ಮಿಲನವೆಂಬ ಶುಷ್ಕ ದೈಹಿಕ ಕರ್ತವ್ಯ: ನಿಮಗೂ ಹೀಗನ್ನಿಸುತ್ತಿದ್ದರೆ ಗಂಡ-ಹೆಂಡತಿ ಮಧ್ಯೆ 'ಪ್ರೊಟೆಸ್ಟ್ ಪೊಲ್ಕಾ' ಬಂದಿದೆ ಎಂದು ಅರ್ಥ -ಕಾಳಜಿ-relationship tips what is protest polka tips for healthy family life importance of understanding in husband wife rpr ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಮಿಲನವೆಂಬ ಶುಷ್ಕ ದೈಹಿಕ ಕರ್ತವ್ಯ: ನಿಮಗೂ ಹೀಗನ್ನಿಸುತ್ತಿದ್ದರೆ ಗಂಡ-ಹೆಂಡತಿ ಮಧ್ಯೆ 'ಪ್ರೊಟೆಸ್ಟ್ ಪೊಲ್ಕಾ' ಬಂದಿದೆ ಎಂದು ಅರ್ಥ -ಕಾಳಜಿ

ಮಿಲನವೆಂಬ ಶುಷ್ಕ ದೈಹಿಕ ಕರ್ತವ್ಯ: ನಿಮಗೂ ಹೀಗನ್ನಿಸುತ್ತಿದ್ದರೆ ಗಂಡ-ಹೆಂಡತಿ ಮಧ್ಯೆ 'ಪ್ರೊಟೆಸ್ಟ್ ಪೊಲ್ಕಾ' ಬಂದಿದೆ ಎಂದು ಅರ್ಥ -ಕಾಳಜಿ

ಡಾ ರೂಪಾ ರಾವ್: ಜಾತಕದಲ್ಲಿ 34 ಗುಣಗಳು ಮ್ಯಾಚ್ ಆಗಿಯೂ ಹೊಂದಾಣಿಕೆ ವಿಷಯದಲ್ಲಿ ಒದ್ದಾಡುವ ಜೋಡಿಗಳು ಹಲವು. ಗಂಡು-ಹೆಣ್ಣಿನ ಮಧ್ಯೆ ಪ್ರೀತಿ ಗೌರವ ಇಲ್ಲದಿದ್ದರೆ ಮಿಲನವೆಂಬುದು ಶುಷ್ಕ ದೈಹಿಕ ಕರ್ತವ್ಯದ ಮಟ್ಟಕ್ಕೆ ಇಳಿಯುತ್ತದೆ. ಅದು ಸುಖಕರ ಅಲ್ಲ. ದಾಂಪತ್ಯದಲ್ಲಿ ಆಕರ್ಷಣೆ ಉಳಿಸಿಕೊಳ್ಳಲು ಏನು ಮಾಡಬೇಕು? -ಈ ಬರಹ ಓದಿ.

ಗಂಡ-ಹೆಂಡತಿ ನಡುವೆ ಮಾನಸಿಕ ಹೊಂದಾಣಿಕೆ ಬಹಳ ಮುಖ್ಯ. ಇಲ್ಲದಿದ್ದರೆ ಮಿಲನವೆಂಬುದು ಶುಷ್ಕ ದೈಹಿಕ ಕರ್ತವ್ಯದ ಮಟ್ಟಕ್ಕೆ ಇಳಿಯುತ್ತದೆ. ಇದಕ್ಕೆ ಪ್ರೊಟೆಸ್ಟ್ ಪೊಲ್ಕಾ ಕಾರಣ ಆಗಬಹುದು.
ಗಂಡ-ಹೆಂಡತಿ ನಡುವೆ ಮಾನಸಿಕ ಹೊಂದಾಣಿಕೆ ಬಹಳ ಮುಖ್ಯ. ಇಲ್ಲದಿದ್ದರೆ ಮಿಲನವೆಂಬುದು ಶುಷ್ಕ ದೈಹಿಕ ಕರ್ತವ್ಯದ ಮಟ್ಟಕ್ಕೆ ಇಳಿಯುತ್ತದೆ. ಇದಕ್ಕೆ ಪ್ರೊಟೆಸ್ಟ್ ಪೊಲ್ಕಾ ಕಾರಣ ಆಗಬಹುದು.

ದಾಂಪತ್ಯದಲ್ಲಿ ಹೊಂದಾಣಿಕೆ: ಪ್ರಶ್ನೆ- ನಮಸ್ಕಾರ ಮೇಡಂ. ನನ್ನದು ಒಂದು ಥರ ವಿಚಿತ್ರ ಸಮಸ್ಯೆ. ನಾನು ಏನು ಮಾತನಾಡಿದರೂ ನನ್ನ ಹೆಂಡತಿ ತನಗೆ ಅದು ಅರ್ಥವೇ ಆಗಿಲ್ಲ ಎನ್ನುವಂತೆ ವರ್ತಿಸುತ್ತಾಳೆ. ಕೆಲವೊಮ್ಮೆಯಂತೂ ನನ್ನ ಪ್ರತಿ ಮಾತಿಗೂ ವಿನಾ ಕಾರಣ ಸಮರ್ಥನೆಗೆ ಇಳಿಯುತ್ತಾಳೆ. ಒಮ್ಮೊಮ್ಮೆ ನಾನೂ ಕಟುವಾಗಿ ಮಾತನಾಡಿಬಿಡುತ್ತೇನೆ. ಈಗ ನಾವಿಬ್ಬರೂ ಮಧ್ಯವಯಸ್ಸಿನಲ್ಲಿದ್ದೇವೆ. ಆದರೆ ನಮ್ಮಿಬ್ಬರ ನಡುವೆ ಹೊಂದಾಣಿಕೆಯೇ ಇಲ್ಲ. ಆದರೆ ಮದುವೆಯಾದ ಹೊಸದರಲ್ಲಿ ಹೀಗೆ ಅನ್ನಿಸುತ್ತಿರಲಿಲ್ಲ. ಮದುವೆಯಾದ ಕೆಲ ವರ್ಷಗಳ ನಂತರ ರೋಮ್ಯಾಂಟಿಕ್ ಫೀಲ್ ಏಕೆ ಕಡಿಮೆ ಆಗುತ್ತದೆ? ನನಗೊಬ್ಬನಿಗೆ ಮಾತ್ರವೇ ಹೀಗೆ ಅನ್ನಿಸುವುದಾ? ಇದಕ್ಕೆ ವೈಜ್ಞಾನಿಕ ಕಾರಣ ಏನಾದರೂ ಇದೆಯೇ? ದಯವಿಟ್ಟು ಉತ್ತರಿಸಿ. -ಹೆಸರು ಮತ್ತು ಊರು ಬೇಡ.

ಉತ್ತರ: ನಮ್ಮ ಮಿದುಳಿನ ಡೊಪಾಮೈನ್ ಎಂಬ ಹ್ಯಾಪಿ ಹಾರ್ಮೋನ್ ಉತ್ಪತ್ತಿ ಆಗಲು ನಮಗೆ ಥ್ರಿಲ್ ಅನಿಸುವಂಥದ್ದೋ, ಎಕ್ಸೈಟ್‌ಮೆಂಟ್ ಆಗುವುದೋ ಅಗತ್ಯ. ಅಂಥದ್ದು ಇದ್ದಾಗ ಮನಸ್ಸು ಅದರ ಕಡೆಗೆ ಮತ್ತೆಮತ್ತೆ ಧಾವಿಸುತ್ತದೆ. ಸಿಗದ ಪ್ರೀತಿಯನ್ನು ಪಡೆಯಲೇಬೇಕೆಂಬ ಹಟಕ್ಕೆ ಇರುವ ಸ್ಪೂರ್ತಿಗಳಲ್ಲಿ ಈ ಡೊಪಾಮೈನ್ ಸಹ ಒಂದು ಅನ್ನಬಹುದು. ಡೊಪಾಮೈನ್‌ನ ಒಂದು ದೊಡ್ಡ ಸಮಸ್ಯೆ ಅಂದರೆ‌ ನಮಗೆ ಬೇಕಾದ್ದು ಸಿಕ್ಕಿದಂತೆಲ್ಲಾ ಇನ್ನಷ್ಟು ಮಗದಷ್ಟು ಬೇಕು ಎಂಬ‌ ಹಪಾಹಪಿ ಶುರುವಾಗುತ್ತದೆ. ವ್ಯಸನದ (ಅಡಿಕ್ಷನ್‌) ಮೂಲ ಕಾರಣ ಕೂಡ ಇದೇ ಡೊಪಾಮೈನ್.

ಈಗ‌ ಮದುವೆ ವಿಚಾರಕ್ಕೆ ಬರೋಣ. ಮದುವೆಯಾದ ಮೊದಲಿನ ಉತ್ಸಾಹ, ಪರಸ್ಪರ ಕುತೂಹಲ, ಆಕರ್ಷಣೆಯು ಒಂದು ಅಥವಾ ಎರಡು ವರ್ಷಗಳ ನಂತರ (ಕೆಲವೊಮ್ಮೆ ಆರು ತಿಂಗಳ ನಂತರ) ಕಡಿಮೆ ಆಗಲು ಸಂಗಾತಿಯನ್ನು ಕಂಡಾಗ ಅಥವಾ ಮುಟ್ಟಿದಾಗ ಏರುವ ಡೊಪಾಮೈನ್ ಮುಖ್ಯ ಕಾರಣ. ಇದರೊಂದಿಗೆ ಇನ್ನಿತರ ಹಾರ್ಮೋನ್‌ಗಳೂ ಸೇರಿರುತ್ತವೆ.

ಮದುವೆಯ (ಸದ್ಯಕ್ಕೆ ಮದುವೆ ಮಾತ್ರ ತೆಗೆದುಕೊಳ್ಳುವೆ) ಮೊದಲ ಹಂತವು ಪರಸ್ಪರ ತನ್ಮಯತೆಗೆ ಒಳಗಾಗುವ ದೈಹಿಕ ಮಿಲನ. ಹೆಣ್ಣಿಗೆ ಸ್ಪರ್ಶ, ರೊಮ್ಯಾಂಟಿಕ್ ಸ್ಪರ್ಶ, ‌ಮಾತು, ಕೀಟಲೆಗಳು ದೈಹಿಕ ಮಿಲನಕ್ಕೆ ‌ಅನುವು ಮಾಡಿಕೊಡುವ ಪ್ರಮುಖ ಸಾಧನಗಳು. ಗಂಡಸಿಗೆ ಇವಳು ನನ್ನವಳು ಎಂಬ‌ ಭಾವನೆ ಅಥವಾ ಅವಳು ಎಂಬುದಷ್ಟೇ ಸಾಕು ಲೈಂಗಿಕ ಕ್ರಿಯೆಗೆ ಅಣಿಯಾಗಲು. ಆದ್ದರಿಂದಲೇ ಹೆಣ್ಣನ್ನು ‌ಮಿಲನಕ್ಕೆ ಅನುನಯಗೊಳಿಸಿದರೆ ಆಕೆಗೆ ತೃಪ್ತಿ ಇಲ್ಲವಾದರೆ ಗಂಡಿನ ಅಹಂಗೆ ಮಾತ್ರ ತೃಪ್ತಿ. ‌ಬಹಳ‌ಷ್ಟು ಗಂಡಸರಿಗೆ ಹೆಣ್ಣನ್ನು ಮಿಲನಕ್ಕೆ ‌ಸಜ್ಜುಗೊಳಿಸುವಷ್ಟು ತಾಳ್ಮೆ ಇರುವುದಿಲ್ಲ. ಇಂತಹ ಸಮಯದಲ್ಲಿ ಹೆಣ್ಣಿಗೆ ಆ ಸಂಬಂಧ ಅತೃಪ್ತಿ ಮಾತ್ರ ‌ಕೊಡುತ್ತದೆ.

ತಟಸ್ಥ ಸ್ಥಿತಿಗೆ ಡೊಪಾಮೈನ್

ಮೊದಲ ರಾತ್ರಿ ಅಥವಾ ಒಂದಿಷ್ಟು ದಿನ ಅಥವಾ ಕೆಲ ತಿಂಗಳು‌ ಚರ್ಮ‌ದ ಹೊಸ ಸ್ಪರ್ಶಕ್ಕೆ ಡೊಪಾಮೈನ್ ಹಾತೊರೆಯುತ್ತದೆ. ಅದು ಏರುತ್ತಾ ಹೋಗಿ ಒಂದು ತಟಸ್ಥ ಸ್ಥಿತಿಗೆ ನಿಂತುಬಿಡುತ್ತದೆ. ಅಲ್ಲಿಂದ ಆ ಸ್ಪರ್ಶ ಹಳೆಯದಾಗುತ್ತಾ ಎಕ್ಸೈಟ್‌ಮೆಂಟ್ ಕಡಿಮೆಯಾಗುತ್ತಾ ಡೊಪಾಮೈನ್ ತನ್ನ ಆಸಕ್ತಿ ‌ಕಳೆದುಕೊಳ್ಳುತ್ತದೆ‌. ಹೀಗಾಗಬಾರದೆಂದರೆ ಮದುವೆಯಲ್ಲಿ ದೈಹಿಕ ಮತ್ತು ಮಾನಸಿಕ ಸಂಬಂಧಕ್ಕೆ ಸದಾ ನಾವೀನ್ಯತೆ ಹಾಗು ಆಕರ್ಷಣೆಯ ಪೋಷಣೆ ಇರಬೇಕು. ಇದಕ್ಕಾಗಿ ಕೊಂಚ ತುಂಟತನ, ಕೊಂಚ ಫ್ಲರ್ಟಿಂಗ್‌, ಆಗಾಗ ಇಬ್ಬರೇ ಪ್ರತ್ಯೇಕ ಸಮಯ ತೆಗೆದುಕೊಳ್ಳುವುದು ಇತ್ಯಾದಿ ಬೇಕು. ಇವುಗಳ ಬಗ್ಗೆ ಆಪ್ತಸಮಾಲೋಚಕರ ಬಳಿಯೂ ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು.

ಖುಷಿ ಇಲ್ಲದಿದ್ದರೆ ಮಿಲನವೆಂಬುದು ಶುಷ್ಕ ಕರ್ತವ್ಯ

ಎಲ್ಲಕ್ಕೂ ‌ಮುಖ್ಯ, ಕೆಲವೊಮ್ಮೆ ಸಂಬಂಧಗಳಲ್ಲಿ ಗೌರವ ಅಥವಾ ಮನ್ನಣೆ ಸಿಗದಾಗ ಅಥವಾ ಸಂಗಾತಿ ತನ್ನನ್ನು ನಿಂದಿಸುತ್ತಿದ್ದಾರೆ‌ ಎಂದಾದಾಗ ಒಬ್ಬರಿಗೆ ಆ ವಿವಾಹದ ದೈಹಿಕ ಸಂಬಂಧದಲ್ಲಿ ಆಕರ್ಷಣೆ ಉಳಿಯುವುದಿಲ್ಲ. ಆಗ ಮಿಲನ ಎನ್ನುವುದು ಶುಷ್ಕ ಕರ್ತವ್ಯವಷ್ಟೇ ಆಗುತ್ತದೆ. ಈ ಸಮಯದಲ್ಲಿಯೂ ತೃಪ್ತಿದಾಯಕ ದೈಹಿಕ ಮಿಲನ ಸಾಧ್ಯವಿಲ್ಲ. ಈ ಸ್ಥಿತಿಯನ್ನು 'ಪ್ರೊಟೆಸ್ಟ್ ಪೊಲ್ಕಾ' (Protest Polka) ಎಂದು ಕರೆಯುತ್ತಾರೆ. ಈ ಸ್ಥಿತಿಯಲ್ಲಿ ಒಬ್ಬರು ವಿಮರ್ಶಾತ್ಮಕವಾಗಿ, ಆಕ್ರಮಣಕಾರಿ ಇರುತ್ತಾರೆ. ಮತ್ತೊಬ್ಬರು ರಕ್ಷಣಾತ್ಮಕವಾಗಿ, ಅಂತರ ಕಾಯ್ದುಕೊಳ್ಳಲು ಪ್ರಯತ್ನಿಸುತ್ತಾರೆ.

ನೆನಪಿಡಿ ನಿಮ್ಮ ಮನಸ್ಸು ಒಬ್ಬರ ಮೇಲೆ ಕನೆಕ್ಟ್ ‌ಆಗಿದೆಯೇ ಇಲ್ಲವೇ ಎಂದು ಮದುವೆಗೆ ಮುಂಚೆಯೇ ಹೇಳಿರುತ್ತದೆ. ಅದನ್ನು ನಿರ್ಲಕ್ಷಿಸಿ ಮುನ್ನಡೆಯುವ ಮೊದಲು ವಿವಾಹ‌ಪೂರ್ವ ಕೌನ್ಸೆಲರ್ ಅನ್ನು ಕಾಣುವುದು ಬಹಳ‌ ಮುಖ್ಯ. ಜೀವನವಿಡೀ ಶುಷ್ಕ ‌ಸಂಬಂಧದಲ್ಲಿ ಎರಡೂ ಜೀವ ನರಳುವುದಕ್ಕಿಂತ ಇದು ಎಷ್ಟೋ ಮೇಲು.

ವಿವಾಹಪೂರ್ವ ಕೌನ್ಸೆಲಿಂಗ್ ಅಗತ್ಯ

ಜಾತಕದಲ್ಲಿ 34 ಗುಣಗಳು ಮ್ಯಾಚ್ ಆಗಿಯೂ ಈ ವಿಷಯದಲ್ಲಿ ಒದ್ದಾಡುವ ಜೋಡಿಗಳನ್ನು ನಾನು ನೋಡಿರುವೆ. ಆದ್ದರಿಂದ ಜಾತಕದ ಜೊತೆ ಸ್ವಭಾವ, ಬದುಕು, ಪರಸ್ಪರ ಆಕರ್ಷಣೆ, ಅನುಬಂಧ ಇವುಗಳ‌ ಹೊಂದಾಣಿಕೆಯ ಪರೀಕ್ಷೆ ಬಹಳ‌ ಮುಖ್ಯ. ನನಗೆ ಗೊತ್ತಿರುವಂತೆ ನಮ್ಮ ಸಮಾಜದಲ್ಲಿ ಈಗಲೂ ವಿವಾಹ ಪೂರ್ವ ಕೌನ್ಸೆಲಿಂಗ್ ಇರಲಿ ಪರಸ್ಪರ ದೈಹಿಕ ಮಿಲನ, ಮಾನಸಿಕ ಬಾಂಧವ್ಯದ ಕೊರತೆಯ ವಿಷಯವನ್ನು ಇನ್ನೊಬ್ಬರಲ್ಲಿ ‌ಹೇಳಿಕೊಳ್ಳುವುದೂ ಸಹ ದೊಡ್ಡ ಅಪರಾಧವೇ ಆಗಿದೆ.

48 ವರ್ಷದ ಹೆಣ್ಣೊಬ್ಬಳು ತನ್ನ ಗಂಡನೊಡನೆ ‌ಮೊದಲಿನಂತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಆಗುತ್ತಿಲ್ಲ ಎಂದು ಹೇಳಿಕೊಂಡಾಗ ಗೈನಕಾಲಜಿಸ್ಟ್ ಒಬ್ಬರು ಇಷ್ಟು ವಯಸಾಯಿತಲ್ಲ ಇನ್ನೇತಕ್ಕೆ ಬಿಡಿ ಎಂದು ಉಡಾಫೆಯಲ್ಲಿ ಹೇಳಿದ್ದನ್ನು ಆ ಹೆಣ್ಣು ನನ್ನ ಬಳಿ ತೋಡಿಕೊಂಡಿದ್ದರು.‌ ವೈದ್ಯರ ಮನಸ್ಥಿತಿಯೇ ಹೀಗಿದ್ದಾಗ ಇನ್ನು ಸಾಮಾನ್ಯರ ಬಗ್ಗೆ ಹೇಳುವುದೇನು?

ಮದುವೆಯಾಗಿ ‌ಅದೆಷ್ಟೋ ವರ್ಷಗಳ ನಂತರವೂ ಪರಸ್ಪರರಲ್ಲಿ ಸಂಘರ್ಷಗಳು, ಅಸಮಾಧಾನ, ಅತೃಪ್ತಿ ಪದೇಪದೆ ಕಂಡುಬರುತ್ತಿದ್ದರೆ ನಾನು ಮೇಲೆ ಹೇಳಿದ ಕಾರಣವೂ ಒಂದು. ದಯವಿಟ್ಟು ಅದನ್ನು ಕೂಡಲೇ ಪರಿಹರಿಸಿಕೊಳ್ಳಿ.

ಕಾಳಜಿ ಅಂಕಣ. ಡಾ ರೂಪಾ ರಾವ್
ಕಾಳಜಿ ಅಂಕಣ. ಡಾ ರೂಪಾ ರಾವ್

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990.