ಕನ್ನಡ ಸುದ್ದಿ  /  ಜೀವನಶೈಲಿ  /  Travel Tips: ಬೇಸಿಗೆಯಲ್ಲಿ ಪ್ರವಾಸ ಮಾಡುವವರು ತಪ್ಪದೇ ಪಾಲಿಸಬೇಕಾದ ಮಹತ್ವದ ಸಲಹೆಗಳಿವು

Travel Tips: ಬೇಸಿಗೆಯಲ್ಲಿ ಪ್ರವಾಸ ಮಾಡುವವರು ತಪ್ಪದೇ ಪಾಲಿಸಬೇಕಾದ ಮಹತ್ವದ ಸಲಹೆಗಳಿವು

ಮೇ ತಿಂಗಳು ಬಂತು ಎಂದರೆ ಟ್ರಿಪ್‌ ಪ್ಲಾನ್‌ ಮಾಡುವವರೇ ಜಾಸ್ತಿ. ಆದ್ರೇನು ಮಾಡೋದು ಈ ವರ್ಷ ಬಿಸಿಲಿನ ತಾಪ ಜೋರಾಗಿರುವ ಕಾರಣ ಹೊರಗಡೆ ಹೋಗುವುದು ಅಸಾಧ್ಯವಾಗಿದೆ. ಹಾಗಂತ ಸುಮ್ನೆ ಕುರೋಕೆ ಆಗುತ್ತಾ, ಈ ಸಲಹೆಗಳನ್ನು ಪಾಲಿಸಿ ಟ್ರಿಪ್‌ ಎಂಜಾಯ್‌ ಮಾಡಿ.

ಬೇಸಿಗೆಯಲ್ಲಿ ಪ್ರವಾಸಕ್ಕೆ ಹೋಗೋರು ತಪ್ಪದೇ ಪಾಲಿಸಬೇಕಾದ ಮಹತ್ವದ ಸಲಹೆಗಳಿವು
ಬೇಸಿಗೆಯಲ್ಲಿ ಪ್ರವಾಸಕ್ಕೆ ಹೋಗೋರು ತಪ್ಪದೇ ಪಾಲಿಸಬೇಕಾದ ಮಹತ್ವದ ಸಲಹೆಗಳಿವು

ಮಕ್ಕಳಿಗೆ ಶಾಲೆ ಇರುವಾಗ ಎಲ್ಲಿಯೂ ಹೋಗಲು ಸಾಧ್ಯವಿಲ್ಲ. ಈಗ ರಜೆ ಆರಂಭವಾಗಿದೆ, ಈಗ್ಲಾದ್ರೂ ಒಂದು ನಾಲ್ಕು ದಿನ ಹೊರಗಡೆ ಸುತ್ತಾಡಿ ಬರಬೇಕು ಎಂದು ಪ್ಲಾನ್‌ ಮಾಡುವವರು ಹಲವರು. ಆದರೆ ಈ ವರ್ಷ ಬೇಸಿಗೆಯ ಬಿಸಿಲು ಜೋರಾಗಿದೆ, ಹೊರಗಡೆ ಹೋಗುವುದು ಅಸಾಧ್ಯ ಎನ್ನಿಸುವಷ್ಟು ಬಿಸಿಲಿ. ಹಾಗಂತ ಮನಸ್ಸು ಕೇಳಬೇಕಲ್ಲ. ನೀವು ಬಿರುಬೇಸಿಗೆಯಲ್ಲೂ ಟ್ರಿಪ್‌ ಎಂಜಾಯ್‌ ಮಾಡಬೇಕು ಅಂತ ಪ್ಲಾನ್‌ ಮಾಡಿದ್ರೆ ಇಲ್ಲಿದೆ ನಿಮಗಾಗಿ ಒಂದಿಷ್ಟು ಮಹತ್ವದ ಟಿಪ್ಸ್‌. ಬೇಸಿಗೆಯಲ್ಲಿ ಟ್ರಿಪ್‌ ಪ್ಲಾನ್‌ ಮಾಡೋರು ತಪ್ಪದೇ ಅನುಸರಿಸಬೇಕಾದ ಸಲಹೆಗಳಿವು.

ಟ್ರೆಂಡಿಂಗ್​ ಸುದ್ದಿ

ಬಿರುಬಿಸಿಲಿನಲ್ಲಿ ಹೊರಗಡೆ ಸುತ್ತಾಡಬೇಡಿ

ನೀವು ಎಂತಹ ತಂಪಾದ ತಾಣವನ್ನು ಆಯ್ಕೆ ಮಾಡಿಕೊಂಡಿದ್ದು ಮಧ್ಯಾಹ್ನ ಬಿಸಿಲಿಗೆ ಹೊರಗಡೆ ಸುತ್ತಾಡಬೇಡಿ. ಸಾಧ್ಯವಾದಷ್ಟು ಬೆಳಗಿನ ಹೊತ್ತು ಹಾಗೂ ಸಂಜೆ ವೇಳೆಯನ್ನು ಸುತ್ತಾಡಲು ಆಯ್ಕೆ ಮಾಡಿಕೊಳ್ಳಿ. ತಂಪನೆಯ ವಾತಾವರಣದಲ್ಲೂ ಬಿಸಿಲಿನ ತಾಪ ಜೋರಾಗಿ ಇರಬಹುದು. ತಾಪಮಾನದ ಬಗ್ಗೆ ಎಚ್ಚರವಿರಲಿ

ಸನ್‌ಸ್ಕ್ರೀನ್‌ ಬಳಸದೇ ಇರಬೇಡಿ

ಬೇಸಿಗೆಯಲ್ಲಿ ನಿಮ್ಮ ಟ್ರಿಪ್‌ನಲ್ಲಿ ಅಗತ್ಯವಾಗಿ ಜೊತೆ ಇರಬೇಕಾಗಿದ್ದು ಸನ್‌ಸ್ಕ್ರೀನ್‌ ಲೋಷನ್‌, ನೀವು ಎಂತಹದ್ದೇ ಜಾಗ ಆಯ್ಕೆ ಮಾಡಿಕೊಂಡಿದ್ದರೂ ಸನ್‌ಸ್ಕ್ರೀನ್‌ ಲೋಷನ್‌ ಹಚ್ಚಿಕೊಳ್ಳದೇ ಹೊರಗಡೆ ಹೋಗಬೇಡಿ. ಬಿಸಿಲಿನ ತಾಪ ಹೆಚ್ಚಿರುವ ಕಾರಣ ಚರ್ಮ ಟ್ಯಾನ್‌ ಆಗುವುದು ಖಂಡಿತ.

ಸನ್‌ಗ್ಲಾಸ್‌, ಟೋಪಿ ಕಡ್ಡಾಯವಾಗಿರಲಿ

ಬೇಸಿಗೆಯಲ್ಲಿ ಟ್ರಿಪ್‌ಗೆ ಹೋಗುವಾಗ ಸನ್‌ಗ್ಲಾಸ್‌ ಹಾಗೂ ಟೋಪಿ ಜೊತೆ ಇರಲೇಬೇಕು. ಇದು ನಮ್ಮನ್ನು ಬಿಸಿಲಿನ ಶಾಖದಿಂದ ರಕ್ಷಿಸುತ್ತದೆ. ನೆತ್ತಿ ಸುಡುವ ಬಿಸಿಲು ತಲೆನೋವು ಸೇರಿದಂತೆ ಇನ್ನಿತರ ಸಮಸ್ಯೆಗಳನ್ನು ಉಂಟು ಮಾಡಬಹುದು. ಜೊತೆಗೆ ಸೂರ್ಯನ ಕಿರಣಗಳಿಂದ ಕಣ್ಣುಗಳಿಗೂ ಹಾನಿಯಾಗಬಹುದು.

ಎಮರ್ಜೆನ್ಸಿ ಕಿಟ್‌ ನಿಮ್ಮ ಬಳಿ ಇರಲಿ

ಬೇಸಿಗೆಯ ಪ್ರವಾಸಕ್ಕೆ ಹೋಗುವಾಗ ಸಾಕಷ್ಟು ನೀರು, ಹಣ್ಣುಗಳು, ಓಆರ್‌ಎಸ್‌ಗಳನ್ನು ನಿಮ್ಮ ಬಳಿ ಇರಿಸಿಕೊಂಡಿರಲೇಬೇಕು. ಚಿಕ್ಕ ಮಕ್ಕಳು ಜೊತೆ ಇದ್ದರೆ ಅವುಗಳಿಗೆ ಕುಡಿಯಲು ಹಾಲನ್ನು ಕೂಡ ಬಾಟಲಿಯಲ್ಲಿ ತುಂಬಿಸಿಕೊಂಡಿರಿ.

ನೀರು ಕುಡಿಯುತ್ತಲೇ ಇರಿ

ಪ್ರವಾಸವನ್ನು ಎಂಜಾಯ್‌ ಮಾಡುವ ಭರದಲ್ಲಿ ನೀರು ಕುಡಿಯದೇ ಇರಬೇಡಿ. ಎಲ್ಲಾ ಸಮಯದಲ್ಲೂ ನೀರು ಕುಡಿಯುತ್ತಲೇ ಇರಿ. ದಾರಿಯಲ್ಲಿ ಎಳನೀರು, ಮಜ್ಜಿಗೆಯಂತಹ ನೈಸರ್ಗಿಕ ಪಾನೀಯಗಳ ಸಿಕ್ಕರೆ ಅವುಗಳನ್ನು ಕುಡಿಯಿರಿ. ಬೇಸಿಗೆಯ ಪ್ರವಾಸದಲ್ಲಿ ದೇಹ ನಿರ್ಜಲೀಕರಣ (ಡೀಹೈಡ್ರೇಷನ್‌) ಆಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ.

ಬೀದಿಬದಿ ಆಹಾರ ಸೇವನೆ ಸಲ್ಲ

ಪ್ರವಾಸ ಎಂದಾಕ್ಷಣ ನಾವು ಹೋಗುವ ಸ್ಥಳಗಳ ಲೋಕಲ್‌ ಫುಡ್‌ ಕೂಡ ನೆನಪಾಗುತ್ತದೆ. ಪ್ರವಾಸದಲ್ಲಿ ಲೋಕಲ್‌ಫುಡ್‌ಗಳನ್ನು ಸವಿಯುವುದು ಸಹಜ. ಆದರೆ ಬೇಸಿಗೆಯಲ್ಲಿ ಬೀದಿಬದಿ ಆಹಾರ ಆರೋಗ್ಯ ಕೆಡಿಸಬಹುದು. ಸಾಧ್ಯವಾದಷ್ಟು ಬೀದಿಬದಿ ಆಹಾರ ಸೇವನೆಗೆ ಕಡಿವಾಣ ಹಾಕಿ, ಸಾಧ್ಯವಾದಷ್ಟು ಹಣ್ಣು-ತರಕಾರಿ ಸೇವಿಸಿ.

ನಿಮ್ಮಿಷ್ಟದ ಸ್ಥಳದ ಬಗ್ಗೆ ರೀಸರ್ಚ್‌ ಮಾಡಿ

ನೀವು ಪ್ರವಾಸಕ್ಕೆ ಹೋಗಬೇಕು ಎಂದು ಕೊಂಡಿರುವ ಸ್ಥಳದ ಬಗ್ಗೆ ಮೊದಲೇ ಸಾಕಷ್ಟು ರೀಸರ್ಚ್‌ ಮಾಡಿ. ಬೇಸಿಗೆಯ ತಾಪ ಒಂದೊಂದು ಕಡೆ ಒಂದೊಂದು ರೀತಿ ಇರುತ್ತದೆ. ನೀವು ಹೋಗಬೇಕೆಂದಿರುವ ಸ್ಥಳದಲ್ಲಿ ಸದ್ಯದ ತಾಪಮಾನ ಎಷ್ಟಿದೆ ಗಮನಿಸಿ. ಅಲ್ಲಿ ಹೋದರೆ ನೀವು ಪ್ರವಾಸವನ್ನು ಎಂಜಾಯ್‌ ಮಾಡಬಹುದೇ ಇಲ್ಲವೇ ಎಂಬುದನ್ನು ಮೊದಲೇ ನಿರ್ಧಾರ ಮಾಡಿಕೊಳ್ಳಿ.

ಬೇಸಿಗೆಗೆ ಹೊಂದುವ ಬಟ್ಟೆ

ಬೇಸಿಗೆಕಾಲದಲ್ಲಿ ಪ್ರವಾಸಕ್ಕೆ ಹೋಗುವಾಗ ಬಿಸಿಲಿಗೆ ಹೊಂದುವ ಬಟ್ಟೆ ಬಹಳ ಮುಖ್ಯ. ತೆಳ್ಳನೆಯ ಹತ್ತಿ ಬಟ್ಟೆಗೆ ಆದ್ಯತೆ ನೀಡಿ. ತುಂಬು ತೋಳಿನ, ಪಾದದವರೆಗೆ ಮುಚ್ಚಿರುವ ಬಟ್ಟೆ ಧರಿಸಿ.

ಬಿಸಿಲಿನಲ್ಲಿ ಕಾರಿನಲ್ಲಿ ಸುತ್ತಾಟ ಬೇಡ

ನೀವು ನಿಮ್ಮ ಸ್ವಂತ ವಾಹನದಲ್ಲಿ ಪ್ರವಾಸ ಮಾಡುತ್ತಿದ್ದರೆ ಉರಿ ಬಿಸಿಲಿನ ಸಮಯದಲ್ಲಿ ಕಾರಿನಲ್ಲಿ ಸುತ್ತಾಡಬೇಡಿ. ಕಾರಿನಲ್ಲಿ ಏಸಿ ಇದ್ದರೂ ಬಿಸಿಲಿನ ತಾಪಕ್ಕೆ ತೊಂದರೆ ಎದುರಾಗಬಹುದು. ಕಾರಿನ ಗ್ಲಾಸ್‌ ಇಳಿಸಿಕೊಂಡು ತಿರುಗಾಡಿ.

ಅಗತ್ಯ ಔಷಧಿಗಳು ಜೊತೆಗಿರಲಿ

ಪ್ರವಾಸ ಎಂದರೆ ಎಂಜಾಯ್‌ಮೆಂಟ್‌ ಎನ್ನುವುದು ಎಷ್ಟು ನಿಜವೂ ಜಾಗೃತೆಯೂ ಅಷ್ಟೇ ಮುಖ್ಯ. ಈ ಸಮಯದಲ್ಲಿ ನೀವು ಆರೋಗ್ಯದ ಬಗ್ಗೆ ಸಾಕಷ್ಟು ಎಚ್ಚರ ವಹಿಸಬೇಕು. ನಿಮ್ಮ ಅಗತ್ಯ ವೈದ್ಯಕೀಯ ಪರಿಕರಗಳ ಜೊತೆಗೆ ಇತರ ಔಷಧಿಗಳನ್ನು ಜೊತೆ ಇರಿಸಿಕೊಳ್ಳಿ.

ಕುಡಿಯವ ನೀರಿನ ಮೇಲೆ ಗಮನ ಹರಿಸಿ

ಬೇಸಿಗೆಯಲ್ಲಿ ಕುಡಿಯುವ ನೀರು ಕಲುಷಿತವಾಗಿರುವುದು ಸಹಜ. ಬೇರೆ ಊರಿಗೆ ಪ್ರವಾಸಕ್ಕೆ ಹೋದಾಗ ಕುಡಿಯುವ ನೀರಿನ ಮೇಲೆ ಹೆಚ್ಚು ಗಮನ ಹರಿಸಿ. ಸಿಕ್ಕಸಿಕ್ಕಲ್ಲಿ ನೀರು ಕುಡಿಯಬೇಡಿ. ನಿಮ್ಮ ಜೊತೆ ಸಾಧ್ಯವಾದಷ್ಟು ಶುದ್ಧ ಬಾಟಲಿ ನೀರು ಇರಿಸಿಕೊಳ್ಳಿ.

ಬೇಸಿಗೆಯಲ್ಲಿ ಪ್ರವಾಸವನ್ನು ಎಂಜಾಯ್‌ ಮಾಡಬೇಕು ನಿಜ, ಆದರೆ ಈ ಸಲಹೆಗಳನ್ನು ನೀವು ಪಾಲಿಸದೇ ಹೋದರೆ ತೊಂದರೆ ಎದುರಾಗಬಹುದು. ಹಾಗಾಗಿ ಸಾಕಷ್ಟು ಎಚ್ಚರವಹಿಸಬೇಕು.