆತ್ತವರು ನಮ್ಮನ್ನು ಸಾಕಿ, ಬೆಳೆಸಿದಂತೆ ನಾವು ನಮ್ಮ ಮಕ್ಕಳನ್ನು ಸಾಕಿ, ಸಲಹಬೇಕು ಎಂದು ಬಯಸುವ ಕಾರಣಕ್ಕೆ ಮಕ್ಕಳು ಮಾಡಿಕೊಳ್ಳಲು ಮನಸ್ಸು ಮಾಡುತ್ತಾರೆ.
ಕುಟುಂಬದ ಹೆಸರು ಹಾಗೂ ಮೌಲ್ಯವನ್ನು ಮುಂದುವರಿಸಲು: ಮೊದಲೇ ಹೇಳಿದಂತೆ ತಮ್ಮ ಕುಟುಂಬದ ಹೆಸರು ಹಾಗೂ ಮೌಲ್ಯವನ್ನು ಮುಂದುವರಿಸಿಕೊಂಡು ಹೋಗುವವರು ಬೇಕು ಎಂಬ ಕಾರಣಕ್ಕೆ ಮಗು ಮಾಡಿಕೊಳ್ಳುತ್ತಾರೆ. ತಮ್ಮ ಮಗುವಿನ ಹೆಸರಿನ ಹಿಂದೆ ತಮ್ಮ ಕುಟುಂಬದ ಹೆಸರು ಇರಬೇಕು ಎಂದು ಹಲವು ತಂದೆ ತಾಯಿಗಳು ಆಶಿಸುತ್ತಾರೆ. ಇದು ಸಾಮಾಜಿಕ ಪದ್ಧತಿಯ ಮೇಲೂ ಅವಲಂಬಿತವಾಗಿದೆ.
ಚಿಕ್ಕ ಮಕ್ಕಳ ಮೇಲೆ ಒಲವು: ಕೆಲವರಿಗೆ ಚಿಕ್ಕ ಮಕ್ಕಳೆಂದರೆ ತುಂಬಾ ಪ್ರೀತಿ ಇರುತ್ತದೆ. ಪುಟ್ಟ ಮಕ್ಕಳನ್ನು ನೋಡಿದಾಗ ಅವರ ಮೇಲೆ ವಿಶೇಷ ಒಲವು ಮೂಡುತ್ತದೆ. ನನಗೂ ಇಂಥದ್ದೇ ಮಗು ಇದ್ದರೆ ಎಷ್ಟು ಚೆನ್ನ ಅನ್ನಿಸುತ್ತದೆ. ಅಂತಹವರು ಮಗುವನ್ನು ಬಯಸುತ್ತಾರೆ. ಅವರಿಗೆ ಸಾಂಸಾರಿಕ ಜೀವನದಲ್ಲಿ ಮೊದಲ ಆದ್ಯತೆ ಮಗು ಮಾಡಿಕೊಳ್ಳುವುದೇ ಆಗಿರುತ್ತದೆ. ಮಗು ಹುಟ್ಟಿನ ಕ್ಷಣದಿಂದ ಅವರು ಪ್ರೌಢಾವಸ್ಥೆಗೆ ತಲುಪುವವರೆಗಿನ ಕ್ಷಣಗಳನ್ನು ಅನುಭವಿಸಬೇಕು ಎನ್ನುವ ಆಸೆಯು ಮಕ್ಕಳನ್ನು ಪಡೆಯಲು ಇನ್ನೊಂದು ಕಾರಣವಾಗಬಹುದು.
ಮನುಷ್ಯ ಸಹಜ ಗುಣ: ಜೀವಶಾಸ್ತ್ರದ ಸರಳ ಸತ್ಯ ಎಂದರೆ ವಂಶವಾಹಿಗಳನ್ನು ಮುಂದುವರಿಸುವುದು, ಸಂತಾನೋತ್ಪತ್ತಿ ಕ್ರಿಯೆ, ಪೀಳಿಗೆಯನ್ನು ವೃದ್ಧಿಸುವುದು. ಇದು ಮನುಷ್ಯನಲ್ಲೂ ಸಹಜ ಗುಣ. ಮದುವೆ, ಮಕ್ಕಳು ಎನ್ನುವುದೆಲ್ಲಾ ಮನುಷ್ಯನ ಬದುಕಿನ ಭಾಗ, ಅದು ಆಯ್ಕೆಯಲ್ಲ ಎನ್ನುವುದು ಹಲವರ ಭಾವ.
ಅಪರಿಮಿತ ಪ್ರೀತಿ ಹಂಚಿ- ಪಡೆಯಲು: ಪೋಷಕರು ಹಾಗೂ ಮಕ್ಕಳ ನಡುವೆ ವಿವರಿಸಲಾಗದ ಬಂಧ ಇರುತ್ತದೆ. ಈ ಜಗತ್ತಿನಲ್ಲಿ ಪೋಷಕರು ಮಕ್ಕಳನ್ನು ಪ್ರೀತಿಸುವಷ್ಟು ಯಾರನ್ನೂ ಪ್ರೀತಿಸುವುದಿಲ್ಲ, ಅಷ್ಟೇ ಪ್ರೀತಿಯನ್ನು ಅವರು ಮಕ್ಕಳಿಂದ ಮರಳಿ ಬಯಸುತ್ತಾರೆ. ಪೋಷಕರು ಹಾಗೂ ಮಕ್ಕಳ ನಡುವಿನ ಪ್ರೀತಿ ಎಂದು ಒಂದು ರೀತಿ ಕೊಡು-ಕೊಳ್ಳುವಿಕೆಯ ವ್ಯವಹಾರದಂತೆ. ಮಕ್ಕಳಿಗೆ ಅಪರಿಮಿತವಾದ ಪ್ರೀತಿ ಕೊಡಬೇಕು, ಅಪ್ಪಿ ಮುದ್ದಾಡಬೇಕು, ಬೊಗಸೆ ತುಂಬಿ ಪ್ರೀತಿ ಹರಿಸಬೇಕು ಎಂಬ ಕಾರಣಕ್ಕೂ ಮಕ್ಕಳನ್ನು ಬಯಸುತ್ತಾರೆ.
ಸಂತೋಷವನ್ನು ಅನುಭವಿಸಲು: ಮಕ್ಕಳಾಗುವ ಖುಷಿ ಏನು ಎನ್ನುವುದು ಅನುಭವಿಸಿದ ಪೋಷಕರಿಗಷ್ಟೇ ಗೊತ್ತು. ಮಕ್ಕಳು 9 ತಿಂಗಳು ಕಾಲ ತಾಯಿ ಹೊಟ್ಟೆಯಲ್ಲಿಟ್ಟು ಜೋಪಾನ ಮಾಡಿದರೆ, ಮಗು ಭೂಮಿಗೆ ಬಂದ ನಂತರ ತಂದೆ ಹೆಗಲ ಮೇಲೆ ಹೊತ್ತು ಜೋಪಾನ ಮಾಡುತ್ತಾನೆ. ಮಗುವಿನ ಪ್ರತಿಯೊಂದು ಚಲನವಲನವು ತಂದೆ-ತಾಯಿಗೆ ಮನೆಯಲ್ಲಿ ಹೇಳಲಾರದ ಪುಳಕ ನೀಡುತ್ತದೆ. ಅದನ್ನು ಅನುಭವಿಸಲು ಮಕ್ಕಳನ್ನು ಪಡೆಯಲು ಇಷ್ಟಪಡುತ್ತಾರೆ.
ತಮ್ಮ ಬದುಕಿಗೆ ಅರ್ಥ ನೀಡಲು: ವೈವಾಹಿಕ ಬದುಕಿಗೆ ನಿಜವಾದ ಅರ್ಥ ಸಿಗುವುದು ಮಕ್ಕಳು ಹುಟ್ಟಿದ ಮೇಲೆ ಎಂದು ಹಿರಿಯರು ಹೇಳುತ್ತಾರೆ. ಹಲವರ ಬದುಕು ಮಕ್ಕಳಾದ ಮೇಲೆ ಸಂಪೂರ್ಣ ಬದಲಾಗುತ್ತದೆ. ಮಗುವಿನ ಜನನದ ಬಳಿಕ ಅವರ ಜೀವನಕ್ಕೆ ಹೊಸ ಅರ್ಥ ಸಿಗುತ್ತದೆ. ಜವಾಬ್ದಾರಿ ಹೆಚ್ಚುತ್ತದೆ. ಪೋಷಕರ ಅಸ್ವಿತ್ವಕ್ಕೆ ಹೊಸ ಅರ್ಥ ನೀಡುವುದು ಮಗು.
ಜೀವನವನ್ನು ರೂಪಿಸಲು: ಹಲವರಿಗೆ ತಮ್ಮ ಬದುಕು ಹೀಗೆ ಇರಬೇಕು, ಹಾಗೆ ಇರಬೇಕು ಎಂಬ ಆಸೆ ಇರುತ್ತದೆ. ಆ ಆಸೆ, ಕನಸನ್ನು ಪೂರೈಸಿಕೊಳ್ಳಲು ತಮ್ಮಿಂದ ಪೂರೈಸಿಕೊಳ್ಳಲು ಸಾಧ್ಯವಾಗದೇ ಇದ್ದಾಗ ಅದನ್ನು ತಮ್ಮ ಮಗುವಿನಲ್ಲಿ ಪೂರೈಸುವ ಕನಸು ಕಾಣುತ್ತಾರೆ. ಒಟ್ಟಾರೆ ಮಗುವಿಗೆ ಸುಂದರ ಜೀವನ ರೂಪಿಸಬೇಕು ಎಂದು ಕನಸು ಕಾಣುವ ಪೋಷಕರು ಮಗು ಹೊಂದಲು ಬಯಸುತ್ತಾರೆ.
ಉತ್ತಮ ಪೋಷಕರಾಗುವ ಬಯಕೆ: ಜಗತ್ತಿನಲ್ಲಿ ಎಲ್ಲಾ ಪೋಷಕರು ಮಕ್ಕಳಿಗೆ ಪರಿಪೂರ್ಣ ಬದುಕು ನೀಡಿರುವುದಿಲ್ಲ. ಕೆಲವು ಪೋಷಕರೇ ಮಕ್ಕಳಿಗೆ ವೈರಿಗಳಾಗುವುದು ಇದೆ. ಅಂತಹ ಮಕ್ಕಳು ತಮಗೆ ಹುಟ್ಟುವ ಮಕ್ಕಳಿಗೆ ನಾನು ಉತ್ತಮ ಪೋಷಕ ಎನ್ನಿಸಿಕೊಳ್ಳಬೇಕು ಎಂದು ಕನಸು ಕಾಣುತ್ತಾರೆ. ಇದು ಕೂಡ ಮಗು ಬೇಕು ಎನ್ನುವುದಕ್ಕೆ ಇಂದು ಕಾರಣವಾಗುತ್ತದೆ.
ಸಾಮಾಜಿಕ ಒತ್ತಡ ಮತ್ತು ನಿರೀಕ್ಷೆಗಳು: ಮದುವೆಯಾದ ಮೇಲೆ ಏನಾದ್ರೂ ಗುಡ್‌ನ್ಯೂಸ್ ಇದ್ಯಾ? ಎಂಬ ಪ್ರಶ್ನೆ ಕೇಳುವುದು ಸಹಜ. ಮದುವೆಯಾಗಿ ಒಂದೆರಡು ವರ್ಷ ಮಕ್ಕಳಾಗಿಲ್ಲ ಎಂದರೆ ಸಮಾಜದ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗುತ್ತದೆ. ಎಲ್ಲರಂತೆ ಅವರು ಮಕ್ಕಳನ್ನು ಪಡೆಯಬೇಕು ಎಂಬ ಕುಟುಂಬ ನಿರೀಕ್ಷೆಗಳು, ಸಮಾಜದ ಪ್ರಶ್ನೆ ಈ ಕಾರಣಕ್ಕೂ ಮಕ್ಕಳು ಮಾಡಿಕೊಳ್ಳುವ ಮನಸ್ಸು ಮಾಡಬೇಕಾಗುತ್ತದೆ.
ಮಕ್ಕಳು ಯಾಕೆ ಬೇಕು ಎನ್ನುವುದಕ್ಕೆ ಈ ಮೇಲಿನ 10 ಅಂಶಗಳು ಪ್ರಮುಖ ಕಾರಣವಾದರೂ ಇನ್ನೂ ಕೆಲವು ಅಂಶಗಳು ಕಾರಣವಾಗುತ್ತವೆ. ಮಕ್ಕಳು ಬೇಕು ಎನ್ನುವಷ್ಟೇ ಬೇಡ ಎನ್ನಲೂ ಕಾರಣಗಳಿವೆ. ಆದರೆ ಮಕ್ಕಳು ಬೇಕು ಅಥವಾ ಬೇಡ ಎನ್ನುವುದು ನಿಮ್ಮ ಸ್ವಂತ ನಿರ್ಧಾರವಾಗಿರಬೇಕು.
(This copy first appeared in Hindustan Times Kannada website. To read more like this please logon to kannada.hindustantimes.com)