Opening Bell: ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ಹಿಂಜರಿತ ಭೀತಿ, ಭಾರತದ ಷೇರುಪೇಟೆ ಕರಡಿ ಕುಣಿತ, ಸೆನ್ಸೆಕ್ಸ್ 500, ನಿಫ್ಟ್ 175 ಅಂಶ ಕುಸಿತ
ಮೋಟಾರ್ ವಲಯದ ಷೇರುಗಳಾದ ಮಹೀಂದ್ರ ಅಂಡ್ ಮಹೀಂದ್ರ, ಹೀರೋ ಮೊಟೊಕಾರ್ಪ್, ಟಾಟಾ ಮೋಟಾರ್ಸ್ ಗಮನಾರ್ಹ ಇಳಿಕೆ ಕಂಡಿವೆ. ಹೂಡಿಕೆದಾರರ ನೆಚ್ಚಿನ ಕಂಪನಿಗಳಾದ ಟಾಟಾ ಸ್ಟೀಲ್ ಮತ್ತು ಎಸ್‌ಬಿಐ ಸಹ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಂಡಿವೆ.
ಭಾರತದ ಷೇರು ಮಾರುಕಟ್ಟೆ ಇತ್ತೀಚಿನ ದಿನಗಳಲ್ಲಿ ಮತ್ತೆ ಏರುಗತಿಯಲ್ಲಿತ್ತು. ಪ್ರತಿದಿನ ಹೊಸ ಎತ್ತರ ಮುಟ್ಟುತ್ತಾ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿ ನಿರಂತರ ದಾಖಲೆ ಬರೆಯುತ್ತಿತ್ತು. ಆದರೆ ಶುಕ್ರವಾರ ಆರಂಭಿಕ ವಹಿವಾಟಿನಲ್ಲಿಯೇ ಷೇರುಪೇಟೆಯಲ್ಲಿ ಕುಸಿತ ಕಂಡುಬಂದಿದ್ದು, 1,588 ಕಂಪನಿಗಳ ಷೇರುಗಳು ಇಳಿಕೆ ಕಂಡಿವೆ. ಇದೇ ಹೊತ್ತಿಗೆ 784 ಕಂಪನಿಗಳ ಷೇರುಗಳು ಏರಿಕೆ ದಾಖಲಿಸಿವೆ. ಮುಂಜಾನೆ 9:30 ರ ಅವಧಿಯಲ್ಲಿ ಬಿಎಸ್‌ಇ ಸೆನ್ಸೆಕ್ಸ್ ಸುಮಾರು 600 ಅಂಶಗಳ ಇಳಿಕೆ ದಾಖಲಿಸಿ, 81,308 ಅಂಶಗಳಲ್ಲಿ ವಹಿವಾಟು ನಡೆಸುತ್ತಿತ್ತು. ನಿಫ್ಟಿ 179 ಅಂಶಗಳ ಇಳಿಕೆ ದಾಖಲಿಸಿ, 24,832 ಅಂಶಗಳಲ್ಲಿ ವಹಿವಾಟು ನಡೆಸುತ್ತಿತ್ತು.
ಮೋಟಾರ್ ವಲಯದ ಷೇರುಗಳಾದ ಮಹೀಂದ್ರ ಅಂಡ್ ಮಹೀಂದ್ರ, ಹಿರೊ ಮೊಟೊಕಾರ್ಪ್, ಟಾಟಾ ಮೋಟಾರ್ಸ್ ಗಮನಾರ್ಹ ಇಳಿಕೆ ಕಂಡಿವೆ. ಹೂಡಿಕೆದಾರರ ನೆಚ್ಚಿನ ಕಂಪನಿಗಳಾದ ಟಾಟಾ ಸ್ಟೀಲ್ ಮತ್ತು ಎಸ್‌ಬಿಐ ಸಹ ಗಮನಾರ್ಹ ಪ್ರಮಾಣದಲ್ಲಿ ಇಳಿಕೆ ಕಂಡಿವೆ. ಮತ್ತೊಂದೆಡೆ ಸರ್ಕಾರಿ ಸ್ವಾಮ್ಯದ ಕಂಪನಿಗಳ ಏರುಗತಿಯ ಓಟ ಮುಂದುವರಿದಿದ್ದು ಪವರ್ ಗ್ರಿಡ್ ಕಾರ್ಪೊರೇಷನ್, ಕೋಲ್ ಇಂಡಿಯಾ ಮತ್ತು ಓಎನ್‌ಜಿಸಿ ಕಂಪನಿಗಳು ತೇಜಿಯಲ್ಲಿವೆ.
ಜಾಗತಿಕ ಮಾರುಕಟ್ಟೆಯಲ್ಲಿ ಆರ್ಥಿಕ ವಹಿವಾಟು ಕುಸಿಯಬಹುದು, ಹಿಂಜರಿಕ ಕಾಣಿಸಿಕೊಳ್ಳಬಹುದು ಎನ್ನುವ ಭೀತಿಯ ಹಿನ್ನೆಲೆಯಲ್ಲಿ ಅಮೆರಿಕ ಸೇರಿದಂತೆ ವಿಶ್ವದ ಹಲವು ಪ್ರಮುಖ ದೇಶಗಳ ಷೇರುಪೇಟೆಗಳು ಗುರುವಾರ ಕುಸಿತ ಕಂಡಿದ್ದವು. ಬಹುತೇಕ ಎಲ್ಲ ಪ್ರಮುಖ ದೇಶಗಳ ಷೇರುಪೇಟೆಗಳಲ್ಲಿಯೂ ಮಾರಾಟದ ಒತ್ತಡ ಕಂಡುಬಂದಿತ್ತು. ಅದರ ಪರಿಣಾಮ ಇದೀಗ ಭಾರತದ ಷೇರುಪೇಟೆಯ ಮೇಲೆಯೂ ಗೋಚರಿಸುತ್ತಿದ್ದು, ಷೇರು ಮಾರುಕಟ್ಟೆ ಇಳಿಕೆ ಕಂಡಿದೆ.
ಭಾರತದ ಎರಡು ಪ್ರಮುಖ ಸಂವೇದಿ ಸೂಚ್ಯಂಕಗಳಾದ ನಿಫ್ಟಿ ಮತ್ತು ಸೆನ್ಸೆಕ್ಸ್ ನಿನ್ನೆ (ಆಗಸ್ಟ್ 1) ಏರಿಕೆ ಕಂಡಿದ್ದವು. ನಿಫ್ಟಿ 59.75 ಅಂಶ (ಶೇ 0.24) ಏರಿಕೆ ಕಂಡು 25,010 ಅಂಶಗಳಲ್ಲಿ ವಹಿವಾಟು ಮುಗಿಸಿತ್ತು. ಸೆನ್ಸೆಕ್ಸ್ ಒಂದೇ ದಿನ 126.21 (ಶೇ 0.15) ಅಂಶಗಳ ಏರಿಕೆ ಕಂಡು, 81,867.55 ಅಂಶಗಳಲ್ಲಿ ವಹಿವಾಟು ಕೊನೆಗೊಳಿಸಿತ್ತು.
ಶುಕ್ರವಾರದ ಕುಸಿತದ ಬಗ್ಗೆ ಷೇರುಪೇಟೆಯ ತಜ್ಞರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸುತ್ತಿದ್ದಾರೆ. 'ಭಾರತದ ಮಾರುಕಟ್ಟೆಯ ಮೌಲ್ಯ ವಾಸ್ತವಕ್ಕಿಂತಲೂ ಜಾಸ್ತಿ ಇದೆ ಎಂದು ಪ್ರತಿಪಾದಿಸಲಾಗುತ್ತಿದೆ. ಸ್ವಲ್ಪ ದಿನ ಷೇರುಪೇಟೆಯಲ್ಲಿ ಏರಿಳಿತ ಕಂಡುಬಂದರೂ ಮುಂದಿನ ದಿನಗಳಲ್ಲಿ ಹಣದ ಹರಿವು ಸುಧಾರಿಸಿದ ನಂತರ ಸ್ಥಿರತೆ ಮರಳುತ್ತದೆ. ಕ್ಷಿಪ್ರಗತಿಯಲ್ಲಿ ಏರಿಕೆ ಕಂಡಿರುವ ಕಂಪನಿಗಳ ಷೇರುಗಳ ನಿಮ್ಮ ಬಳಿ ಇದ್ದರೆ ಮಾರಾಟ ಮಾಡಿ, ಲಾಭ ಪಡೆದುಕೊಳ್ಳಲು ಇದು ಸುಸಮಯ' ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ನ ಮುಖ್ಯಸ್ಥ ದೀಪಕ್ ಝಾನ್ಸಿ ಸಲಹೆ ಮಾಡಿದ್ದಾರೆ.
ಈ ಷೇರುಗಳ ಖರೀದಿಗೆ ತಜ್ಞರ ಶಿಫಾರಸು
ಚಾಯ್ಸ್ ಬ್ರೋಕಿಂಗ್ ಕಂಪನಿಯ ಕಾರ್ಯನಿರ್ವಹಕ ನಿರ್ದೇಶಕ ಸುಮೀತ್ ಬಗಾಡಿಯಾ ಅವರು ಇಂದು ಖರೀದಿಗೆ ಶಿಫಾರಸು ಮಾಡಿರುವ ಐದು ಷೇರುಗಳಿವು.
1) ಜೊಮೆಟೊ: ಖರೀದಿ ರೂ 234, ಟಾರ್ಗೆಟ್ ರೂ 255, ಸ್ಟಾಪ್‌ಲಾಸ್ ರೂ 224
2) ಅದಾನಿ ಗ್ರೀನ್ ಎನರ್ಜಿ: ಖರೀದಿ ರೂ 1902, ಟಾರ್ಗೆಟ್ ರೂ 2060, ಸ್ಟಾಪ್‌ಲಾಸ್ ರೂ 1810
3) ಪ್ಲಾಟಿನಮ್ ಇಂಡಸ್ತ್ರೀಸ್: ಖರೀದಿ ರೂ 286, ಟಾರ್ಗೆಟ್ ರೂ 309, ಸ್ಟಾಪ್‌ಲಾಸ್ ರೂ 274
4) ಸೂರ್ಯಲಕ್ಷ್ಮಿ ಕಾಟನ್ ಮಿಲ್ಸ್: ಖರೀದಿ ರೂ 106.30, ಟಾರ್ಗೆಟ್ ರೂ 111, ಸ್ಟಾಪ್‌ಲಾಸ್ ರೂ 102
5) ಪಿಒಸಿಎಲ್ ಎಂಟರ್‌ಪ್ರೈಸಸ್: ಖರೀದಿ ರೂ 1460, ಟಾರ್ಗೆಟ್ ರೂ 1525, ಸ್ಟಾಪ್‌ಲಾಸ್ ರೂ 1400
(ಗಮನಿಸಿ: ಇಲ್ಲಿರುವ ಮಾಹಿತಿಯನ್ನು ಓದುಗರಿಗೆ ಅನುಕೂಲವಾಗಲಿ ಎನ್ನುವ ಉದ್ದೇಶದಿಂದ ಮಾತ್ರವೇ ನೀಡಲಾಗಿದೆ. ಇದನ್ನು ಹೂಡಿಕೆ ಶಿಫಾರಸು ಎಂದು ಪರಿಗಣಿಸಬೇಕಿಲ್ಲ. ಕಂಪನಿಗಳ ಖರೀದಿ ಶಿಫಾರಸು ತಜ್ಞರ ವೈಯಕ್ತಿಕ ಅಭಿಪ್ರಾಯವಾಗಿರುತ್ತದೆ. ಅದನ್ನು 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಈ ಶಿಫಾರಸಿನ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಹೂಡಿಕೆ ನಿರ್ಧಾರ ತೆಗೆದುಕೊಳ್ಳುವ ಮೊದಲು ಪ್ರಮಾಣೀಕೃತ ಹಣಕಾಸು ಸಲಹೆಗಾರರೊಂದಿಗೆ ಸಮಾಲೋಚಿಸಿ.)