ಭಯ್ಯಾ ಅನ್ನಬೇಡಿ, ಡೋರ್ ಮೆಲ್ಲಗೆ ಹಾಕಿ; ಕ್ಯಾಬ್ ಏರುವ ಪ್ರಯಾಣಿಕರಿಗೆ 6 ನಿಯಮ ಹೇರಿದ ಟ್ಯಾಕ್ಸಿ ಚಾಲಕ, ಬಿಸಿಬಿಸಿ ಚರ್ಚೆಗೆ ನಾಂದಿ
ಕ್ಯಾಬ್ ಚಾಲಕರೊಬ್ಬರು ಪ್ರಯಾಣಿಕರಿಗೆ ಆರು ನಿಯಮಗಳನ್ನು ಪಟ್ಟಿ ಮಾಡಿ ತನ್ನ ವಾಹನದಲ್ಲಿ ಅಂಟಿಸಿರುವುದು ರೆಡ್ಡಿಟ್‌ನಲ್ಲಿ ಬಿಸಿಬಿಸಿ ಚರ್ಚೆಗೆ ನಾಂದಿ ಹಾಡಿದೆ. ಕಾರಿನಲ್ಲಿ ನನ್ನನ್ನು ಭಯ್ಯಾ ಅನ್ನಬೇಡಿ, ಡೋರ್ ಮೆಲ್ಲಗೆ ಹಾಕಿ ಎಂದೆಲ್ಲ ನಿಯಮಗಳನ್ನು ಮಾಡಿದ್ದಾನೆ.
ಬೆಂಗಳೂರು: ಟ್ಯಾಕ್ಸಿ, ರಿಕ್ಷಾ ಮುಂತಾದ ವಾಹನಗಳ ಚಾಲಕರನ್ನು ಪ್ರಯಾಣಿಕರು ತಮ್ಮದೇ ಶೈಲಿಯಲ್ಲಿ ಕರೆಯುತ್ತಾರೆ. ಬೆಂಗಳೂರಿನಲ್ಲಾದರೇ ಗುರೂ ಜಯನಗರಕ್ಕೆ ಬರ್ತೀರಾ, ಮೆಜೆಸ್ಟಿಕ್‌ಗೆ ಬರ್ತಿರಾ ಅನ್ನುತ್ತಾರೆ. ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಸಾಮಾನ್ಯವಾಗಿ ಭಯ್ಯಾ ಎಂದು ಕರೆಯುವುದು ಸಾಮಾನ್ಯ. ಇದೀಗ ರೆಡ್ಡಿಟ್‌ನಲ್ಲಿ ಬಳಕೆದಾರರೊಬ್ಬರು ಇದೇ ರೀತಿಯ ವಿಚಾರಕ್ಕೆ ಸಂಬಂಧಪಟ್ಟ ಪೋಸ್ಟ್‌ವೊಂದನ್ನು ಹಾಕಿದ್ದು, ಹೊಸ ಚರ್ಚೆಗೆ ನಾಂದಿ ಹಾಡಿದೆ. ಟ್ಯಾಕ್ಸಿ ಚಾಲಕನೊಬ್ಬ ತನ್ನ ಕಾರಿನ ಹಿಂಭಾಗದಲ್ಲಿ ಪ್ರಯಾಣಿಕರ ಸೀಟಿನ ಮುಂಭಾಗ ಒಂದು ಬೋರ್ಡ್ ನೇತುಹಾಕಿದ್ದಾನೆ. ಅದರಲ್ಲಿ ಆರು ನಿಯಮಗಳನ್ನು ಬರೆದಿದ್ದಾನೆ
ಪ್ರಯಾಣಿಕರು ಗೌರವಯುತವಾಗಿ ಮಾತನಾಡಬೇಕು, ಸಭ್ಯವಾಗಿ ಸಂವಹನ ನಡೆಸಬೇಕು. ನನ್ನನ್ನು ಭಯ್ಯಾ ಎಂದು ಕರೆಯಬಾರದು. ಇದರೊಂದಿಗೆ ನೀವು ಈ ಕಾರಿನ ಮಾಲೀಕರಲ್ಲ ಎಂದು ಪ್ರಯಾಣಿಕರಿಗೆ ನೆನಪಿಸಿದ್ದಾನೆ. "ಈ ಕಾರನ್ನು ಚಲಾಯಿಸುತ್ತ ಇರುವವರು, ಈ ಕ್ಯಾಬ್‌ನ ಮಾಲೀಕರಾಗಿದ್ದಾರೆ" ಎಂದು ಬರೆದಿದ್ದಾರೆ.
ಸಭ್ಯತೆ ಇರಲಿ, ಅಹಂ ಬೇಡ, ಡೋರ್ ಮೆಲ್ಲಗೆ ಹಾಕಿ
ಈತ ಬರೆದ ನಿಯಮಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. "ಕಾರು ಚಾಲಕನೊಬ್ಬ ಪ್ರಯಾಣಿಕರಲ್ಲಿ ಆಟಿಟ್ಯೂಡ್ ತೋರಿಸಬೇಡಿ" ಎಂದು ಹೇಳಬಹುದೇ ಎಂದು ಕೆಲವರು ಚರ್ಚಿಸುತ್ತಿದ್ದಾರೆ. "ನಿಮ್ಮ ಅಹಂಕಾರವನ್ನು ನಿಮ್ಮ ಕಿಸೆಯಲ್ಲಿ ಇಟ್ಟುಕೊಳ್ಳಿ. ನಿಮ್ಮ ಅಹಂ, ದರ್ಪವನ್ನು ನಮ್ಮ ಮುಂದೆ ತೋರಿಸಬೇಡಿ, ಯಾಕೆಂದರೆ ನೀವು ನಮಗೆ ಅದಕ್ಕಾಗಿ ಹೆಚ್ಚು ಹಣ ನೀಡುತ್ತಿಲ್ಲ" ಎಂದು ಚಾಲಕ ನಿಯಮಗಳ ಬೋರ್ಡ್‌ನಲ್ಲಿ ಬರೆದಿದ್ದಾನೆ.
ಇದೇ ಸಮಯದಲ್ಲಿ ಕಾರಿನ ಡೋರ್ ಮೆಲ್ಲಗೆ ಹಾಕಿ, ಸಭ್ಯವಾಗಿ ಮಾತನಾಡಿ, ಭಯ್ಯಾ ಎಂದೆಲ್ಲ ಕರೆಯಬೇಡಿ ಎಂದು ತನ್ನ ನಿಯಮಗಳಲ್ಲಿ ಬರೆದಿದ್ದಾನೆ.
ಬೇಗ ಹೋಗಿ ಎಂದು ಅವಸರ ಮಾಡಬೇಡಿ
ಇಷ್ಟು ಮಾತ್ರವಲ್ಲದೆ ಟ್ಯಾಕ್ಸಿ ಡ್ರೈವರ್ ಚಾಲಕ ಬರೆದ ಮತ್ತೊಂದು ನಿಯಮವು ಎಲ್ಲರ ಗಮನ ಸೆಳೆದಿದೆ. ಅದನ್ನು ಕೆಂಪು ಬಣ್ಣದಲ್ಲಿ ಬರೆಯಲಾಗಿದೆ. ಪ್ರಯಾಣಿಕರು ತಮ್ಮ ನಿಗದಿತ ಸ್ಥಳ ತಲುಪಲು ಅವಸರ ಮಾಡಬಾರದು, ವೇಗ ಹೆಚ್ಚಿಸುವಂತೆ ಒತ್ತಾಯ ಮಾಡಬಾರದು ಎಂದು ಬರೆದಿದ್ದಾನೆ. ಈ ನಿಯಮವನ್ನು ಕೆಂಪು ಅಂಡರ್‌ಲೈನ್ ಮಾಡಲಾಗಿದೆ. "ಬೇಗ ತಲುಪಲು ವೇಗವಾಗಿ ಸಾಗಿ ಎಂದು ಒತ್ತಾಯಿಸಬೇಡಿ" ಎಂದು ಆತ ತನ್ನ ನಿಯಮದಲ್ಲಿ ಸೇರಿಸಿದ್ದಾನೆ.
ರೆಡ್ಡಿಟ್‌ನಲ್ಲಿ ಒಬ್ಬರು ಈ ನಿಯಮಗಳ ಬೋರ್ಡ್‌ನ ಫೋಟೋ ತೆಗೆದು ಹಂಚಿಕೊಂಡಿದ್ದಾನೆ "ನಾನು ಕ್ಯಾಬ್ ಬುಕ್ ಮಾಡಿದೆ. ಕ್ಯಾಬ್ ಚಾಲಕ ಕ್ಯಾಬ್ ಪ್ರವೇಶಿಸುವ ಸಮಯದಲ್ಲಿ ತನ್ನ ನಿಯಮಗಳ ಕುರಿತು ತಿಳಿಸಿದ. ಈ ಗೈಡ್‌ಲೈನ್‌ಗಳು ಕುರಿತು ನಿಮ್ಮ ಅನಿಸಿಕೆ ಏನು" ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ.
ಭಯ್ಯಾ ಎನ್ನಬಾರದೇಕೆ? ಅಣ್ಣಾ ಎಂದರೆ ತಪ್ಪೇನು?
ಈ ರೀತಿ ಈತ ಬರೆದಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಕೆಲವರು ಹೇಳಿದ್ದಾರೆ. ಇನ್ನು ಕೆಲವರು "ಭಯ್ಯಾ ಎನ್ನಬಾರದು" ಎಂಬ ವಿಚಾರದ ಕುರಿತು ತಗಾದೆ ಎತ್ತಿದ್ದಾರೆ.
"ಈತ ಹೇಳಿರುವ ಬಹುತೇಕ ಪಾಯಿಂಟ್‌ಗಳು ಸರಿಯಾಗಿವೆ. ಆದರೆ, ಭಯ್ಯಾ ಎಂದು ಏಕೆ ಕರೆಯಬಾರದು" ಎಂದು ರೆಡ್ಡಿಟ್ ಬಳಕೆದಾರರೊಬ್ಬರು ಪ್ರಶ್ನಿಸಿದ್ದಾರೆ.
"ಎಲ್ಲಿಯವರೆಗೆ ಚಾಲಕ ಗೌರವಯುತವಾಗಿ ಇರುತ್ತಾರೋ, ಅಲ್ಲಿಯವರೆಗೆ ಈ ಗೈಡ್‌ಲೈನ್‌ಗಳಲ್ಲಿ ನನಗೆ ಏನೂ ತಪ್ಪು ಕಾಣಿಸುತ್ತಿಲ್ಲ. ಆದರೆ, ಭಯ್ಯಾ ಎಂದು ಕರೆಯಬಾರದು ಎನ್ನುವುದು ಗೊಂದಲ ಮೂಡಿಸುತ್ತದೆ. ಕೆಲವರು ಚಾಲಕರ ಊರಿಗೆ ಸಂಬಂಧಪಟ್ಟಂತೆ ಜನರನ್ನು ಸಂಭೋಧಿಸುತ್ತಾರೆ. ಭಯ್ಯಾ, ಸಾಬ್ ಎಂದೆಲ್ಲ ಕರೆಯುತ್ತಾರೆ" ಎಂದು ಇನ್ನೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. "ದಕ್ಷಿಣ ಭಾರತದಲ್ಲಿ ಅಣ್ಣಾ ಎಂದು ಕರೆಯುತ್ತಾರೆ. ಈ ರೀತಿ ಕರೆದರೆ ಏನು ತಪ್ಪು?" ಎಂದು ಇನ್ನೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ಗೌರವ ಎರಡೂ ಕಡೆಗಳಲ್ಲಿಯೂ ಇರಬೇಕು ಎಂದು ಇನ್ನು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಗೌರವ ಎನ್ನುವುದು ಕೊಟ್ಟು ತೆಗೆದುಕೊಳ್ಳುವ ವಿಚಾರ. ಕಾರಿನ ಡೋರ್ ಮೆಲ್ಲಗೆ ಹಾಕಬೇಕು ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು. ಸ್ವಂತ ವಾಹನ ಹೊಂದಿರುವವರು ಯಾರಾದರೂ ತಮ್ಮ ಕಾರಿನ ಡೋರ್ ಅನ್ನು ಡಬ್ ಎಂದು ಜೋರಾಗಿ ಹಾಕಿದಾಗ ತಮಗೆ ನೋವಾದಂತೆ ಭಾವಿಸುತ್ತಾರೆ. ಇದೇ ರೀತಿ ಚಾಲಕನಿಗೆ ಕಿರಿಕಿರಿ ಮಾಡಬಾರದು" ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ, ಕೆಲವರು ಚಾಲಕನ ಬೋರ್ಡ್ ಅನ್ನು ಬೇರೆಯದ್ದೇ ರೀತಿಯಲ್ಲಿ ಅರ್ಥೈಸಿದ್ದಾರೆ. ಇಲ್ಲಿ ಚಾಲಕನೇ ಅಹಂನಿಂದ ವರ್ತಿಸುವಂತೆ ಇದೆ. ವಾಹನ ಏರುವ ಮೊದಲು ತನ್ನ ನಿಯಮಗಳನ್ನು ಹೇರುವ ಮೂಲಕ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುತ್ತಾನೆ ಎಂದು ಹೇಳಿದ್ದಾರೆ.
ವಿಭಾಗ