Sleeping Problem and Stroke: ಗೊರಕೆ, ಸ್ಲೀಪ್ ಅಪ್ನಿಯಾದಂತಹ ನಿದ್ದೆಯ ಸಮಸ್ಯೆಯಿಂದ ಪಾರ್ಶ್ವವಾಯುವಿನ ಅಪಾಯ ಹೆಚ್ಚುವ ಸಾಧ್ಯತೆ; ಅಧ್ಯಯನ
Sleeping Problem and Stroke: ಕಡಿಮೆ ಮತ್ತು ಅತಿ ನಿದ್ದೆ, ನಿದ್ದೆಯಲ್ಲಿ ಉಸಿರುಗಟ್ಟುವಿಕೆ, ಗೊರಕೆಯಂತಹ ನಿದ್ರೆಯ ಸಮಸ್ಯೆಗಳು ಹಾಗೂ ಪಾರ್ಶ್ವವಾಯು ಅಪಾಯದ ನಡುವೆ ಸಂಬಂಧವಿದೆ ಎನ್ನುತ್ತದೆ ಇತ್ತೀಚಿನ ಅಧ್ಯಯನ.
ಅಮೆರಿಕನ್ ಅಕಾಡೆಮಿ ಆಫ್ ನ್ಯೂರಾಲಜಿಯ ವೈದ್ಯಕೀಯ ಜರ್ನಲ್ ನ್ಯೂರಾಲಜಿಯ ಆನ್‌ಲೈನ್ ಸಂಚಿಕೆಯಲ್ಲಿ ಪ್ರಕಟವಾದ ಸಂಶೋಧನಾ ಲೇಖನವು, ನಿದ್ದೆಯ ಸಮಸ್ಯೆಯನ್ನು ಹೊಂದಿರುವವರಲ್ಲಿ ಪಾರ್ಶ್ವವಾಯುವಿನ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ ಎಂಬ ಅಂಶವನ್ನು ಪ್ರಕಟಿಸಿದೆ.
ಅತಿಯಾದ ನಿದ್ದೆ, ನಿದ್ದೆಯ ಕೊರತೆ, ನಿದ್ದೆಯ ಗುಣಮಟ್ಟ ಕಳಪೆಯಾಗಿರುವುದು, ಗೊರಕೆ, ನಿದ್ದೆಯಲ್ಲಿ ಉಸಿರುಗಟ್ಟುವಿಕೆ ಇವು ನಿದ್ದೆಗೆ ಸಂಬಂಧಿಸಿದ ಸಮಸ್ಯೆಗಳಾಗಿವೆ. ಇವುಗಳಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ರೋಗಲಕ್ಷಣಗಳನ್ನು ಹೊಂದಿರುವ ವ್ಯಕ್ತಿಗಳಲ್ಲಿ ಪಾರ್ಶ್ವವಾಯುವಿನ ಅಪಾಯ ಹೆಚ್ಚುವ ಸಾಧ್ಯತೆ ಇದೆ ಎಂದು ಈ ಅಧ್ಯಯನ ತಿಳಿಸಿದೆ.
4.,496 ಜನರನ್ನು ಒಳಗೊಂಡ ಅಂತರರಾಪ್ಟ್ರೀಯ ಮಟ್ಟದ ಅಧ್ಯಯನ ಇದಾಗಿತ್ತು. ಇದರಲ್ಲಿ 2,243 ಮಂದಿ ಪಾರ್ಶ್ವವಾಯು ಸಮಸ್ಯೆ ಹೊಂದಿದ್ದರು ಎನ್ನಲಾಗಿದೆ. ಈ ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ ʼಅವರು ಎಷ್ಟು ಗಂಟೆಗಳ ಕಾಲ ನಿದ್ದೆ ಮಾಡುತ್ತಾರೆ, ನಿದ್ದೆಯ ಗುಣಮಟ್ಟ ಹೇಗಿದೆ, ಗೊರಕೆ ಮತ್ತು ಉಸಿರಾಟ ತೊಂದರೆ ಹೀಗೆ ನಿದ್ದೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳಲಾಗಿತ್ತು.
ಒಂದು ದಿನದಲ್ಲಿ ಅಗತ್ಯ ಪ್ರಮಾಣದಷ್ಟು ನಿದ್ದೆ ಮಾಡುವ ವ್ಯಕ್ತಿಗಿಂತ ಅತಿ ಹೆಚ್ಚು ಅಥವಾ ಅತಿ ಕಡಿಮೆ ಪ್ರಮಾಣದಲ್ಲಿ ನಿದ್ರಿಸುವ ವ್ಯಕ್ತಿಗೆ ಪಾರ್ಶ್ವವಾಯು ಸಮಸ್ಯೆ ಬಾಧಿಸುವ ಸಾಧ್ಯತೆ ಹೆಚ್ಚಿದೆ.
ಸರಾಸರಿ ಏಳು ಗಂಟೆಗಳ ಕಾಲ ನಿದ್ದೆ ಮಾಡುವವರಿಗಿಂತ ಐದು ಗಂಟೆ ಅಥವಾ ಅದಕ್ಕಿಂತ ಕಡಿಮೆ ಅವಧಿಯಲ್ಲಿ ನಿದ್ದೆ ಮಾಡುವ ವ್ಯಕ್ತಿಗಳಲ್ಲಿ ಪಾರ್ಶ್ವವಾಯುವಿನ ಅಪಾಯದ ಸಾಧ್ಯತೆ ಮೂರು ಪಟ್ಟು ಹೆಚ್ಚು ಎಂಬುದನ್ನು ಈ ಸಂಶೋಧನೆಯಲ್ಲಿ ಸಂಶೋಧಕರು ಕಂಡುಕೊಂಡಿದ್ದಾರೆ. ಇನ್ನು ದಿನದಲ್ಲಿ ಒಂಬತ್ತು ಗಂಟೆಗಳಿಗೂ ಹೆಚ್ಚು ಹೊತ್ತು ನಿದ್ದೆ ಮಾಡುವವರಲ್ಲಿ ಪಾರ್ಶ್ವವಾಯುವಿನ ಅಪಾಯ ಎರಡು ಪಟ್ಟು ಹೆಚ್ಚುವ ಸಾಧ್ಯತೆ ಇದೆ. ಒಂದು ಗಂಟೆಗೂ ಹೆಚ್ಚು ಹೊತ್ತು ಕಿರುನಿದ್ದೆ (ನ್ಯಾಪ್) ಮಾಡುವವರರಲ್ಲಿ ಶೇ 88ರಷ್ಟು ಪಾರ್ಶ್ವವಾಯುವಿನ ಅಪಾಯವಿದೆ. ಗೊರಕೆ ಹೊಡೆಯುವವರಲ್ಲಿ ಶೇ 91ರಷ್ಟು ಪಾರ್ಶ್ವವಾಯು ಬಾಧಿಸುವ ಸಾಧ್ಯತೆ ಹೆಚ್ಚಿದೆ.
ಮದ್ಯಪಾನ, ಧೂಮಪಾನ, ದೈಹಿಕ ಚಟುವಟಿಕೆ ಹಾಗೂ ಖಿನ್ನತೆಯಂತಹ ಇತರ ಅಂಶಗಳು ನಿದ್ದೆಯ ಸಮಸ್ಯೆ ಇರುವವರಲ್ಲಿ ಪಾರ್ಶ್ವವಾಯುವಿನ ಅಪಾಯದ ಪರಿಣಾಮವನ್ನು ಹೆಚ್ಚಿಸುವ ಸಾಧ್ಯತೆ ಇದೆ ಎನ್ನುತ್ತದೆ ಈ ಅಧ್ಯಯನ.
ನಿದ್ದೆಯನ್ನು ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು ಹಾಗೂ ಇದು ಭವಿಷ್ಯದ ಸಂಶೋಧನೆಯ ವಿಷಯವಾಗಿರಬೇಕು ಎಂಬುದು ಸಂಶೋಧಕರ ಅಭಿಪ್ರಾಯ.
ವಿಭಾಗ