ಎಷ್ಟೇ ಪ್ರಯತ್ನಪಟ್ರೂ ತೂಕ ಇಳಿಕೆಯಾಗುತ್ತಿಲ್ವಾ: ಹಾಗಿದ್ದರೆ ನಿಂಬೆರಸವನ್ನು ಈ ರೀತಿ ಸೇವಿಸಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಎಷ್ಟೇ ಪ್ರಯತ್ನಪಟ್ರೂ ತೂಕ ಇಳಿಕೆಯಾಗುತ್ತಿಲ್ವಾ: ಹಾಗಿದ್ದರೆ ನಿಂಬೆರಸವನ್ನು ಈ ರೀತಿ ಸೇವಿಸಿ ನೋಡಿ

ಎಷ್ಟೇ ಪ್ರಯತ್ನಪಟ್ರೂ ತೂಕ ಇಳಿಕೆಯಾಗುತ್ತಿಲ್ವಾ: ಹಾಗಿದ್ದರೆ ನಿಂಬೆರಸವನ್ನು ಈ ರೀತಿ ಸೇವಿಸಿ ನೋಡಿ

ತೂಕ ಇಳಿಕೆಗೆ ನಿಂಬೆಹಣ್ಣು ಬಹಳ ಪ್ರಯೋಜನಕಾರಿಯಾಗಿದೆ. ನೀವು ಕೂಡ ತೂಕ ಇಳಿಕೆಗೆ ಪ್ರಯತ್ನಿಸುತ್ತಿದ್ದರೆ ನಿಂಬೆಹಣ್ಣಿನ ಈ ಪ್ರಯೋಜನವನ್ನು ಪಡೆಯಬಹುದು. ದೈನಂದಿನ ದಿನಚರಿಯಲ್ಲಿ ನಿಂಬೆಹಣ್ಣನ್ನು ಸೇರಿಸುವುದರಿಂದ ಚಯಾಪಚಯ ಕ್ರಿಯೆ ಹಾಗೂ ಜೀರ್ಣಕ್ರಿಯೆಯನ್ನು ಸುಧಾರಿಸುವಲ್ಲಿ ಸಹಾಯಕವಾಗಿದೆ.

ದೈನಂದಿನ ದಿನಚರಿಯಲ್ಲಿ ನಿಂಬೆಹಣ್ಣನ್ನು ಸೇರಿಸುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ.
ದೈನಂದಿನ ದಿನಚರಿಯಲ್ಲಿ ನಿಂಬೆಹಣ್ಣನ್ನು ಸೇರಿಸುವುದರಿಂದ ತೂಕ ಇಳಿಕೆಗೆ ಸಹಕಾರಿಯಾಗಿದೆ. (Unsplash )

ತೂಕ ಕಡಿಮೆ ಇರುವವರಿಗೆ ತೂಕ ಹೇಗೆ ಹೆಚ್ಚಿಸುವುದು ಅನ್ನುವ ಚಿಂತೆಯಾದರೆ, ತೂಕ ಹೆಚ್ಚಿರುವವರಿಗೆ ತೂಕ ಹೇಗೆ ಇಳಿಕೆ ಮಾಡುವುದು ಅನ್ನುವ ಚಿಂತೆ. ತೂಕ ಹೆಚ್ಚಿಸುವಿಕೆ ಹಾಗೂ ತೂಕ ಇಳಿಸುವಿಕೆ ಎರಡೂ ಕೂಡ ಒಂದು ಸವಾಲೇ ಹೌದು. ತೂಕ ಇಳಿಕೆಗೆ ಹಲವಾರು ಮಂದಿ ನಾನಾ ಕಸರತ್ತು ಮಾಡುತ್ತಾರೆ. ಸಿಕ್ಕಿದ್ದೆಲ್ಲವೂ ತಿಂದು, ನಂತರ ಸ್ಥೂಲಕಾಯ ಸಮಸ್ಯೆಯನ್ನು ಎದುರಿಸುತ್ತಾರೆ. ಹೀಗಾಗಿ ತೂಕ ಇಳಿಕೆಗೆ ನಾನಾ ಪಡಿಪಾಟಲು ಪಡುತ್ತಾರೆ. ತೂಕ ಇಳಿಕೆಗೆ ಆಹಾರದಲ್ಲಿ ಕೆಲವೊಂದು ಪದಾರ್ಥಗಳನ್ನು ಸರಿಯಾಗಿ ಸೇರಿಸುವ ಮೂಲಕ ತೂಕ ಇಳಿಕೆ ಪ್ರಕ್ರಿಯೆಯನ್ನು ವೇಗಗೊಳಿಸಬಹುದು. ಇವುಗಳಲ್ಲಿ ನಿಂಬೆಹಣ್ಣು ಪ್ರಮುಖವಾದುದು. ದೈನಂದಿನ ಆಹಾರಕ್ರಮಕ್ಕೆ ನಿಂಬೆಹಣ್ಣು ಆರೋಗ್ಯಕರ ಸೇರ್ಪಡೆಯಾಗಿದೆ. ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿರುವ ನಿಂಬೆ ಹಣ್ಣು, ತೂಕ ಇಳಿಕೆಗೆ ಹಾಗೂ ಚಯಾಪಚಯ ಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಜೀರ್ಣಕ್ರಿಯೆಯನ್ನು ಹೆಚ್ಚಿಸುವುದಲ್ಲದೆ, ದೇಹದಿಂದ ಟಾಕ್ಸಿನ್ ಹೊರಹಾಕುವಲ್ಲೂ ಸಹಕಾರಿಯಾಗಿದೆ.

ತೂಕ ಇಳಿಕೆಗೆ ನಿಂಬೆ ಹಣ್ಣನ್ನು ಸೇವಿಸುವ ಸರಿಯಾದ ಮಾರ್ಗ

ನಿಂಬೆ ನೀರು: ಬೆಳಗ್ಗೆದ್ದು ನಿಂಬೆ ನೀರನ್ನು ಸೇವಿಸುವುದರಿಂದ ತೂಕವನ್ನು ಕಳೆದುಕೊಳ್ಳಲು ಪರಿಣಾಮಕಾರಿ ಮಾರ್ಗವಾಗಿದೆ. ಒಂದು ಲೋಟ ನೀರಿಗೆ ಅರ್ಧ ನಿಂಬೆಹಣ್ಣಿನ ರಸವನ್ನು ಹಿಂಡಿ ಅದನ್ನು ಬೆಳಗ್ಗೆ ಕುಡಿಯಬೇಕು. ಇದು ದೇಹವನ್ನು ಹೈಡ್ರೀಕರಿಸುವಲ್ಲಿ ಸಹಾಯ ಮಾಡುವುದಲ್ಲದೆ, ದೇಹದಿಂದ ಟಾಕ್ಸಿನ್ ಹೊರಹಾಕಲು ಸಹಾಯ ಮಾಡುತ್ತದೆ. ಚಯಾಪಚಯ ಕ್ರಿಯೆಯನ್ನು ಸುಧಾರಿಸುವ ಜೊತೆಗೆ ಹಸಿವಿನ ಕಡುಬಯಕೆಗಳನ್ನು ನಿಗ್ರಹಿಸುವಲ್ಲಿ ಸಹಕಾರಿಯಾಗಿದೆ. ಈ ನಿಂಬೆ ನೀರಿಗೆ ಬೇಕಿದ್ದರೆ ಸೌತೆಕಾಯಿ ಅಥವಾ ಪುದೀನ ಎಲೆಗಳನ್ನು ಸೇರಿಸಿ ಕುಡಿಯಬಹುದು.

ನಿಂಬೆ ಅರಶಿನ ಪಾನೀಯ: ನಿಂಬೆಯನ್ನು ಅರಶಿನ ಪಾನೀಯವು ಡಿಟಾಕ್ಸ್ ಪಾನೀಯವಾಗಿ ತೂಕ ಇಳಿಕೆಗೆ ಪ್ರಯೋಜನಕಾರಿಯಾಗಿದೆ. ಅರಶಿನವು ಕರ್ಕ್ಯಮಿನ್ ಅನ್ನು ಹೊಂದಿದ್ದು, ಉರಿಯೂತದ ಗುಣಲಕ್ಷಣಗಳಿಗೆ ಹೆಸರುವಾಸಿಯಾಗಿದೆ. ಬೆಚ್ಚಗಿನ ನೀರಿಗೆ ಒಂದು ನಿಂಬೆಹಣ್ಣಿನ ರಸವನ್ನು ಹಿಂಡಿ, ಒಂದು ಚಮಚ ಅರಶಿನ ಪುಡಿಯನ್ನು ಬೆರೆಸಬೇಕು. ಈ ಪಾನೀಯವನ್ನು ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಕೊಬ್ಬು ಬರ್ನ್ ಮಾಡಲು ಕೂಡ ಸಹಾಯಕ. ಬೆಳಗ್ಗೆ ಈ ನೀರನ್ನು ಸೇವಿಸುವುದು ಉತ್ತಮ.

ಶುಂಠಿ-ನಿಂಬೆ ಚಹಾ: ಈ ಶುಂಠಿ-ನಿಂಬೆ ಚಹಾವನ್ನು ಊಟದ ನಂತರ ಸೇವಿಸುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹೊಟ್ಟೆ ಉಬ್ಬರ ಶಮನಗೊಳಿಸಲು ಕೂಡ ಸಹಕಾರಿ. ಶುಂಠಿಯು ನೈಸರ್ಗಿಕ ಜೀರ್ಣಕಾರಿ ಗುಣಗಳನ್ನು ಹೊಂದಿದ್ದು, ಅದು ಹೊಟ್ಟೆಯ ಸಮಸ್ಯೆಯನ್ನು ಬಗೆಹರಿಸುವಲ್ಲಿ ಸಹಾಯಕವಾಗಿದೆ. ಈ ಚಹಾವನ್ನು ತಯಾರಿಸುವುದು ತುಂಬಾನೇ ಸುಲಭ. ನೀರಿಗೆ ಶುಂಠಿಯ ತುಂಡುಗಳನ್ನು ಹಾಕಿ ಕುದಿಯಲು ಬಿಡಿ. ಇದಕ್ಕೆ ಅರ್ಧ ನಿಂಬೆ ಹಣ್ಣಿನರಸವನ್ನು ಸೇರಿಸಿ. ನಂತರ ಬಿಸಿ ಬಿಸಿಯಾಗಿಯೇ ಈ ಚಹಾವನ್ನು ನೀವು ಆನಂದಿಸಬಹುದು.

ನಿಂಬೆ-ಶುಂಠಿ ಕರಿಮೆಣಸು ಪಾನೀಯ: ನಿಂಬೆ ರಸ, ತುರಿದ ಶುಂಠಿ, ಚಿಟಿಕೆ ಕರಿಮೆಣಸನ್ನು ಬಿಸಿ ನೀರಿಗೆ ಮಿಶ್ರಣ ಮಾಡಿ ಸೇವಿಸಿ. ಇದಿ ಚಯಾಪಚಯವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಜೀರ್ಣಾಂಗ ಕ್ರಿಯೆಯನ್ನು ಸುಧಾರಿಸುತ್ತದೆ. ಶುಂಠಿ ಹಾಗೂ ಕರಿಮೆಣಸು ಹಸಿವನ್ನು ನಿಗ್ರಹಿಸಲು ಸಹಕಾರಿಯಾಗಿದೆ. ಕಡುಬಯಕೆಗಳನ್ನು ನಿಯಂತ್ರಿಸಲು ಕೂಡ ಇದು ಉತ್ತಮ.

ಸ್ಮೂಥಿಗಳಿಗೆ ನಿಂಬೆಹಣ್ಣು ಸೇರಿಸಿ: ತೂಕ ಇಳಿಕೆಗೆ ಬಹುತೇಕ ಮಂದಿ ಸ್ಮೂಥಿಗಳನ್ನು ಸೇವಿಸುವುದು ಸಾಮಾನ್ಯ. ಈ ಸ್ಮೂಥಿಗಳಿಗೆ ನಿಂಬೆಹಣ್ಣನ್ನು ಸೇರಿಸುವುದರಿಂದ ಪರಿಮಳವನ್ನು ಹೆಚ್ಚಿಸುವ ಜೊತೆಗೆ, ಪೌಷ್ಟಿಕಾಂಶವನ್ನು ಕೂಡ ಪಡೆಯಬಹುದು. ಬಾಳೆಹಣ್ಣು ಅಥವಾ ಇತರೆ ಹಣ್ಣುಗಳೊಂದಿಗೆ ಪಾಲಕ್ ಅನ್ನು ಮಿಶ್ರಣ ಮಾಡಿ ಅರ್ಧ ನಿಂಬೆ ರಸವನ್ನು ಸೇರಿಸಿ ಸೇವಿಸಬಹುದು.

ತೂಕ ಇಳಿಕೆಗೆ ದೈನಂದಿನ ದಿನಚರಿಯಲ್ಲಿ ನಿಂಬೆ ರಸವನ್ನು ಸೇರಿಸುವ ಮೂಲಕ ತೂಕ ಇಳಿಕೆಗೆ ಪರಿಣಾಮಕಾರಿ ಮಾರ್ಗವಾಗಿದೆ. ನಿಂಬೆ ಪಾನೀಯದಿಂದ ರುಚಿಕರವಾದ ತಿಂಡಿಗಳವರೆಗೆ ನಿಂಬೆ ರಸವನ್ನು ಸೇರಿಸುವ ಮುಖಾಂತರ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಆದರೆ, ನೆನಪಿಟ್ಟುಕೊಳ್ಳುವ ವಿಚಾರ ಏನೆಂದರೆ ತೂಕ ಇಳಿಕೆಗೆ ಕೇವಲ ಇಷ್ಟು ಮಾತ್ರವಲ್ಲ, ಸಮತೋಲಿತ ಆಹಾರ ಸೇವನೆ ಹಾಗೂ ದೈಹಿಕ ಚಟುವಟಿಕೆಯೂ ಮುಖ್ಯವಾಗಿರುತ್ತದೆ.

Whats_app_banner