World AIDS Day: ಎಚ್‌ಐವಿ ಏಡ್ಸ್ ಬಗ್ಗೆ ಭಯ ಬೇಡ, ಜಾಗೃತಿ ಇರಲಿ; ವಿಶ್ವ ಏಡ್ಸ್ ದಿನ ಆಚರಿಸುವ ಉದ್ದೇಶ, ಈ ದಿನದ ಮಹತ್ವ ತಿಳಿಯಿರಿ
ಜಗತ್ತನ್ನ ಕಾಡಿದ್ದ ಮಾರಕ ರೋಗಗಳಲ್ಲಿ ಏಡ್ಸ್ ಕೂಡ ಒಂದು. ಇದೊಂದು ರಕ್ತದಲ್ಲಿ ಹರಡುವ ಕಾಯಿಲೆಯಾಗಿದೆ. ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ, 2024ರ ಥೀಮ್ ಕುರಿತ ಇವರ ಇಲ್ಲಿದೆ.
ಕೊರೊನಾಕ್ಕೆ ಜನ ಹೆದರಿದಂತೆ ಏಡ್ಸ್‌ಗೂ ಹೆದರುವ ಕಾಲವೊಂದಿತ್ತು. ಇದೊಂದು ರಕ್ತದಿಂದ ಹರಡುವ ಕಾಯಿಲೆಯಾಗಿದ್ದು ಲೈಂಗಿಕ ಸಂಪರ್ಕ, ಒಬ್ಬರು ಬಳಸಿದ ಸೂಜಿ, ಕತ್ತರಿಯನ್ನು ಇನ್ನೊಬ್ಬರು ಬಳಸಿದಾಗ, ಸ್ತನ್ಯಪಾನದಿಂದ ಹೀಗೆ ಮುಂತಾದ ಕಾರಣಗಳಿಂದ ಏಡ್ಸ್ ಒಬ್ಬರಿಂದ ಒಬ್ಬರಿಗೆ ಹರಡುತ್ತದೆ. ಹಲವು ವರ್ಷಗಳ ಕಾಲ ಜನರ ನೆಮ್ಮದಿ ಕಸಿದಿದ್ದ ಏಡ್ಸ್‌ಗೆ, ನಂತರದ ದಿನಗಳಲ್ಲಿ ಇದಕ್ಕೆ ಲಸಿಕೆ ಕಂಡುಹಿಡಿಲಾಯಿತಾದರೂ ಅಷ್ಟರಲ್ಲಾಗಲೇ ಹಲವರು ಏಡ್ಸ್‌ಗೆ ತುತ್ತಾಗಿ ತಮ್ಮ ಪ್ರಾಣ ಕಳೆದುಕೊಂಡಿದ್ದರು.
ಪ್ರಪಂಚದಾದ್ಯಂತ ಡಿಸೆಂಬರ್ 1ರಂದು ವಿಶ್ವ ಏಡ್ಸ್ ದಿನವನ್ನು ಆಚರಿಸಲಾಗುತ್ತದೆ. ಈ ದಿನವನ್ನು ಎಚ್‌ಐವಿ ಏಡ್ಸ್‌ನಿಂದ ಪ್ರಾಣ ಕಳೆದುಕೊಂಡವರನ್ನು ನೆನೆಯುವ ಸಲುವಾಗಿ ಹಾಗೂ ಏಡ್ಸ್ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಆಚರಿಸಲಾಗುತ್ತದೆ. ಇದು ಎಚ್‌ಐವಿ ಪೀಡಿತ ಜನರನ್ನು ಬೆಂಬಲಿಸುವ ಸಲುವಾಗಿ ಮೀಸಲಾಗಿರುವ ನಡೆಸುವ ಕಾರ್ಯಕ್ರಮವಾಗಿದೆ. HIV/AIDS ಸುತ್ತಲಿನ ಕಳಂಕವನ್ನು ದೂರ ಮಾಡಲು ನಡೆಯುತ್ತಿರುವ ಪ್ರಯತ್ನಗಳನ್ನ ಒತ್ತಿ ಹೇಳಲು ಹಾಗೂ ವಿಶ್ವದಾದ್ಯಂತ ಏಡ್ಸ್ ತಡೆಗಟ್ಟುವ ಕ್ರಮಗಳು, ಚಿಕಿತ್ಸೆ ನೀಡುವುದು ಹಾಗೂ ಆರೈಕೆಯ ಮಹತ್ವದ ಬಗ್ಗೆ ಪ್ರತಿಪಾದಿಸುವ ದಿನ ಇದಾಗಿದೆ. ವಿಶ್ವ ಏಡ್ಸ್ ದಿನದ ಇತಿಹಾಸ, 2024ರ ಥೀಮ್ ಕುರಿತ ವಿವರ ಇಲ್ಲಿದೆ.
ವಿಶ್ವ ಏಡ್ಸ್ ದಿನ 2024ರ ಥೀಮ್
‘ಹಕ್ಕುಗಳ ಹಾದಿಯಲ್ಲಿ ಸಾಗಿ‘ ಎಂಬುದು 2024ರ ವಿಶ್ವ ಏಡ್ಸ್ ದಿನದ ಥೀಮ್ ಆಗಿದೆ. ಇದು ಎಚ್‌ಐವಿ/ಏಡ್ಸ್ ಸಾಂಕ್ರಾಮಿಕದ ವಿರುದ್ಧದ ಹೋರಾಟದಲ್ಲಿ ಮಾನವ ಹಕ್ಕುಗಳನ್ನು ರಕ್ಷಿಸುವ ಮತ್ತು ಉತ್ತೇಜಿಸುವ ನಿರ್ಣಾಯಕ ಪಾತ್ರವನ್ನು ಎತ್ತಿ ತೋರಿಸುತ್ತದೆ.
ವಿಶ್ವ ಏಡ್ಸ್ ದಿನದ ಮಹತ್ವ
ಜಾಗೃತಿ ಮೂಡಿಸುವುದು: ಇದು ಎಚ್ಐವಿ ಹರಡುವ ವಿಧಾನಗಳು, ತಡೆಗಟ್ಟುವ ವಿಧಾನಗಳು ಮತ್ತು ಲಭ್ಯವಿರುವ ಚಿಕಿತ್ಸೆಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಗುರಿಯನ್ನು ಹೊಂದಿದೆ. ಸರಿಯಾದ ಚಿಕಿತ್ಸೆ ಪಡೆಯುವುದು ಹಾಗೂ ಜೀವನಶೈಲಿಯ ಮೂಲಕ ಏಡ್ಸ್ ವಿರುದ್ಧ ಹೋರಾಡಿ ಗೆಲ್ಲಬಹುದು ಎಂಬುದನ್ನು ಈ ದಿನ ಪ್ರತಿಪಾದಿಸುತ್ತದೆ.
ಜಾಗತಿಕ ಒಗ್ಗಟ್ಟು: ಸಾಂಕ್ರಾಮಿಕ ರೋಗವಾಗಿರುವ ಏಡ್ಸ್ ಅನ್ನು ಎದುರಿಸಲು ಸರ್ಕಾರ, ಎನ್‌ಜಿಒಗಳು, ವೈದ್ಯರ ಹಾಗೂ ಆರೋಗ್ಯ ಸಿಬ್ಬಂದಿ ಹಾಗೂ ಜನರೆಲ್ಲರೂ ಒಗ್ಗೂಡಬೇಕು ಎಂಬುದನ್ನು ಈ ದಿನ ಸಾರುತ್ತದೆ. ಇದರಿಂದ ಏಡ್ಸ್ ರೋಗಿಗಳಿಗೆ ತಾವು ಒಂಟಿಯಲ್ಲ, ತಮ್ಮೊಂದಿಗೆ ಜಗತ್ತು ಇದೆ ಎಂಬ ಭಾವನೆ ಮೂಡುತ್ತದೆ.
ಪರೀಕ್ಷೆ ಹಾಗೂ ತಡೆಗಟ್ಟುವುದನ್ನು ಉತ್ತೇಜಿಸುವುದು: ನಿಯಮಿತ ಎಚ್‌ಐವಿ ಪರೀಕ್ಷೆಯ ಪ್ರಾಮುಖ್ಯತೆ ಮತ್ತು ಕಾಂಡೋಮ್‌ಗಳು, ಆಂಟಿರೆಟ್ರೋವೈರಲ್ ಥೆರಪಿ (ಎಆರ್‌ಟಿ), ಮತ್ತು ಪ್ರಿ-ಎಕ್ಸ್‌ಪೋಸರ್ ಪ್ರೊಫಿಲ್ಯಾಕ್ಸಿಸ್ (ಪಿಆರ್‌ಇಪಿ) ಯಂತಹ ತಡೆಗಟ್ಟುವ ಕ್ರಮಗಳ ಬಳಕೆಯನ್ನು ಎತ್ತಿ ತೋರಿಸುತ್ತದೆ.
ಕಳಂಕವನ್ನು ಕಡಿಮೆ ಮಾಡುವುದು: ಎಚ್‌ಐವಿ ಸಂಬಂಧಿಸಿದ ಕೆಲವು ಅಂತೆಕಂತೆಗಳು ಜನರು ಎಚ್‌ಐವಿ ಪೀಡಿತರನ್ನು ಸಮಾಜದಿಂದ ದೂರ ಮಾಡುವುದು, ತಾರತಮ್ಯ ಮಾಡುವಂತೆ ಮಾಡಿದೆ. ಆದರೆ ಈ ದಿನದ ಆಚರಣೆಯು ಎಚ್‌ಐವಿ ಪೀಡಿತರಿಗೂ ಕೂಡ ನಮ್ಮಂತೆ ಬದುಕುವ ಎಂಬುದನ್ನು ಸಾಬೀತು ಪಡಿಸುವ ಉದ್ದೇಶವನ್ನು ಹೊಂದಿದೆ.
ನೀತಿ ಸಮರ್ಥನೆ: ಎಚ್‌ಐವಿ/ಏಡ್ಸ್‌ಗೆ ಸಂಬಂಧಿಸಿದ ಜಾಗತಿಕ ಮತ್ತು ರಾಷ್ಟ್ರೀಯ ನೀತಿಗಳನ್ನು ಪರಿಶೀಲಿಸಲು ಮತ್ತು ಆರೋಗ್ಯ ರಕ್ಷಣೆಗೆ ಸಮಾನ ಪ್ರವೇಶಕ್ಕಾಗಿ ಪ್ರತಿಪಾದಿಸಲು ಅವಕಾಶವನ್ನು ಒದಗಿಸುತ್ತದೆ.
ವಿಶ್ವ ಏಡ್ಸ್ ದಿನದ ಇತಿಹಾಸ
ವಿಶ್ವ ಏಡ್ಸ್ ದಿನವನ್ನು ಮೊದಲ ಬಾರಿಗೆ 1988ರಲ್ಲಿ ಮೊದಲ ಬಾರಿಗೆ ಆಚರಿಸಲಾಯಿತು. ಜೇಮ್ಸ್ ಡಬ್ಲ್ಯೂ. ಬನ್ ಮತ್ತು ಥಾಮಸ್ ನೆಟ್ಟರ್ ಇದರ ಆಚರಣೆಗೆ ರೂವಾರಿ. ಏಡ್ಸ್ ಕುರಿತ ಜಾಗತಿಕ ಕಾರ್ಯಕ್ರಮದಲ್ಲಿ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯ ಸಾರ್ವಜನಿಕ ಮಾಹಿತಿ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಹಾಗೂ ಉತ್ತಮ ಮಾಧ್ಯಮ ಪ್ರಸಾರವನ್ನು ಖಚಿತಪಡಿಸಿಕೊಳ್ಳಲು ಮತ್ತು ಎಚ್‌ಐವಿ/ಏಡ್ಸ್ ಕುರಿತು ಸಾರ್ವಜನಿಕ ಜಾಗೃತಿ ಮೂಡಿಸಲು ಅವರು ಈ ಕಲ್ಪನೆಯನ್ನು ರೂಪಿಸಿದರು.
ಏಡ್ಸ್ ಬಾರದಂತೆ ತಡೆಯುವುದು ಹೇಗೆ?
- ಸುರಕ್ಷಿತ ಲೈಂಗಿಕ ಸಂಪರ್ಕ
- ಆಗಾಗ ಪರೀಕ್ಷೆ ಮಾಡಿಸುವುದು
- ಪ್ರಿ-ಎಕ್ಸ್‌ಪೋಸರ್ ರೋಗನಿರೋಧಕಗಳ ಬಳಕೆ
- ಸೂಜಿಗಳು ಅಥವಾ ಸಿರಿಂಜ್ಗಳನ್ನು ಹಂಚಿಕೊಳ್ಳುವುದನ್ನು ತಪ್ಪಿಸಿ
- ಎಸ್ಟಿಐಗಳಿಗೆ ಚಿಕಿತ್ಸೆ ಪಡೆಯಿರಿ
- ರಕ್ತ ಮತ್ತು ದೈಹಿಕ ದ್ರವಗಳ ಸಂಪರ್ಕವನ್ನು ತಪ್ಪಿಸಿ
- ಸುರಕ್ಷಿತ ವೈದ್ಯಕೀಯ ಅಭ್ಯಾಸಗಳನ್ನು ಆರಿಸಿಕೊಳ್ಳುವುದು
- ಹೆಪಟೈಟಿಸ್ ವಿರುದ್ಧ ಲಸಿಕೆ ಹಾಕಿಸಿಕೊಳ್ಳುವುದು
- ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿಕೊಳ್ಳುವುದು
ಇದನ್ನೂ ಓದಿ: ವಿಶ್ವ ಏಡ್ಸ್ ದಿನ, ಕ್ರಿಸ್ಮಸ್, ವಿಶ್ವ ಮಣ್ಣಿನ ದಿನ ಸೇರಿ ಡಿಸೆಂಬರ್ ತಿಂಗಳಲ್ಲಿ ಯಾವೆಲ್ಲಾ ವಿಶೇಷ ದಿನಗಳಿವೆ, ಇಲ್ಲಿದೆ ಪಟ್ಟಿ ಗಮನಿಸಿ