ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು; ವಸಡಿನ ಸಮಸ್ಯೆಗೂ ಉತ್ತಮ
ಕನ್ನಡ ಸುದ್ದಿ  /  ಜೀವನಶೈಲಿ  /  ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು; ವಸಡಿನ ಸಮಸ್ಯೆಗೂ ಉತ್ತಮ

ಹೊಟ್ಟೆ ತಂಪಾಗಿಸುವ ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು; ವಸಡಿನ ಸಮಸ್ಯೆಗೂ ಉತ್ತಮ

ಬೇಸಿಗೆ ಕಾಲ ಬಂತು ಅಂದ್ರೆ ಕಲ್ಲಂಗಡಿ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ಪೇಟೆಗಳಿಗೆ ಹೋಗುವ ಜನ ತಮ್ಮ ಮನೆಗಳಿಗೆ ಹಿಂದಿರುವಾಗ ಕಲ್ಲಂಗಡಿ ಹಣ್ಣನ್ನು ಒಯ್ಯುವುದು ಸಾಮಾನ್ಯವಾಗಿ ಕಂಡು ಬರುತ್ತದೆ. ಇದು ರುಚಿಗೆ ಮಾತ್ರವಲ್ಲ, ಅನೇಕ ಆರೋಗ್ಯ ಪ್ರಯೋಜನಗಳೂ ಇವೆ. ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ಏನೆಲ್ಲಾ ಆರೋಗ್ಯ ಪ್ರಯೋಜನಗಳಿವೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು
ಕಲ್ಲಂಗಡಿ ಹಣ್ಣಿನ 8 ಅದ್ಭುತ ಆರೋಗ್ಯ ಪ್ರಯೋಜನಗಳು (pixel)

ಬೇಸಿಗೆಯಲ್ಲಿ ಕಲ್ಲಂಗಡಿ ಹಣ್ಣಿಗೆ ಎಲ್ಲಿಲ್ಲದ ಬೇಡಿಕೆ. ನೀರಿನ ಅಂಶ ಹೆಚ್ಚಿರುವುದರಿಂದ ಬೇಸಿಗೆಯ ತಾಪ ಕಡಿಮೆ ಮಾಡಿಕೊಳ್ಳಲು ಈ ಹಣ್ಣನ್ನು ಜನರು ಹೆಚ್ಚಾಗಿ ಆರಿಸಿಕೊಳ್ಳುತ್ತಾರೆ. ಈ ಹಣ್ಣಿನಲ್ಲಿರುವ ಜೀವಸತ್ವಗಳು, ಖನಿಜಗಳು, ಉತ್ಕರ್ಷಣ ನಿರೋಧಕಗಳು, ಅಮೈನೋ ಆಮ್ಲಗಳು ದೇಹದ ಆರೋಗ್ಯಕ್ಕೆ ಪ್ರಯೋಜನಕಾರಿ. ಕಲ್ಲಂಗಡಿಯಲ್ಲಿ ಸಿಟ್ರುಲಿನ್ ಎಂಬ ಅಮೈನೋ ಆಮ್ಲವಿದ್ದು, ಇದು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದರಿಂದ ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿಯಾಗಿದೆ. ಕಲ್ಲಂಗಡಿಯಲ್ಲಿರುವ ಪೊಟ್ಯಾಸಿಯಮ್ ಸೋಡಿಯಂ ಮಟ್ಟವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ತೂಕ ಕಡಿಮೆ ಮಾಡಿಕೊಳ್ಳುವ ಶಪಥ ಮಾಡಿರುವವರು ಕಲ್ಲಂಗಡಿ ಹಣ್ಣನ್ನು ಸೇವಿಸಬಹುದು. ಇದರಲ್ಲಿ ಕಡಿಮೆ ಕ್ಯಾಲರಿ ಇರುವುದರಿಂದ ತೂಕ ನಷ್ಟಕ್ಕೆ ಸಹಕಾರಿ. ನೀರಿನ ಅಂಶ ಅಧಿಕವಾಗಿರುವುದರಿಂದ ಚಯಾಪಚಯ ಮತ್ತು ತೂಕ ನಿರ್ವಹಿಸಲು ಸಹಕಾರಿಯಾಗಿದೆ. ಅನೇಕ ಆರೋಗ್ಯ ಪ್ರಯೋಜನಗಳನ್ನು ಸಹ ಕಲ್ಲಂಗಡಿ ಹಣ್ಣು ಹೊಂದಿದೆ.

ಕಲ್ಲಂಗಡಿ ಹಣ್ಣಿನಲ್ಲಿರುವ 8 ಆರೋಗ್ಯ ಪ್ರಯೋಜನಗಳ ಬಗ್ಗೆ ಇಲ್ಲಿದೆ ಮಾಹಿತಿ

1. ನಿಮ್ಮ ದೇಹವನ್ನು ಹೈಡ್ರೇಟೆಡ್ ಆಗಿ ಇರಿಸುತ್ತದೆ

ಕಲ್ಲಂಗಡಿ ಹಣ್ಣಿನಲ್ಲಿ ನೀರಿನ ಅಂಶ ಹೆಚ್ಚಾಗಿರುವುದರಿಂದ ದೇಹವನ್ನು ನಿರ್ಜಲೀಕರಣದಿಂದ ಕಾಪಾಡಿ, ಹೈಡ್ರೇಟೆಡ್ ಆಗಿರಿಸುವಲ್ಲಿ ಸಹಕಾರಿಯಾಗಿದೆ. ಅಲ್ಲದೆ, ಇದು ಕಡಿಮೆ ಕ್ಯಾಲರಿಗಳನ್ನು ಹೊಂದಿರುವ ಕಾರಣ ತೂಕ ಕಳೆದುಕೊಳ್ಳಲು ಸಹಕಾರಿಯಾಗಿದೆ. ಇದು ನಿಮ್ಮ ಹೃದಯ ಮತ್ತು ಚರ್ಮದ ಆರೋಗ್ಯಕ್ಕೆ ಉತ್ತಮ. ಬಿಸಿಲಿನ ಈ ವಾತಾವರಣದಲ್ಲಿ, ಕಲ್ಲಂಗಡಿ ನಿಮ್ಮ ದೇಹದ ಉಷ್ಣತೆಯನ್ನು ತಂಪಾಗಿಸುತ್ತದೆ.

2. ತೂಕ ನಷ್ಟಕ್ಕೆ ಸಹಕಾರಿ

ಕಲ್ಲಂಗಡಿ ಹಣ್ಣಿನಲ್ಲಿ ಶೇ. 92ರಷ್ಟು ನೀರು ಇರುವುದರಿಂದ, ಇದನ್ನು ಸೇವಿಸಿದ ಕೂಡಲೇ ನಿಮಗೆ ಹೊಟ್ಟೆ ತುಂಬಿದ ಅನುಭವವಾಗುತ್ತದೆ. ಇದರಿಂದ ನೀವು ಅನಾರೋಗ್ಯಕರ ಆಹಾರವನ್ನು ಸೇವಿಸುವ ಸಾಧ್ಯತೆ ಕಡಿಮೆ. ಕಲ್ಲಂಗಡಿ ಹಣ್ಣು ಕಡಿಮೆ ಕ್ಯಾಲರಿ ಹೊಂದಿದೆ. ಹೀಗಾಗಿ ತೂಕ ನಷ್ಟಕ್ಕೆ ಇದು ಸಹಕಾರಿ.

ಇದನ್ನೂ ಓದಿ | Summer Drinks: ಬೇಸಿಗೆಗೆ ಪುನರ್‌ಪುಳಿ ಜ್ಯೂಸ್‌, ಕೂಲ್‌ ಜತೆಗೆ ಆರೋಗ್ಯಕರ, ಹೇಗೆ ತಯಾರಿಸೋದು? photos

3. ರಕ್ತದಲ್ಲಿನ ಸಕ್ಕರೆ ಮಟ್ಟ ನಿರ್ವಹಣೆ

ಅಮೈನೋ ಆಮ್ಲವಾದ ಎಲ್ ಸಿಟ್ರುಲಿನ್ ಅಂಶವನ್ನು ಕಲ್ಲಂಗಡಿ ಹಣ್ಣು ಹೊಂದಿದೆ. ಈ ಅಮೈನೋ ಆಮ್ಲಗಳು ನಿಮ್ಮ ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಮತ್ತು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಹಾಯ ಮಾಡುತ್ತದೆ.

4. ಹಲ್ಲಿನ ಸಮಸ್ಯೆ ನಿವಾರಣೆ

ಪ್ರತಿದಿನ ಕಲ್ಲಂಗಡಿ ಹಣ್ಣನ್ನು ತಿನ್ನುವುದರಿಂದ ವಸಡು ಸಮಸ್ಯೆಯನ್ನು ತಡೆಯಬಹುದು. ಬಹುತೇಕ ಮಂದಿ ವಸಡು ನೋವಿನಿಂದ ಬಳಲುತ್ತಿದ್ದಾರೆ. ಕಲ್ಲಂಗಡಿಯಲ್ಲಿರುವ ವಿಟಮಿನ್ ಸಿ ವಸಡುಗಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಕಪ್ ಕಲ್ಲಂಗಡಿ ಹಣ್ಣನ್ನು ಸೇವಿಸುವುದರಿಂದ ವಸಡು ಕಾಯಿಲೆಯ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ.

5. ಉರಿಯೂತದ ವಿರುದ್ಧ ಹೋರಾಡಲು ಸಹಕಾರಿ

ಉರಿಯೂತವು ಹೃದ್ರೋಗ, ಕ್ಯಾನ್ಸರ್ ಮತ್ತು ಫೈಬ್ರೊಮ್ಯಾಲ್ಗಿಯಂಥ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ. ಅನೇಕ ಜನರು ಉರಿಯೂತದಿಂದ ಬಳಲುತ್ತಿದ್ದಾರೆ. ಕಲ್ಲಂಗಡಿ ತಿನ್ನುವುದು ಉರಿಯೂತದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

6. ನರಗಳು ಸರಿಯಾಗಿ ಕೆಲಸ ಮಾಡಲು ಸಹಕಾರಿ

ಕಲ್ಲಂಗಡಿಯಲ್ಲಿ ಪೊಟ್ಯಾಸಿಯಮ್ ಇದೆ. ಇದು ನಿಮ್ಮ ನರಗಳು ಸರಿಯಾಗಿ ಕೆಲಸ ಮಾಡಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್ ನಿಮ್ಮ ದೇಹದ ಮೂಲಕ ನರ ಸಂಕೇತಗಳನ್ನು ಕಳುಹಿಸಲು ಅನುವು ಮಾಡಿಕೊಡುತ್ತದೆ. ನಿಮ್ಮ ಕಾಲುಗಳಲ್ಲಿ ಆಗಾಗ್ಗೆ ಸೆಳೆತವಾಗುತ್ತಿದ್ದರೆ, ಕಲ್ಲಂಗಡಿ ರಸವನ್ನು ಕುಡಿಯಿರಿ.

7. ಜೀರ್ಣಕ್ರಿಯೆ ಸುಧಾರಣೆ

ಕಲ್ಲಂಗಡಿಯಲ್ಲಿ ನೀರು ಮತ್ತು ನಾರಿನಂಶವಿದೆ. ಇವು ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತವೆ. ಫೈಬರ್ ಮಲಬದ್ಧತೆ ಮತ್ತು ಅಜೀರ್ಣವನ್ನು ತಡೆಯಲು ಸಹಾಯ ಮಾಡುತ್ತದೆ. ಕಲ್ಲಂಗಡಿಯಲ್ಲಿರುವ ಫೈಬರ್ ಮತ್ತು ನೀರು ನಿಮ್ಮ ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯಕರವಾಗಿರಿಸುತ್ತದೆ.

8. ಶಾಖದ ಹೊಡೆತದಿಂದ ರಕ್ಷಣೆ

ಬಿಸಿಲಿನ ಪ್ರಖರತೆ ಹೆಚ್ಚಿರುವುದರಿಂದ ಹೀಟ್ ಸ್ಟ್ರೋಕ್‌ನಂಥ ಗಂಭೀರ ಸಮಸ್ಯೆ ಎದುರಿಸಬಹುದು. ದೇಹವು ತುಂಬಾ ಬಿಸಿಯಾದಾಗ, ಜ್ವರದಂಥ ಗಂಭೀರ ಸಮಸ್ಯೆಗಳು ಎದುರಾಗಬಹುದು. ಕಲ್ಲಂಗಡಿ ರಸವನ್ನು ಸೇವಿಸುವುದರಿಂದ ಶಾಖದ ಹೊಡೆತವನ್ನು ತಡೆಯಲು ಸಹಾಯ ಮಾಡುತ್ತದೆ. ಇದು ತಾಪಮಾನ ನಿಯಂತ್ರಿಸಲು ಸಹಕಾರಿಯಾಗಿದೆ.

ಬಿಸಿಲಿನ ತಾಪದಿಂದ ಬಳಲಿದವರು ಜ್ಯೂಸ್, ತಂಪು ಪಾನೀಯಗಳತ್ತ ಮೊರೆ ಹೋಗುವುದು ಸಾಮಾನ್ಯ. ನಿಮ್ಮ ದೇಹದ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಆದಷ್ಟು ನೈಸರ್ಗಿಕ ಹಣ್ಣುಗಳ ಜ್ಯೂಸ್ ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ಉತ್ತಮ.

Whats_app_banner