ಕವಾಸಕಿ ಪ್ರಿಯರೇ 7 ಲಕ್ಷ ರೂನ ಬೈಕ್ ಬೇಕೆ? 2024 ಕವಾಸಕಿ ವಲ್ಕನ್ ಎಸ್ ಭಾರತದಲ್ಲಿ ಬಿಡುಗಡೆ; ಹೊಸ ಬಣ್ಣದಿಂದ ಶೃಂಗಾರಗೊಂಡ ಕ್ರೂಸರ್
ಕವಾಸಕಿ ಕಂಪನಿಯು 2024 Kawasaki Vulcan S ಬೈಕನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಇದು ಈಗ ಹೊಸ ಬಣ್ಣ ಪರ್ನಲ್ ಮೇಟ್ ಸೇಜ್ ಗ್ರೀನ್ ಆಯ್ಕೆಯೊಂದಿಗೆ ಆಗಮಿಸಿದೆ. ಈ ಹಿಂದಿನ ಮಾಡೆಲ್‌ನ ಮೆಕ್ಯಾನಿಕ್ ಅಂಶಗಳು ಹಾಗೆಯೇ ಮುಂದುವರೆದಿವೆ.
2024 Kawasaki Vulcan S ಭಾರತದಲ್ಲಿ ಬಿಡುಗಡೆಯಾಗಿದೆ. ಕವಾಸಕಿ ವಲ್ಕನ್ ಎಸ್ ಎನ್ನುವುದು ಮಧ್ಯಮ ಹಗುರದ ಕ್ರೂಸರ್ ಬೈಕ್. ನೂತನ ಬೈಕ್‌ನ್ ಎಕ್ಸ್ ಶೋರೂಂ ದರ 7.10 ಲಕ್ಷ ರೂಪಾಯಿ. ಹೊಸ ಬಣ್ಣದಲ್ಲಿ ಮಾತ್ರ ಬಿಡುಗಡೆ ಮಾಡಲಾಗಿದೆ. ಉಳಿದಂತೆ ಟೆಕ್ನಿಕಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ನೂತನ ಬೈಕ್ ಪರ್ನಲ್‌ಮೇಟ್ ಸೇಜ್ ಗ್ರೀನ್ ಬಣ್ಣದಲ್ಲಿ ದೊರಕುತ್ತದೆ. ಹೊಸ ಪೇಂಟ್ ಆಯ್ಕೆಯಿದ್ದರೂ ದರ ಮಾತ್ರ ಈ ಹಿಂದಿನ ಕವಾಸಕಿ ವಲ್ಕನ್ ಎಸ್‌ನಷ್ಟೇ ಇದೆ.
ಎಂಜಿನ್ ಮತ್ತು ಪವರ್ ವಿಷ್ಯ
2024 ಕವಾಸಕಿ ವಲ್ಕನ್ ಎಸ್‌ನಲ್ಲಿ 649 ಸಿಸಿಯ ಪ್ಯಾರಲಲ್-ಟ್ವಿನ್, ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ. ಇದು 7,500 ಆವರ್ತನಕ್ಕೆ 60 ಬಿಎಚ್‌ಪಿ ಪವರ್ ನೀಡುವಂತೆ ಟ್ಯೂನ್ ಮಾಡಲಾಗಿದೆ. 6,600 ಆರ್‌ಪಿಎಂನಲ್ಲಿ 62.4 ಎನ್‌ಎಂ ಪೀಕ್ ಟಾರ್ಕ್ ಲಭ್ಯವಿರುತ್ತದೆ. ಕ್ರೂಸರ್ ಹೆಚ್ಚಿನ ರೇಕ್ ಮತ್ತು ಟ್ರಯಲ್‌ನೊಂದಿಗೆ ಕಡಿಮೆ-ಸ್ಲಂಗ್ ವಿನ್ಯಾಸವನ್ನು ಪಡೆಯುತ್ತದೆ. ಕೆಳಮಟ್ಟದ ಮತ್ತು ಅಗಲವಾದ ಹ್ಯಾಂಡಲ್‌ಬಾರ್ ಹಾಗೂ ಫಾರ್ವರ್ಡ್-ಸೆಟ್ ಫುಟ್‌ಪೆಗ್ ಲಾಂಗ್ ಡ್ರೈವ್‌ಗೆ ಸೂಕ್ತವಾಗಿದೆ. ಸವಾರರಿಗೆ ಆರಾಮದಾಯಕವಾದ ಟೂರಿಂಗ್ ಸೀಟ್ ಮತ್ತು ಹಿಂಬದಿ ಸವಾರನಿಗೆ ದಪ್ಪವಾದ ಮೆತ್ತನೆಯೊಂದಿಗೆ ಪಿಲಿಯನ್ ಸೀಟ್ ಹೊಂದಿದೆ.
ಅಮೇರಿಕನ್ ಕ್ರೂಸರ್ ಬೈಕ್‌ಗಳಿಗಿಂತ ಭಿನ್ನವಾಗಿ ಕವಾಸಕಿ ವಲ್ಕನ್ ಎಸ್ ಬೈಕ್ ಕ್ರೋಮ್ ಅನ್ನು ಅವಲಂಬಿಸುವ ಬದಲು ಎಂಜಿನ್ ಮತ್ತು ಇತರ ಘಟಕಗಳ ಸುತ್ತಲೂ ಸಂಪೂರ್ಣ ಕಪ್ಪು ಸ್ಟೈಲಿಂಗ್ ಹೊಂದಿದೆ. ಇದು ಭಿನ್ನವಾದ ಅಂಶವೆಂದೇ ಹೇಳಬಹುದು. ಈ ಮೋಟಾರ್‌ಸೈಕಲ್‌ನಲ್ಲಿನ ಹೊಸ ಮ್ಯಾಟ್ ಗ್ರೀನ್ ಪೇಂಟ್ ಸ್ಕೀಮ್‌ನಿಂದ ಆಕರ್ಷಕವಾಗಿ ಕಾಣಿಸುತ್ತದೆ.
2024 ಕವಾಸಕಿ ವಲ್ಕನ್ ಎಸ್ 18-ಇಂಚಿನ ಮುಂಭಾಗ ಮತ್ತು 17-ಇಂಚಿನ ಹಿಂಭಾಗದ ಅಲಾಯ್ ವೀಲ್‌ಗಳನ್ನು ಹೊಂದಿದೆ. ಇದು ಮಿಶ್ರಲೋಹದ ಅಲಾಯ್ ವಿಲ್. ಬೈಕಿನ ಮುಂಭಾಗದಲ್ಲಿ 41 ಎಂಎಂ ಟೆಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಹೊಂದಾಣಿಕೆ ಮಾಡಬಹುದಾದ ಪ್ರಿಲೋಡ್ ಮೊನೊಶಾಕ್ ಇದೆ. ಡ್ಯುಯೆಲ್ ಚಾನೆಲ್ ಎಬಿಎಸ್ ಜತೆಗಿದೆ.
ನೂತನ ವಲ್ಕನ್ ಎಸ್ ಬೈಕ್‌ನಲ್ಲಿ 14-ಲೀಟರ್ ಇಂಧನ ಟ್ಯಾಂಕ್ ಇದೆ. ಬೈಕ್‌ನ ಒಟ್ಟು ತೂಕ 235 ಕೆಜಿ (ಕರ್ಬ್) ಇದೆ. ಸೀಟ್ ತಗ್ಗಿನಲ್ಲಿದೆ. ಅಂದರೆ 705 ಎಂಎಂ ಇದೆ. ಗ್ರೌಂಡ್ ಕ್ಲಿಯರೆನ್ಸ್ 130 ಎಂಎಂ ಆಗಿದೆ. ಕ್ರೂಸರ್ ಸೆಮಿ-ಡಿಜಿಟಲ್ ಇನ್ಸ್ಟ್ರುಮೆಂಟ್ ಕನ್ಸೋಲ್ ಹೊಂದಿದೆ. ಬ್ಲೂಟೂಥ್ ಕನೆಕ್ಟಿವಿಟಿಯೂ ಇದೆ.
ಈ ಬೈಕ್‌ಗೆ ಪ್ರತಿಸ್ಪರ್ಧಿಗಳು ಯಾರೆಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಕವಾಸಕಿ ವಲ್ಕನ್ ಎಸ್ ರಾಯಲ್ ಎನ್‌ಫೀಲ್ಡ್ ಸೂಪರ್ ಮೀಟಿಯರ್ 650, ಬಿಎಸ್‌ಎ ಗೋಲ್ಡ್ ಸ್ಟಾರ್ 650 ಮತ್ತು ಇತರೆ ಆಧುನಿಕ-ರೆಟ್ರೊ ಮೋಟಾರ್‌ಸೈಕಲ್‌ಗಳ ಜತೆ ಮಾರುಕಟ್ಟೆಯಲ್ಲಿ ಸ್ಪರ್ಧೆ ನಡೆಸಲಿದೆ.