ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಕೋರ್ಟು ಕಚೇರಿ ಮತ್ತು ಚುನಾವಣಾ ಅಗ್ನಿಪರೀಕ್ಷೆ; ಖಾಲಿಯಾಗುತ್ತಿದೆಯೇ 'ಟ್ರಂಪ್' ಕಾರ್ಡ್; ಲೇಖಕ ಗಿರೀಶ್ ಲಿಂಗಣ್ಣ ಬರಹ

ಕೋರ್ಟು ಕಚೇರಿ ಮತ್ತು ಚುನಾವಣಾ ಅಗ್ನಿಪರೀಕ್ಷೆ; ಖಾಲಿಯಾಗುತ್ತಿದೆಯೇ 'ಟ್ರಂಪ್' ಕಾರ್ಡ್; ಲೇಖಕ ಗಿರೀಶ್ ಲಿಂಗಣ್ಣ ಬರಹ

Donald Trump: ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಫ್ ಅವರು ಎಲ್ಲಾ 34 ಆರೋಪಗಳಲ್ಲಿ ತಪ್ಪಿತಸ್ಥರೆಂದು ನ್ಯಾಯಲಾಯ ಘೋಷಿಸಿದೆ. ಹೀಗಾಗ ನಾಲ್ಕು ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗುವ ಭೀತಿಗೆ ಸಿಲುಕಿದ್ದಾರೆ. (ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ)

ಕೋರ್ಟು ಕಚೇರಿ ಮತ್ತು ಚುನಾವಣಾ ಅಗ್ನಿಪರೀಕ್ಷೆ; ಖಾಲಿಯಾಗುತ್ತಿದೆಯೇ 'ಟ್ರಂಪ್' ಕಾರ್ಡ್; ಲೇಖಕ ಗಿರೀಶ್ ಲಿಂಗಣ್ಣ ಬರಹ
ಕೋರ್ಟು ಕಚೇರಿ ಮತ್ತು ಚುನಾವಣಾ ಅಗ್ನಿಪರೀಕ್ಷೆ; ಖಾಲಿಯಾಗುತ್ತಿದೆಯೇ 'ಟ್ರಂಪ್' ಕಾರ್ಡ್; ಲೇಖಕ ಗಿರೀಶ್ ಲಿಂಗಣ್ಣ ಬರಹ

ಗಂಭೀರ ಕ್ರಿಮಿನಲ್ ಆರೋಪಗಳನ್ನು ಎದುರಿಸಿದ ಮೊದಲ ಅಮೆರಿಕಾದ ಮಾಜಿ ಅಧ್ಯಕ್ಷ ಎಂಬ ಕುಖ್ಯಾತಿಗೆ ಪಾತ್ರರಾಗಿರುವ ಡೊನಾಲ್ಡ್ ಟ್ರಂಪ್, ಜಟ್ಟಿ ನೆಲಕ್ಕೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ ಎಂಬಂತೆ ವರ್ತಿಸುವುದನ್ನು ಮುಂದುವರೆಸಿದ್ದಾರೆ. ಮಾಜಿ ನೀಲಿಚಿತ್ರ ತಾರೆಯೊಂದಿಗಿನ ಅವರ ಸಂಬಂಧ ಮತ್ತು ಆಕೆಯ ಬಾಯಿ ಮುಚ್ಚಿಸಲು ನೀಡಿದ ಅಗಾಧ ಹಣದ ಆರೋಪಗಳು ಅವರನ್ನು ಬೆಂಬಿಡದಂತೆ ಕಾಡುತ್ತಿವೆ. ಅಷ್ಟೇ ಅಲ್ಲದೇ 2016ರ ಚುನಾವಣೆಯ ಫಲಿತಾಂಶವನ್ನು ತಮ್ಮತ್ತ ಸೆಳೆಯಲು ಮತ್ತು ಕಂಪನಿಯ ದಾಖಲೆಗಳನ್ನು ತಿರುಚಲು, ಇದೇ ನೀಲಿಚಿತ್ರ ತಾರೆಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಕೂಡ ಟ್ರಂಪ್ ಅವರನ್ನು ಸತಾಯಿಸುತ್ತಿದೆ.

ಟ್ರೆಂಡಿಂಗ್​ ಸುದ್ದಿ

ನ್ಯೂಯಾರ್ಕ್ ಜ್ಯೂರಿ ನೀಡಿರುವ ಗಂಭೀರ ಅಪರಾಧದ ತೀರ್ಪು ಡೊನಾಲ್ಡ್ ಟ್ರಂಪ್ ಅವರ ನಿದ್ದೆಗೆಡಿಸಿದೆ. ಹಿಂಸಾಚಾರ, ಕೊಲೆ, ಅತ್ಯಾಚಾರ, ಸಶಸ್ತ್ರ ದರೋಡೆ ಮತ್ತು ಗಂಭೀರ ಮಾದಕವಸ್ತು ಅಪರಾಧಗಳ ಆರೋಪ ಹೊತ್ತಿರುವ ಟ್ರಂಪ್, ಒಂದು ವರ್ಷಕ್ಕಿಂತ ಹೆಚ್ಚಿನ ಜೈಲು ಶಿಕ್ಷೆಗೆ ಗುರಿಯಾಗುವ ಭೀತಿಯಲ್ಲಿದ್ದಾರೆ. 

ಸುಮಾರು ಹತ್ತು ಗಂಟೆಗಳ ಸುದೀರ್ಘ ಚರ್ಚೆಯ ಬಳಿಕ, ತೀರ್ಪುಗಾರರು ಟ್ರಂಪ್ ಅವರನ್ನು ಎಲ್ಲಾ 34 ಆರೋಪಗಳಲ್ಲಿ ತಪ್ಪಿತಸ್ಥರೆಂದು ಘೋಷಿಸಿದ್ದಾರೆ. ತೀರ್ಪು ಪ್ರಕಟವಾದಾಗ ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಮ್ಮ ಮುಖದಲ್ಲಿ ಯಾವುದೇ ಭಾವನೆಯನ್ನು ತೋರಿಸದಿರುವುದು ಗಮನ ಸೆಳೆದಿದೆ. ಈ ಶಿಕ್ಷೆಯು ಟ್ರಂಪ್‌ ಅವರಿಗೆ ಗಮನಾರ್ಹ ಕಾನೂನು ಹಿನ್ನಡೆಯಾಗಿದ್ದು, ಜೈಲು ಶಿಕ್ಷೆಯ ತೂಗುಗತ್ತಿವಾರ ತಲೆಯ ಮೇಲೆ ತೂಗುತ್ತಿದೆ.

ಆದರೆ ಈ ತೀರ್ಪಿನ ವಿರುದ್ಧ ಸಹಜವಾಗಿ ಡೊನಾಲ್ಡ್ ಟ್ರಂಪ್ ಶೀಘ್ರದಲ್ಲೇ ಮೇಲ್ಮನವಿ ಸಲ್ಲಿಸುವ ನಿರೀಕ್ಷೆಯಿದೆ. ಶಿಕ್ಷೆಗೊಳಗಾದ ಅಪರಾಧಿಯಾಗಿ ತಮ್ಮ ಪ್ರಚಾರವನ್ನು ಪುನರಾರಂಭಿಸಲು ಬಯಸದ ಅವರು, ಪ್ರಚಾರ ಸಂದರ್ಭದಲ್ಲಿ ಮುಜುಗರದ ಮತ್ತು ಕಠಿಣ ಪರಿಸ್ಥಿತಿ ಎದುರಿಸುವುದುನ್ನು ತಪ್ಪಿಸಿಕೊಳ್ಳಲು ಹರಸಾಹಾಸಪಡುತ್ತಿದ್ದಾರೆ.

ಆದಾಗ್ಯೂ, ಈ ಕ್ಷಣದಲ್ಲಿ ರಿಪಬ್ಲಿಕನ್ ಪಕ್ಷವು ಟ್ರಂಪ್ ಅವರ ಯಾವುದೇ ಪ್ರಚಾರ ಸಭೆಗಳನ್ನು ನಿಗದಿಪಡಿಸಿಲ್ಲ. ಮುಂದಿನ ವಾರ ತಮ್ಮ ಚುನಾವಣಾ ಪ್ರಚಾರ ಕಾರ್ಯಕ್ಕೆ ನಿಧಿ ಸಂಗ್ರಹಿಸುವ ಪ್ರಕ್ರಿಯೆಗೆ ಚಾಲನೆ ನೀಡಲಿರುವ ಟ್ರಂಪ್, ಕಾನೂನು ಕುಣಿಕೆಯಿಂದ ಪಾರಾಗಲು ಶತಾಯಗತಾಯ ಪ್ರಯತ್ನ ನಡೆಸಲಿದ್ದಾರೆ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಜುವಾನ್ ಮರ್ಚನ್, ಟ್ರಂಪ್ ಜೈಲು ಶಿಕ್ಷೆಯನ್ನು ಎದುರಿಸಬೇಕೆ ಎಂಬುದನ್ನು ನಿರ್ಧರಿಸಲು ಹಲವಾರು ತಿಂಗಳುಗಳನ್ನು ತೆಗೆದುಕೊಳ್ಳಬಹುದು ಎಂದು ನಿರೀಕ್ಷಿಸಲಾಗಿದೆ.

ಡೊನಾಲ್ಡ್ ಟ್ರಂಪ್​ಗೆ 4 ವರ್ಷಗಳ ಕಾಲ ಜೈಲು ಶಿಕ್ಷೆ ಸಾಧ್ಯತೆ

ತಮ್ಮ ರಾಜಕೀಯ ಲಾಭಕ್ಕಾಗಿ ಕಂಪನಿಯ ದಾಖಲೆಗಳನ್ನು ತಿರುಚಿದ ಆರೋಪದ ಮೇಲೆ, ಡೊನಾಲ್ಡ್ ಟ್ರಂಪ್ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗುವ ಸಾಧ್ಯತೆ ಇದೆ. ಆದಾಗ್ಯೂ, ಪ್ರಾಸಿಕ್ಯೂಟರ್‌ಗಳು ಟ್ರಂಪ್ ಅವರಿಗೆ ಜೈಲು ಶಿಕ್ಷೆ ವಿಧಿಸುವ ಕುರಿತು ತಮ್ಮ ಅಭಿಪ್ರಾಯವನ್ನು ನ್ಯಾಯಾಲಯದ ಮುಂದೆ ಗಟ್ಟಿಯಾಗಿ ಮಂಡಿಸಿಲ್ಲ. ಆದರೆ ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಪ್ರಕರಣದಲ್ಲಿ ಭಾಗಿಯಾಗಿರುವ ವ್ಯಕ್ತಿಗಳು, ಕೆಲವು ವಿವರಗಳನ್ನು ಸಾರ್ವಜನಿಕವಾಗಿ ಚರ್ಚಿಸುವುದನ್ನು ತಡೆಯುವ ಕಾನೂನು ನಿರ್ಬಂಧಗಳನ್ನು ಉಲ್ಲಂಘಿಸಿದ್ದಕ್ಕಾಗಿ ಜೈಲು ಶಿಕ್ಷೆಯೇ ಸೂಕ್ತ ಎಂಬ ಗಟ್ಟಿ ಅಭಿಪ್ರಾಯ ಕೇಳಿಬಂದಿದೆ.

ಇನ್ನು ಟ್ರಂಪ್ ವಿರುದ್ಧದ ಅಪರಾಧ ಸಾಬೀತಾಗಿದ್ದರೂ ಸಂಭಾವ್ಯ ಜೈಲು ಶಿಕ್ಷೆಯ ಭೀತಿಯು, ಅವರನ್ನು ಅಮೆರಿಕಾದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವುದನ್ನು ತಡೆಯುವುದಿಲ್ಲ. ಟ್ರಂಪ್ ಇನ್ನೂ 3 ಕ್ರಿಮಿನಲ್ ಆರೋಪಗಳನ್ನು ಎದುರಿಸುತ್ತಿದ್ದು ನವೆಂಬರ್​ನಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ, ನ್ಯೂಯಾರ್ಕ್ ಪ್ರಕರಣವನ್ನು ಮಾತ್ರ ಅವರು ಪರಿಹರಿಸಿಕೊಳ್ಳಬಹುದಾಗಿದೆ. ಈ ತೀರ್ಪಿನ ಕಾನೂನು ಮತ್ತು ಐತಿಹಾಸಿಕ ಪರಿಣಾಮವು ಸ್ಪಷ್ಟವಾಗಿದ್ದರೂ, ಅದರ ರಾಜಕೀಯ ಪರಿಣಾಮಗಳು ಅಷ್ಟಕಷ್ಟೇ ಎಂಬ ಮಾತುಗಳು ಕೇಳಿಬರುತ್ತಿವೆ. ಈ ತೀರ್ಪು ಟ್ರಂಪ್ ಬಗ್ಗೆ ಜನರ ಮನಸ್ಸಿನಲ್ಲಿ ಅಸ್ತಿತ್ವದಲ್ಲಿರುವ ಅಭಿಪ್ರಾಯಗಳನ್ನು ಬದಲಾಯಿಸುವ ಬದಲು, ಅದನ್ನು ಮತ್ತಷ್ಟು ಬಲಪಡಿಸಬಹುದು ಎಂಬುದು ಕೆಲವು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.

ಸಾಮಾನ್ಯವಾಗಿ ಕ್ರಿಮಿನಲ್ ಅಪರಾಧವು ಸಾಬೀತಾದಾಗ, ಅಧ್ಯಕ್ಷೀಯ ಚುನಾವಣೆಯ ಅಭ್ಯರ್ಥಿಗಳ ಭವಿಷ್ಯ ಡೋಲಾಯಮಾನವಾಗಿರುತ್ತದೆ. ಡೊನಾಲ್ಡ್ ಟ್ರಂಪ್‌ ವಿರುದ್ಧ ಕೇಳಿಬಂದ ಲೈಂಗಿಕ ದೌರ್ಜನ್ಯದ ಆರೋಪಗಳು ಮತ್ತು ರಷ್ಯಾದೊಂದಿಗಿನ ಅವರ ಸಂಬಂಧಗಳ ಬಗ್ಗೆ ನಡೆಯುತ್ತಿರುವ ತನಿಖೆಗಳು, ಕಳೆದ ಬಾರಿಯ ಅಧ್ಯಕ್ಷೀಯ ಚುನಾವಣೆಯನ್ನು ರದ್ದುಗೊಳಿಸಲು ನಡೆಸಿದ ಪ್ರಯತ್ನಗಳು ಮತ್ತು ಮಹಿಳೆಯರ ಕುರಿತು ಬಗ್ಗೆ ಆಡಿರುವ ಅವಹೇಳನಕಾರಿ ಮಾತುಗಳು, ಈ ಬಾರಿಯ ಅವರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಮೇಲೆ ಪರಿಣಾಮ ಬೀರಲಿದೆ ಎಂದೂ ಊಹಿಸಲಾಗಿದೆ.

ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸುವ ಸಾಧ್ಯತೆ ಕಡಿಮೆ

ಅಮೆರಿಕಾದ ಮತದಾರರಲ್ಲಿ ಈ ಪ್ರಕರಣದ ಆರೋಪಗಳ ಬಗ್ಗೆ ಹಲವು ವರ್ಷಗಳಿಂದ ಸಾಕಷ್ಟು ಮಾಹಿತಿ ಇದೆ. ಆದರೆ, ಟ್ರಂಪ್ ವಿರುದ್ಧ ಕೇಳಿಬಂದಿರುವ ಇತರ ಮೂರು ಪ್ರಕರಣಗಳಿಗೆ ಹೋಲಿಸಿದರೆ, ನ್ಯೂಯಾರ್ಕ್ ನ್ಯಾಯಾಲಯದಲ್ಲಿ ನಡೆದ ವಿಚಾರಣೆ ಬಗ್ಗೆ ಮತದಾರರಲ್ಲಿ ಅಷ್ಟೊಂದು ಕುತೂಹಲ ಇದ್ದಂತೆ ತೋರುತ್ತಿಲ್ಲ. ಟ್ರಂಪ್ ಅಮೆರಿಕಾದ ಪ್ರಜಾಪ್ರಭುತ್ವವನ್ನು ದುರ್ಬಲಗೊಳಿಸಿದ್ದಾರೆ ಮತ್ತು ರಾಷ್ಟ್ರೀಯ ಭದ್ರತಾ ರಹಸ್ಯಗಳನ್ನು ತಪ್ಪಾಗಿ ನಿರ್ವಹಿಸಿದ್ದಾರೆ ಎಂಬ ಆರೋಪಗಳು, ಮತದಾರರ ಮೇಲೆ ಗಮನಾರ್ಹ ಪರಿಣಾಮ ಬೀರಿರುವುದನ್ನು ನಾವು ಕಾಣುತ್ತವೆ.

ಹೀಗಿದ್ದರೂ ಪ್ರಸ್ತುತ ಅಧ್ಯಕ್ಷ ಜೋ ಬೈಡನ್ ಮತ್ತವರ ಡೆಮಾಕ್ರೆಟಿಕ್ ಪಕ್ಷ, ಅಧ್ಯಕ್ಷ ಸ್ಥಾನಕ್ಕೆ ಟ್ರಂಪ್ ಸೂಕ್ತವಲ್ಲ ಎಂದು ವಾದಿಸಲು ಈ ನಿರ್ಧಾರವು ಅವಕಾಶವನ್ನು ನೀಡುವ ಸಾಧ್ಯತೆಯಿದೆ. ಅದೇ ಸಮಯದಲ್ಲಿ ಈ ತೀರ್ಪಿನಿಂದಾಗಿ ತನ್ನ ನಾಮನಿರ್ದೇಶಿತ ಅಧ್ಯಕ್ಷೀಯ ಅಭ್ಯರ್ಥಿ ಎಂದು ಟ್ರಂಪ್ ಅವರನ್ನು ಘೋಷಿಸಲು ರಿಪಬ್ಲಿಕನ್ ಪಕ್ಷಕ್ಕೆ ತುಸು ಕಷ್ಟವಾಗಬಹುದು.

ವಿಚಾರಣೆಯ ಉದ್ದಕ್ಕೂ, ಟ್ರಂಪ್ ಅವರು ತಾವು ಯಾವುದೇ ತಪ್ಪು ಮಾಡಿಲ್ಲ ಮತ್ತು ಪ್ರಕರಣವು ನ್ಯಾಯಸಮ್ಮತವಲ್ಲ ಎಂದು ವಾದ ಮಂಡಿಸಿದ್ದಾರೆ. ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆಯನ್ನು ಕೂಡ ಟ್ರಂಪ್ ಟೀಕಿಸಿದ್ದಾರೆ. ಪ್ರಮುಖ ರಿಪಬ್ಲಿಕನ್ ಬೆಂಬಲಿಗರು ಟ್ರಂಪ್ ಅವರ ಈ ವಾದಕ್ಕೆ ಧ್ವನಿಗೂಡಿಸಿದ್ದು, ನ್ಯಾಯಾಲಯದ ಹೊರಗೆ ಸಾಕ್ಷಿಗಳ ಬಗ್ಗೆ ಪ್ರಚೋದನಕಾರಿ ಹೇಳಿಕೆ ನೀಡಿದ್ದಕ್ಕಾಗಿ ದಂಡ ಕೂಡ ತೆತ್ತಿದ್ದಾರೆ.

ಟ್ರಂಪ್ ವಿರುದ್ಧದ ಆರೋಪಗಳ ವಿಚಾರಣೆಯು ಒಟ್ಟು ನಾಲ್ಕು ವಾರಗಳ ಕಾಲ ನಡೆದಿದ್ದು, ಕೆಲವು ನಾಟಕೀಯ ತಿರುವುಗಳಿಗೆ ಸಾಕ್ಷಿಯಾಗಿದೆ. 2016ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ, ಟ್ರಂಪ್ ಅವರು 'ಆಕ್ಸೆಸ್ ಹಾಲಿವುಡ್' ಟೇಪ್‌ನ ಪ್ರಕಟಣೆಯಿಂದ ಸಂಕಷ್ಟಕ್ಕೆ ಸಿಲುಕಿದ್ದರು. ಅದರಲ್ಲಿ ಅವರು ಮಹಿಳೆಯರ ದೇಹವನ್ನು ಅವರ ಒಪ್ಪಿಗೆಯಿಲ್ಲದೆ ಮುಟ್ಟುವ ಬಗೆ ಹೇಗೆಂದು ಚರ್ಚಿಸಿದ್ದರು. ಈ ಪ್ರಕರಣದಿಂದಾಗಿ ಟ್ರಂಪ್ ಅವರ ಲೈಂಗಿಕ ನಡವಳಿಕೆಯ ಬಗ್ಗೆ ಮತ್ತಷ್ಟು ನಕಾರಾತ್ಮಕ ಕಥೆಗಳು ಹೊರಹೊಮ್ಮುವ ಸಾಧ್ಯತೆಯನ್ನು ಇದು ದಟ್ಟವಾಗಿಸಿತು.

ಆದರೆ ಡೊನಾಲ್ಡ್ ಟ್ರಮ್ ಅವರು ನೀಲಿಚಿತ್ರ ತಾರೆಯೊಂದಿಗಿನ ತಮ್ಮ ಅಕ್ರಮ ಸಂಬಂಧದ ಆರೋಪವನ್ನು ಸ್ಪಷ್ಟವಾಗಿ ನೀರಾಕರಿಸಿದ್ದಾರೆ. 2016ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ಸಮಯದಲ್ಲಿ ಟ್ರಂಪ್ ಅವರನ್ನು ಬ್ಲ್ಯಾಕ್‌ಮೇಲ್‌ ಮಾಡಲು ಈ ಸುಳ್ಳು ಆರೋಪಗಳನ್ನು ಸೃಷ್ಟಿಸಲಾಗಿದೆ ಎಂದು ಟ್ರಂಪ್ ಪರ ವಕೀಲರು ಕೂಡ ನ್ಯಾಯಾಲಯದಲ್ಲಿ ವಾದ ಮಂಡಿಸಿದ್ದಾರೆ.

ಪ್ರಾಸಿಕ್ಯೂಷನ್‌ನ ಮುಖ್ಯ ಸಾಕ್ಷಿಯಾದ ಕೊಹೆನ್‌ ನ್ಯಾಯಾಲಯದಲ್ಲಿ ನುಡಿದಿರುವ ಸಾಕ್ಷ್ಯವು, ಟ್ರಂಪ್‌ ಅವರೊಂದಿಗಿನ ವೈಯಕ್ತಿಕ ದ್ವೇಷದಿಂದ ಕೂಡಿದೆ. ಎಂದು ಟ್ರಂಪ್ ಪರ ವಕೀಲರು ವಾದ ಮಂಡಿಸಿದರು. ಜೊತೆಗೆ ಜನಪ್ರಿಯತೆ ಮತ್ತು ಹಣದ ಆಸೆಗೆ ಸಂಬಂಧಿಸಿದ ಕ್ರಿಮಿನಲ್ ಆರೋಪಗಳಿಗೆ ಸಂಬಂಧಿಸಿದಂತೆ, ಕೊಹೆನ್ 2018ರಲ್ಲಿ ನ್ಯಾಯಾಲಯದಲ್ಲಿ ತಪ್ಪೊಪ್ಪಿಕೊಂಡಿದ್ದಾರೆ ಎಂದು ಟ್ರಂಪ್ ಪರ ವಕೀಲರು ವಾದ ಮಂಡಿಸಿದ್ದಾರೆ.

ಲೈಂಗಿಕ ದೌರ್ಜನ್ಯದ ಬಗ್ಗೆ ನ್ಯಾಯಾಲಯಕ್ಕೆ ಸಾಕ್ಷಿ ನುಡಿದ ಡೇನಿಯಲ್ಸ್

ಇನ್ನು ಟ್ರಂಪ್ ವಿರುದ್ಧ ಕೇಳಿಬಂದಿರುವ ಹಣ ಪಾವತಿ ಆರೋಪಗಳನ್ನೂ ಅಲ್ಲಗಳೆದಿರುವ ಅವರ ಪರ ವಕೀಲರು, ಪಾವತಿಗಳು ನಿಜವಾದ ಕಾನೂನು ಸೇವೆಗಳಿಗೆ ಮೀಸಲಿರಿಸಲಾಗಿತ್ತು ಎಂದು ಹೇಳಿದ್ದಾರೆ. ಆದರೆ ಹಣ ಪಾವತಿಯ ನಿಜವಾದ ಕಾರಣವನ್ನು ಮರೆಮಾಡಲು, ಕಾನೂನುಬಾಹಿರ ಮಾರ್ಗಗಳನ್ನೂ ಅನುಸರಿಸಲಾಗುತ್ತಿದೆ ಎಂದು ಪ್ರಾಸಿಕ್ಯೂಷನ್ ವಾದಿಸಿದೆ.

ಕೊಹೆನ್ ಮತ್ತು ಟ್ರಂಪ್ ನಡುವಣ ಸಂಬಂಧವನ್ನು ದೃಢೀಕರಿಸಲು, ಪ್ಲೇಬಾಯ್ ಮಾಡೆಲ್ ಕರೆನ್ ಮೆಕ್‌ಡೌಗಲ್‌ಗೆ 1,50,000 ಅಮೆರಿಕನ್ ಡಾಲರ್ ಹಣವನ್ನು ಪಾವತಿಸುವ ಕುರಿತಾದ ಗುಪ್ತ ಆಡಿಯೋವನ್ನು ಇದೇ ವೇಳೆ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಇದರಲ್ಲಿನ ಟ್ರಂಪ್ ಮತ್ತು ಕೊಹೆನ್ ಅವರ ಧ್ವನಿಯನ್ನು ದೃಢೀಕರಿಸಲಾಯಿತು.

ಡೇನಿಯಲ್ಸ್ ಮತ್ತು ಮೆಕ್‌ಡೌಗಲ್‌ಗೆ ಹಣ ಪಾವತಿಗಳನ್ನು ವ್ಯವಸ್ಥೆ ಮಾಡಿದ ವಕೀಲ ಕೀತ್ ಡೇವಿಡ್‌ಸನ್‌ರಿಂದಲೂ ನ್ಯಾಯಾಧೀಶರು ಸ್ಪಷ್ಟೀಕರಣ ಬಯಸಿದರು. ಆದಾಗ್ಯೂ, ಟ್ರಂಪ್ ಪರ ವಕೀಲರು ಡೇವಿಡ್ಸನ್ ಅವರನ್ನು ಪಾಟಿ ಸ್ವಲೈಗೆ ಗುರಿಪಡಿಸಿದರು. ಅಲ್ಲದೇ ಕೀತ್ ಡೇವಿಡ್‌ಸನ್‌ ಇತರ ಉನ್ನತ ವ್ಯಕ್ತಿಗಳಿಗೂ ಇದೇ ರೀತಿಯ ಹಣದ ವ್ಯವಹಾರಗಳನ್ನು ನಿರ್ವಹಿಸಿದ್ದಾರೆ ಎಂದು ಆರೋಪಿಸಿದರು.

ಲೇಕ್ ತಾಹೋ ಗಾಲ್ಫ್ ಪಂದ್ಯಾವಳಿಯ ಸಮಯದಲ್ಲಿ ಹೋಟೆಲ್ ಸೂಟ್‌ನಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಕುರಿತು ಡೇನಿಯಲ್ಸ್ ನ್ಯಾಯಾಲಯಕ್ಕೆ ಸಾಕ್ಷಿ ನುಡಿದರು. ನ್ಯಾಷನಲ್ ಎನ್‌ಕ್ವೈರರ್‌ನ ಮಾಜಿ ಪ್ರಕಾಶಕರಾದ ಡೇವಿಡ್ ಪೆಕರ್ ಅವರು ಮೆಕ್‌ಡೌಗಲ್ ಅವರ ಹೇಳಿಕೆಯನ್ನು ಖರೀದಿಸುವುದರ ಜೊತೆಗೆ, ಟ್ರಂಪ್‌ ಅವರ ಪ್ರಚಾರದ ಬಗ್ಗೆ ನಕಾರಾತ್ಮಕ ವರದಿಗಳು ಪ್ರಕಟವಾಗುವುದನ್ನು ತಡೆಯಲು ಹೇಗೆ ಸಹಾಯ ಮಾಡಿದರು ಎಂಬುದನ್ನು ಕೂಡ ಡೇನಿಯಲ್ಸ್ ನ್ಯಾಯಾಧೀಶರಿಗೆ ವಿವರಿಸಿದರು.

ಈ ಪ್ರಕರಣದಲ್ಲಿ ಅತ್ಯಂತ ನಿರ್ಣಾಯಕ ಸಾಕ್ಷಿಯಾದ ಕೊಹೆನ್, ನ್ಯಾಯಾಲಯದಲ್ಲಿ ತಮ್ಮ ಸಾಕ್ಷಿಯನ್ನು ದಾಖಲಿಸಲು ಹಲವಾರು ದಿನಗಳನ್ನು ತೆಗೆದುಕೊಂಡಿದ್ದಾರೆ. ನೀಲಿಚಿತ್ರ ತಾರೆಗೆ ವರ್ಗಾಯಿಸಿದ ಅಕ್ರಮ ಹಣದ ಬಗ್ಗೆ ಟ್ರಂಪ್‌ ಅವರಿಗೆ ಸಂಪೂರ್ಣ ಅರಿವಿದೆ ಎಂದು ಕೊಹೆನ್ ಹೇಳಿರುವುದು ಗಮನ ಸೆಳೆದಿದೆ.

ತೀರ್ಪು ವಿಳಂಬವಾಗುತ್ತಿರುವುದಕ್ಕೆ ಕಾರಣ ಇಲ್ಲಿದೆ

ಟ್ರಂಪ್ ವಿರುದ್ಧ ಕೇಳಿಬಂದಿರುವ ಆರೋಪಗಳ ಸ್ಪಷ್ಟ ಚಿತ್ರಣವನ್ನು ಕೊಹೆನ್ ನ್ಯಾಯಾಲಯಕ್ಕೆ ನೀಡಿದ್ದು, ಡೊನಾಲ್ಡ್ ಟ್ರಂಪ್ ಮತ್ತು ಟ್ರಂಪ್ ಸಂಸ್ಥೆಯ ಹಿರಿಯ ಹಣಕಾಸು ಅಧಿಕಾರಿ ಮಧ್ಯೆ ನಡೆಡ್ ಗುಪ್ತ ಸಭೆಯ ಕುರಿತೂ ಮಾಹಿತಿ ನೀಡಿದರು. 2018ರಲ್ಲಿ ಟ್ರಂಪ್‌ ಮತ್ತು ತಮ್ಮ ಸಂಬಂಧ ಹಳಸಿದ್ದರ ಬಗ್ಗೆಯೂ ಕೊಹೆನ್ ಬಹಿರಂಗವಾಗಿ ಮಾತನಾಡಿದರು. ಒಂದು ದಶಕದ ಕಾಲ ಟ್ರಂಪ್ ಅವರ ವೈಯಕ್ತಿಕ ಫಿಕ್ಸರ್ ಆಗಿ ಸೇವೆ ಸಲ್ಲಿಸಿದ ನಂತರ, ಇದೀಗ ಪ್ರಾಸಿಕ್ಯೂಟರ್‌ಗಳೊಂದಿಗೆ ಸಹಕರಿಸುವ ತಮ್ಮ ನಿರ್ಣಯವನ್ನು ಕೊಹೆನ್ ಗಟ್ಟಿಯಾಗಿ ಸಮರ್ಥಿಸಿಕೊಂಡರು.

‘ಟ್ರಂಪ್ ಅವರಿಗೆ ನಿಷ್ಠರಾಗಿ ಉಳಿಯುವ ನನ್ನ ನಿರ್ಧಾರದಿಂದ ನಾನು ಪಾಲಿಸಕೊಂಡು ಬರುತ್ತಿರುವ ನೈತಿಕ ತತ್ವಗಳಿಗೆ ಧಕ್ಕೆಯಾಗಿದೆ. ಇದಕ್ಕಾಗಿ ನನ್ನ ಕುಟುಂಬ ಮತ್ತು ನಾನು ಭಾರಿ ಬೆಲೆ ತೆರಬೇಕಾಗಿ ಬಂದಿದೆ’ ಎಂದು ಹೇಳುತ್ತಾ ಕೊಹೆನ್ ನ್ಯಾಯಾಲಯದಲ್ಲಿ ಕಣ್ಣೀರಾದರು. ಸದ್ಯ ನ್ಯೂಯಾರ್ಕ್ ನ್ಯಾಯಾಲಯ ನೀಡಿರುವ ತೀರ್ಪು ಮ್ಯಾನ್‌ಹ್ಯಾಟನ್ ಜಿಲ್ಲಾ ವಕೀಲ ಆಲ್ವಿನ್ ಬ್ರಾಗ್ ಅವರ ಹೇಳಿಕೆಯನ್ನು ಬೆಂಬಲಿಸುತ್ತದೆ.

ಈ ಪ್ರಕರಣವು ಅಕ್ರಮ ಹಣ ವರ್ಗಾವಣೆಗಿಂತ ಹೆಚ್ಚಾಗಿ ಚುನಾವಣಾ ಮಧ್ಯಸ್ಥಿಕೆಗೆ ಸಂಬಂಧಿಸಿದೆ. ಟ್ರಂಪ್ ವಿರುದ್ಧದ ನಾಲ್ಕು ಪ್ರಕರಣಗಳ ಪೈಕಿ ಈ ಪ್ರಕರಣ ದುರ್ಬಲವಾಗಿದೆ. ಆದರೆ ಈ ಪ್ರಕರಣವು ಮೊದಲ ಬಾರಿಗೆ ವಿಚಾರಣೆಗೆ ಹೋಗುವುದರಿಂದ ಮತ್ತು ಚುನಾವಣೆಯ ಮೊದಲು ತೀರ್ಪುಗಾರರನ್ನು ತಲುಪುವ ಏಕೈಕ ಪ್ರಕರಣವಾಗಿರುವುದರಿಂದ ಭಾರೀ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು.

ಇನ್ನು ಟ್ರಂಪ್ ಅವರ ವಿರುದ್ಧ ದಾಖಲಾದ ಉಳಿದ ಮೂರು ಪ್ರಕರಣಗಳು, ಅಟ್ಲಾಂಟಾ ಮತ್ತು ವಾಷಿಂಗ್ಟನ್‌ನಲ್ಲಿ 2020ರ ಅಧ್ಯಕ್ಷೀಯ ಚುನಾವಣಾ ಫಲಿತಾಂಶವನ್ನು ಬುಡಮೇಲು ಮಾಡುವ ಪ್ರಯತ್ನ ನಡೆಸಿದ್ದರ ಕುರಿತು ದಾಖಲಾದ ಸ್ಥಳೀಯ ಮತ್ತು ಫೆಡರಲ್ ಆರೋಪಗಳಾಗಿವೆ. ಹಾಗೆಯೇ ಫ್ಲೋರಿಡಾದಲ್ಲಿ ಉನ್ನತ-ರಹಸ್ಯ ದಾಖಲೆಗಳನ್ನು ಅಕ್ರಮವಾಗಿ ನಿರ್ವಹಿಸಿದ ಆರೋಪ ಕೂಡ ಡೊನಾಲ್ಡ್ ಟ್ರಂಪ್ ಅವರ ಮೇಲಿದೆ. ಆದರೆ ಫೆಡರಲ್ ದೋಷಾರೋಪಣೆ ಮತ್ತು ಕಾನೂನು ಮೇಲ್ಮನವಿ ಅವಕಾಶದಿಂದಾಗಿ ತೀರ್ಪು ವಿಳಂಬವಾಗುತ್ತಿದೆ.

ಬರಹ: ಗಿರೀಶ್ ಲಿಂಗಣ್ಣ, ಲೇಖಕರು ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ

 

ಟಿ20 ವರ್ಲ್ಡ್‌ಕಪ್ 2024