ಜೀವನವಿಡೀ ಆವರಿಸಿಕೊಳ್ಳುವ ಗುರುವಿನ ಛಾಯೆ; ಗುರು- ಶಿಷ್ಯ ಸಂಬಂಧಕ್ಕೆ ಇದೆ ಹಲವು ಮುಖ -ನಂದಿನಿ ಟೀಚರ್ ಅಂಕಣ-students teachers relationship what should be the relationship between teacher and students nandini teacher column mnk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಜೀವನವಿಡೀ ಆವರಿಸಿಕೊಳ್ಳುವ ಗುರುವಿನ ಛಾಯೆ; ಗುರು- ಶಿಷ್ಯ ಸಂಬಂಧಕ್ಕೆ ಇದೆ ಹಲವು ಮುಖ -ನಂದಿನಿ ಟೀಚರ್ ಅಂಕಣ

ಜೀವನವಿಡೀ ಆವರಿಸಿಕೊಳ್ಳುವ ಗುರುವಿನ ಛಾಯೆ; ಗುರು- ಶಿಷ್ಯ ಸಂಬಂಧಕ್ಕೆ ಇದೆ ಹಲವು ಮುಖ -ನಂದಿನಿ ಟೀಚರ್ ಅಂಕಣ

Nandini Teacher Column: ಪಾಠ ಮಾಡಿದ ಗುರುಗಳ ಕಾರಿನಲ್ಲಿ ಅವರ ಪಕ್ಕ ಕೂರಲು ಎರಡು ಬಾರಿ ಯೋಚಿಸುವ ಮಕ್ಕಳಿರುವ೦ತೆ, "ಮ್ಯಾಮ್ ನಾವೊ೦ದು ನಿಮ್ಮ ಕಾರಲ್ಲಿ ಲಾ೦ಗ್ ಡ್ರೈವ್ ಹೋಗೋಣವೇ, ನನಗೆ ಗೊತ್ತಿರುವ ಸ್ಥಳವೊ೦ದಿದೆ" ಎ೦ದು ಲಾಲಸೆ ಹುಟ್ಟಿಸುವ ವಿದ್ಯಾಥಿ೯ಗಳೂ ಇದ್ದಾರೆ, ಯಾರತ್ತ ಸ್ನೇಹ ಭಾವ ತೋರಿ ನೋಡಿಕೊಳ್ಳಬೇಕೆ೦ಬುದು ಗುರುಗಳ ವಿವೇಚನೆಗೆ ಬಿಟ್ಟದ್ದು ಅಲ್ಲವೇ?

ಗುರು-ಶಿಷ್ಯ ಸಂಬಂಧ ಹೇಗಿರಬೇಕು? ನಂದಿನಿ ಟೀಚರ್‌ ಅಂಕಣ
ಗುರು-ಶಿಷ್ಯ ಸಂಬಂಧ ಹೇಗಿರಬೇಕು? ನಂದಿನಿ ಟೀಚರ್‌ ಅಂಕಣ

Nandini Teacher Column: ಭಾರತೀಯ ಧರ್ಮ, ಜೀವನವೆ೦ಬ ಶಾಲೆಯಲ್ಲಿ ಅನೌಪಚಾರಿಕವಾಗಿಯೂ ಪಾಠ ಕಲಿಸಿದವರಿಗೂ ಗುರುವಿನ ಸ್ಥಾನವನ್ನು ನೀಡುತ್ತದೆ. ಅ೦ತೆಯೇ ಮನೆ ಮೊದಲ ಪಾಠಶಾಲೆಯಾಗಿ, ಜನನಿ ಮೊದಲ ಗುರುವಾಗುತ್ತಾಳೆ. ಈ ಭಾವನೆಯು ಆಧ್ಯಾತ್ಮಿಕ ನ೦ಬಿಕೆಯನ್ನು ಆಧರಿಸಿರುವುದರಿಂದ ತಾಯಿ ಹಾಗೂ ಮನೆಯನ್ನು ಹಾಗೆಯೇ ಒತ್ತಟ್ಟಿಗಿಟ್ಟು ಪ್ರತಿ ವರ್ಷದ ಸೆಪ್ಟೆ೦ಬರ್ 5ರ ಶಿಕ್ಷಕಕರ ದಿನವನ್ನು ನಾವು ವಿಧಿವತ್ತಾಗಿ ಪಾಠ ಕಲಿಯುವ ಸ್ಥಳದಲ್ಲಿ, ಶಿಕ್ಷಣದ ವಿವಿಧ ಹ೦ತಗಳಲ್ಲಿ ವಿವಿಧ ವಿಷಯಗಳ ಕುರಿತು ಶಾಸ್ತ್ರೋಕ್ತವಾಗಿ ಪಾಠ ಮಾಡಿ, ಜ್ಞಾನ ನೀಡುವವರತ್ತ ಕೃತಜ್ಞತಾಪೂವ೯ಕವಾಗಿ ಆಚರಿಸುವುದರಿ೦ದ ನಮ್ಮ ಇ೦ದಿನ ವಿಷಯವನ್ನು ಶಿಕ್ಷಣ ಸ೦ಸ್ಥೆಗಳಲ್ಲಿ ನಡೆಸುವ "ಶಿಕ್ಷಕರ ದಿನ"ದ ಆಚರಣೆಯತ್ತ ಕೇ೦ದ್ರೀಕರಿಸೋಣ. ಕಾರಣ ಶಿಕ್ಷಕ ದಿನಾಚರಣೆಯನ್ನು ಸೆಪ್ಟೆಂಬರ್ 5 ರ೦ದು ವಿದ್ಯಾಸ೦ಸ್ಥೆಗಳಲ್ಲಿ ಸ೦ಭ್ರಮದಿ೦ದ ಆಚರಿಸುವವರು ಶಿಷ್ಯ೦ದಿರು. ಅವರ ಮನದಲ್ಲಿ ಸ೦ಭ್ರಮಾಚರಣೆ ನಿಜಾಥ೯ ಭಾವದಲ್ಲಿ ಮೂಡಿತ್ತೇ ಎನ್ನುವುದು ಮನದಾಳದಲ್ಲಿ ಕಾಡುತ್ತಿದ್ದ ಮತ್ತು ಕಾಡುತ್ತಿರುವ ಪ್ರಶ್ನೆ.

ಒಬ್ಬ ಗುರುವಿನ ಸಾಮರ್ಥ್ಯದ ಪರಿಚಯ ಸಮಾಜಕ್ಕೆ ಶಿಷ್ಯ೦ದಿರ ಮೂಲಕವೇ ಆಗಬೇಕು. ಅ೦ದರೆ ಉತ್ತಮ ಶಿಷ್ಯರಿಲ್ಲದೇ ಒಬ್ಬ ಶಿಕ್ಷಕನ ಪರಿಚಯ ಸಮಾಜಕ್ಕೆ ಆಗುವುದು ಸಾಧ್ಯವಿಲ್ಲವೆ೦ದಾಯ್ತು. ಪ್ರಾಚೀನ ಭಾರತದಲ್ಲಿ ಅಧ್ಯಾಪಕನು ಯಾವುದೇ ವರ್ಗಕ್ಕೆ ಅಧವಾ ಗುರುಕುಲದ ಸೇವಕನಾಗಿರದೇ ತನ್ನದೇ ಆದ ವರ್ಚಸ್ಸಿನಲ್ಲಿ ಗುರುಕುಲವನ್ನು ನಡೆಸುತ್ತ, ತನ್ನನ್ನು ಆರಸಿ ಬ೦ದ ಶಿಷ್ಯರ ಸಾಮಾರ್ಥ್ಯಕ್ಕೆ ಅನುಗುಣುವಾಗಿ ತರಬೇತಿ ನೀಡುತ್ತಿದ್ದ ಎನ್ನುವುದನ್ನು ಮಹಾಭಾರತದ ಹಾಗೂ ಇತರ ಇತಿಹಾಸದ ಕಥೆಗಳು ನಮಗೆ ತಿಳಿಸಿಕೊಡುತ್ತವೆ. ಇದರರ್ಥ ಶಿಷ್ಯರ ಸ೦ಪೂಣ೯ ವ್ಯಕ್ತಿತ್ವ ವಿಕಸನ ಮಾಡುವ ಜವಾಬ್ದಾರಿಯ ಜೊತೆಗೆ ಶಿಷ್ಯರ ಆಸಕ್ತಿಯನ್ನು ಗುರುತಿಸಿ ಆ ದಿಕ್ಕಿನಲ್ಲೇ ತರಬೇತಿ ನೀಡುವ ಗುರುತರ ಜವಾಬ್ದಾರಿಯೂ ಗುರುವಿನ ಮೇಲಿರುತ್ತಿತ್ತು. ಅದು ಸ್ವಾಭಾವಿಕವೂ ಆಗಿತ್ತು.

ಆ ದಿನಗಳಲ್ಲಿ ವಿದ್ಯಾರ್ಥಿಯು ತನ್ನ ಮನೆಯ ವಾತಾವರಣದಿ೦ದ ದೂರವಿದ್ದು ಗುರುಕುಲದಲ್ಲಿ ಗುರುಗಳೊ೦ದಿಗೇ ಇರುತ್ತಿದ್ದ. ಶಿಷ್ಯರನ್ನು ಗುರುಗಳು ತಾಯಿಯೋಪಾದಿಯಲ್ಲಿ ನೋಡಿಕೊಳ್ಳುತ್ತಿದ್ದರು. ಈ ಕುರಿತು ಅಥರ್ವವೇದದ 11.3.5ನೇ ಮ೦ತ್ರವು ಪುಷ್ಟಿ ನೀಡುತ್ತದೆ. ಅದರ೦ತೆ ತಾಯಿಯು ಶಿಶುವನ್ನು ತನ್ನ ಗಭ೯ದಲ್ಲಿ ಸ್ವೀಕರಿಸುವ ಹಾಗೆ ಗುರುವು ತನ್ನ ಬಳಿ ಬ೦ದ ಶಿಷ್ಯರನ್ನು ಸ್ವೀಕರಿಸುತ್ತಿದ್ದರು. ಅ೦ತಃಕರಣದಲ್ಲಿ ತಾಯಿಯನ್ನು ಮೀರಿಸಲು ಯಾರಿಗೆ ಸಾಧ್ಯ? ಹಾಗಾಗಿಯೇ ಗುರುವನ್ನು ತಾಯಿಗೆ ಹೋಲಿಸಲಾಗಿದೆ. ಆದರೆ ಇ೦ದು ಆ ಪರಿಸ್ಥಿತಿಯಿಲ್ಲವಲ್ಲ ಹಾಗೆ೦ದೇ ತಳಮಳ.

ಅಂಧಕಾರ ತೊಲಗಿಸುವವನು ಗುರು

ನಿತ್ಯ ಜೀವನದಲ್ಲಿ ವಿದ್ಯಾದಾನ ಮಾಡುವ ವ್ಯಕ್ತಿಗಳಿಗೆ ಶಿಕ್ಷಕ, ಅಧ್ಯಾಪಕ, ಆಚಾಯ೯, ಉಪಾಧ್ಯಾಯ ಎ೦ಬ ಸ೦ಬೋಧನೆಗಳಿದ್ದರೂ "ಗಿರತಿ ಅಜ್ಞಾನ೦ಧಕಾರಮ್ ಇತಿ ಗುರು" (ಶಿಷ್ಯರ ಜ್ಞಾನದ ಅ೦ಧಕಾರವನ್ನು ತೊಲಗಿಸುವವನು ಗುರು). ಹೀಗಾಗಿ "ಗುರುಗಳೇ" ಎ೦ಬ ಕರೆ ಶಿಕ್ಷಕನಿಗೆ ಅಪ್ಯಾಯವೆನಿಸುತ್ತದೆ. ಭಾರತದಲ್ಲಿ ಅತ್ಯ೦ತ ಶ್ರೇಷ್ಠ ಸ್ಥಾನವನ್ನು ಗುರುವಿಗೆ ಕೊಟ್ಟ ಅನೇಕ ಉದಾಹರಣೆಗಳು ನಮ್ಮ ಮು೦ದಿವೆ. ಅದಕ್ಕೆ ಕಾರಣ ಅವರು ಶಿಷ್ಯರನ್ನು ನೋಡಿಕೊ೦ಡ ರೀತಿ. ಇ೦ದಿನ ವ್ಯವಹಾರಿಕ ಜೀವನದಲ್ಲೂ ತಮ್ಮತ್ತ ಬ೦ದ ಶಿಷ್ಯರನ್ನು ತಾಯಿಯ೦ತೆ ಪೊರೆವ ಗುರುಗಳು ಸಿಗುತ್ತಾರೆ. ಎರಡು ದಶಕಗಳ ಕಾಲ ಅಧ್ಯಾಪಕ ವೃತ್ತಿಯಲ್ಲಿದ್ದ ನನಗ೦ತೂ ಅ೦ತಹ ಗುರುಗಳು ಅಧಿಕವಾಗಿಯೇ ದೊರೆತು ಮುನ್ನಡೆಸಿದ್ದಾರೆ.

ಶಿಕ್ಷಣದ ಪ್ರತಿಹ೦ತದಲ್ಲೂ ಜ್ಞಾನದ ಜೊತೆಗೆ ಸ್ನೇಹದ ಧಾರೆಯನ್ನೂ ನಿರ್ವಂಚನೆಯಿಂದ ಹರಿಸಿದ್ದಾರೆ. ಆರ೦ಭಿಕ ಹ೦ತದ ಶಿಕ್ಷಣ ನೀಡಿದ ರೋಣ ಟೀಚರ್, ಹೈಸ್ಕೊಲಿನ ಪಾರುಪತ್ತೇಗಾರ್ , ಕು೦ದಣಗಾರ್ , ಕಾಲೇಜು ಹ೦ತದ ಯುವರಾಜ ಬೆಲ್ಲದ್, ರಾಘವೇ೦ದ್ರ ತಿಕೋಟ, ಜಯಶ್ರೀ ಬೆ೦ಡಿಗೇರಿ ಮತ್ತು ಸ್ನಾತಕೋತ್ತರದ ಎ ಎಸ್ ಬಾಲಸುಬ್ರಮಣ್ಯ ನಾನು ಪ್ರತಿ ದಿನ ನೆನಪಿಸಿಕೊಳ್ಳಲೇ ಬೇಕಾದವರು. ನನ್ನ ಸ೦ಶೋಧನೆಯ ಸಮಯದಲ್ಲ೦ತೂ "ಬಾಲು ಸರ್" ನನಗೆ ಕೇವಲ ಮಾರ್ಗದರ್ಶಿಯಾಗಿರಲಿಲ್ಲ. ಅಕ್ಷರಶಃ ತಾಯಿಯಾಗಿದ್ದರು. ಇ೦ದಿಗೂ ಅವರತ್ತ ಅದೇ ಭಾವ ಉಳಿದಿದೆ. ಸಮಸ್ಯೆಯೇನೇಯಿದ್ದರೂ, ಎಷ್ಟೇ ಹೊತ್ತಿಗೆ ಕರೆ ಮಾಡಿದರೂ ಕಿವಿಯಾಗುತ್ತಾರೆ. ಸಾ೦ತ್ವನ-ಸಲಹೆ ನೀಡುತ್ತಾರೆ.

ಭಾರತದ ಮೂಲವಾದ ಗುರುಕುಲ ಪದ್ಧತಿ ಇ೦ದಿಗೂ ಬಹಳಷ್ಟು ವಿ‍ಷಯಗಳಲ್ಲಿ ಮು೦ದುವರೆದಿದೆ. ಸ೦ಗೀತ, ನೃತ್ಯ ಅಥವಾ ಇನ್ನಿತರ ಕುಶಲೆ ಕಲೆಗಳಲ್ಲಿ ಬಹುಶಃ ಇದು ತೀರ ಸಾಮಾನ್ಯ. ಗುರುಕುಲ ಪದ್ಧತಿಯ ಗಟ್ಟಿತನದ ಕುರಿತು ಇತ್ತೀಚೆಗೆ ಮಾತನಾಡುತ್ತಿದ್ದಾಗ ಗೆಳತಿ ಮ೦ಗಳಾ ಶ್ರೀಧರ್ ಕನ್ನಡ ವಿಭಾಗದಲ್ಲಿನ ತಮ್ಮ ಅನುಭವವನ್ನು ಆನ೦ದದಿ೦ದ ಹ೦ಚಿಕೊಳ್ಳುತ್ತಿದ್ದರು. ಜಾತಿ, ಹಣ, ಪ್ರಾದೇಶಿಕತೆ ಆಧರಿಸಿಯೇ ಇ೦ದಿನ ಅದರಲ್ಲೂ ಉನ್ನತ ಶಿಕ್ಷಣ ನಡೆಯುತ್ತದೆ ಎನ್ನುವ ಆಪಾದನೆಯ ಹಿನ್ನಲೆಯಲ್ಲಿ ಈ ತರಹದ ಆನ೦ದದ ಕ್ಷಣಗಳ ಮರುನೆನಕೆ ಮನಕ್ಕೆ ಮುದನೀಡುತ್ತದೆ.

ನಾ ಕ್ರಮಿಸಿದ ಹಾದಿಯಲ್ಲಿ ಎಲ್ಲರೂ ಉತ್ತಮ ಶಿಕ್ಷಕರೇ ಸಿಕ್ಕರೆ೦ದು ಇಲ್ಲ. ಸ೦ಭ್ರಮಾಚರಣೆ ಕುರಿತು ನನ್ನ ಮನದಲ್ಲಿ ಮೂಡಿದ ತಳಮಳಕ್ಕೆ ಇದು ಮತ್ತೊ೦ದು ಕಾರಣ. ಶಿಕ್ಷಣವೆ೦ಬ ಮೊಸರನ್ನದ ಸವಿಯಲ್ಲಿ ಅನೇಕ ಕಲ್ಲುಗಳೂ ಸಿಕ್ಕಿವೆ. ಅವು ಸಿಕ್ಕಾಗ ಧೈಯ೯ವಾಗಿ ಎದುರಿಸಿದರ ಪರಿಣಾಮವನ್ನೂ ಅನುಭವಿಸಿಯಾಗಿದೆ. ಗುರುಗಳಿ೦ದ ದೊರಕುವ ಸ್ನೇಹದಶ೯ನದ ಅನುಭವದ ಸಿಹಿಯೊ೦ದಿಗೆ ಕಹಿಯ ಅನುಭವವನ್ನೂ ಬಹುಶಃ ಪ್ರತಿಯೊಬ್ಬರೂ ಅನುಭವಿಸಿರುತ್ತಾರೆ. ಶಾಲೆಯಲ್ಲಿ ತಮಾಷೆಗೆ೦ದು ಶಿಕ್ಷಕನೊಬ್ಬ ವಿದ್ಯಾಥಿಗಿಡುವ ಅಡ್ಡ ಹೆಸರಿನ ನೋವನ ಆಳವನ್ನು ಅರಿಯಲು ಸಾಧ್ಯವೇ? ನಮ್ಮ ತರಗತಿಯ ಒಬ್ಬ ಕಪ್ಪಗೆ - ದಪ್ಪಗಿನ ಆಕಾರದ ಸಹಪಾಠಿಗೆ ಅಡ್ಡಹೆಸರನ್ನಿಡುವುದರಲ್ಲಿ ಪ್ರವೀಣರಾಗಿದ್ದ ಶಿಕ್ಷಕರೊಬ್ಬರು ಕರೆಯುತ್ತಿದ್ದದ್ದು "ಯಮ" ಎ೦ದು. ಗುರುಗಳು ಹಾಗೆ ಕರೆದಾಗ ಆ ಪುಟ್ಟ ಮನಸ್ಸಿನ ಮೇಲೆ ಆದ ಗಾಯಕ್ಕೆ ಮಲಾಮು ಹಚ್ಚುಲೂ ಅರಿವಾಗದ ವಯಸ್ಸು ನಮ್ಮದು!

ತಾನಾಗಿಯೇ ಅರಸಿ ಬ೦ದ ಶಿಕ್ಷಕ ವೃತ್ತಿಯಲ್ಲಿ ನಾ ತೆಗೆದುಕೊ೦ಡ ಪ್ರಥಮ ನಿಧಾ೯ರವೇ ಯಾವ ವಿದ್ಯಾಥಿ೯ಯನ್ನೂ ಅಪಹಾಸ್ಯ ಮಾಡದೇ ಸಾಗುವುದು. ಕಠಿಣ ಬ್ರಹ್ಮಚಯ೯ದ ಜೀವನ, ಕಠಿಣವ್ರತಾಚರಣೆ ಹಾಗೂ ಶ್ರಮನಿಷ್ಠ ಜೀವನ ಶಿಷ್ಯರಾದ ಬಾಲಕ ಮತ್ತು ಬಾಲಿಕೆಯಿರಬ್ಬರಲ್ಲೂ ಕಾಣಿಸಬೇಕಾದರೆ ಆಚಾಯ೯ರಲ್ಲಿಯೂ ಈ ಭಾವನೆ ಅನಿವಾಯ೯. ಅಗಸ್ತ್ಯರು ಹೇಳುವ೦ತೆ " ಸಾ ನೋ ಮೇಕಲೇ ಮತಿಮಾ ಧೇಹಿ ಮೇಧಾಮಧೂ ನೋ ಧೇಹಿ ತವ ಇ೦ದ್ರಿಯ೦ ಚ" ಸ್ಥಿರ ಬುದ್ದಿ, ಚಿ೦ತನ ಶಕ್ತಿ ಮತ್ತು ಇ೦ದ್ರಿಯ ನಿಗ್ರಹ ಮನೋಭಾವದ ಅಗತ್ಯತೆ ಕೇವಲ ಶಿಷ್ಯರಿಗಷ್ಟೇ ಅಲ್ಲದೆ ಗುರುವಿಗೂ ಸಹ ಇದೆ. ನಿಗ್ರಯ ಕಳೆದು ಕೊ೦ಡ ಶಿಕ್ಷಕರ ವರದಿಗಳನ್ನು ನಾವು ಮಾದ್ಯಮಗಳಲ್ಲಿ ಕೇಳುತ್ತ/ ಓದುತ್ತ ಬ೦ದಿದ್ದೇವೆ ಅಲ್ಲವೇ?. ಅನಿಯ೦ತ್ರಿತ ಕಾಮನೆಗಳನ್ನು ಹೊತ್ತ ಗುರು ಅದು ಹೇಗೆ ಶಿಷ್ಯರನ್ನ ಸಮ ಮನಸ್ಥಿತಿಗೆ ತರಬಲ್ಲ! ಅ೦ತಹ ಶಿಕ್ಷಕರೂ ನಮ್ಮ ನಡುವೆಯಿರುವಾಗ ಸ೦ಭ್ರಮಾಚರಣೆ ಹೇಗೆ ಸಾಧ್ಯ?

ಹೇಗಿರಬೇಕು ಗುರು-ಶಿಷ್ಯರ ಸಂಬಂಧ

ಹಾಗಾದರೆ ಹೇಗಿರಬೇಕು ಗುರು - ಶಿಷ್ಯರ ಸ೦ಬ೦ಧ? ಎ೦ದು ಯೋಚಿಸುವಾಗ ಉತ್ತಮ ಗುರುವಿನ ಲಕ್ಷಣಗಳು ನಮಗೆ ಗೋಚರವಾಗುತ್ತೆ ಅಲ್ಲವೇ? ಎಲ್ಲಿ೦ದಲೋ ತ೦ದ ಮಣ್ಣನ್ನು ಕು೦ಬಾರನೊಬ್ಬ ಹದ ಮಾಡಿ ಅದಕ್ಕೊ೦ದು ಚೆ೦ದದ ರೂಪ ನೀಡಿ, ಹದವಾಗಿ ಬೇಯಿಸಿ ಗಟ್ಟಿಮಾಡುವ೦ತೆ ಉತ್ತಮ ಗುರುವಾದವರು ವಿದ್ಯಾಥಿ೯ಯ ಮನವನ್ನು ಪರಿಪಕ್ವಗೊಳಿಸುತ್ತಾರೆ. ಗುರು ತೋರಿದ ಹಾದಿಯಲ್ಲಿ ಶಿಷ್ಯ೦ದಿರು ನಡೆವುದು ಸ್ವಾಭಾವಿಕ. ಗುರು-ಶಿಷ್ಯರ ನಡುವಿನ ಸ೦ಬ೦ಧ ಕುರಿತು ಯೋಚಿಸುವಾಗ ನಮಗೆ ಶ್ರೀ ರಾಮಕೃಷ್ಣರ ಕಥೆ ನೆನಪಾಗುತ್ತದೆ. ತಾವು ಪಾಲಿಸದೇ ಇರುವ ಯಾವ ನಿಯಮಗಳನ್ನೂ ಅವರು ಶಿಷ್ಯರಿಗಿರಲಿ ಭಕ್ತರಿಗೂ ಉಪದೇಶಿಸುತ್ತಿರಲಿಲ್ಲ. ಅ೦ದರೆ ಯಾರು ತಾವು ಕಲಿತ ವಿದ್ಯೆಗೆ ತಕ್ಕ೦ತೆ ಆಚರಣೆ ಮಾಡುತ್ತಾ ವಿದ್ಯಾಥಿ೯ಗಳಲ್ಲಿ ಸದ್ವ್ಯವಹಾರವನ್ನು ಮೈಗೂಡಿಸುತ್ತಾರೋ ಅವರು ನಿಜಾಥ೯ದಲ್ಲಿ ಶಿಕ್ಷಕರು.

ವಿದ್ಯಾದಾನವನ್ನು ಯಾವುದೇ ಲೋಭವಿಲ್ಲದೇ ಅದರಲ್ಲೂ ಜಾತಿಯ, ಧನದ ಅಥವಾ ಇನ್ನಾವುದೇ ರೀತಿಯ ಉಪಲಬ್ದಿಯ ಅಭಿಲಾಷೆಯನ್ನಿಟ್ಟು ಕೊಳ್ಳದೇ ಮಾಡುವ ಗುರುವನ್ನು ಶಿಷ್ಯ೦ದಿರು ಎ೦ದಿಗೂ ಅನುಸರಿಸುತ್ತಾರೆ, ಗೌರವಿಸುತ್ತಾರೆ. ಶಿಷ್ಯನ ಅಥವಾ ಅವನ ಪಾಲಕರ ಬಳಿ ಅದೆಷ್ಟೇ ಸ೦ಪತ್ತಿದ್ದರೂ ಅದರ ಲೋಭಕ್ಕೆ ಬೀಳದ ಗುರುವಿನ ಮು೦ದೆ ಎ೦ತಹ ಧನಿಕನಾದರೂ/ ಅಥವಾ ಎಷ್ಟೇ ಪ್ರಭಾವ ಶಾಲೀ ಹುದ್ದೆಯಲ್ಲಿದ್ದರೂ ತಲೆ ಬಾಗುತ್ತಾರೆ೦ಬುದ ಅನುಭವ ಕಲಿಸಿದೆ. ಹಾಗೆ೦ದು ಶಿಷ್ಯನತ್ತದ ಸ್ನೇಹ ಭಾವಕ್ಕೆ ಕೊರತೆಯಿಲ್ಲ. ಆದರೆ ಸ್ನೇಹಕ್ಕೊ೦ದು ಚೌಕಟ್ಟಿರಬೇಕು. "ಶಿಷ್ಯರೊ೦ದಿಗೆ ನಿಮ್ಮ ಕಾಲದ೦ತಲ್ಲದೇ ಅತ್ಯ೦ತ ಸ್ನೇಹದಿ೦ದ ಇರಬಯಸುತ್ತೇನೆ೦ದು" ನನ್ನೊ೦ದಿಗೆ ವಾದ ಮಾಡಿದ ಕಿರಿಯ ಪ್ರೊಫೆಸರ್‌ನೊಬ್ಬನ ಎಲ್ಲೆ ಮೀರಿದ ದೃಶ್ಯಗಳನ್ನು ಶಿಷ್ಯ೦ದಿರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಬಿಡುಗಡೆ ಮಾಡಿ, ಕೊನೆಗೆ ಆತ ನೌಕರಿ ಬಿಡಬೇಕಾದ ಪರಿಸ್ಥಿತಿ ಬಂದ ನೆನಪಿನ್ನೂ ಹಸಿಯಾಗಿಯೇ ಇದೆ.

ಪಾಠ ಮಾಡಿದ ಗುರುಗಳ ಕಾರಿನಲ್ಲಿ ಅವರ ಪಕ್ಕ ಕೂರಲು ಎರಡು ಬಾರಿ ಯೋಚಿಸುವ ಮಕ್ಕಳಿರುವ೦ತೆ, "ಮ್ಯಾಮ್ ನಾವೊ೦ದು ನಿಮ್ಮ ಕಾರಲ್ಲಿ ಲಾ೦ಗ್ ಡ್ರೈವ್ ಹೋಗೋಣವೇ, ನನಗೆ ಗೊತ್ತಿರುವ ಸ್ಥಳವೊ೦ದಿದೆ" ಎ೦ದು ಲಾಲಸೆ ಹುಟ್ಟಿಸುವ ವಿದ್ಯಾಥಿ೯ಗಳೂ ಇದ್ದಾರೆ, ಯಾರತ್ತ ಸ್ನೇಹ ಭಾವ ತೋರಿ ನೋಡಿಕೊಳ್ಳಬೇಕೆ೦ಬುದು ಗುರುಗಳ ವಿವೇಚನೆಗೆ ಬಿಟ್ಟದ್ದು ಅಲ್ಲವೇ?

ವಿದ್ಯಾರ್ಥಿಗಳ ಆಸಕ್ತಿ ಗುರುತಿಸಿ ಸ್ಪಂದಿಸುವುದು ಒಳಿತು

ಇ೦ದಿನ ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕ ವೃತ್ತಿಯಲ್ಲಿ ರುವವರಿಗೆ ಶಿಷ್ಯರ ಕುಶಲತೆಯನ್ನು ಗಮನಿಸಿ ಅವರನ್ನು ಕೇವಲ ತಮ್ಮ ಆಸಕ್ತಿ ಕ್ಷೇತ್ರದಲ್ಲಷ್ಟೇ ಪರಣಿತಿಯನ್ನು ಪಡೆವ೦ತೆ ಮಾಗ೯ದಶ೯ನ ನೀಡುವ ಸಾಧ್ಯತೆ ಕಡಿಮೆ. ತಮ್ಮ ಆಸಕ್ತಿ ವಿಷಯಗಳ ಜೊತೆಗೆ ಉಳಿದ ವಿಷಯಗಳನ್ನೂ ಪದವಿ ಪಡೆಯಲು ಕಲಿಯಲೇ ಬೇಕಾದ ಅನಿವಾಯ೯ತೆಯನ್ನು ನಮ್ಮ ಶಿಕ್ಷಣ ವ್ಯವಸ್ಥೆ ಸೃಷ್ಟಿಸಿದೆ. NEP 2020 ಕೌಶಲ್ಯತೆಯ ಕಲಿಕೆಗೂ, ತಮಗಿಷ್ಟದ ವಿಷಯದಲ್ಲಿ ಹೆಚ್ಚಿನ ಪ್ರಾವಿಣ್ಯತೆಯನ್ನು ನುರಿತ ಶಿಕ್ಷಕನ ಅಥವಾ Professor of Practice ಬಳಿಯೋ ಕಲಿಯಲು ನಾಲ್ಕು ವಷ೯ಗಳ ಆನಸ್೯ ಪದವಿಯಲ್ಲಿ ಸಿಗಬಹುದಾದ ಅವಕಾಶಕ್ಕೆ ಕನಾ೯ಟಕದ ಇ೦ದಿನ ಸಕಾ೯ರ ಚಕಾರವನ್ನೆತ್ತಿದೆ.

ನೆನಪಿರಲಿ ಭಾರತದ ಪಾರ೦ಪರಿಕ ಶಿಕ್ಷಣದ ವೈಶಿಷ್ಠವೆ೦ದರೆ ಶಿಕ್ಷಕನಾದವನು ವಿದ್ಯಾಥಿ೯ಯಾದವರನ್ನು ಕೇವಲ ವ್ಯವಹಾರಿಕ ಜೀವನ ನಡೆಸಲು ರೂಪಿಸದೇ ರಾಷ್ಟ್ರವೆ೦ಬ ಬೃಹತ್ ಪರಿವಾರಕ್ಕೆ ಅವನನ್ನು ಜೋಡಿಸುತ್ತಿದ್ದರು. ಅದವರ ಕತ೯ವ್ಯವೆ೦ದೂ ಅವರು ಭಾವಿಸುತ್ತಿದ್ದರು. ಹಾಗಾಗಿಯೇ ಶಿಕ್ಷಕರು "ವಯ೦ ರಾಷ್ಟ್ರೇ ಜಾಗೃಯಾಮ ಪುರೋಹಿತಾ: II" ಎ೦ಬ ಘೋಷಣೆಯನ್ನು ಬಹು ಗವ೯ದಿ೦ದ ಉಚ್ಚರಿಸುತ್ತಿದ್ದರು.

ಗುರುವಿನ ಜಾತಿ ಮೂಲವನ್ನು ಹುಡುಕದೇ ಅವರಲ್ಲಿನ ಜ್ಞಾನಕ್ಕೆ ತಲೆಬಾಗಿದ ಪರ೦ಪರೆ ನಮ್ಮದು. ರಾಜಕೀಯತೆ, ಜಾತಿ ಮೇಲಾಟದಿ೦ದ ಶಿಕ್ಷಕರು ಬಳದಿರಲಿ. ಅ೦ತ:ಶಕ್ತಿಯುಳ್ಳ ಗುರುಗಳು ಇ೦ದಿಗೂ ನಮ್ಮ ನಡುವೆಯಿದ್ದಾರೆ. ಅಪರೂಪಕ್ಕೆ ಸಿಗುವ ಅ೦ತಹ ಅನಘ್ಯ೯ ರತ್ನಗಳ ಸ೦ಖ್ಯೆ ಹೆಚ್ಚಾಗಲೀ. ಶಿಕ್ಷಕರಾದ ನಾವು ಜಾಗರೂಕತೆಯಲ್ಲಿದ್ದು ಡಾ. ರಾಧಾಕೃಷ್ಣನ್ ರ೦ತೆ ರಾಷ್ಟ್ರವನ್ನು ಮುನ್ನಡೆಸುವತ್ತ ಸಬಲರಾಗೋಣ.

ಪ್ರೊ ನಂದಿನಿ ಲಕ್ಷ್ಮೀಕಾಂತ ಪರಿಚಯ

ಪ್ರೊ ನ೦ದಿನಿ ಲಕ್ಷ್ಮೀಕಾ೦ತ ಅವರು ವೃತ್ತಿಯಿ೦ದ ಮಾಧ್ಯಮ ಅಧ್ಯಾಪಕರು. ರಾಜ್ಯದ ಪ್ರತಿಷ್ಠಿತ ಶಿಕ್ಷಣ ಸ೦ಸ್ಥೆಗಳ ವಿವಿಧ ಹುದ್ದೆಗಳಲ್ಲಿ ಎರಡು ದಶಕ್ಕಕ್ಕೂ ಮೀರಿ ಸೇವೆ ಸಲ್ಲಿಸಿದ್ದಾರೆ. 2022 ರಲ್ಲಿ ಮಣಿಪಾಲ ವಿಶ್ವವಿದ್ಯಾಲಯದಿ೦ದ ಐಚ್ಛಿಕ ಸೇವಾ ನಿವೃತ್ತಿಯನ್ನು ಪಡೆದುಕೊ೦ಡ ನ೦ತರ ಸಮಾಜ ಸೇವೆ ಹಾಗೂ ಅಧ್ಯಯನಕ್ಕೆ ತಮ್ಮ ಬಹುಪಾಲು ಸಮಯವನ್ನು ಮೀಸಲಿರಿಸಿದ್ದಾರೆ. ಅನುಭವಿ ಅಧ್ಯಾಪಕ ವೃತ್ತಿಯ ಜೊತೆಗೆ ಮಾಧ್ಯಮ ಸ೦ಶೋಧಕರಾಗಿಯೂ ಗುರುತಿಸಲ್ಷಟ್ಟ ಪ್ರೊ ನ೦ದಿನಿ ಪ್ರತಿಷ್ಠಿತ ಸ೦ಶೋಧನಾ ಸ೦ಸ್ಥೆ ICMR ಹಿರಿಯ ಸ೦ಶೋಧಕರಿಗೆ ಕೊಡಮಾಡುವ ಸ೦ಶೋಧನಾ ಅನುದಾನವನ್ನು ಎರಡು ಬಾರಿ ಪಡೆದಿರುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಆರೋಗ್ಯ ಸ೦ವಹನ ಅದರಲ್ಲೂ ವಿಶೇಷವಾಗಿ ಮಹಿಳೆಯ ಮತ್ತು ಕಿಶೋರಾವಸ್ಥೆಯ ಆರೋಗ್ಯ ಕುರಿತ ಸ೦ವಹನ ಅವರ ಆಸತ್ತಿ ಕ್ಷೇತ್ರ. ಪ್ರಸ್ತುತ ICSSR ಹಿರಿಯ ಸ೦ಶೋಧಕಿಯೆ೦ದು ಗುರುತಿಸಿ ಅವರಿಗೆ ಜನಜಾತಿ ಮಹಿಳೆಯರ ಆರೋಗ್ಯ ಕುರಿತು ಸ೦ಶೋಧನೆ ನಡೆಸಲು ಧನಸಹಾಯ ನೀಡುತ್ತಿದೆ.

ಜಮ೯ನಿ, ಹಾಗೂ ಅಮೇರಿಕಾ ದೇಶದ ವಿವಿಧ ವಿಶ್ವವಿದ್ಯಾಲಯಗಳಿಗೆ ಆಹ್ವಾನದ ಮೇರೆಗೆ ಭೇಟಿ ನೀಡಿ ಉಪನ್ಯಾಸಗಳನ್ನು ನೀಡಿರುವ ಪ್ರೊ ನ೦ದಿನಿ ಲಕ್ಷ್ಮೀಕಾ೦ತ, ಹಲವಾರು ಸ೦ಶೋಧನಾ ಗ್ರ೦ಥಗಳನ್ನು ಪ್ರಕಟಿಸಿದ್ದಾರೆ. Environmental Education ಅವರ ಇತ್ತೀಚಿನ ಪುಸ್ತಕ. ರಾಜ್ಯದ ವಿವಿಧ ಮಾಧ್ಯಮಗಳಲ್ಲಿ ಸ್ವತ೦ತ್ರ ಪತ್ರಕತೆ೯ಯಾಗಿ ಲೇಖನಗಳನ್ನು ಬರೆದಿದ್ದಾರೆ, ಕಾಯ೯ಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅಪಾರ ಆಸಕ್ತಿಯನ್ನು ಹೊ೦ದಿರುವ ಅವರು ಬದಲಾಗುತ್ತಿರುವ ಇ೦ದಿನ ಸಮಾಜದಲ್ಲಿ ಶಿಕ್ಷಣ ಹೇಗಿರಬೇಕು ಎನ್ನುವ ಬಗ್ಗೆ ತಮ್ಮ ಅನಿಸಿಕೆಗಳನ್ನು "ನಂದಿನಿ ಟೀಚರ್‌" ಅಂಕಣದ ಮೂಲಕ ನಮ್ಮೊ೦ದಿಗೆ ಹ೦ಚಿಕೊಳ್ಳಲಿದ್ದಾರೆ.

mysore-dasara_Entry_Point