ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ಐಪಿಒ: ಈ ಐಪಿಒಗೆ ಅರ್ಜಿ ಸಲ್ಲಿಸಿದ ಲಕ್ಷಾಂತರ ಹೂಡಿಕೆದಾರರಿಗೆ ನಷ್ಟ, ಈ ಅವಾಂತರಕ್ಕೆ ಯಾರು ಹೊಣೆ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ಐಪಿಒ: ಈ ಐಪಿಒಗೆ ಅರ್ಜಿ ಸಲ್ಲಿಸಿದ ಲಕ್ಷಾಂತರ ಹೂಡಿಕೆದಾರರಿಗೆ ನಷ್ಟ, ಈ ಅವಾಂತರಕ್ಕೆ ಯಾರು ಹೊಣೆ?

ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ಐಪಿಒ: ಈ ಐಪಿಒಗೆ ಅರ್ಜಿ ಸಲ್ಲಿಸಿದ ಲಕ್ಷಾಂತರ ಹೂಡಿಕೆದಾರರಿಗೆ ನಷ್ಟ, ಈ ಅವಾಂತರಕ್ಕೆ ಯಾರು ಹೊಣೆ?

ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ಐಪಿಒಗೆ ಅರ್ಜಿ ಸಲ್ಲಿಸಿ ಯಶಸ್ವಿಯಾಗಿ ಬಿಡ್‌ ಪಡೆದವರು ಖುಷಿಯಲ್ಲಿದ್ದಾರೆ. ಏಕೆಂದರೆ 70 ರೂನ ಷೇರುಗಳು 150 ರೂಪಾಯಿಗೆ ಲಿಸ್ಟ್‌ ಆಗಿ ಶೇಕಡ 110ರಷ್ಟು ಲಾಭವಾಗಿತ್ತು. ಆದರೆ, ಯುಪಿಐ ತಾಂತ್ರಿಕ ತೊಂದರೆಗಳ ಕಾರಣದಿಂದ ಲಕ್ಷಾಂತರ ಜನರಿಗೆ ಐಪಿಒ ದೊರಕದೆ ನಷ್ಟವಾಗಿದೆ.

ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ಐಪಿಒ
ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ಐಪಿಒ (Bloomberg)

ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ಐಪಿಒಗೆ ಅರ್ಜಿ ಸಲ್ಲಿಸಿದ ಲಕ್ಷಾಂತರ ಜನರಲ್ಲಿ ಕೆಲವರಿಗೆ ಐಪಿಒ ವಿತರಣೆಯಾಗಿದೆ. ಲಿಸ್ಟಿಂಗ್‌ ದಿನದಂದು ಶೇಕಡ 130ರಷ್ಟು ಪ್ರೀಮಿಯಂ ದರಕ್ಕೆ ಲಿಸ್ಟಿಂಗ್‌ ಆಗಿದೆ. ಅಂದರೆ, 70 ರೂನ ಪ್ರತಿಷೇರು 150 ರೂಗೆ ಲಿಸ್ಟ್‌ ಆಗಿತ್ತು. ಐಪಿಒ ವಿತರಣೆಯಾದವರಿಗೆ ಲಾಭವಾಗಿದೆ. ಆದರೆ, ಈ ಐಪಿಒಗೆ ಅರ್ಜಿ ಸಲ್ಲಿಸಿದ ಲಕ್ಷಾಂತರ ಅರ್ಜಿದಾರರ ಅರ್ಜಿಗಳು ವಿವಿಧ ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲ್ಪಟ್ಟಿವೆ. ಈ ಮೂಲಕ ಐಪಿಒ ಪಡೆಯಬಹುದಾದ ಸಾಧ್ಯತೆ ಇರುವವರಿಗೂ ತಾಂತ್ರಿಕ ಕಾರಣಗಳು ನಷ್ಟ ಉಂಟುಮಾಡಿವೆ.

ಬಜಾಜ್‌ ಹೌಸಿಂಗ್‌ ಫೈನಾನ್ಸ್‌ ಐಪಿಒ ವಿವರ

ಅರ್ಜಿ ಸಲ್ಲಿಕೆ ದಿನಾಂಕ: ಸೆಪ್ಟೆಂಬರ್‌ 9-ಸೆಪ್ಟೆಂಬರ್‌ 11

ಲಿಸ್ಟಿಂಗ್‌ ದಿನಾಂಕ: ಸೆಪ್ಟೆಂಬರ್‌ 16

14 ಲಕ್ಷ ಅರ್ಜಿಗಳು ರಿಜೆಕ್ಟ್‌

ಬಜಾಜ್ ಹೌಸಿಂಗ್ ಫೈನಾನ್ಸ್ ಐಪಿಒಗಾಗಿ ಲಕ್ಷಾಂತರ ಜನರು ಅರ್ಜಿ ಸಲ್ಲಿಸಿದ್ದಾರೆ. ಇದರಲ್ಲಿ ಸುಮಾರು 14 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಎರಡು ವರ್ಷಗಳ ಹಿಂದೆ ಎಲ್‌ಐಸಿ ಐಪಿಒದ ಸುಮಾರು 20 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಯಿತು. ನಂತರ ಬಜಾಜ್ ಹೌಸಿಂಗ್ ಫೈನಾನ್ಸ್ ಐಪಿಒಗೆ ಇದೇ ರೀತಿಯ ನಿರಾಕರಣೆಗಳು ಬಂದವು. ಬಜಾಜ್ ಹೌಸಿಂಗ್ ಫೈನಾನ್ಸ್ ಐಪಿಒಗೆ 89.07 ಲಕ್ಷ ಅರ್ಜಿಗಳು ಸ್ವೀಕಾರವಾಗಿದ್ದವು. ಈ ಪೈಕಿ 14 ಲಕ್ಷ ಅರ್ಜಿಗಳನ್ನು ತಿರಸ್ಕರಿಸಲಾಗಿದ್ದು, 74.46 ಲಕ್ಷ ಅರ್ಜಿಗಳನ್ನು ಪರಿಗಣಿಸಲಾಗಿತ್ತು.

ಯುಪಿಐ ವ್ಯವಸ್ಥೆಯಲ್ಲಿನ ತೊಂದರೆಗಳು

ಹೆಚ್ಚಿನ ಹೂಡಿಕೆದಾರರು ಐಪಿಒಗೆ ಅರ್ಜಿ ಸಲ್ಲಿಸಲು ಯುಪಿಐ ಪಾವತಿ ವಿಧಾನವಾಗಿ ಆಯ್ಕೆ ಮಾಡಿಕೊಂಡಿದ್ದಾರೆ. ಅವರ ಹಲವು ಅರ್ಜಿಗಳನ್ನು ತಾಂತ್ರಿಕ ಕಾರಣಗಳಿಂದ ತಿರಸ್ಕರಿಸಲಾಗಿದೆ. ಬಜಾಜ್ ಹೌಸಿಂಗ್ ಫೈನಾನ್ಸ್ ಐಪಿಒ ರಿಜೆಕ್ಟ್‌ ಆಗಲು ಯುಪಿಐ ತೊಂದರೆಗಳೇ ಪ್ರಮುಖ ಕಾರಣವಾದವು. ಐಪಿಒಗೆ ಅರ್ಜಿ ಸಲ್ಲಿಸಿದ ಬಳಿಕ ಯುಪಿಐನಲ್ಲಿ ಹಣ ಬ್ಲಾಕ್‌ ಆಗಬೇಕಿತ್ತು. ಆದರೆ, ಸಾಕಷ್ಟು ಜನರಿಗೆ ಯುಪಿಐಯಿಂದ ಹಣ ಲಾಕ್‌ ಆಗುವ ಸಂದೇಶವೇ ಬರಲಿಲ್ಲ.

"ಐಪಿಒ ಅರ್ಜಿ ಸಲ್ಲಿಸಿದ ಲಕ್ಷಾಂತರ ಜನರ ಅರ್ಜಿಗಳು ಯುಪಿಐ ಅಪ್ಲಿಕೇಷನ್‌ಗೆ ಹೋಗಿಲ್ಲ. ಇದರಿಂದ ಇವರೆಲ್ಲರೂ ಐಪಿಒಗೆ ಸಮರ್ಪಕವಾಗಿ ಬಿಡ್‌ ಮಾಡಲಾಗಿಲ್ಲ" ಎಂದು ಕೆಫೀನ್ ಟೆಕ್ನಾಲಜೀಸ್‌ನ ಕಾರ್ಪೊರೇಟ್ ರಿಜಿಸ್ಟ್ರಿಯ ಮುಖ್ಯ ವ್ಯವಹಾರ ಅಧಿಕಾರಿ ಗಿರಿಧರ್ ಜಿ ಹೇಳಿದ್ದಾರೆ. "ಕೆಲವರ ಯುಪಿಐ ಆದೇಶಗಳು ಎನ್‌ಪಿಸಿಐಗೆ ಹೋದಾಗ ರಿಜೆಕ್ಟ್‌ ಆದವು" ಎಂದು ಅವರು ವಿವರಿಸಿದ್ದಾರೆ.

ಬ್ರೋಕರೇಜ್‌ ಆಪ್‌ಗಳ ಮೂಲಕ ಅರ್ಜಿ ಸಲ್ಲಿಸಿದವರ ಗತಿ ಏನಾಯ್ತು?

ಬ್ರೋಕರೇಜ್‌ ಆಪ್‌ಗಳಮೂಲಕ ಅರ್ಜಿ ಸಲ್ಲಿಸಿದ ಹೆಚ್ಚಿನ ಹೂಡಿಕೆದಾರರ ಅರ್ಜಿಗಳನ್ನು ವಿವಿಧ ಕಾರಣಗಳಿಂದ ತಿರಸ್ಕರಿಸಲಾಗಿದೆ. ಆದರೆ ಬ್ಯಾಂಕ್‌ಗಳ ಮೂಲಕ ನೇರವಾಗಿ ಅರ್ಜಿ ಸಲ್ಲಿಸಿದವರಿಗೆ ಯಾವುದೇ ಸಮಸ್ಯೆ ಎದುರಾಗಿಲ್ಲ. “ಪ್ರಾಯೋಜಕ ಬ್ಯಾಂಕ್‌ನಲ್ಲಿ ಲಾಗ್ ಇದೆ. ಆದ್ದರಿಂದ ಅನೇಕ ಯುಪಿಐ ಪಾವತಿ ಆರ್ಡರ್‌ಗಳು ವಿಳಂಬವಾಗುತ್ತವೆ" ಎಂದು ಹೇಳಲಾಗಿದೆ.

"ಕಳೆದ ಕೆಲವು ದಿನಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಐಪಿಒಗೆ ಅರ್ಜಿ ಸಲ್ಲಿಸುತ್ತಿರುವುದರಿಂದ ಯುಪಿಐ ಆದೇಶ ಸ್ವೀಕರಿಸುವಲ್ಲಿ ವಿಳಂಬವಾಗಿದೆ" ಎಂದು ಝೆರೊದಾದ ಪ್ರಾಥಮಿಕ ಮಾರುಕಟ್ಟೆ ಮತ್ತು ಪಾವತಿ ವಿಭಾಗದ ಉಪಾಧ್ಯಕ್ಷ ಮೋಹಿತ್ ಮೆಹ್ರಾ ಹೇಳಿದ್ದಾರೆ.

ಇಂತಹ ತಾಂತ್ರಿಕ ತೊಂದರೆಗಳು ಬದಲಾಗಬೇಕು

ತಾಂತ್ರಿಕ ಕಾರಣಗಳಿಂದ ಐಪಿಒ ಅರ್ಜಿಗಳು ತಿರಸ್ಕೃತವಾಗುತ್ತಿರುವುದು ಸರಿಯಲ್ಲ, ಈ ವ್ಯವಸ್ಥೆ ಸುಧಾರಿಸಬೇಕು ಎನ್ನುತ್ತಾರೆ ಮಾರುಕಟ್ಟೆಯ ತಜ್ಞರು. ಉದ್ಯೋಗಿ ಅಥವಾ ಷೇರುದಾರರ ಕೋಟಾದ ಅಡಿಯಲ್ಲಿ ಹೂಡಿಕೆದಾರರು ಸಲ್ಲಿಸಿದ ಅರ್ಜಿಗಳಿಂದ ಸಮಸ್ಯೆ ಉಂಟಾಗಬಹುದು. ಕೊನೆಯ ಸಮಯದಲ್ಲಿ ಉಂಟಾಗುವ ಸಮಸ್ಯೆಗಳನ್ನು ತಪ್ಪಿಸಲು ಅರ್ಜಿಗಳನ್ನು ಫಿಲ್ಟರ್‌ ಮಾಡುವ ವ್ಯವಸ್ಥೆ ಇರಬೇಕು ಎಂದು ಪ್ರೈಮ್ ಡೇಟಾಬೇಸ್ ಗ್ರೂಪ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಣವ್ ಹಲ್ಡಿಯಾ ಹೇಳಿದ್ದಾರೆ.

ಷೇರುಪೇಟೆಯ ಕುರಿತು ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.