10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು-business news gold price hike may reach 2 lakh rupees rbi is also reason for increase in gold demand dmg ,ರಾಷ್ಟ್ರ-ಜಗತ್ತು ಸುದ್ದಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ಕಾಲ ದೂರವಿಲ್ಲ, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ನೀವು ತಿಳಿಯಬೇಕಾದ 9 ಅಂಶಗಳು

Gold Price: ಚಿನ್ನದ ಬೆಲೆ ಸತತ ಏರಿಕೆ ಕಾಣುತ್ತಿದೆ. ಮಧ್ಯಮ ವರ್ಗದ ಜನರು ಬೆಲೆ ಏರಿಕೆ ಕಂಡು ಬೆವರುತ್ತಿದ್ದಾರೆ. ಚಿನ್ನದ ಬೆಲೆ ಇನ್ನೂ ಎಷ್ಟು ಹೆಚ್ಚಾಗಬಹುದು? ಬಂಗಾರದ ಈ ಪರಿ ಬೆಲೆ ಏರಿಕೆಗೆ ಏನು ಕಾರಣ? ಚಿನ್ನದ ಬೆಲೆ ಮತ್ತೆಂದೂ ಕಡಿಮೆ ಆಗುವುದೇ ಇಲ್ಲವೇ? ನಿಮ್ಮ ಮನಸ್ಸಿನಲ್ಲಿರುವ ಇಂಥ ಹಲವು ಪ್ರಶ್ನೆಗಳಿಗೆ ಈ ಬರಹದಲ್ಲಿದೆ ಉತ್ತರ.

ಚಿನ್ನದ ಬೆಲೆ ಏರಿಕೆಗೆ ಏನು ಕಾರಣ: 10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ದೂರವಿಲ್ಲ ಎನ್ನುತ್ತಿದ್ದಾರೆ ಅರ್ಥಶಾಸ್ತ್ರಜ್ಞರು, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ವಿವರ
ಚಿನ್ನದ ಬೆಲೆ ಏರಿಕೆಗೆ ಏನು ಕಾರಣ: 10 ಗ್ರಾಂ ಚಿನ್ನಕ್ಕೆ 2 ಲಕ್ಷ ಆಗುವ ದೂರವಿಲ್ಲ ಎನ್ನುತ್ತಿದ್ದಾರೆ ಅರ್ಥಶಾಸ್ತ್ರಜ್ಞರು, ಏಕೆ ಏರುತ್ತಿದೆ ಬಂಗಾರದ ಬೆಲೆ? ಇಲ್ಲಿದೆ ವಿವರ

ಚಿನ್ನದ ಧಾರಣೆ: ಚಿನ್ನದ ಬೆಲೆಯು 2022 ರ ನಂತರ ಸತತವಾಗಿ ಏರುತ್ತಲೇ ಇದೆ. ವಿಶ್ವ ರಾಜಕಾರಣದಲ್ಲಿ ಆಗುವ ಪಲ್ಲಟಗಳು, ಉಕ್ರೇನ್-ರಷ್ಯಾ ಯುದ್ಧದ ವಿದ್ಯಮಾನ, ಇರಾನ್-ಇಸ್ರೇಲ್ ಸಂಘರ್ಷ, ಜಾಗತಿಕ ಆರ್ಥಿಕ ಪರಿಸ್ಥಿತಿ ಸೇರಿದಂತೆ ಹಲವು ವಿಷಯಗಳು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತವೆ. ವಿಶ್ವಮಟ್ಟದಲ್ಲಿ ಪ್ರಭಾವ ಬೀರುವಂಥ ಯಾವುದೇ ರಾಜಕೀಯ ಮತ್ತು ಆರ್ಥಿಕ ತಲ್ಲಣಗಳು ಉಂಟಾದಾಗ ಚಿನ್ನದ ಬೆಲೆ ಹೆಚ್ಚಾಗುತ್ತದೆ. ಇತ್ತೀಚೆಗೆ, ಅದರಲ್ಲಿಯೂ ಫೆಬ್ರುವರಿ 2024 ರ ನಂತರ ಚಿನ್ನದ ಬೆಲೆಯು ತ್ವರಿತಗತಿಯಲ್ಲಿ ಹೆಚ್ಚಾಗಿದೆ. ಕೇವಲ 2 ತಿಂಗಳ ಅವಧಿಯಲ್ಲಿ ಬೆಲೆಯು ಸುಮಾರು ಶೇ 15 ರಷ್ಟು ಹೆಚ್ಚಾಗಿದೆ. ಜಾಗತಿಕ ಮಟ್ಟದಲ್ಲಿ ಚಿನ್ನವನ್ನು 'ಔನ್ಸ್‌' ಮಾನಕದಲ್ಲಿ ಅಳೆಯುತ್ತಾರೆ. ಈಗ ಒಂದು ಔನ್ಸ್ ಚಿನ್ನಕ್ಕೆ 2400 ಅಮೆರಿಕನ್ ಡಾಲರ್ ಇದೆ. ಕಳೆದ ಫೆಬ್ರುವರಿ ತಿಂಗಳ ಆರಂಭದಲ್ಲಿ 2000 ಡಾಲರ್ ಬೆಲೆ ಇತ್ತು. ಕೇವಲ 2 ತಿಂಗಳ ಅವಧಿಯಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ ಬೆಲೆಯು 400 ಡಾಲರ್‌ಗಳಷ್ಟು ಹೆಚ್ಚಾಗಿದೆ. ಭಾರತದಲ್ಲಿ ಚಿನ್ನವನ್ನು 1 ಗ್ರಾಂ, 10 ಗ್ರಾಂ ಮಾನಕಗಳಲ್ಲಿ ಲೆಕ್ಕ ಹಾಕುವುದು ವಾಡಿಕೆ. 10 ಚಿನ್ನದ ಬೆಲೆಯು ಇದೀಗ 74 ಸಾವಿರ ದಾಟಿದೆ. ಬೆಂಗಳೂರಿನಲ್ಲಿ ಏಪ್ರಿಲ್ 29 ರಂದು ಒಂದು ಗ್ರಾಮ್ 24 ಕಾರೆಟ್ ಶುದ್ಧ ಚಿನ್ನದ ಬೆಲೆಯು 74,495 ರೂಪಾಯಿ ಮುಟ್ಟಿತ್ತು.

CTA icon
ನಿಮ್ಮ ನಗರದಲ್ಲಿ ಇಂದಿನ ಚಿನ್ನದ ಧಾರಣೆ ಎಷ್ಟಿದೆ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಚಿನ್ನದ ಬೆಲೆ ಏರಿಕೆಗೆ ಏನು ಕಾರಣ?

ಕರ್ನಾಟಕದಲ್ಲಿ ನಾವೆಲ್ಲರೂ ಸಾಕ್ಷಿಯಾಗುತ್ತಿರುವ ಚಿನ್ನದ ಬೆಲೆ ಏರಿಕೆ ವಿದ್ಯಮಾನದ ಹಿಂದೆ ಹಲವು ಕಾರಣಗಳಿವೆ. ಈ ಪೈಕಿ ಕೆಲ ಮುಖ್ಯ ಅಂಶಗಳನ್ನು ಹೀಗೆ ಪಟ್ಟಿ ಮಾಡಬಹುದು.

1) ಕೇಂದ್ರೀಯ ಬ್ಯಾಂಕ್‌ಗಳಿಂದ ಚಿನ್ನ ಖರೀದಿ: ಭಾರತ, ಚೀನಾ, ಟರ್ಕಿ ಸೇರಿದಂತೆ ವಿಶ್ವದ ಹಲವು ಕೇಂದ್ರೀಯ ಬ್ಯಾಂಕುಗಳು ಚಿನ್ನವನ್ನು ದೊಡ್ಡಮಟ್ಟದಲ್ಲಿ ಖರೀದಿಸುತ್ತಿವೆ. ಅದರಲ್ಲಿಯೂ ಚೀನಾದ ಕೇಂದ್ರೀಯ ಬ್ಯಾಂಕ್ 'ದಿ ಪೀಪಲ್ಸ್ ಬ್ಯಾಂಕ್ ಆಫ್ ಚೈನಾ' ಉಳಿದೆಲ್ಲ ದೇಶಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಸಿದೆ. ಕಳೆದ 17 ತಿಂಗಳ ಅವಧಿಯಲ್ಲಿ 2,000 ಟನ್‌ಗಳಿಗಿಂತಲೂ ಹೆಚ್ಚಿನ ಪ್ರಮಾಣದ ಚಿನ್ನವನ್ನು ಚೀನಾ ಖರೀದಿಸಿದೆ. ಖರೀದಿ ಭರಾಟೆ ಇನ್ನೂ ಮುಂದುವರಿದಿದೆ. ಜಾಗತಿಕ ಮಟ್ಟದಲ್ಲಿ ಚಿನ್ನದ ಬೆಲೆ ಹೆಚ್ಚಾಗಲು ಇದು ಮುಖ್ಯ ಕಾರಣ ಎನಿಸಿದೆ.

2) ಅಮೆರಿಕದ ನಿರ್ಬಂಧದ ಆತಂಕ: ಉಕ್ರೇನ್ ಯುದ್ಧದ ನಂತರ ರಷ್ಯಾ ಮೇಲೆ ಅಮೆರಿಕ ಮತ್ತು ಇತರ ಐರೋಪ್ಯ ದೇಶಗಳು ವಿಧಿಸಿದ್ದ ನಿರ್ಬಂಧ ವಿಧಿಸಿದ್ದನ್ನು ಟರ್ಕಿ, ಚೀನಾ ಸೇರಿದಂತೆ ಹಲವು ಸರ್ಕಾರಗಳು ಸಂಪೂರ್ಣವಾಗಿ ಪರಿಶೀಲಿಸಿವೆ. ತುರ್ತು ಸಂದರ್ಭದಲ್ಲಿ ಬಳಕೆಗೆಂದು ಅಮೆರಿಕದ ಕರೆನ್ಸಿ ಡಾಲರ್, ಬ್ರಿಟನ್ ಕರೆನ್ಸಿ ಪೌಂಡ್ ಸೇರಿದಂತೆ ಹಲವು ದೇಶಗಳ ಕರೆನ್ಸಿಯನ್ನು ಮೀಸಲು ನಿಧಿಯ ರೂಪದಲ್ಲಿ ಇರಿಸಿಕೊಳ್ಳುತ್ತಿದ್ದವು. ಅಮೆರಿಕ ಮತ್ತು ಪಾಶ್ಚಾತ್ಯ ದೇಶಗಳು ನಿರ್ಬಂಧ ವಿಧಿಸಿದ್ದರಿಂದ ಇಂಥ ಮೀಸಲು ನಿಧಿ ಬಳಸಲೂ ರಷ್ಯಾಗೆ ಸಾಧ್ಯವಾಗಲಿಲ್ಲ. ಹೀಗಾಗಿ ಆಪದ್ಧನದ ರೂಪದಲ್ಲಿ ಡಾಲರ್‌ನಂಥ ಕರೆನ್ಸಿಗಿಂತಲೂ ಚಿನ್ನವೇ ಸುರಕ್ಷಿತ ಎಂದು ಟರ್ಕಿ ಮತ್ತು ಚೀನಾ ಭಾವಿಸಿ, ಚಿನ್ನದ ಸಂಗ್ರಹಕ್ಕೆ ಮುಂದಾಗಿವೆ. ಚಿನ್ನದ ಬೆಲೆ ಹೆಚ್ಚಾಗಲು ಇದು ಸಹ ಕಾರಣವಾಗಿದೆ.

3) ಚಿನ್ನದ ಪೂರೈಕೆಗಿಂತಲೂ ಬೇಡಿಕೆ ಹೆಚ್ಚು: ಚಿನ್ನದ ಉತ್ಪಾದನೆ ಮತ್ತು ಪೂರೈಕೆ ಅತ್ಯಂತ ಕಡಿಮೆ ಪ್ರಮಾಣದಲ್ಲಿದೆ. ಆದರೆ ಬೇಡಿಕೆ ಏಕಾಏಕಿ ಹೆಚ್ಚಾಗಿದೆ. ಬ್ಯಾಂಕುಗಳು ಸಗಟು ರೂಪದಲ್ಲಿ ದೊಡ್ಡಮಟ್ಟದಲ್ಲಿ ಖರೀದಿಗೆ ಮುಂದಾಗಿರುವುದರಿಂದ ಸಹಜವಾಗಿಯೇ ಬೆಲೆ ಹೆಚ್ಚಾಗಿದೆ.

4) ಭಾರತೀಯ ರಿಸರ್ವ್‌ ಬ್ಯಾಂಕ್ ಮಧ್ಯಪ್ರವೇಶ: ಭಾರತ ಮತ್ತು ವಿಶ್ವದಲ್ಲಿ ಚಿನ್ನದ ಬೆಲೆ ಹೆಚ್ಚಾಗುತ್ತಿರುವುದಕ್ಕೆ ಭಾರತದ ರಿಸರ್ವ್ ಬ್ಯಾಂಕ್‌ನ ಇತ್ತೀಚಿನ ಧೋರಣೆಯೂ ಮುಖ್ಯ ಕಾರಣ. ಭಾರತದ ಆರ್ಥಿಕತೆ ಈಗ ಸದೃಢವಾಗಿದೆ. 10 ತಿಂಗಳ ಆಮದು ನಿರ್ವಹಿಸಲು ಸಾಕಾಗುವಷ್ಟು ವಿದೇಶಿ ಮೀಸಲು ನಿಧಿಯ (67 ಶತಕೋಟಿ ಡಾಲರ್) ಸಂಗ್ರಹವಿದೆ. ಡಾಲರ್ ಎದುರು ರೂಪಾಯಿ ಮೌಲ್ಯವನ್ನೂ ರಿಸರ್ವ್‌ ಬ್ಯಾಂಕ್ ಅಚ್ಚುಕಟ್ಟಾಗಿ ಕಾಪಾಡುತ್ತಿದೆ. ರೂಪಾಯಿ ಮೌಲ್ಯ ಕುಸಿಯುವ ಪರಿಸ್ಥಿತಿ ಬಂದಾಗಲೆಲ್ಲ ರಿಸರ್ವ್ ಬ್ಯಾಂಕ್ ತನ್ನ ಬಳಿ ಇರುವ ಅಮೆರಿಕದ ಡಾಲರ್‌ ಹೊರಗೆ ತರುತ್ತದೆ. ರೂಪಾಯಿ ಮೌಲ್ಯ ಹೆಚ್ಚಾಗುವ ಪರಿಸ್ಥಿತಿ ಬಂದಾಗ ಡಾಲರ್ ಖರೀದಿಗೆ ಮುಂದಾಗುತ್ತದೆ. ಇಂಥ ಸಂದರ್ಭದಲ್ಲಿ ದೇಶದ ಹಿತಾಸಕ್ತಿಗೆ ತಕ್ಕಂತೆ ಚಿನ್ನದ ದಾಸ್ತಾನು ಸಹ ಬಳಸಿಕೊಳ್ಳುತ್ತದೆ. ಭಾರತದ ರಿಸರ್ವ್ ಬ್ಯಾಂಕ್ ಸಕ್ರಿಯವಾಗಿ ಕರೆನ್ಸಿ ಮೌಲ್ಯವನ್ನು ಕಾಪಾಡುತ್ತಿರುವುದು ಚಿನ್ನದ ಬೆಲೆಯ ಮೇಲೆ ಪರಿಣಾಮ ಬೀರುತ್ತಿದೆ. ಭಾರತದ ಹಿತದೃಷ್ಟಿಯಿಂದ ಇದು ಸರಿಯಾದ ಕ್ರಮ ಎನಿಸಿದೆ. ಆದರೆ ಚಿನ್ನದ ಬೆಲೆ ಹೆಚ್ಚಾಗಲು ಇದೂ ಒಂದು ಕಾರಣವಾಗಿದೆ.

5) ಹಣದುಬ್ಬರದ ಎದುರು ಚಿನ್ನವೇ ರಕ್ಷಣೆ: ವಿಶ್ವದೆಲ್ಲೆಡೆ ಹಣದುಬ್ಬರ ಹೆಚ್ಚಾಗುತ್ತಿದೆ. ಅಗತ್ಯ ವಸ್ತುಗಳ ಬೆಲೆ ನಿಯಂತ್ರಣಕ್ಕೇ ಸಿಗುತ್ತಿಲ್ಲ. ಹಣದುಬ್ಬರವನ್ನು ಮೀರಿದ ಪ್ರತಿಫಲ ಕೊಡುವ ಸಾಮರ್ಥ್ಯ ಇರುವುದು ಚಿನ್ನಕ್ಕೆ ಮಾತ್ರ. ಹೀಗಾಗಿ ಕೇಂದ್ರೀಯ ಬ್ಯಾಂಕ್‌ಗಳು ಸೇರಿದಂತೆ ಜನಸಾಮಾನ್ಯರು ಸಹ ಚಿನ್ನದ ಖರೀದಿಗೆ ಮುಗಿಬಿದ್ದಿದ್ದಾರೆ. ಚಿನ್ನದ ಬೆಲೆ ಹೆಚ್ಚಾಗಲು ಇದು ಕಾರಣವಾಗಿದೆ. ಸುಮ್ಮನೆ ಯೋಚಿಸಿ ನೋಡಿ, ಎಫ್‌ಡಿ ಬಡ್ಡಿಗಿಂತಲೂ ಚಿನ್ನದ ಮೇಲಿನ ಹೂಡಿಕೆಯಿಂದ ಸಿಗುವ ಪ್ರತಿಫಲವು ಸದಾ ಹೆಚ್ಚೇ ಇರುತ್ತದೆ.

6) ಚೀನಾ ಜನರ ಅಸಹಾಯಕತೆ, ಚಿನ್ನದ ಮೇಲೆ ವಿಪರೀತ ಹೂಡಿಕೆ: ಚೀನಾ ದೇಶದಲ್ಲಿ ರಿಯಲ್ ಎಸ್ಟೇಟ್ ಮೌಲ್ಯ ಕುಸಿದಿದೆ. ಸಾಲಗಳು ಸುಸ್ತಿಯಾಗಿ ಬ್ಯಾಂಕಿಂಗ್ ವಲಯ ಸಮಸ್ಯೆಯಲ್ಲಿದೆ. ಷೇರುಪೇಟೆಯಲ್ಲಿ ಸ್ಥಿರತೆ ಇಲ್ಲ. ಬೇರೆ ದೇಶಗಳಲ್ಲಿ ಹೂಡಿಕೆ ಮಾಡಲು ಅಲ್ಲಿನ ಸರ್ಕಾರ ಕಠಿಣ ನಿರ್ಬಂಧ ವಿಧಿಸಿದೆ. ತೈವಾನ್, ಭಾರತ, ಜಪಾನ್ ವಿಚಾರದಲ್ಲಿ ಚೀನಾ ಸರ್ಕಾರವು ಆಕ್ರಮಣಕಾರಿ ನಿಲುವು ತಾಳಿರುವುದರಿಂದ ಯುದ್ಧಭೀತಿಯೂ ತಲೆದೋರಿದೆ. ಹೀಗಾಗಿ ಅಲ್ಲಿನ ಜನರಿಗೆ ಚಿನ್ನವೇ ಅತ್ಯಂತ ಸುರಕ್ಷಿತ ಹೂಡಿಕೆಯ ಸಾಧನ ಎನಿಸಿದೆ. ಜನರು ಹೂಡಿಕೆಗಾಗಿ ಮುಗಿಬಿದ್ದು ಚಿನ್ನ ಖರೀದಿಸುತ್ತಿರುವುದರಿಂದ ಬೆಲೆ ಒಂದೇ ಸಮನೆ ಏರುತ್ತಿದೆ.

7) ಭಾರತೀಯರ ಚಿನ್ನ ವ್ಯಾಮೋಹ: ಮದುವೆ ಸೇರಿದಂತೆ ಯಾವುದೇ ಮಂಗಳಕಾರ್ಯಗಳಿಗೂ ಭಾರತದ ಚಿನ್ನ ಖರೀದಿಸುವ ಸಂಪ್ರದಾಯವಿದೆ. ವಿಶ್ವದಲ್ಲಿ ಅತಿಹೆಚ್ಚು ಚಿನ್ನಾಭರಣಗಳು ಖರೀದಿಸುವವರು ಭಾರತೀಯರು. ಚಿನ್ನದ 'ಚಿಲ್ಲರೆ ವಹಿವಾಟು' ನಡೆಸುವ ದೇಶಗಳಲ್ಲಿ ಭಾರತೀಯರು ಅಗ್ರಗಣ್ಯರು. ಕಳೆದ ವರ್ಷದವರೆಗೂ ಭಾರತವೇ ವಿಶ್ವದಲ್ಲಿ ಚಿನ್ನ ಆಮದು ಮಾಡಿಕೊಳ್ಳುವ ಮುಂಚೂಣಿ ದೇಶವಾಗಿತ್ತು. ಇದೀಗ ಚೀನಾ ಈ ಸ್ಥಾನಕ್ಕೆ ಬಂದಿದೆ.

8) ಭಾರತೀಯರ ಹೂಡಿಕೆ ಮನೋಭಾವದಲ್ಲಿ ಬದಲಾವಣೆ: ಆವರ್ತನ ಠೇವಣಿ (ರಿಕರಿಂಗ್ ಡೆಪಾಸಿಟ್ - ಎಫ್‌ಡಿ) ಭಾರತೀಯ ಕುಟುಂಬಗಳ ನೆಚ್ಚಿನ ಹೂಡಿಕೆ ಸಾಧನ ಎನಿಸಿತ್ತು. ಇದರ ನಂತರ ಎಫ್‌ಡಿ, ಎಲ್‌ಐಸಿ ಪಾಲಿಸಿಗಳನ್ನು ಭಾರತೀಯ ಕುಟುಂಬಗಳು ಉಳಿತಾಯಕ್ಕಾಗಿ ಆಶ್ರಯಿಸಿದ್ದವು. ಹಣದುಬ್ಬರ ಹೆಚ್ಚಾಗಿದ್ದು ಮತ್ತು ಅದಕ್ಕೆ ಅನುಗುಣವಾಗಿ ಬಡ್ಡಿದರದಲ್ಲಿ ಏರಿಕೆ ಆಗದಿರುವುದು ಈ ಮನೋಭಾವವನ್ನು ಬದಲಿಸಿದವು. ಈಗ ಆರ್‌ಡಿ, ಎಫ್‌ಡಿಗಳಿಂದ ಸಿಗುವ ಪ್ರತಿಫಲವು ಹಣದುಬ್ಬರಕ್ಕೆ ಹೋಲಿಸಿದರೆ 'ನೆಗೆಟಿವ್' (ನಷ್ಟ) ಎನಿಸುತ್ತಿದೆ. ಹೀಗಾಗಿ ಜನರಿಗೆ ಚಿನ್ನದ ಮೇಲಿನ ಹೂಡಿಕೆ ಆಕರ್ಷಕವಾಗಿ ಕಾಣಿಸುತ್ತಿದೆ. ಹೂಡಿಕೆಗಾಗಿ ಚಿನ್ನ ಖರೀದಿಸುವವರಿಗಾಗಿ ರಿಸರ್ವ್‌ ಗೋಲ್ಡ್‌ ಬಾಂಡ್ ಪರಿಚಯಿಸಿದೆ. ಇಟಿಎಫ್, ಮ್ಯೂಚುವಲ್ ಫಂಡ್‌ಗಳಲ್ಲಿಯೂ ಹೂಡಿಕೆಗೆ ಅವಕಾಶವಿದೆ. ಈ ಎಲ್ಲ ಕಾರಣಗಳಿಂದ ಭಾರತದಲ್ಲಿ ಬೇಡಿಕೆ ಹೆಚ್ಚಾಗಿದೆ. ಚಿನ್ನದ ಬೆಲೆ ಏರುತ್ತಲೇ ಇದೆ.

9) ಚಿನ್ನದ ಬೆಲೆ ಕಡಿಮೆ ಆಗಬಹುದೇ: ಭಾರತೀಯರು ಕೇಳುತ್ತಿರುವ ಕೋಟಿ ರೂಪಾಯಿ ಪ್ರಶ್ನೆಯಿದು. ಈ ಪ್ರಶ್ನೆಗೆ ತಜ್ಞರು ಹೌದು ಮತ್ತು ಇಲ್ಲ ಎನ್ನುವ ಎರಡೂ ಉತ್ತರಗಳನ್ನು ಹೇಳುತ್ತಿದ್ದಾರೆ. ಚಿನ್ನದ ಧಾರಣೆಯ ಭವಿಷ್ಯವು ಡಾಲರ್ ಮೌಲ್ಯವನ್ನು ಅವಲಂಬಿಸಿದೆ ಬಹುತೇಕರ ಅಭಿಪ್ರಾಯ. ಮುಂದಿನ ದಿನಗಳಲ್ಲಿ ಜಗತ್ತಿನ ಪ್ರಮುಖ ದೇಶಗಳ ಕರೆನ್ಸಿ ಎದುರು ಡಾಲರ್‌ ಮೌಲ್ಯ ಹೆಚ್ಚಾದರೆ ಚಿನ್ನದ ದರವೂ ಹೆಚ್ಚಾಗುತ್ತದೆ. ಜನರು ಚಿನ್ನದ ಮೇಲಿನ ಹೂಡಿಕೆಗೆ ಮುಂದಾಗುತ್ತಾರೆ. ಒಂದು ವೇಳೆ ಡಾಲರ್ ಮೌಲ್ಯ ಕಳೆದುಕೊಂಡರೆ ಚಿನ್ನಕ್ಕೆ ಬೇಡಿಕೆ ಕಡಿಮೆ ಆಗಬಹುದು. ಆಗ ಚಿನ್ನದ ಬೆಲೆಯೂ ಕಡಿಮೆ ಆಗಬಹುದು ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಇಂಥ ವಿಶ್ಲೇಷಣೆಗಳು ನಿಜವಾಗುವ ಸಾಧ್ಯತೆ ಕಡಿಮೆ. 'ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿ ಮತ್ತು ಜಾಗತಿಕ ವಿದ್ಯಮಾನಗಳನ್ನು ಗಮನಿಸಿದರೆ ಮುಂದಿನ 7 ರಿಂದ 12 ವರ್ಷಗಳ ಅವಧಿಯಲ್ಲಿ 10 ಗ್ರಾಂ ಚಿನ್ನವು 2 ಲಕ್ಷ ರೂಪಾಯಿ ಮುಟ್ಟಬಹುದು' ಎಂದು ಅಭಿಪ್ರಾಯಪಡುತ್ತಾರೆ ಎಲ್‌ಕೆಪಿ ಸೆಕ್ಯುರಿಟೀಸ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥರಾದ ಜತೀನ್ ತ್ರಿವೇದಿ. 'ದಿ ಪ್ರಿಂಟ್' ಜಾಲತಾಣದ ಯುಟ್ಯೂಬ್ ಜಾಲತಾಣದಲ್ಲಿ ಸ್ಥೂಲ ಅರ್ಥಶಾಸ್ತ್ರಕ್ಕೆ (ಮ್ಯಾಕ್ರೊ ಎಕಾನಮಿ) ಸಂಬಂಧಿಸಿದ ವಿಶೇಷ ಕಾರ್ಯಕ್ರಮ 'ಮ್ಯಾಕ್ರೋಸೂತ್ರ' ನಡೆಸಿಕೊಡುವ ಅರ್ಥಶಾಸ್ತ್ರಜ್ಞೆ ರಾಧಿಕಾ ಪಾಂಡೆ, ಸದ್ಯಕ್ಕೆ ಚಿನ್ನದ ಬೆಲೆ ಇಳಿಯುವ ಸಾಧ್ಯತೆ ಇಲ್ಲ ಎಂದು ಅಭಿಪ್ರಾಯಪಡುತ್ತಾರೆ.

ಲೇಖನ: ಡಿ.ಎಂ.ಘನಶ್ಯಾಮ

mysore-dasara_Entry_Point
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.