ಚಳಿಗಾಲದಲ್ಲಿ ಹೆಚ್ಚಬಹುದು ಹಿಮ್ಮಡಿ ಒಡೆತದ ಸಮಸ್ಯೆ, ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು, ‌ನೀವೂ ಬಳಸಿ ನೋಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲದಲ್ಲಿ ಹೆಚ್ಚಬಹುದು ಹಿಮ್ಮಡಿ ಒಡೆತದ ಸಮಸ್ಯೆ, ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು, ‌ನೀವೂ ಬಳಸಿ ನೋಡಿ

ಚಳಿಗಾಲದಲ್ಲಿ ಹೆಚ್ಚಬಹುದು ಹಿಮ್ಮಡಿ ಒಡೆತದ ಸಮಸ್ಯೆ, ನಿವಾರಣೆಗೆ ಇಲ್ಲಿದೆ ಪರಿಣಾಮಕಾರಿ ಮನೆಮದ್ದು, ‌ನೀವೂ ಬಳಸಿ ನೋಡಿ

ಚಳಿಗಾಲದಲ್ಲಿ ಹಿಮ್ಮಡಿ ಒಡೆಯೋದು ಸಾಮಾನ್ಯ. ಇದರಿಂದ ವಿಪರೀತ ನೋವು ಅನುಭವಿಸುತ್ತೇವೆ. ಧೂಳು, ಕೊಳೆಯಿಂದ ಹಿಮ್ಮಡಿ ಒಡೆತದ ಪರಿಣಾಮ ಇನ್ನಷ್ಟು ಹೆಚ್ಚಾಗಬಹುದು. ಅದಕ್ಕಾಗಿ ನೀವು ಹರಸಾಹಸ ಪಡಬೇಕಾಗಿಲ್ಲ. ಈ ಸರಳ ಮನೆಮದ್ದು ಬಳಸಿದ್ರೆ ಪಾದಗಳಲ್ಲಿ ಮತ್ತೆಂದೂ ಬಿರುಕು ಮೂಡೊಲ್ಲ.

ಹಿಮ್ಮಡಿ ಒಡೆತಕ್ಕೆ ಮನೆಮದ್ದು
ಹಿಮ್ಮಡಿ ಒಡೆತಕ್ಕೆ ಮನೆಮದ್ದು (PC: Canva)

ಬಹುತೇಕರು ಹಿಮ್ಮೆಡಿ ಒಡೆಯುವ ಸಮಸ್ಯೆ ಹೊಂದಿರುತ್ತಾರೆ. ಅದರಲ್ಲೂ ಚಳಿಗಾಲದಲ್ಲಿ ಬೇಡವೆಂದರೂ ಪಾದದ ಹಿಂಭಾಗದಲ್ಲಿ ಬಿರುಕು ಮೂಡುತ್ತದೆ. ಇದರಿಂದ ನೋವಾಗುವ ಜೊತೆಗೆ ಕೆಲವೊಮ್ಮೆ ಮುಜುಗರ ಎದುರಿಸಬೇಕಾಗುತ್ತದೆ. ಇದು ಪಾದಗಳ ಅಂದವನ್ನು ಹಾಳುಗೆಡವುತ್ತದೆ. ಚರ್ಮವು ಒಣಗಿದಂತಾಗಿ, ಗಟ್ಟಿಯಾದಾಗ ಪಾದದಲ್ಲಿ ಬಿರುಕು ಕಾಣಿಸಬಹುದು.

ಇದರ ಬಗ್ಗೆ ಸರಿಯಾಗಿ ಕಾಳಜಿ ವಹಿಸಿಲ್ಲ ಎಂದರೆ ಬಿರುಕು ಆಳವಾಗಿ ಅತಿಯಾದ ನೋವು ಹಾಗೂ ಸೋಂಕಿಗೆ ಕಾರಣವಾಗಬಹುದು. ಹಾಗಂತ ಇದಕ್ಕೆ ನೀವು ವೈದ್ಯರಿಂದ ಔಷಧಿ ಪಡೆಯಬೇಕು ಎಂದೇನಿಲ್ಲ. ಮನೆಯಲ್ಲೇ ಇರುವ ಪದಾರ್ಥಗಳನ್ನು ಬಳಸಿ ನೈಸರ್ಗಿಕ ವಿಧಾನದ ಮೂಲಕ ಹಿಮ್ಮಡಿ ಬಿರುಕನ್ನು ಪರಿಣಾಮಕಾರಿಯಾಗಿ ನಿವಾರಿಸಿಕೊಳ್ಳಬಹುದು. ಅಂತಹ ಮನೆಮದ್ದುಗಳು ಯಾವುವು ನೋಡಿ.

ಫೂಟ್ ಸ್ಕ್ರಬ್ ಬಳಸಿ

ಒಡೆದ ಹಿಮ್ಮಡಿಗಳನ್ನು ಮೃದುವಾಗಿಸಲು ಸರಳ ಪರಿಹಾರವೆಂದರೆ ಪಾದಗಳನ್ನು ನೆನೆಸಿ ಸ್ಕ್ರಬ್ ಮಾಡುವುದು. ಇದಕ್ಕಾಗಿ ಬಕೆಟ್ ಅಥವಾ ಅಗಲವಾದ ಪಾತ್ರೆಯೊಂದರಲ್ಲಿ ಬೆಚ್ಚಗಿನ ನೀರು ತುಂಬಿ. ಪಾದಗಳನ್ನು 15 ರಿಂದ 20 ನಿಮಿಷಗಳ ಕಾಲ ನೆನೆಸಿಡಿ. ನಂತರ ಫೂಟ್ ಸ್ಕ್ರಬರ್ ಅಥವಾ ಪ್ಯೂಮಿಸ್ ಸ್ಟೋನ್‌ನಿಂದ ನಿರ್ಜೀವ ಚರ್ಮದ ಕೋಶಗಳನ್ನು ಉಜ್ಜಿ ತೆಗೆದುಹಾಕಿ. ನಂತರ ಪಾದಗಳನ್ನು ಚೆನ್ನಾಗಿ ತೊಳೆದು ಟವಲ್‌ನಿಂದ ಉಜ್ಜಿ.

ತೆಂಗಿನೆಣ್ಣೆಯೊಂದಿಗೆ ಮಾಯಿಶ್ಚರೈಸ್ ಮಾಡಿ

ತೆಂಗಿನ ಎಣ್ಣೆಯು ಅದ್ಭುತವಾದ ನೈಸರ್ಗಿಕ ಮಾಯಿಶ್ಚರೈಸರ್ ಆಗಿದ್ದು ಅದು ಶುಷ್ಕ ಮತ್ತು ಚರ್ಮದ ಬಿರುಕನ್ನ ನಿವಾರಿಸಲು ಸಹಾಯ ಮಾಡುತ್ತದೆ. ಇದರ ಬ್ಯಾಕ್ಟೀರಿಯಾ ವಿರೋಧಿ ಮತ್ತು ಉರಿಯೂತದ ಗುಣಲಕ್ಷಣಗಳು ಒಡೆದ ಹಿಮ್ಮಡಿಗೆ ಔಷಧಿಯಾಗಿ ಕೆಲಸ ಮಾಡುತ್ತದೆ. ನಿಮ್ಮ ಪಾದಗಳನ್ನು ತೊಳೆದ ನಂತರ, ಹಿಮ್ಮಡಿಗಳ ಮೇಲೆ ಚೆನ್ನಾಗಿ ತೆಂಗಿನ ಎಣ್ಣೆ ಹಚ್ಚಿ ಮತ್ತು ಮಸಾಜ್ ಮಾಡಿ. ನಂತರ ರಾತ್ರಿಯಿಡಿ ಸಾಕ್ಸ್ ಧರಿಸಿ. ಇದರಿಂದ ತೆಂಗಿನೆಣ್ಣೆ ಆಳವಾದ ಬಿರುಕಿನ ಮೇಲೆ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದು ಚರ್ಮವನ್ನು ಮೃದುಗೊಳಿಸುತ್ತದೆ.

ಜೇನುತುಪ್ಪದ ಫೂಟ್‌ ಮಾಸ್ಕ್‌

ಜೇನುತುಪ್ಪವು ನೈಸರ್ಗಿಕ ಹ್ಯೂಮೆಕ್ಟಂಟ್ ಆಗಿದೆ. ಅಂದರೆ ಇದು ಚರ್ಮಕ್ಕೆ ತೇವಾಂಶವನ್ನು ಸೆಳೆಯುತ್ತದೆ. ಒಡೆದ ಹಿಮ್ಮಡಿಗೆ ಇದು ಪರಿಪೂರ್ಣ ಔಷಧಿಯಾಗಿದೆ. ಹಿಮ್ಮಡಿ ಒಡೆಯುವುದನ್ನು ತಡೆಯಲು ಜೇನುತುಪ್ಪವನ್ನು ಹೀಗೆ ಬಳಸಿ. ಅದಕ್ಕಾಗಿ ಒಂದು ಬಕೆಟ್‌ನಲ್ಲಿ ಬಿಸಿ ನೀರು ತುಂಬಿಸಿ ಅದರಲ್ಲಿ ಅರ್ಧ ಕಪ್ ಜೇನುತುಪ್ಪ ಹಾಕಿ. ಆ ನೀರಿನಲ್ಲಿ ನಿಮ್ಮ ಪಾದಗಳನ್ನು 15 ರಿಂದ 20 ನಿಮಿಷಗಳ ಕಾಲ ನೆನೆಸಿಡಿ. ಇದರಿಂದ ಜೇನುತುಪ್ಪವು ಪಾದವನ್ನು ಹೈಡ್ರೇಟ್ ಆಗುವಂತೆ ಮಾಡುತ್ತದೆ. ನಂತರ ಒಡೆದ ಹಿಮ್ಮಡಿಗಳನ್ನು ನಿಧಾವಾಗಿ ಸ್ಕ್ರಬ್ ಮಾಡಿ. ವಾರದಲ್ಲಿ ಒಂದೆರಡು ಬಾರಿ ಹೀಗೆ ನಿರಂತರವಾಗಿ ಮಾಡುವುದರಿಂದ ನಿರೀಕ್ಷಿತ ಫಲಿತಾಂಶ ಪಡೆಯಲು ಸಾಧ್ಯವಾಗುತ್ತದೆ.

ಆಲೊವೆರಾ ಜೆಲ್

ಆಲೊವೆರಾವು ಗುಣಪಡಿಸುವ ಮತ್ತು ಹಿತವಾದ ಅನುಭವ ನೀಡುವ ಗುಣವನ್ನು ಹೊಂದಿದೆ. ಇದು ಒಣ ಚರ್ಮ ಹಾಗೂ ಒಡೆದ ಹಿಮ್ಮಡಿಯ ಮೇಲೆ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. ಪಾದಗಳನ್ನು ಚೆನ್ನಾಗಿ ತೊಳೆದು ಒಣಗಿಸಿದ ನಂತರ ತಾಜಾ ಆಲೊವೆರಾ ತಿರುಳನ್ನು ಒಡೆದ ಹಿಮ್ಮಡಿಗೆ ಹಚ್ಚಿಕೊಳ್ಳಿ. ರಾತ್ರಿಯಲ್ಲಿ ಜೆಲ್ ಚೆನ್ನಾಗಿ ಕೆಲಸ ಮಾಡಲು ಪಾದಗಳಿಗೆ ಸಾಕ್ಸ್ ಧರಿಸಿ. ಬೆಳಿಗ್ಗೆ ಬೆಚ್ಚಗಿನ ನೀರಿನಿಂದ ಜೆಲ್ ಅನ್ನು ತೊಳೆಯಿರಿ.

ಆಲಿವ್ ಆಯಿಲ್ ಮಸಾಜ್

ಆಲಿವ್ ಎಣ್ಣೆಯು ವಿಟಮಿನ್ ಇ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ, ಇದು ಒಡೆದ ಹಿಮ್ಮಡಿಗಳನ್ನು ಪೋಷಿಸುತ್ತದೆ ಮತ್ತು ಸರಿಪಡಿಸುತ್ತದೆ. ಸ್ವಲ್ಪ ಪ್ರಮಾಣದ ಆಲಿವ್ ಎಣ್ಣೆಯನ್ನು ಬೆಚ್ಚಗಾಗಿಸಿ ಮತ್ತು ಅದನ್ನು ನಿಮ್ಮ ಹಿಮ್ಮಡಿಗೆ ಮಸಾಜ್ ಮಾಡಿ. ಇದನ್ನು ಸುಮಾರು 30 ನಿಮಿಷಗಳ ಕಾಲ ನೆನೆಯಲು ಬಿಡಿ ಅಥವಾ ಹೆಚ್ಚು ಪರಿಣಾಮಕಾರಿಯಾಗಿರಲು ರಾತ್ರಿಯಿಡೀ ಸಾಕ್ಸ್ ಧರಿಸಿ. ಇದರಿಂದ ಚರ್ಮ ನಯವಾಗಿ, ಆರೋಗ್ಯವಂತವಾಗಿ ಕಾಣಿಸುತ್ತದೆ.

ಈ ಮನೆಮದ್ದು ಹಿಮ್ಮಡಿ ಒಡಕಿಗೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಆದರೆ ನಿರಂತರವಾಗಿ ಬಳಸಬೇಕು. ಆಗ ಮಾತ್ರ ಸೂಕ್ತ ಫಲಿತಾಂಶ ಪಡೆಯಲು ಸಾಧ್ಯ ಎಂಬುದನ್ನು ನೆನಪಿಡಿ.

Whats_app_banner