ಕನ್ನಡ ಸುದ್ದಿ  /  ಜೀವನಶೈಲಿ  /  ಸಂಶಯ ಪಿಶಾಚಿ ಉಸಿರುಗಟ್ಟಿಸುತ್ತಿದೆ, ಇದೇ ಕಾರಣಕ್ಕೆ ಸಂಗಾತಿಯೊಂದಿಗೆ ಸಂಬಂಧ ಹಾಳಾಗುತ್ತಿದೆ ಏನು ಮಾಡಲಿ? ಅನುಮಾನ ಬಿಡಲಾದೀತೆ -ಕಾಳಜಿ

ಸಂಶಯ ಪಿಶಾಚಿ ಉಸಿರುಗಟ್ಟಿಸುತ್ತಿದೆ, ಇದೇ ಕಾರಣಕ್ಕೆ ಸಂಗಾತಿಯೊಂದಿಗೆ ಸಂಬಂಧ ಹಾಳಾಗುತ್ತಿದೆ ಏನು ಮಾಡಲಿ? ಅನುಮಾನ ಬಿಡಲಾದೀತೆ -ಕಾಳಜಿ

ಡಾ ರೂಪಾ ರಾವ್: ಸಂಗಾತಿ ಅಂದ ಮಾತ್ರಕ್ಕೆ ಅವರು ಸದಾ ನಿಮ್ಮ ಧ್ಯಾನವೇ ಮಾಡಬೇಕು ಅಥವಾ ನಿಮ್ಮ ಬಗ್ಗೆಯಷ್ಟೇ ಕಾಳಜಿ ತೋರಿಸಬೇಕು, ನಿಮ್ಮೊಂದಿಗೆ ಇರಬೇಕು ಎಂಬ ಹುಂಬ ಹಟ ಬೇಡ. ಅವರಿಗೂ ಅವರದ್ದೇ ಆದ ಬಳಗ, ಹವ್ಯಾಸ, ಗೆಳೆತನ ಇರುತ್ತದೆ. ಇದನ್ನು ಅರ್ಥ ಮಾಡಿಕೊಂಡರೆ ನಿಮ್ಮ-ನಿಮ್ಮವರ ಬದುಕು ಚೆನ್ನಾಗಿರುತ್ತದೆ.

ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಪ್ರಶ್ನೆ: ಮೊದಲ ಮೂರೂ ಸಂಗಾತಿಗಳೂ ಮೋಸ ಮಾಡಿದರು, ನಾನಲ್ಲದೇ ಬೇರೆ ಬೇರೆಯವರೊಂದಿಗೆ ಇದ್ದರು, ಹಾಗಾಗಿ ಅವರಿಂದ ನಾನಾಗಿಯೇ ದೂರವಾದೆ. ಈಗ ಪ್ರಸ್ತುತ ಇರುವವನೂ (ನಾಲ್ಕನೆಯವನೂ) ಸುಳ್ಳು ಹೇಳುತ್ತಿದ್ದಾನೆ. ನನಗೆ ಮೋಸಮಾಡುತ್ತಿದ್ದಾನೆ ಎಂದು ಅನಿಸುತ್ತಿದೆ. ಆದರೆ ಅವನು ತಾನು ಹಾಗೇನೂ ಇಲ್ಲ ಎಂದೇ ಸಾಧಿಸುತ್ತಿದ್ದಾನೆ. ರಾತ್ರಿ ಕನಸಿನಲ್ಲಿಯೂ ಅವನು ಇನ್ಯಾರೊಂದಿಗೋ ಇದ್ದಂತೆಯೇ ಕನಸು. ಈ ಅನುಮಾನ ದಿನೇದಿನೇ ಜಾಸ್ತಿಯಾಗಿ ದಟ್ಟವಾಗಿ ಕಾಡುತ್ತಿದೆ. ನಮ್ಮ ರಿಲೇಷನ್‌ಶಿಪ್ ಹಾಳಾಗುತ್ತಿದೆ. ಈ ಸಂಶಯದಲ್ಲಿ ಅವನೊಂದಿಗೆ ಮದುವೆ ಮಾಡಿಕೊಳ್ಳಲೂ ಭಯ ಆಗುತ್ತಿದೆ. ಇತ್ತೀಚೆಗೆ ಅವನೊಂದಿಗೆ ಜಗಳವಾಡಿದಾಗ ಅವನು ಕೇಳಿದ್ದು ಮುಂಚಿನ ಮೂವರೂ ನಿಜಕ್ಕೂ ಬೇರೊಬ್ಬ ಹೆಣ್ಣಿನ ಸಂಬಂಧ ಬೆಳೆಸಿದ್ದರಾ ಅಥವಾ ನೀನೇ ಹೀಗೇ ಅನುಮಾನ ಪಟ್ಟೆಯಾ ಅಂತ. ಅದು ನಿಜವೇನೋ ಎಂದೂ ಅನಿಸುತ್ತಿದೆ. ನಾನು ಪ್ರತಿ ಹೆಜ್ಜೆಯಲ್ಲಿಯೂ ಬಹಳ ಹುಷಾರಾಗಿರುತ್ತೇನೆ ಅಂದುಕೊಂಡಿದ್ದೆ. ಆದರೆ ಈಗ ನನ್ನಿಂದಲೇ ತಪ್ಪಾಗಿದೆಯಾ ಅಂತ ಅನ್ನಿಸುತ್ತಿದೆ. ನಾನೇಕೆ ಪ್ರತಿಯೊಂದನ್ನೂ ಅನುಮಾನದಿಂದ ನೋಡುತ್ತಿರುವೆ? ನನ್ನ ಈ ಸಂಶಯ ಪ್ರವೃತ್ತಿಯಿಂದ ಹೇಗೆ ಹೊರಗೆ ಬರುವುದು? -ಹೆಸರು, ಊರು ಬೇಡ

ಟ್ರೆಂಡಿಂಗ್​ ಸುದ್ದಿ

ಉತ್ತರ: ಈ ಪ್ರಶ್ನೆಗೆ ಉತ್ತರಿಸಲು ಬಹಳಷ್ಟು ವಿವರಗಳು ಬೇಕು. ಇರುವ ಮಾಹಿತಿಯ ಮಿತಿಯಲ್ಲಿ ನಾನು ಸಾಧ್ಯತೆಗಳನ್ನು ಊಹಿಸಿ ಉತ್ತರ ಬರೆಯುತ್ತಿರುವೆ. ಮೊದಲ ಮೂರೂ ಜನರ ಮೇಲೂ ಸಂಶಯ ಬಂದು ದೂರವಾದಿರಾ ಅಥವಾ ಸಾಕ್ಷಿಗಳು ಸಿಕ್ಕು ದೂರವಾದಿರಾ ಎಂಬುದಕ್ಕೆ ನಿಖರ ಉತ್ತರವಿಲ್ಲ. ಆದ್ದರಿಂದ ನಿಮ್ಮದೇ ಊಹೆಯಂತೆ ನೀವು ಸಂಶಯಪಟ್ಟು ದೂರವಾಗಿದ್ದೀರಿ. ಹಾಗೂ ಪ್ರಸ್ತುತ ಇರುವವರೊಡನೆಯೂ ಇದೇ ಕಾರಣಕ್ಕೆ ಜಗಳವಾಗುತ್ತಿದೆ ಎಂದೇ ಇಟ್ಟುಕೊಳ್ಳೋಣ.

ಈ ಸಂಶಯ ಪ್ರವೃತ್ತಿಗೆ ಕಾರಣವೇನು?

ಪ್ರತಿ ಜೀವಿಗೂ ತನ್ನವನು ಅಥವಾ ತನ್ನವಳು ತನ್ನನ್ನಲ್ಲದೆ ಬೇರೆಯವರೊಡನೆ ಇರಬಾರದೆಂಬ ಪೊಸೆಸೀವ್‌ನೆಸ್ ಇರುತ್ತದೆ. ಅದು ಸಹಜ ಕೂಡ. ಎಲ್ಲಿಯವರೆಗೆ ಆ ಪೊಸೆಸಿವ್‌ನೆಸ್‌ ಮತ್ತೊಬ್ಬರಿಗೆ ಹಿಂಸೆ ಆಗುವುದಿಲ್ಲವೋ ಅಲ್ಲಿಯವರೆಗೆ ಅದು ಓಕೆ. ಆದರೆ ಈ ಪೋಸೆಸಿವ್‌ನೆಸ್‌ ಒಂದು ಗೀಳಾದಾಗ ತನ್ನವರ ಮೇಲಿನ ಪ್ರೀತಿ ಸಂಶಯವಾಗಿ ಮಾರ್ಪಾಡಾಗುತ್ತದೆ. ಬಹಳಷ್ಟು ಜನರಿಗೆ ತನ್ನವರ ಮೇಲೆ ಪ್ರೀತಿ ಇದ್ದಷ್ಟೂ ಪೊಸೆಸಿವ್‌ನೆಸ್ ಬರುತ್ತೆ. ಅದರಿಂದಲೇ ಸಂಶಯ ಹುಟ್ಟುತ್ತದೆ. ಹಾಗಾಗಿ ಪ್ರೀತಿ ಇರುವೆಡೆ ಸಂಶಯವೂ ಇರುತ್ತದೆ ಎಂದು ಸಂಶಯವನ್ನು ಒಳ್ಳೆಯದಾಗಿಸುತ್ತಾರೆ.

ಆದರೆ ಸಂಶಯವು ಅತಿಯಾದರೆ, ಜೊತೆಯಲ್ಲಿರುವವರಿಗೆ ಅದು ಉಸಿರುಗಟ್ಟುವಂತೆ ಮಾಡಿದರೆ ಒಪ್ಪಲು ಆಗುವುದಿಲ್ಲ. ಅತಿಯಾದರೆ ಸಂಶಯ ಅನ್ನುವುದೂ ಒಂದು ಗೀಳಾಗಬಹುದು.

ಯಾಕೆ ಕೆಲವರು ಅತಿಯಾಗಿ ಸಂಶಯಿಸುತ್ತಾರೆ?

ಈ ಪೊಸೆಸಿವ್‌ನೆಸ್ ಹಾಗೂ ಸಂಶಯ ಎರಡರ ಗೀಳಿಗೂ ಕಾರಣ ಅಭದ್ರತೆ ಅಥವಾ ಅಸುರಕ್ಷಿತ ಭಾವ. ನೀವು ವಿವರಿಸಿದ ಪ್ರಕಾರ ನಿಮಗೆ ಅಸುರಕ್ಷಿತಾ ಭಾವ ಹೆಚ್ಚಾಗಿದೆ. ಇದಕ್ಕೆ ಕಾರಣ ನಿಮ್ಮ ಬಾಲ್ಯವಿರಬಹುದು ಅಥವಾ ಹದಿಹರೆಯ ಇರಬಹುದು. ನಿಮ್ಮ ಮಿದುಳಿನ ನರವ್ಯೂಹವೇ ಹೀಗೇ ರೂಪುಗೊಂಡಿರಬಹುದು. ನಿಮ್ಮ ಮೇಲೆ ನಿಮಗಿರುವ ಕೀಳರಿಮೆಯೂ ಸಹಾ ಸಂಗಾತಿ ತನ್ನನ್ನು ಬಿಟ್ಟು ಹೋಗಬಹುದೆಂಬ ಭಯ ಅನುಮಾನವಾಗಿಯೂ ಬದಲಾಗಿರಬಹುದು.

ಕೆಲವೊಮ್ಮೆ ಈ ಸಂಶಯದ ಗೀಳು ಜಾಸ್ತಿ ಆದಾಗ ಇದು ರಿಲೇಶನ್‌ಶಿಪ್ ಒಸಿಡಿ ಸಹ ಆಗಿರಬಹುದು. ನಿಮ್ಮ ಪ್ರಕರಣದಲ್ಲಿ ಈ ಅನುಮಾನದ ಪ್ಯಾಟರ್ನ್ ಮರಳಿಮರಳಿ ಆಗುತ್ತಿರುವುದರಿಂದ ಒಮ್ಮೆ ಆಪ್ತಸಮಾಲೋಚಕರನ್ನು ಸಂಪರ್ಕಿಸುವುದು ಒಳ್ಳೆಯದು.

ಸಂಶಯ ಪ್ರವೃತ್ತಿಯಿಂದ ಹೊರಗೆ ಬರುವುದು ಹೇಗೆ?

ಸಂಬಂಧದ ಮೊದಲ ಬುನಾದಿ ನಂಬಿಕೆ. ಅದಕ್ಕಿಂತ ಮೊದಲನೆಯದು ಪ್ರೀತಿ ಹಾಗೂ ಗೌರವ. ಈ ಎರಡೂ ಇಲ್ಲದಾಗ ಕೇವಲ ಈ ವ್ಯಕ್ತಿ ನನ್ನವನು ಅಥವಾ ನನ್ನವಳು ಎಂಬ ಭಾವ ಬಂದಾಗ ಆ ವ್ಯಕ್ತಿ ಕೈತಪ್ಪಿ ಹೋಗಬಹುದು ಎಂದೇ ಅನ್ನಿಸುತ್ತಿರುತ್ತದೆ. ಮೊದಲಿಗೆ ಪ್ರೀತಿಸಿ, ನಂಬಿಕೆ ಇಡಿ. ಒಬ್ಬ ವ್ಯಕ್ತಿ ನಿಮ್ಮಿಂದ ದೂರ ಹೋಗಲೇಬೇಕೆಂದಿದ್ದರೆ ನಿಮ್ಮ ಯಾವ ಅನುಮಾನ, ಭಯ, ದಂಡ, ಅಳು ಯಾವುದೂ ಅವರನ್ನು ಹಿಡಿದಿಡಲಾರದು.

ಯಾವಾಗ ಪ್ರೀತಿ ಎಂಬುದು ಪೊಸೆಸಿವ್‌ನೆಸ್ ಆಗುತ್ತದೆಯೋ ಅಥವಾ ಅಧಿಕಾರ ಚಲಾವಣೆ ನಡೆಯುತ್ತದೆಯೋ ಆಗ ಆ ಸಂಬಂಧ ಉಸಿರುಗಟ್ಟಿಸುವಂತೆ ಆಗುತ್ತದೆ. ಈ ಸಮಯದಲ್ಲಿಯೇ ಸಂಬಂಧದಿಂದ ಆಚೆಗೆ ಹೋಗಲು ಮನಸ್ಸು ಹವಣಿಸುತ್ತಿರುತ್ತದೆ. ಆದ್ದರಿಂದ ನಿಮಗೆ ಸಂಗಾತಿಯ ಮೇಲೆ ಅನುಮಾನ ಬರಲು ಕಾರಣ ನಿಜವೇ ಅಥವಾ ಕೇವಲ ಊಹೆಯೇ ಎಂಬುದನ್ನು ಮೊದಲು ಕಂಡುಹಿಡಿಯಿರಿ.

ಸಂಗಾತಿ ಅಂದ ಮಾತ್ರಕ್ಕೆ ಅವರು ಸದಾ ನಿಮ್ಮ ಧ್ಯಾನವೇ ಮಾಡಬೇಕು ಅಥವಾ ನಿಮ್ಮ ಬಗ್ಗೆಯಷ್ಟೇ ಕಾಳಜಿ ತೋರಿಸಬೇಕು, ನಿಮ್ಮೊಂದಿಗೆ ಇರಬೇಕು ಎಂಬ ಹುಂಬ ಹಟ ಬೇಡ. ಅವರಿಗೂ ಅವರದ್ದೇ ಆದ ಬಳಗ, ಹವ್ಯಾಸ, ಗೆಳೆತನ ಇರುತ್ತದೆ. ಅದನ್ನು ಅರ್ಥ ಮಾಡಿಕೊಂಡು ಅವರಿಗೂ ಸ್ಪೇಸ್ ಕೊಡಿ. ಅನಗತ್ಯವಾಗಿ ಅನುಮಾನ ಬೇಡ. ಮಾಹಿತಿ ಕೇಳಿ, ಅವರು ಹೇಳಲು ಇಷ್ಟಪಡುತ್ತಿಲ್ಲ ಎಂದಾದರೆ ಹಟ ಹಿಡಿಯಬೇಡಿ. ಯಾವುದೇ ಸಂಬಂಧವನ್ನಾಗಲಿ ಹೆದರಿಸಿಯೋ, ಬಲವಂತವಾಗಿಯೋ ಇರಿಸಿಕೊಳ್ಳಲು ಆಗುವುದಿಲ್ಲ ಎನ್ನುವುದನ್ನು ನೆನಪಿಟ್ಟುಕೊಳ್ಳಿ.

ಹಾಗೊಮ್ಮೆ ನಿಮ್ಮ ಸಂಶಯ ನಿಜವೇ ಆಗಿಯೂ ಅವರ ಜೊತೆ ಮುಂದುವರೆಯುವ ಇಚ್ಛೆ ನಿಮಗೆ ಇದ್ದರೆ, ಅವರಿಗೂ ನಿಮ್ಮೊಡನೆ ಬಾಳುವ ಇಷ್ಟವಿದ್ದರೆ ಅವರಿಗೆ ಗೌರವ ಕೊಡಿ. ನಿಮ್ಮ ನಿರೀಕ್ಷೆಗಳನ್ನು ಸ್ಪಷ್ಟವಾಗಿ ತಿಳಿಸಿ. ಚುಚ್ಚುಮಾತು ಬೇಡ.

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ)