ಭಾರತದ 11 ಪ್ರಸಿದ್ಧ ಅರಮನೆಗಳಿವು; ರಾಜವೈಭೋಗವನ್ನು ಕಣ್ತುಂಬಿಕೊಳ್ಳಲು ಈ ಅರಮನೆಗಳಿಗೆ ಒಮ್ಮೆಯಾದ್ರೂ ಭೇಟಿ ಕೊಡಿ-travel indian tourism do visit these 11 famous palaces in india on your next trip bengaluru palace mysuru palace bgy ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಭಾರತದ 11 ಪ್ರಸಿದ್ಧ ಅರಮನೆಗಳಿವು; ರಾಜವೈಭೋಗವನ್ನು ಕಣ್ತುಂಬಿಕೊಳ್ಳಲು ಈ ಅರಮನೆಗಳಿಗೆ ಒಮ್ಮೆಯಾದ್ರೂ ಭೇಟಿ ಕೊಡಿ

ಭಾರತದ 11 ಪ್ರಸಿದ್ಧ ಅರಮನೆಗಳಿವು; ರಾಜವೈಭೋಗವನ್ನು ಕಣ್ತುಂಬಿಕೊಳ್ಳಲು ಈ ಅರಮನೆಗಳಿಗೆ ಒಮ್ಮೆಯಾದ್ರೂ ಭೇಟಿ ಕೊಡಿ

ಭಾರತದ ಭವ್ಯ ಪರಂಪರೆಯನ್ನು ಸಾರುವ ಇತಿಹಾಸ ಪ್ರಸಿದ್ಧ 11 ರಾಜಮನೆತನಗಳ ಅದ್ಭುತ ಹಾಗೂ ಐಶಾರಾಮಿ ಅರಮನೆಗಳನ್ನು ನೀವೆಂದಾದರೂ ನೋಡಿದ್ದೀರಾ? ಇಂದು ಆ ಅರಮನೆಗಳು ವಸ್ತುಸಂಗ್ರಹಾಲಯಗಳೋ, ಇಲ್ಲವೇ ಸರ್ಕಾರದ ಸುಪರ್ದಿಯಲ್ಲಿದ್ದರೂ ಮುಂದಿನ ಪೀಳಿಗೆಗೆ ಇತಿಹಾಸದ ಪಾಠವನ್ನೇ ಮಾಡುವಂತಿವೆ. ಅಂತಹ ಅರಮನೆಯನ್ನೂ ನೀವು, ನಿಮ್ಮ ಮಕ್ಕಳು ಒಮ್ಮೆಯಾದ್ರೂ ನೋಡಬೇಕು.

ಭಾರತದ 11 ಪ್ರಸಿದ್ಧ ಅರಮನೆಗಳಿವು
ಭಾರತದ 11 ಪ್ರಸಿದ್ಧ ಅರಮನೆಗಳಿವು (Wikipedia)

ಭಾರತದ ಪರಂಪರೆಯು ವೈವಿಧ್ಯತೆ ಮತ್ತು ಶ್ರೀಮಂತಿಕೆಯಿಂದ ಕೂಡಿದೆ. ಇಲ್ಲಿನ ಸಾಂಸ್ಕೃತಿಕ ಸಿರಿವಂತಿಕೆಗೆ ಸಾಕ್ಷಿಯಾಗಿ ಸಾಕಷ್ಟು ಅದ್ಭುತಗಳಿವೆ. ನಮ್ಮ ಹಿರಿಯರು ಅದೆಷ್ಟೋ ಅದ್ಭುತಗಳನ್ನು ಬಿಟ್ಟು ಹೋಗಿದ್ದಾರೆ. ಇಂತಹ ಅದ್ಭುತಗಳು ಇಂದಿಗೂ ತನ್ನ ಅನನ್ಯತೆಯನ್ನು ಉಳಿಸಿಕೊಂಡಿದೆ. ಅವುಗಳಲ್ಲಿ ದೇಶಾದ್ಯಂತ ಇರುವ ಭವ್ಯ ಅರಮನೆಗಳು ಪ್ರಮುಖವಾದವು. ತಮ್ಮ ವಾಸ್ತು ವೈಭವದಿಂದಲೇ ಎಲ್ಲರ ಗಮನ ಸೆಳೆಯುತ್ತಿರುವ ಈ ಅರಮನೆಗಳನ್ನು ಜೀವನದಲ್ಲಿ ಒಂದು ಬಾರಿಯಾದರೂ ಕಣ್ತುಂಬಿಕೊಳ್ಳಬೇಕು ಎನ್ನದವರಿಲ್ಲ. ಅಂಥವರಿಗಾಗಿ ಭಾರತದ 11 ಪ್ರಸಿದ್ಧ ಅರಮನೆಗಳು ಹಾಗೂ ಅಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ ಸೇರಿದಂತೆ ಸಂಪೂರ್ಣ ಮಾಹಿತಿ ಇಲ್ಲಿದೆ.

ಭೇಟಿ ನೀಡಲೇಬೇಕಾದ ಭಾರತದಲ್ಲಿನ 11 ಪ್ರಸಿದ್ಧ ಅರಮನೆಗಳು

1. ಉಮೈದ್ ಭವನ ಅರಮನೆ, ಜೋಧಪುರ

ರಾಜಸ್ಥಾನದ ಜೋದಪುರದಲ್ಲಿರುವ 26 ಎಕರೆ ಪ್ರದೇಶದಲ್ಲಿ ಹರಡಿರುವ ಐಷಾರಾಮಿ ಉಮೈದ್‌ ಭವನ ಅರಮನೆ 1929ರಲ್ಲಿ ಮಹಾರಾಜ ಉಮೈದ್‌ ಸಿಂಗ್‌ನಿಂದ ನಿರ್ಮಿಸಲ್ಪಟ್ಟಿದೆ. ಇದರ ನಿರ್ಮಾಣವು ಪೂರ್ಣಗೊಳ್ಳಲು ಸುಮಾರು 15 ವರ್ಷಗಳೇ ಬೇಕಾಗಿದ್ದು, 1943 ರಲ್ಲಿ ಭವನವು ಪೂರ್ಣಗೊಂಡಿತು. ಸುಮಾರು 347 ಕೊಠಡಿಗಳನ್ನು ಹೊಂದಿರುವ ಈ ಐಷಾರಾಮಿ ನಿವಾಸವು ಜೋಧ್‌ಪುರ ರಾಜಮನೆತನದ ಮುಖ್ಯ ನಿವಾಸವಾಗಿದ್ದು, ವಿಶ್ವದ ಅತಿದೊಡ್ಡ ಖಾಸಗಿ ನಿವಾಸವೆನ್ನಿಸಿಕೊಂಡಿದೆ. ಈ ಅರಮನೆಯು ಅದ್ಭುತವಾದ ವಾಸ್ತುಶಿಲ್ಪಗಳಿಂದ ಕಂಗೊಳಿಸುತ್ತಿದ್ದು, ಹಳದಿ ಮರಳುಗಲ್ಲಿನಿಂದ ನಿರ್ಮಿಸಲಾಗಿದೆ.

ಐಷಾರಾಮಿ ಹೋಟೆಲ್, ರಾಯಲ್ ಮ್ಯೂಸಿಯಂ ಮತ್ತು ರಾಜಮನೆತನದ ನಿವಾಸ ಹೀಗೆ ಮೂರು ವಿಭಾಗಗಳಾಗಿ ಈ ಅರಮನೆಯನ್ನು ವಿಂಗಡಿಸಲಾಗಿದೆ. ಪ್ರಸ್ತುತ, ಭಾರತದಲ್ಲಿ ಅರಮನೆಯ ಹೋಟೆಲ್ ಆಗಿ ಸೇವೆ ಸಲ್ಲಿಸುತ್ತಿರುವ ನಿವಾಸದ ಭಾಗವನ್ನು ತಾಜ್ ಹೋಟೆಲ್‌ಗಳು ನಿರ್ವಹಿಸುತ್ತವೆ. ಅರಮನೆಯು ಆಕರ್ಷಕ ಗ್ಯಾಲರಿಗಳನ್ನು ಮತ್ತು ಆಕರ್ಷಕವಾದ ವಾಹನಗಳ ಸಂಗ್ರಹವನ್ನು ಹೊಂದಿದ್ದು, ನೀವೂ ಒಮ್ಮೆ ಭೇಟಿ ನೀಡಲೇಬೇಕು.

ಇಲ್ಲಿಗೆ ಭೇಟಿ ನೀಡಲು ಸೂಕ್ತ ಸಮಯ: ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ

ಸಮಯ: ಬೆಳಗ್ಗೆ 9 ರಿಂದ ಸಂಜೆ 5

ತಲುಪುವುದು ಹೇಗೆ: ಈ ಅರಮನೆ ಜೋಧ್‌ಪುರ ವಿಮಾನ ನಿಲ್ದಾಣದಿಂದ 4.3ಕಿಮೀ. ದೂರದಲ್ಲಿದೆ.

2. ಅಂಬಾ ವಿಲಾಸ ಅರಮನೆ, ಮೈಸೂರು

ಅರಮನೆ ನಗರಿ ಮೈಸೂರಿನಲ್ಲಿರುವ ಅಂಬಾ ವಿಲಾಸ ಅರಮನೆಯು ಮೈಸೂರು ಸಂಸ್ಥಾನವನ್ನು ಶತಮಾನಗಳ ಕಾಲ ಆಳಿದ ಒಡೆಯರ್ ವಂಶದ ಅರಸರ ಖಾಸಗಿ ನಿವಾಸ ಮತ್ತು ದರ್ಬಾರ್ ಹಾಲ್ ಆಗಿತ್ತು. ಇಲ್ಲಿ ವಿವಿಧ ರೀತಿಯ ವಾಸ್ತುಕಲೆಗಳನ್ನು ಸಂಯೋಜಿಸಲಾಗಿದ್ದು, ಹಿಂದೂ, ಮುಸ್ಲಿಂ ಮತ್ತು ಗೋಥಿಕ್ ಶೈಲಿಯ ವಾಸ್ತುವನ್ನು ಪ್ರಮುಖವಾಗಿ ಬಳಸಲಾಗಿದೆ. ತಾಜ್‌ಮಹಲ್ ನಂತರ ಭಾರತದಲ್ಲಿ ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ ಐತಿಹಾಸಿಕ ಸ್ಮಾರಕವಿದು. ಈ ತಾಣವು ಇಂಡೋ-ಸಾರ್ಸೆನಿಕ್ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ.

ಭೇಟಿ ನೀಡಲು ಉತ್ತಮ ಸಮಯ: ಜುಲೈನಿಂದ ಫೆಬ್ರುವರಿ

ಸಮಯ: ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ

ತಲುಪುವುದು ಹೇಗೆ: ಮೈಸೂರು ವಿಮಾನ ನಿಲ್ದಾಣದಿಂದ 10.6ಕಿಮೀ.

ಮೈಸೂರು ಅರಮನೆ
ಮೈಸೂರು ಅರಮನೆ (HT File Photo)

3. ಉಜ್ಜಯಂತ ಅರಮನೆ, ಅಗರ್ತಲಾ

ತ್ರಿಪುರಾದಲ್ಲಿ ನೆಲೆಗೊಂಡಿರುವ ವಿಶ್ವದ ಅತ್ಯುತ್ತಮ ಅರಮನೆಗಳಲ್ಲಿ ಒಂದಾದ ಉಜ್ಜಯಂತ ಅರಮನೆಯನ್ನು 1901ರಲ್ಲಿ ನಿರ್ಮಿಸಲಾಯಿತು. 250 ಎಕರೆ ಪ್ರದೇಶದಲ್ಲಿ ಹರಡಿರುವ ಈ ರಾಜಮನೆತನಕ್ಕೆ ಪ್ರಸಿದ್ಧ ಬರಹಗಾರ ರವೀಂದ್ರನಾಥ ಟ್ಯಾಗೋರ್ ಹೆಸರಿಟ್ಟಿದ್ದಾರೆ. ಪ್ರಸ್ತುತ ಈ ಅರಮನೆಯನ್ನು ವಸ್ತುಸಂಗ್ರಹಾಲಯವಾಗಿ ಪರಿವರ್ತಿಸಲಾಗಿದೆ. ಈಶಾನ್ಯ ಭಾರತದ ಜೀವನಶೈಲಿ, ಕಲೆ ಮತ್ತು ಕರಕುಶಲತೆಯನ್ನು ಪ್ರತಿಬಿಂಬಿಸುವ ಅದ್ಭುತ ಕಲಾಕೃತಿಗಳ ಸಂಗ್ರಹವನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದಾಗಿದೆ.

ಉಜ್ಜಯಂತ ಅರಮನೆಯು 3 ಅಂತಸ್ತಿನ ಅರಮನೆಯಾಗಿದ್ದು, ಇತಿಹಾಸ ಹಾಗು ಸಂಸ್ಕೃತಿ ಪ್ರಿಯರನ್ನು ಬಹುವಾಗಿ ಆಕರ್ಷಿಸುತ್ತದೆ. 20ನೇ ಶತಮಾನಕ್ಕೆ ಸೇರಿದ ಈ ಅರಮನೆಯನ್ನು ಮಾಣಿಕ್ಯ ರಾಜವಂಶದ ಮಹಾರಾಜ ರಾಧಾ ಕಿಶೋರ್‌ ಮಾಣಿಕ್ಯ ಅವರು 1899 ರಿಂದ 1901 ರ ನಡುವೆ ನಿರ್ಮಿಸಿದರು. ತ್ರಿಪುರಾ ಸರ್ಕಾರವು ಈ ಅರಮನೆಯನ್ನು 1972 ರಲ್ಲಿ ಸ್ವಾಧೀನಪಡಿಸಿಕೊಂಡಿತು.

ಭೇಟಿ ನೀಡಲು ಉತ್ತಮ ಸಮಯ: ಜುಲೈನಿಂದ ಸೆಪ್ಟೆಂಬರ್

ಸಮಯ: ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ

ತಲುಪುವುದು ಹೇಗೆ: ಅಗರ್ತಲಾ ವಿಮಾನ ನಿಲ್ದಾಣದಿಂದ 10.7ಕಿಮೀ.

4. ಜೈ ವಿಲಾಸ್ ಅರಮನೆ, ಗ್ವಾಲಿಯರ್

1874ರಲ್ಲಿ ಮಹಾರಾಜ ಜಯಜಿ ರಾವ್ ಸಿಂಧಿಯಾ ನಿರ್ಮಿಸಿದ ಜೈ ವಿಲಾಸ್ ಅರಮನೆಯು ಮರಾಠ ಸಿಂಧಿಯಾ ಕುಟುಂಬದ ವಂಶಸ್ಥರ ನಿವಾಸವಾಗಿದೆ. ಶ್ರೀಮಂತ ಅರಮನೆಯು ಮೊಘಲ್ ಚಕ್ರವರ್ತಿಗಳ ವೈಯಕ್ತಿಕ ವಸ್ತುಗಳ ಅನನ್ಯ ಸಂಗ್ರಹವನ್ನು ಹೊಂದಿದೆ. 35 ಕೊಠಡಿಗಳನ್ನು ಒಳಗೊಂಡಿರುವ ಜೈ ವಿಲಾಸ್ ಅರಮನೆಯು ಯುರೋಪಿಯನ್ ವಾಸ್ತುಶಿಲ್ಪವನ್ನು ಹೊಂದಿದ್ದು, 124,771 ಚದರ ಅಡಿ ವಿಸ್ತೀರ್ಣವಿದೆ. ಇದು ದೊಡ್ಡ ದರ್ಬಾರ್ ಹಾಲ್‌ಗೆ ಹೆಸರುವಾಸಿಯಾಗಿದ್ದು, ಸದ್ಯ ವಸ್ತುಸಂಗ್ರಹಾಲಯವಾಗಿ ಮಾರ್ಪಟ್ಟಿದೆ. ನೋಡಲೇಬೇಕಾದಂತಹ ಅದ್ಭುತ ಅರಮನೆಗಳಲ್ಲಿ ಇದು ಕೂಡಾ ಒಂದಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್‌ನಿಂದ ಮಾರ್ಚ್

ಸಮಯ: ಬೆಳಿಗ್ಗೆ 10 ರಿಂದ ಸಂಜೆ 4:30 ರವರೆಗೆ

ತಲುಪುವುದು ಹೇಗೆ: ಗ್ವಾಲಿಯರ್ ವಿಮಾನ ನಿಲ್ದಾಣದಿಂದ ಕೇವಲ 14.4 ಕಿಮೀ ದೂರದಲ್ಲಿದೆ.

5. ಲಕ್ಷ್ಮಿ ವಿಲಾಸ್ ಅರಮನೆ, ವಡೋದರಾ

1890ರಲ್ಲಿ ನಿರ್ಮಿಸಲಾದ ಲಕ್ಷ್ಮಿ ವಿಲಾಸ್ ಅರಮನೆಯು ಇಂಗ್ಲೆಂಡ್‌ನಲ್ಲಿರುವ ಬಕಿಂಗ್‌ಹ್ಯಾಮ್ ಅರಮನೆಯ ನಾಲ್ಕು ಪಟ್ಟು ದೊಡ್ಡದಾಗಿದೆ. ಅದ್ಭುತವಾದ ಮರಾಠ ಮತ್ತು ಇಂಡೋ-ಸಾರ್ಸೆನಿಕ್ ವಾಸ್ತುಶಿಲ್ಪದೊಂದಿಗೆ, ಸೊಗಸಾದ ಒಳಾಂಗಣ ಮತ್ತು ಸುಂದರವಾದ ವಿನ್ಯಾಸಗಳನ್ನು ಹೊಂದಿದೆ.

500 ಎಕರೆ ಪ್ರದೇಶದಲ್ಲಿ ಹರಡಿರುವ ಕಾಂಪೌಂಡ್ ಹೊಂದಿರುವ ಈ ಅರಮನೆಯು ಮೋತಿ ಬಾಗ್ ಅರಮನೆ ಮತ್ತು ಮಹಾರಾಜ ಫತೇ ಸಿಂಗ್ ಮ್ಯೂಸಿಯಂ ಕಟ್ಟಡಗಳನ್ನು ಇದು ಒಳಗೊಂಡಿದ್ದು, ಬರೋಡಾದ ಗಾಯಕ್ವಾಡ್‌ ರಾಜಮನೆತನದ ಭವ್ಯ ಮಹಲ್ ಇದು. 1890 ರಲ್ಲಿ ಮೇಜರ್ ಚಾರ್ಲ್ಸ್ ಮಾಂಟ್ ಮಹಾರಾಜ ಮೂರನೇ ಸಯ್ಯಾಜಿರಾವ್ ಗಾಯಕ್ವಾಡ್ ಅವರಿಗಾಗಿ ಈ ಇಂಡೋ-ಸಾರ್ಸೆನಿಕ್ ಶೈಲಿಯ ವಾಸ್ತುಶಿಲ್ಪದಲ್ಲಿ ಅರಮನೆಯನ್ನು ವಿನ್ಯಾಸಗೊಳಿಸಿದರು. ಈಗ ಈ ಅರಮನೆಯು ವಸ್ತುಸಂಗ್ರಹಾಲಯವಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಡಿಸೆಂಬರ್‌ನಿಂದ ಮಾರ್ಚ್

ಸಮಯ: 9:30 ರಿಂದ ಸಂಜೆ 5 ರವರೆಗೆ

ತಲುಪುವುದು ಹೇಗೆ: ಲಕ್ಷ್ಮಿ ವಿಲಾಸ್ ಅರಮನೆಯಿಂದ 7.1 ಕಿಮೀ ದೂರದಲ್ಲಿ ವಡೋದರಾ ವಿಮಾನ ನಿಲ್ದಾಣವಿದೆ.

6. ಬೆಂಗಳೂರು ಅರಮನೆ

ವಿಸ್ತಾರವಾದ ಉದ್ಯಾನವನಗಳು ಮತ್ತು ವಾಸ್ತುಶಿಲ್ಪಕ್ಕೆ ಹೆಸರುವಾಸಿಯಾದ ಬೆಂಗಳೂರು ಅರಮನೆಯು 45,000 ಚದರ ಅಡಿಗಳಷ್ಟು ವ್ಯಾಪಿಸಿದೆ. 1878 ರಲ್ಲಿ ನಿರ್ಮಿಸಲಾದ ಅರಮನೆಯನ್ನು ಸ್ಕಾಟಿಷ್ ಗೋಥಿಕ್ ಮತ್ತು ಟ್ಯೂಡರ್ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾಗಿದೆ ಮತ್ತು ಇಂಗ್ಲೆಂಡ್‌ನ ವಿಂಡ್ಸರ್ ಕ್ಯಾಸಲ್‌ನಿಂದ ಸ್ಫೂರ್ತಿ ಪಡೆದಿದೆ.

ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್‌ನಿಂದ ಫೆಬ್ರುವರಿ

ಸಮಯ: ಬೆಳಿಗ್ಗೆ 10 ರಿಂದ ಸಂಜೆ 5:30 ರವರೆಗೆ

ತಲುಪುವುದು ಹೇಗೆ: ಬೆಂಗಳೂರು ವಿಮಾನ ನಿಲ್ದಾಣದಿಂದ 30.8 ಕಿಮೀ ದೂರದಲ್ಲಿದೆ.

7. ಮುಬಾರಕ್ ಮಂಡಿ ಅರಮನೆ, ಜಮ್ಮು

ಮುಬಾರಕ್ ಮಂಡಿ ಅರಮನೆಯು ಡೋಗ್ರಾ ರಾಜವಂಶದ ರಾಜ ಸಂಸ್ಕೃತಿಯನ್ನು ಪ್ರದರ್ಶಿಸುವ ಸುಂದರವಾದ ತಾಣ. ಹಳೆಯ ಗೋಡೆಯ ನಗರದ ಸಮೀಪವಿರುವ ತಾವಿ ನದಿಯ ಮೇಲಿರುವ ಅರಮನೆಯು ಗೋಲ್ ಘರ್ ಕಾಂಪ್ಲೆಕ್ಸ್, ರಾಣಿ ಚರಕ್ ಪ್ಯಾಲೇಸ್, ಶೀಶ್ ಮಹಲ್ ಮತ್ತು ದರ್ಬಾರ್ ಹಾಲ್ ಕಾಂಪ್ಲೆಕ್ಸ್ ಸೇರಿದಂತೆ ಅನೇಕ ಅಂಗಳಗಳು, ಸಭಾಂಗಣಗಳು ಮತ್ತು ಕೊಠಡಿಗಳನ್ನು ಹೊಂದಿದೆ. ರಾಜಸ್ಥಾನಿ, ಯುರೋಪಿಯನ್ ಮತ್ತು ಮೊಘಲ್ ವಾಸ್ತುಶಿಲ್ಪವನ್ನು ಇದು ಹೊಂದಿದೆ. ಪ್ರಸ್ತುತ, ಮುಬಾರಕ್ ಮಂಡಿ ಅರಮನೆಯು ಸರ್ಕಾರಿ ಕಚೇರಿಗಳು ಹಾಗೂ ಡೋಗ್ರಾ ಆರ್ಟ್ ಮ್ಯೂಸಿಯಂ ಹೊಂದಿದೆ.

ಭೇಟಿ ನೀಡಲು ಉತ್ತಮ ಸಮಯ: ಮಾರ್ಚ್‌ನಿಂದ ಆಗಸ್ಟ್

ಸಮಯ: 10:30 ರಿಂದ ಸಂಜೆ 4:30 (ಚಳಿಗಾಲ), 8:00 ರಿಂದ ಮಧ್ಯಾಹ್ನ 1:30 (ಬೇಸಿಗೆ)

ತಲುಪುವುದು ಹೇಗೆ: ಜಮ್ಮು ವಿಮಾನ ನಿಲ್ದಾಣದಿಂದ ಕೇವಲ 8.6 ಕಿಮೀ ದೂರದಲ್ಲಿದೆ.

ಮುಬಾರಕ್ ಮಂಡಿ ಅರಮನೆ, ಜಮ್ಮು
ಮುಬಾರಕ್ ಮಂಡಿ ಅರಮನೆ, ಜಮ್ಮು (Trawell.in)

8. ಹವಾ ಮಹಲ್, ಜೈಪುರ

ಗುಲಾಬಿ ನಗರವು ಒಂದಕ್ಕಿಂತ ಹೆಚ್ಚು ಅರಮನೆಗಳನ್ನು ಹೊಂದಿದ್ದರೂ, ಹವಾ ಮಹಲ್ ಪ್ರಮುಖ ಆಕರ್ಷಣೆಯಾಗಿದೆ. ಯಾವುದೇ ಅಡಿಪಾಯವಿಲ್ಲದೆ ವರ್ಷಗಳಿಂದ ನಿಂತಿರುವ ವಿಶ್ವದ ಏಕೈಕ ಕಟ್ಟಡ ಇದಾಗಿದೆ. ಈ ಅರಮನೆಯು ಹಿಂದೂ ರಜಪೂತ ವಾಸ್ತುಶಿಲ್ಪ ಮತ್ತು ಇಸ್ಲಾಮಿಕ್ ಮೊಘಲ್ ವಾಸ್ತುಶೈಲಿಯ ಸಮ್ಮಿಲನವಾಗಿದ್ದು, 1799 ರಲ್ಲಿ ಜೈಪುರದ ಕಚ್ವಾಹಾ ದೊರೆ ಮಹಾರಾಜ ಸವಾಯಿ ಪ್ರತಾಪ್ ಸಿಂಗ್ ನಿರ್ಮಿಸಿದರು. ಅವರು ಶ್ರೀ ಕೃಷ್ಣನ ಮಹಾನ್ ಭಕ್ತರಾಗಿದ್ದರು. ಈ ಕಾರಣಕ್ಕಾಗಿಯೇ ಅವರು ಈ ಅರಮನೆಗೆ ಶ್ರೀ ಕೃಷ್ಣನ ಕಿರೀಟದ ರೂಪವನ್ನು ನೀಡಿದರು.

ರಾಜಮನೆತನದ ಮಹಿಳೆಯರಿಗೆ ಜೈಪುರ ನಗರದ ವೈಭವವನ್ನು ನೋಡಲು ಅವಕಾಶ ಮಾಡಿಕೊಡಲು ಇದನ್ನು ನಿರ್ಮಿಸಲಾಗಿದೆ. ಈ ಅರಮನೆಯಲ್ಲಿ 953 ಸಣ್ಣ ಕಿಟಕಿಗಳಿವೆ. ಇದನ್ನು ವಿಶೇಷವಾಗಿ ‘ಝರೋಕಾ’ ಎಂದು ಕರೆಯುತ್ತಾರೆ.

ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್‌ನಿಂದ ಮಾರ್ಚ್

ಸಮಯ: 9:00 ರಿಂದ ಸಂಜೆ 5:00 ರವರೆಗೆ

ತಲುಪುವುದು ಹೇಗೆ: ಜೈಪುರ ವಿಮಾನ ನಿಲ್ದಾಣದಿಂದ ಹವಾ ಮಹಲ್ 12 ಕಿಮೀ ದೂರದಲ್ಲಿದೆ.

9. ತಾಜ್ ಫಲಕ್ನುಮಾ ಅರಮನೆ, ಹೈದರಾಬಾದ್

1893ರಲ್ಲಿ ನಿರ್ಮಿಸಲಾದ ತಾಜ್ ಫಲಕ್ನುಮಾ ಅರಮನೆಯು ಹೈದರಾಬಾದ್ ನಿಜಾಮರ ನಿವಾಸವಾಗಿತ್ತು. ಈ ರಚನೆಯು ಬೆಟ್ಟದ ತುದಿಯಲ್ಲಿದ್ದು, 60 ಕೊಠಡಿಗಳು ಮತ್ತು 22 ಸಭಾಂಗಣಗಳನ್ನು ಹೊಂದಿರುವ ಭವ್ಯವಾದ ಅರಮನೆಯಾಗಿದೆ. ಸುಮಾರು 1938 ಚದರ ಅಡಿಗಳಷ್ಟು ವ್ಯಾಪಿಸಿರುವ ಈ ಅರಮನೆಯಲ್ಲಿ ಖಾಸಗಿ ಕೊಳ, ಎಲ್ಲಿ ನೋಡಿದರೂ ಅಮೃತಶಿಲೆಯ ಅದ್ಭುತ ನೋಟ ನೋಡುಗರನ್ನು ಮಂತ್ರಮುಗ್ಧಗೊಳಿಸುತ್ತದೆ. ಈಗ ಈ ಅರಮನೆಯು ತಾಜ್ ಆಸ್ತಿಗಳ ಅಡಿಯಲ್ಲಿ ಐಷಾರಾಮಿ ಪಂಚತಾರಾ ಹೋಟೆಲ್‌ನಂತೆ ಕಾರ್ಯನಿರ್ವಹಿಸುತ್ತಿದ್ದು, ಭಾರತದ ಅತ್ಯುತ್ತಮ ಅರಮನೆಯ ಹೋಟೆಲ್‌ಗಳಲ್ಲಿ ಒಂದಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ಅಕ್ಟೋಬರ್‌ನಿಂದ ಮಾರ್ಚ್‌ವರೆಗೆ

ಸಮಯ: ಬೆಳಗ್ಗೆ 9 ರಿಂದ ಸಂಜೆ 6:30

ತಲುಪುವುದು ಹೇಗೆ: ಹೈದರಾಬಾದ್ ವಿಮಾನ ನಿಲ್ದಾಣದಿಂದ 18 ಕಿಮೀ ದೂರದಲ್ಲಿದೆ.

10. ರಾಮನಗರ ಕೋಟೆ, ವಾರಣಾಸಿ

ವಾರಣಾಸಿಯ ಪ್ರಮುಖ ಪ್ರವಾಸಿ ಆಕರ್ಷಣೆಯಾಗಿರುವ ರಾಮನಗರ ಕೋಟೆಯು ಗಂಗಾನದಿಯ ಪೂರ್ವ ದಂಡೆಯಲ್ಲಿದೆ. 17ನೇ ಶತಮಾನದ ಈ ಕೋಟೆಯು ಮೊಘಲ್ ವಾಸ್ತುಶೈಲಿಯಲ್ಲಿದ್ದು, ಚುನಾರ್ ಮರಳುಗಲ್ಲಿನಿಂದ ನಿರ್ಮಿಸಲಾಗಿದೆ.

ಭೇಟಿ ನೀಡಲು ಉತ್ತಮ ಸಮಯ: ನವೆಂಬರ್‌ನಿಂದ ಫೆಬ್ರವರಿ

ಸಮಯ: ಬೆಳಿಗ್ಗೆ 10 ರಿಂದ ಸಂಜೆ 5 ರವರೆಗೆ

ತಲುಪುವುದು ಹೇಗೆ: 10.7 ಕಿಮೀ ದೂರದಲ್ಲಿ ವಾರಣಾಸಿ ವಿಮಾನ ನಿಲ್ದಾಣವಿದೆ.

11. ಪದ್ಮನಾಭಪುರಂ ಅರಮನೆ, ಕನ್ಯಾಕುಮಾರಿ

ಭಾರತದ ಅತ್ಯುತ್ತಮ ಅರಮನೆಗಳಲ್ಲಿ ಒಂದಾದ ಪದ್ಮನಾಭಪುರಂ ಅರಮನೆಯು, ಕೇರಳ ವಾಸ್ತುಶಿಲ್ಪಕ್ಕೆ ಅತ್ಯುತ್ತಮ ಉದಾಹರಣೆಯಾಗಿದೆ. ಪದ್ಮನಾಭಪುರಂ ಅರಮನೆಯು ಕಿಂಗ್ಸ್ ಕೌನ್ಸಿಲ್ ಚೇಂಬರ್, ಪ್ರದರ್ಶನ ಸಭಾಂಗಣ, ದಕ್ಷಿಣ ಅರಮನೆ, ಅತಿಥಿ ಗೃಹ ಮತ್ತು ಥಾಯ್ ಕೊಟ್ಟಾಯಂನಂತಹ ಅನೇಕ ಸಂಕೀರ್ಣಗಳನ್ನು ಹೊಂದಿದೆ. ಇದು ತಮಿಳುನಾಡಿನ ಭೂಪ್ರದೇಶದಲ್ಲಿದ್ದರೂ, ಅರಮನೆಯು ಕೇರಳ ಸರ್ಕಾರದ ಒಡೆತನದಲ್ಲಿದೆ.

ಭೇಟಿ ನೀಡಲು ಉತ್ತಮ ಸಮಯ: ಡಿಸೆಂಬರ್‌ನಿಂದ ಫೆಬ್ರವರಿ

ಸಮಯ: 9:00 ರಿಂದ 4:30

ತಲುಪುವುದು ಹೇಗೆ: 49 ಕಿಮೀ ದೂರದಲ್ಲಿ ತಿರುವನಂತಪುರಂ ವಿಮಾನ ನಿಲ್ದಾಣವಿದೆ.

ಪದ್ಮನಾಭಪುರಂ ಅರಮನೆ, ಕನ್ಯಾಕುಮಾರಿ
ಪದ್ಮನಾಭಪುರಂ ಅರಮನೆ, ಕನ್ಯಾಕುಮಾರಿ (Tripadvisor )

ಭಾರತವು ತನ್ನ ಶ್ರೀಮಂತ ಇತಿಹಾಸವನ್ನು ಪ್ರತಿಬಿಂಬಿಸುವ ಅನೇಕ ರಾಜಮನೆತನಗಳನ್ನು ಹೊಂದಿದೆ. ಈ ಬೆರಗುಗೊಳಿಸುವ ಅರಮನೆಗಳ ರಚನೆಗಳು, ವೈಭವವಂತೂ ನಿಮ್ಮನ್ನು ಮಂತ್ರಮುಗ್ಧರನ್ನಾಗಿಸುತ್ತದೆ. ಆದ್ದರಿಂದ, ನಿಮ್ಮ ಮುಂದಿನ ಪ್ರವಾಸದ ಪ್ಲಾನ್‌ ಮಾಡುವಾಗ ತಪ್ಪದೇ ಈ ಅರಮನೆಗಳಿಗೊಮ್ಮೆ ಭೇಟಿ ನೀಡಲು ಮರೆಯದಿರಿ.