ಚಳಿಗಾಲ ಆರಂಭಕ್ಕೂ ಮುನ್ನ ಈ 6 ಆಹಾರ ನಿಮ್ಮ ಮೆನುವಿನಲ್ಲಿರಲಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ
ಕನ್ನಡ ಸುದ್ದಿ  /  ಜೀವನಶೈಲಿ  /  ಚಳಿಗಾಲ ಆರಂಭಕ್ಕೂ ಮುನ್ನ ಈ 6 ಆಹಾರ ನಿಮ್ಮ ಮೆನುವಿನಲ್ಲಿರಲಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಚಳಿಗಾಲ ಆರಂಭಕ್ಕೂ ಮುನ್ನ ಈ 6 ಆಹಾರ ನಿಮ್ಮ ಮೆನುವಿನಲ್ಲಿರಲಿ; ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ

ಇನ್ನೇನು ಚಳಿಗಾಲ ಸಮೀಪಿಸುತ್ತಿದೆ. ಮಳೆಗಾಲದಂತೆ ಚಳಿ ಸಮಯದಲ್ಲೂ ಸೋಂಕು ಹರಡುವ ಸಾಧ್ಯತೆಗಳು ಹೆಚ್ಚು. ಹೀಗಾಗಿ ಆಹಾರಕ್ರಮದಲ್ಲಿ ಸ್ವಲ್ಪ ಬದಲಾವಣೆ ಮಾಡಿಕೊಂಡರೆ ಒಳ್ಳೆಯದು. ಕೆಲವೊಂದು ಆಹಾರಗಳು ನಿಮ್ಮ ಊಟದ ಮೆನುವಿನಲ್ಲಿದ್ದರೆ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಆರೋಗ್ಯ ನಿಮ್ಮ ಕೈಯಲ್ಲೇ ಇರುತ್ತದೆ.

ಚಳಿಗಾಲ ಆರಂಭಕ್ಕೂ ಮುನ್ನ ಈ 6 ಆಹಾರ ನಿಮ್ಮ ಮೆನುವಿನಲ್ಲಿರಲಿ
ಚಳಿಗಾಲ ಆರಂಭಕ್ಕೂ ಮುನ್ನ ಈ 6 ಆಹಾರ ನಿಮ್ಮ ಮೆನುವಿನಲ್ಲಿರಲಿ (Pixabay)

ಮಳೆಗಾಲ ಮುಗಿದು ಚಳಿಗಾಲ ಸಮೀಪಿಸುತ್ತಿದ್ದಂತೆ ಬೆಚ್ಚಗಿನ ಬಟ್ಟೆಗೆ ಬೇಡಿಕೆ ಹೆಚ್ಚುತ್ತದೆ. ಚಳಿಗೆ ಅಗತ್ಯ ಸಿದ್ಧತೆ ಜೊತೆಗೆ, ಆರೋಗ್ಯಕರ ಆಹಾರವನ್ನು ಯೋಜಿಸುವುದು ಕೂಡಾ ಮುಖ್ಯ. ಚಳಿಯ ವಾತಾವರಣದಲ್ಲಿ ಬೆಳಗ್ಗೆ ಮಂಜು ಕೂಡಾ ಹೆಚ್ಚಿರುತ್ತದೆ. ಹೀಗಾಗಿ ಮಕ್ಕಳು, ವಯಸ್ಕರು ಮಾತ್ರವಲ್ಲದೆ ಎಲ್ಲಾ ವಯೋಮಾನದವರು ಆರೋಗ್ಯದ ಬಗ್ಗೆ ಜಾಗರೂಕರಾಗಿರಬೇಕು. ಚಳಿ ಸಮಯದಲ್ಲಿ ಸಂಧಿವಾತ, ಶುಷ್ಕತೆ ಮತ್ತು ಇತರ ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಚಳಿಗಾಲದಲ್ಲಿ ದೇಹಕ್ಕೆ ರೋಗನಿರೋಧಕ ಶಕ್ತಿಯ ಅಗತ್ಯವಿದೆ. ಆ ಮೂಲಕ ದೇಹವು ರೋಗಗಳಿಗೆ ತುತ್ತಾಗುವುದನ್ನು ತಡೆಯುತ್ತದೆ. ಜೊತೆಗೆ ಚರ್ಮ, ಕೂದಲು ಮತ್ತು ಕೀಲುಗಳ ಆರೋಗ್ಯ ಸುಧಾರಣೆಯಾಗುತ್ತದೆ. ಹೀಗಾಗಿ ಚಳಿಗಾಲಕ್ಕೂ ಮುನ್ನ ಆರೋಗ್ಯ ಕಾಪಾಡಲು ಕೆಲವೊಂದು ಆಹಾರಗಳ ಸೇವನೆ ಅಗತ್ಯ.

ಸಂಧಿವಾತ ಹೊಂದಿರುವವರಿಗೆ ತಾಪಮಾನ ಕಡಿಮೆಯಾದಂತೆ ಕೀಲು ನೋವು ಹೆಚ್ಚಾಗುತ್ತವೆ. ಅದೇ ರೀತಿ, ಚರ್ಮದ ಶುಷ್ಕತೆ, ಎಸ್ಜಿಮಾ ಮತ್ತು ಸೋರಿಯಾಸಿಸ್ ಕೂಡಾ ಚಳಿಗಾಲದಲ್ಲಿ ಉಲ್ಬಣಗೊಳ್ಳುತ್ತವೆ. ಹೀಗಾಗಿ ಚಳಿಗಾಲ ಆರಂಭ ಸಮಯದಲ್ಲಿ ಯಾವೆಲ್ಲಾ ಆಹಾರ ದೇಹಕ್ಕೆ ಬೇಕು ಎಂಬ ಕುರಿತು ತಜ್ಞರ ಅಭಿಪ್ರಾಯ ಹೀಗಿದೆ.

ನಟ್ಸ್‌

ರೋಗನಿರೋಧಕ ಶಕ್ತಿ ಹೆಚ್ಚಿಸಲು ನಟ್ಸ್‌ ಸಹಕಾರಿ. ಸಲಾಡ್‌ ರೂಪದಲ್ಲಿ ಮಾತ್ರವಲ್ಲದೆ ಸಿಹಿತಿಂಡಿಗಳಿಗೂ ನಟ್ಸ್ ಸೇರಿಸಬಹುದು. ಬಾದಾಮಿ ಮತ್ತು ವಾಲ್‌ನಟ್ಸ್ ಸುಲಭವಾಗಿ ಸಿಗುತ್ತವೆ. ಇವು ಕೊಲೆಸ್ಟ್ರಾಲ್ ಕಡಿಮೆ ಮಾಡುವುದಲ್ಲದೆ ಉರಿಯೂತವನ್ನು ಕಡಿಮೆ ಮಾಡುತ್ತದೆ.

ಮರಗೆಣಸು

ಮರಗೆಣಸನ್ನು ನಿಮ್ಮ ಉಪಾಹಾರವಾಗಿ ಅಥವಾ ಸಲಾಡ್ ರೂಪದಲ್ಲಿ ಸೇವಿಸಿ. ಇದರಲ್ಲಿ ಫೈಬರ್, ವಿಟಮಿನ್ ಎ ಮತ್ತು ಪೊಟ್ಯಾಸಿಯಮ್ ಸಮೃದ್ಧವಾಗಿದೆ. ನಿಯಮಿತವಾಗಿ ಗೆಣಸು ಸೇವಿಸಿದರೆ ಮಲಬದ್ಧತೆ ಕಡಿಮೆಯಾಗುತ್ತದೆ. ಉರಿಯೂತವನ್ನು ಕೂಡಾ ಕಡಿಮೆ ಮಾಡುವ ಸಾಮರ್ಥ್ಯ ಇದಕ್ಕಿದೆ.

ನೆಲ್ಲಿಕಾಯಿ

ಆಯುರ್ವೇದದಲ್ಲಿ ಬಳಕೆಯಾಗುವ ನೆಲ್ಲಿಕಾಯಿಯಲ್ಲಿ ವಿಟಮಿನ್ ಸಿ ಇದೆ. ಇದು ಚಳಿಗಾಲದ ಸೋಂಕನ್ನು ತಡೆಯಲು ಸಹಾಯ ಮಾಡುತ್ತದೆ. ಇದನ್ನು ಹಸಿಯಾಗಿ ತಿನ್ನುವ ಜೊತೆಗೆ ಉಪ್ಪಿನಕಾಯಿ, ಚಟ್ನಿ ಅಥವಾ ಜ್ಯೂಸ್ ರೂಪದಲ್ಲಿಯೂ ಹೊಟ್ಟೆಗಿಳಿಸಬಹುದು.

ತುಪ್ಪ

ಅನ್ನಕ್ಕೆ ಒಂದು ಚಮಚ ತುಪ್ಪ ಹಾಕಿ ಸವಿಯಿರಿ. ನೀವು ಚಪಾತಿ ತಿನ್ನುವವರಾದರೆ, ಅದರ ಮೇಲೆ ಸ್ವಲ್ಪ ತುಪ್ಪವನ್ನು ಲೇಪಿಸಿ. ತುಪ್ಪವು ಹೆಚ್ಚು ಜೀರ್ಣವಾಗುವ ಕೊಬ್ಬು ಆಗಿದ್ದು ಅದು ಶಾಖವನ್ನು ಉತ್ಪಾದಿಸುತ್ತದೆ. ಆ ಮೂಲಕ ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿಡುತ್ತದೆ. ತುಪ್ಪವು ಅತ್ಯಂತ ಸುಲಭವಾಗಿ ಜೀರ್ಣವಾಗುವ ಕೊಬ್ಬುಗಳಲ್ಲಿ ಒಂದಾಗಿದೆ. ದೇಹವನ್ನು ಬೆಚ್ಚಗಾಗಲು ಬೇಕಾದ ಅಗತ್ಯ ಶಾಖ ಮತ್ತು ಶಕ್ತಿಯನ್ನು ಉತ್ಪಾದಿಸುವ ಸಾಮರ್ಥ್ಯ ಇದರಲ್ಲಿದೆ.

ಖರ್ಜೂರ ಮತ್ತು ಬೆಲ್ಲ

ಸಂಧಿವಾತ ಇರುವವರಿಗೆ ಖರ್ಜೂರ ಪ್ರಯೋಜನಕಾರಿ. ಇದು ವಿಟಮಿನ್‌, ಖನಿಜಗಳು ಮತ್ತು ಫೈಬರ್‌ಗಳಲ್ಲಿ ಸಮೃದ್ಧವಾಗಿದೆ. ಅತ್ತ ಬೆಲ್ಲ ದೇಹದ ಉಷ್ಣತೆ ಹೆಚ್ಚಿಸುವ ಗುಣ ಹೊಂದಿದೆ. ಇದರಲ್ಲಿ ಕಬ್ಬಿಣ ಸಮೃದ್ಧವಾಗಿದ್ದು, ಶ್ವಾಸಕೋಶದ ಕ್ಲೆನ್ಸರ್ ಆಗಿ ಕಾರ್ಯನಿರ್ವಹಿಸುತ್ತದೆ.

ಮಿಲ್ಲೆಟ್ಸ್

ರಾಗಿಯಂಥಾ ಧಾನ್ಯಗಳು ಹೆಚ್ಚಿನ ಫೈಬರ್ ಹೊಂದಿರುತ್ತವೆ. ಇವು ಕೀಲುಗಳನ್ನು ಬಲಪಡಿಸಲು ನೆರವಾಗುತ್ತದೆ. ಸೋಂಕುಗಳನ್ನು ಗುಣಪಡಿಸುವ ಜೊತೆಗೆ ದೇಹಕ್ಕೆ ಶಕ್ತಿಯಿಂದ ತುಂಬುತ್ತವೆ. ಚಳಿಗಾಲದಲ್ಲಿ ಮೆಲ್ಲೆಟ್‌ಗಳನ್ನು ತಿನ್ನಬೇಕು.

ಚಳಿಗಾಲದ ಆರಂಭಕ್ಕೂ ಮುಂಚೆಯೇ ಆಹಾರದ ವಿಚಾರವಾಗಿ ತುಸು ಎಚ್ಚರವಾಗಿದ್ದರೆ, ಸೋಂಕುಗಳಿಂದ ದೂರ ಉಳಿಯಬಹುದು. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಬಹುದು.

Whats_app_banner