Vehicle Scrapping: ಭಾರತದಲ್ಲಿ ವಾಹನ ಗುಜರಿ ನೀತಿ ಬದಲಾವಣೆ ಶೀಘ್ರ, 15 ವರ್ಷ ಹಳೆಯ ವಾಹನಗಳಿಗೆ ಬಿಗ್ ರಿಲೀಫ್
Vehicle Scrapping: ಸದ್ಯದ ವಾಹನ ಗುಜರಿ ನೀತಿ 20 ವರ್ಷಕ್ಕಿಂತ ಮೇಲ್ಪಟ್ಟ ಖಾಸಗಿ ವಾಹನಗಳು ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟ ವಾಣಿಜ್ಯ ವಾಹನಗಳನ್ನು ಅಧಿಕೃತ ಫಿಟ್‌ನೆಸ್ ಕೇಂದ್ರಗಳು ಸೂಕ್ತವೆಂದು ಪರಿಗಣಿಸದೆ ಇದ್ದರೆ ಗುಜರಿಗೆ ಹಾಕಬೇಕಾಗುತ್ತದೆ. ಆದರೆ, ಈ ವಾಹನ ಗುಜರಿ ನೀತಿ ಶೀಘ್ರದಲ್ಲಿ ಬದಲಾವಣೆಯಾಗುವ ಸೂಚನೆ ದೊರಕಿದೆ.
Vehicle Scrapping: ಮೂರು ವರ್ಷಗಳ ಹಿಂದೆ ಪರಿಚಯಿಸಿದ ವಾಹನ ಗುಜರಿ ನೀತಿಯಲ್ಲಿ ಕೇಂದ್ರ ಸರಕಾರವು ಶೀಘ್ರದಲ್ಲಿ ತಿದ್ದುಪಡಿ ತರಲಿದೆ. 15 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವಾಹನಗಳಿಗೆ ಇದರಿಂದ ಬಿಗ್ ರಿಲೀಫ್ ದೊರಕಲಿದೆ. ಹೊಸ ಬದಲಾವಣೆಯಿಂದಾಗಿ, ಫಿಟ್‌ನೆಸ್ ಪರೀಕ್ಷಾ ಕೇಂದ್ರಗಳಲ್ಲಿ ಅನರ್ಹವೆಂದು ಕಂಡುಬಂದ ವಾಹನಗಳನ್ನು ಗುಜರಿಗೆ ಹಾಕುವುದು ಕಡ್ಡಾಯವೆಂಬ ನಿಯಮದಲ್ಲಿ ಬದಲಾವಣೆ ನಿರೀಕ್ಷಿಸಲಾಗಿದೆ. ವಾಹನವನ್ನು ಗುಜರಿಗೆ ಹಾಕುವಂತೆ ಹೇಳುವ ಬದಲು ವಾಹನ ಹೊರಸೂಸುವ ಮಾಲಿನ್ಯದ ಮಟ್ಟದ ಮೇಲೆ ಗಮನ ಹರಿಸುವ ಗುರಿಯನ್ನು ಕೇಂದ್ರ ಸರಕಾರ ಹೊಂದಿದೆ. ಹೀಗಾಗಿ, 15 ವರ್ಷಕ್ಕಿಂತ ಹೆಚ್ಚು ವಯಸ್ಸಿನ ವಾಹನಗಳಿಗೂ ಜೀವದಾನ ದೊರಕಲಿದೆ.
ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯವು ವಾಹನಗಳ ಸ್ಕ್ರ್ಯಾಪಿಂಗ್ ನಿಯಮದಲ್ಲಿ ಬದಲಾವಣೆ ತರಲು ಉದ್ದೇಶಿಸಿದೆ. ಗುಜರಿಗೆ ಆದ್ಯತೆ ನೀಡುವುದಕ್ಕಿಂತ ವಾಹನಗಳ ಮಾಲಿನ್ಯ ತಪಾಸಣೆಯ ವಿಶ್ವಾಸಾರ್ಹವಾಗಿ ಮಾಡಲು ಯೋಜಿಸುತ್ತಿದೆಯಂತೆ. ಭಾರತದ ವಾಹನ ತಯಾರಕರ ಸೊಸೈಟಿಯು ಸೆಪ್ಟೆಂಬರ್ 10ರಂದು ಆಯೋಜಿಸಿದ ವಾರ್ಷಿಕ ಸಮಾವೇಶದಲ್ಲಿ ಎಂಆರ್‌ಟಿಎಚ್ ಕಾರ್ಯದರ್ಶಿ ಅನುರಾಗ್ ಜೈನ್ ಈ ನಿಟ್ಟಿನಲ್ಲಿ ವಾಹನೋದ್ಯಮದ ಸಹಕಾರ ಕೋರಿದ್ದಾರೆ.
ವಾಹನಗಳು ಹೊರಸೂಸುವ ಮಾಲಿನ್ಯಕಾರಕಗಳನ್ನು ಕಡಿಮೆ ಮಾಡುವ ಉದ್ದೇಶದಿಂದ 2021ರಲ್ಲಿ ಭಾರತದಲ್ಲಿ ವಾಹನ ಗುಜರಿ ನೀತಿ ಪರಿಚಯಿಸಲಾಯಿತು. ಈ ಮೂಲಕ ರಸ್ತೆಯಿಂದ ಹಳೆಯ, ಮಾಲಿನ್ಯಕಾರಕ ವಾಹನಗಳನ್ನು ದೂರವಿಡಲು ಪ್ರಯತ್ನಿಸಲಾಯಿತು. 20 ವರ್ಷ ಮೇಲ್ಪಟ್ಟ ಖಾಸಗಿ ವಾಹನಗಳು ಮತ್ತು 15 ವರ್ಷ ಮೇಲ್ಪಟ್ಟ ವಾಣಿಜ್ಯ ವಾಹನಗಳು ಅಧಿಕೃತ ಫಿಟ್‌ನೆಸ್ ಕೇಂದ್ರಗಳಲ್ಲಿ ಕಡ್ಡಾಯವಾಗಿ ಫಿಟ್‌ನೆಸ್ ಪರೀಕ್ಷೆಗೆ ಒಳಗಾಗಬೇಕು ಎಂದು ನೀತಿ ಮಾರ್ಗಸೂಚಿಗಳು ಹೇಳುತ್ತವೆ. ಎಲ್ಲಾದರೂ ಫಿಟ್ನೆಸ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ್ರೆ ಅಂತಹ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ.
ಹಲವು ವಾಹನ ಮಾಲೀಕರ ಪ್ರತಿಕ್ರಿಯೆಯ ಬಳಿಕ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. "ವಾಹನಗಳ ವಯಸ್ಸಿಗಿಂತ ಮಾಲಿನ್ಯಕಾರಕ ವಾಹನಗಳತ್ತ ಹೆಚ್ಚು ಗಮನ ಹರಿಸಬೇಕು" ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ. "15 ವರ್ಷಗಳ ಬಳಿಕ ವಾಹನವನ್ನು ಗುಜರಿಗೆ ಹಾಕುವುದು ಕಡ್ಡಾಯ ಎಂಬ ನೀತಿಯನ್ನು ತಿಳಿಸಿದಾಗ ಜನರು ಒಂದು ಪ್ರಶ್ನೆ ಕೇಳುತ್ತಾರೆ. ನಾನು ನನ್ನ ವಾಹನದ ಮೇಂಟೆನ್ಸ್ ಉತ್ತಮವಾಗಿ ಮಾಡಿದ್ದರೂ ಏಕೆ ಇದನ್ನು ಗುಜರಿಗೆ ಹಾಕಲು ಬಯಸುವಿರಿ?. ಇದು ಸಮಂಜಸವಾದ ಪ್ರಶ್ನೆಯೂ ಹೌದು. ಇದೇ ಕಾರಣಕ್ಕೆ ವಾಹನದ ವಯಸ್ಸಿಗಿಂತ ಮಾಲಿನ್ಯಕಾರಕ ಅಂಶಗಳ ಕುರಿತು ಹೆಚ್ಚಿನ ಗಮನ ನೀಡಲು ಉದ್ದೇಶಿಸಲಾಗಿದೆ" ಎಂದು ಅವರು ಹೇಳಿದ್ದಾರೆ.
ಮಾಲಿನ್ಯಕಾರಕ ಅಂಶಗಳ ಕುರಿತು ಹೆಚ್ಚು ನಿಗಾವಹಿಸಲು ಮಾಲಿನ್ಯ ಪರಿಶೀಲನೆ ಹೆಚ್ಚು ಕಠಿಣವಾಗಬೇಕು. "ಮಾಲಿನ್ಯ ತಪಾಸಣೆಯನ್ನು ಹೆಚ್ಚು ನಂಬಿಕಸ್ಥವಾಗಿಸಬೇಕು. ಇದಕ್ಕಾಗಿ ನಾನು ಉದ್ಯಮದ ಎಲ್ಲರ ಸಹಕಾರ ಕೋರುವೆ" ಎಂದು ಜೈನ್ ಹೇಳಿದ್ದರು.
ಗುಜರಿ ನೀತಿಯಿಂದ ವಾಹನ ಮಾರಾಟ ಹೆಚ್ಚಳ: ಗಡ್ಕರಿ
ವಾಹನ ಗುಜರಿ ನೀತಿಯಿಂದ ವಾಹನೋದ್ಯಮಕ್ಕೆ ಲಾಭವಾಗಲಿದೆ. ವಾಹನ ಮಾರಾಟ ಶೇಕಡ 18ರಷ್ಟು ಹೆಚ್ಚಾಗಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ. ಅಮೆರಿಕ ಮತ್ತು ಯುರೋಪ್‌ಗಳಲ್ಲಿ ಇದೇ ರೀತಿಯ ಗುಜರಿ ನೀತಿಯಿಂದಾಗಿ ವಾಹನಗಳ ಮಾರಾಟ ಶೇಕಡ 15ರಷ್ಟು ಹೆಚ್ಚಾಗಿದ ಎಂದು ಅವರು ಹೇಳಿದ್ದಾರೆ.