Udupi News: ಬೆನ್ನು ಬಾಗಿದ್ರೂ ಉತ್ಸಾಹ ಕುಗ್ಗಿಲ್ಲ; ಉಡುಪಿ ಜಿಲ್ಲೆ ಪರ್ಕಳದ ಅಜ್ಜ ಅಜ್ಜಿ ಹೋಟೆಲ್ ಖ್ಯಾತಿಯ ಈ ವೃದ್ಧ ದಂಪತಿ ಎಲ್ರಿಗೂ ಮಾದರಿ
ಇಲ್ಲಿ ಮಧ್ಯಾಹ್ನ ಊಟ ಮಾತ್ರ. ಬೆಳಗಿನ ತಿಂಡಿ, ರಾತ್ರಿ ಊಟ ದೊರೆಯುವುದಿಲ್ಲ. ಈ ದಂಪತಿಯ ಮಗ ರಾಮ್ ಪ್ರಸಾದ್ , ಸೊಸೆ ರೇಷ್ಮಾ. ಇಬ್ಬರೂ ಬೆಳಗ್ಗೆ ಕೆಲಸಕ್ಕೆ ಹೋಗುವಷ್ಟರಲ್ಲಿ ಆದಷ್ಟು ಹೆಲ್ಪ್ ಮಾಡಿ ಹೋಗ್ತಾರೆ. ಬೆಳಗ್ಗೆ 4.45ಕ್ಕೆ ಎದ್ದರೆ ಅಡುಗೆ ಕೆಲಸ ಶುರು.
ಹೊರಗೆ ಎಲ್ಲಾದ್ರೂ ಹೋದಾಗ ಹಸಿವಾದ್ರೆ ಹೋಟೆಲ್‌ನತ್ತ ಹೆಜ್ಜೆ ಹಾಕ್ತೇವೆ. ಅಲ್ಲಿ ಕೇಳಿದಷ್ಟು ಬಿಲ್ ಕೊಟ್ಟು ತಿಂದು ಬರುತ್ತೇವೆ. ಹೊಟ್ಟೆ ತುಂಬಾ ತಿಂದರೂ ಕೆಲವೊಂದು ಹೋಟೆಲ್‌ಗಳಲ್ಲಿ ತಿಂದದ್ದು ತೃಪ್ತಿ ಆಗೋದಿಲ್ಲ. ಆದರೆ ಹೋಟೆಲ್‌ನಲ್ಲಿ ಮನೆ ರುಚಿ ದೊರೆಯುವ ಹಾಗಿದ್ರೆ ಹೇಗೆ? ಅದರೂ ಕೂಡಾ ಬಹಳ ಕಡಿಮೆ ಬೆಲೆಯಲ್ಲಿ!.
ಹೋಟೆಲ್ ಗಣೇಶ್ ಪ್ರಸಾದ್
ನಮ್ಮಲ್ಲಿ ಎಷ್ಟೋ ಹೋಟೆಲ್ ಮಾಲೀಕರು ಹಣ ಮಾಡುವ ಉದ್ದೇಶದಿಂದ ಮಾತ್ರವಲ್ಲದೆ ಜನರ ಹೊಟ್ಟೆ ತುಂಬಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. 50 ರೂಪಾಯಿ ಕೊಟ್ಟು ಹೊಟ್ಟೆ ತುಂಬಾ ಮನೆ ಊಟ ತಿಂದಷ್ಟು ತೃಪ್ತಿ ಸಿಗುತ್ತದೆ ಎಂದರೆ ಯಾರು ತಾನೇ ಬಿಡ್ತಾರೆ. ಅಂತಹ ಹೋಟೆಲ್‌ಗಳಲ್ಲಿ ಉಡುಪಿಯ ಪರ್ಕಳದ ಗಣೇಶ್ ಪ್ರಸಾದ್ ಹೋಟೆಲ್ ಕೂಡಾ ಒಂದು. ಹೋಟೆಲ್ ಅಂದ್ರೆ ಅಲ್ಲಿ ಬಿಲ್ ಕೌಂಟರ್, ಸಪ್ಲೈಯರ್, ಕ್ಲೀನರ್ ಇರೋದು ಸಹಜ ಆದ್ರೆ ಇಲ್ಲಿ ಅಂತದ್ದು ಏನೂ ಇಲ್ಲ. ಅದೊಂದು ಮನೆ, ಇಲ್ಲಿ ಊಟ ಬಡಿಸೋದು, ಹಣ ಪಡೆಯುವುದು, ಪಾತ್ರೆ ತೊಳೆಯೋದು ಎಲ್ಲಾ ವೃದ್ಧ ದಂಪತಿ ಮಾಡ್ತಾರೆ. ಈ ಹೋಟೆಲ್‌ಗೆ ಅಜ್ಜ ಅಜ್ಜಿ ಹೋಟೆಲ್ ಅಂತಾನೂ ಕರೆಯುತ್ತಾರೆ.
ಮನೆಯೇ ಹೋಟೆಲ್
ಇವರ ಹೆಸರು ಗೋಪಾಲಕೃಷ್ಣ ಪ್ರಭು ವಯಸ್ಸು 80, ಅಜ್ಜಿಯ ಹೆಸರು ವಸಂತಿ ಪ್ರಭು, ವಯಸ್ಸು 72. ಇಬ್ಬರಿಗೆ ಇಷ್ಟು ವಯಸ್ಸಾದರೂ ಕೆಲಸ ಮಾಡುವ ಉತ್ಸಾಹ ಸ್ವಲ್ಪವೂ ಕಡಿಮೆ ಆಗಿಲ್ಲ. 1951ರಲ್ಲಿ ಗೋಪಾಲ್ ಅವರ ತಂದೆ ಪರ್ಕಳ ಮುಖ್ಯ ರಸ್ತೆಯಲ್ಲಿ ಹೋಟೆಲ್ ನಡೆಸುತ್ತಿದ್ರು, ಆದರೆ ರಸ್ತೆ ಅಗಲೀಕರಣಕ್ಕಾಗಿ ಸುತ್ತಮುತ್ತಲಿನ ಸ್ಥಳಗಳ ಒತ್ತುವರಿ ಆದಾಗ ಆ ಹೋಟೆಲ್ ಮುಚ್ಚಬೇಕಾಯ್ತು. ನಂತರ ಮನೆಯಲ್ಲೇ ಹೋಟೆಲ್ ಶುರುವಾಯ್ತು. ಗೋಪಾಲ್ ಅವರು ಚಿಕ್ಕ ವಯಸ್ಸಿನಿಂದಲೂ ತಂದೆ ಜೊತೆ ಹೋಟೆಲ್ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ವಾಸಂತಿಯವರು ಮಣಿಪಾಲ್ ಪ್ರೆಸ್ ಲಿಮಿಟೆಡ್‌ನ ಹೆಚ್‌ಆರ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದವರು. ನಿವೃತ್ತಿಯಾಗಿ 11 ವರ್ಷಗಳಾಗಿವೆ. ಕೆಲಸ ಬಿಟ್ಟ ನಂತರ ಪತಿಗೆ ಹೋಟೆಲ್ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದಾರೆ.
ಮೆನು ಈ ರೀತಿ ಇದೆ
ಇಲ್ಲಿ ಮಧ್ಯಾಹ್ನ ಊಟ ಮಾತ್ರ. ಬೆಳಗಿನ ತಿಂಡಿ, ರಾತ್ರಿ ಊಟ ದೊರೆಯುವುದಿಲ್ಲ. ಈ ದಂಪತಿಯ ಮಗ ರಾಮ್ ಪ್ರಸಾದ್ , ಸೊಸೆ ರೇಷ್ಮಾ. ಇಬ್ಬರೂ ಬೆಳಗ್ಗೆ ಕೆಲಸಕ್ಕೆ ಹೋಗುವಷ್ಟರಲ್ಲಿ ಆದಷ್ಟು ಹೆಲ್ಪ್ ಮಾಡಿ ಹೋಗ್ತಾರೆ. ಬೆಳಗ್ಗೆ 4.45ಕ್ಕೆ ಎದ್ದರೆ ಅಡುಗೆ ಕೆಲಸ ಶುರು. ಪ್ರತಿದಿನ ಮಧ್ಯಾಹ್ನ 12.30 ಒಳಗೆ ಅಡುಗೆ ರೆಡಿ ಆಗುತ್ತೆ. ಅನ್ನ, ಸಾಂಬಾರ್, ತೊವ್ವೆ, ಪಲ್ಯ, ಚಟ್ನಿ, ಉಪ್ಪಿನಕಾಯಿ, ಮೆಣಸಿನ ಬಜೆ ಇವಿಷ್ಟೂ ಪ್ರತಿದಿನದ ಮೆನು. ಸೋಮವಾರದಿಂದ ಶನಿವಾರದವರೆಗೂ ಈ ಹೋಟೆಲ್‌ನಲ್ಲಿ ನಿಮಗೆ ಊಟ ದೊರೆಯುತ್ತದೆ. ಭಾನುವಾರ ರಜಾ. ಪ್ರತಿದಿನ 80-100 ಮಂದಿ ಇಲ್ಲಿಗೆ ಬಂದು ಊಟ ಮಾಡಿ ಹೋಗುತ್ತಾರೆ. ಹಾಗೇ ಇಲ್ಲಿ ತಟ್ಟೆ ಬಳಸದೆ ಬಾಳೆ ಎಲೆಯಲ್ಲಿ ಊಟ ಬಡಿಸಲಾಗುತ್ತೆ. 50 ರೂಪಾಯಿ ಕೊಟ್ರೆ ನೀವು ಹೊಟ್ಟೆ ಬಿರಿಯುವಷ್ಟು ಊಟ ತಿನ್ನಬಹುದು. ಜೊತೆಗೆ ಹಿರಿಯ ಜೀವಗಳ ಆತಿಥ್ಯ ಕೂಡಾ ದೊರೆಯಲಿದೆ. ನೀವು ಮನೆಯಲ್ಲೇ ಊಟ ಮಾಡಿದ ಅನುಭವ ಆಗೋದು ಗ್ಯಾರಂಟಿ. ಸಂಜೆ 4 ವರೆಗೂ ಜನರು ಇಲ್ಲಿ ಊಟ ಮಾಡಲು ಬರ್ತಾರೆ. ನಟ, ನಿರೂಪಕ ಸಿಹಿಕಹಿ ಚಂದ್ರು ಕೂಡಾ ಇಲ್ಲಿಗೆ ಬಂದು ಊಟ ಸವಿದು ಹೋಗಿದ್ದಾರೆ.
''ನಾವು ದುಡ್ಡಿಗಾಗಿ ಹೋಟೆಲ್ ನಡೆಸುತ್ತಿಲ್ಲ. ದೇವರು ನಮಗೆ ಜೀವನಕ್ಕೆ ಸಾಲುವಷ್ಟು ಕೊಟ್ಟಿದ್ದಾನೆ. ಆಗಿನಿಂದ ಬಂದ ಕೆಲಸವನ್ನು ಬಿಡಬಾರದು, ವಯಸ್ಸಾಯ್ತು ಅಂತ ಕುಳಿತರೆ ತಲೆ ತುಂಬಾ ಯೋಚನೆ, ಮೈ ತುಂಬಾ ಕಾಯಿಲೆ ಶುರುವಾಗುತ್ತೆ. ಆ ಕಾರಣದಿಂದ ನಾವು ಈ ಹೋಟೆಲ್ ಕೆಲಸ ಮಾಡ್ತಿದ್ದೇವೆ. ಯಾರೂ ಕೂಡಾ ಸೋಮಾರಿತನ ತೋರದೆ ನಿಮ್ಮ ನಿಮ್ಮ ಕೆಲಸಗಳನ್ನು ಮಾಡಿ. ಮತ್ತೊಬ್ಬರ ಮೇಲೆ ಅವಲಂಬಿತರಾಗದೆ ನಿಮ್ಮ ಕೈಲಾಗುವವರೆಗೆ ಕೆಲಸ ಮಾಡಿ. ಈ ರೀತಿ ಕೆಲಸ ಮಾಡಿದ್ರೆ ರಾತ್ರಿ ಒಳ್ಳೆ ನಿದ್ರೆ ಬರುತ್ತೆ. ಎಲ್ಲಾ ಕೆಲಸಗಳಲ್ಲೂ ಅಡ್ಡಿ ಆತಂಕ ಇದ್ದೇ ಇರುತ್ತೆ. ನಮಗೂ ಕೆಲವರು ಬಹಳ ತೊಂದರೆ ಕೊಟ್ಟಿದ್ದಾರೆ, ಆದರೆ ಅವೆಲ್ಲವನ್ನೂ ಎದುರಿಸಿದ್ದೇವೆ, ಅವರು ಮಾಡಿದ್ದು ಅವರಿಗೆ, ನಮ್ಮದು ನಮಗೆ ಎನ್ನುತ್ತಾರೆ'' ಈ ವೃದ್ಧ ದಂಪತಿ.
ಹೋಟೆಲ್‌ಗೆ ಹೇಗೆ ಹೋಗೋದು?
ಉಡುಪಿ ಜಿಲ್ಲೆಯ ಮಣಿಪಾಲ್‌ನಿಂದ ಪರ್ಕಳಕ್ಕೆ ಹೋದರೆ ಅಲ್ಲಿ ಪಾಟೀಲ್ ಕ್ಲಾತ್ ಸ್ಟೋರ್ ಎಂಬ ದೊಡ್ಡ ಅಂಗಡಿ ಇದೆ. ಅಲ್ಲಿಂದ ಹಾಗೇ ಮುಂದೆ ಹೋದರೆ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಕಮಾನು ಕಾಣುತ್ತದೆ. ಅದರೊಳಗೆ ಹೋದರೆ ಅಲ್ಲಿ ರಾಜಗೋಪಾಲ ನಗರ ಎದುರಾಗುತ್ತದೆ. ಅಲ್ಲಿ ಯಾರನ್ನಾದರೂ ಅಜ್ಜ ಅಜ್ಜಿ ಹೋಟೆಲ್ ಬಗ್ಗೆ ಕೇಳಿದರೆ ನಿಮಗೆ ದಾರಿ ತೋರಿಸುತ್ತಾರೆ.
ಸಾಮಾನ್ಯವಾಗಿ 40-50 ವರ್ಷ ದಾಟುತ್ತಿದ್ದಂತೆ ನಾನಾ ಆರೋಗ್ಯ ಸಮಸ್ಯೆಗಳು ಕಾಡುತ್ತವೆ. ಆಶ್ಚರ್ಯ ಅಂದ್ರೆ ಇಬ್ಬರಿಗೂ ಅಂತಹ ಯಾವುದೇ ಸಮಸ್ಯೆ ಇಲ್ಲ. ನನ್ನಿಂದ ಆಗೊದಿಲ್ಲ ಅಂತ ಸೋಮಾರಿತನ ತೋರುವವರಿಗೆ ಈ ಅಜ್ಜಿ ತಾತ ಮಾದರಿಯಾಗಿದ್ದಾರೆ. ಇಬ್ಬರೂ ಹೀಗೇ ಆರೋಗ್ಯವಾಗಿರಲಿ ಎಂದು ಹಾರೈಸೋಣ. ಉಡುಪಿ ಕಡೆ ಹೋದಾಗ ಸಾಧ್ಯವಾದರೆ ಈ ಹೋಟೆಲ್‌ಗೆ ಹೋಗಿ ಊಟ ಮಾಡಿ ಬನ್ನಿ.
ಈ ಬರಹದ ಬಗ್ಗೆ ನಿಮ್ಮ ಸಲಹೆ, ಅಭಿಪ್ರಾಯಕ್ಕೆ ಸ್ವಾಗತ
ಇ-ಮೇಲ್: ht.kannada@htdigital.in
ಇಂಥ ಮತ್ತಷ್ಟು ಅಂಕಣ ಬರಹಗಳಿಗೆ