Donald Trump: ಮೂರನೇ ಮಹಾಯುದ್ಧವನ್ನು ತಡೆಯುವ ಸಾಮರ್ಥ್ಯ ನನಗೆ ಮಾತ್ರ ಇದೆ: ಡೊನಾಲ್ಡ್ ಟ್ರಂಪ್!
ಜಗತ್ತು ಈಗ ಮೂರನೇ ಮಹಾಯುದ್ಧದ ಹೊಸ್ತಿಲಲ್ಲಿದ್ದು, ಮಾನವ ಜನಾಂಗದ ಅಳಿವು-ಉಳಿವು ಈ ವಿಶ್ವಯುದ್ಧವನ್ನು ನಿರ್ಧರಿಸಿದೆ. ಆದರೆ ಈ ಭೀಕರ ವಿಶ್ವಯುದ್ಧವನ್ನು ತಡೆಯಬಲ್ಲ ಸಾಮರ್ಥ್ಯ ತಮಗೆ ಮಾತ್ರವಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ತಮ್ಮ ಭಾಷಣದಲ್ಲಿ ಅಧ್ಯಕ್ಷ ಜೋ ಬೈಡನ್ ವಿರುದ್ಧ ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ವಾಷಿಂಗ್ಟನ್: ಜಗತ್ತು ಈಗ ಮೂರನೇ ಮಹಾಯುದ್ಧದ ಹೊಸ್ತಿಲಲ್ಲಿದ್ದು, ಮಾನವ ಜನಾಂಗದ ಅಳಿವು-ಉಳಿವು ಈ ವಿಶ್ವಯುದ್ಧವನ್ನು ನಿರ್ಧರಿಸಿದೆ. ಆದರೆ ಈ ಭೀಕರ ವಿಶ್ವಯುದ್ಧವನ್ನು ತಡೆಯಬಲ್ಲ ಸಾಮರ್ಥ್ಯ ತಮಗೆ ಮಾತ್ರವಿದೆ ಎಂದು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ಪ್ರಬಲ ದಾವೆದಾರರಾಗಿರುವ ಡೊನಾಲ್ಡ್ ಟ್ರಂಪ್, ತಾವು ಮೂರನೇ ಮಹಾಯುದ್ಧವನ್ನು ತಡೆಯುವ ಶಕ್ತಿ ಇರುವ ಏಕೈಕ ಅಧ್ಯಕ್ಷೀಯ ಅಭ್ಯರ್ಥಿ ಎಂದು ವಾದಿಸಿದ್ದಾರೆ. ಲೋವಾದಲ್ಲಿ ಸೋಮವಾರ ಚುನಾವಣಾ ಪ್ರಚಾರ ನಡೆಸಿದ ಟ್ರಂಪ್, ಮೂರನೇ ವಿಶ್ವಯುದ್ಧದ ಸಂಭವನೀಯತೆ ಹೆಚ್ಚಿದೆ. ಜಗತ್ತಿಗೆ ಇದಕ್ಕಿಂತಲೂ ಹೆಚ್ಚಿನ ಅಪಾಯದ ಸಂದರ್ಭ ಬೇರೊಂದು ಇರಲಕ್ಕಿಲ್ಲ.
ನಾನು ಮೂರನೇ ಮಹಾಯುದ್ಧವನ್ನು ತಡೆಯುವ ಸಾಮರ್ಥ್ಯವಿರುವ ಜಗತ್ತಿನ ಏಕೈಕ ನಾಯಕ ಎಂದು ಹೇಳಿಕೊಂಡಿದ್ದಾರೆ.
ರಷ್ಯಾ-ಚೀನಾ ಒಂದಾಗಿರುವುದು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಆಡಳಿತ ವೈಫಲ್ಯಕ್ಕೆ ಸಾಕ್ಷಿ. ಜಗತ್ತನ್ನು ಅಂತ್ಯಗೊಳಿಸುವ ಸಾಧ್ಯತೆ ಇರುವ ಪರಮಾಣು ಯುದ್ಧಕ್ಕೆ ಅಮೆರಿಕವನ್ನು ನೂಕುವ ಅನಿವಾರ್ಯತೆಯನ್ನು ಅವರ ಸರ್ಕಾರ ಸೃಷ್ಟಿಸಿದೆ. ಮೂರನೇ ವಿಶ್ವಯುದ್ಧದ ಆರಂಭದೊಂದಿಗೆ ಬೈಡನ್ ಸರ್ಕಾರ ಅಂತ್ಯವಾಗಲಿದೆ ಎಂದು ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದಾರೆ.
ರಾಜತಾಂತ್ರಿಕವಾಗಿ ನಾಜೂಕಾಗಿ ನಡೆದುಕೊಳ್ಳಬೇಕಾದ ಕಡೆಯಲ್ಲಿ ಕಠಿಣವಾಗಿ ವತಿಸುವ ಹಾಗೂ ಕಠಿಣವಾಗಿ ವರ್ತಿಸುವ ಸಂದರ್ಭದಲ್ಲಿ ನಾಜೂಕಾಗಿ ವರ್ತಿಸುವ ಬೈಡನ್, ಅಮೆರಿಕದ ವರ್ಚಸ್ಸನ್ನು ಜಾಗತಿಕ ವೇದಿಕೆಯಲ್ಲಿ ಅಪಹಾಸ್ಯಕ್ಕೆ ಗುರಿ ಮಾಡಿದ್ದಾರೆ. ಬೈಡನ್ ಅವರಿಗೆ ನಾನು ಏನು ಮಾಡುತ್ತಿದ್ದೇನೆ ಎಂಬುದರ ಅರಿವೇ ಇಲ್ಲವಾಗಿದೆ ಎಂದು ಟ್ರಂಪ್ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ತಮಗೆ ಉತ್ತಮ ಸಂಬಂಧವಿದೆ. 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ತಾವು ಜಯಶಾಲಿಯಾದರೆ, ಕೇವಲ 24 ಗಂಟೆಗಳಲ್ಲಿ ರಷ್ಯಾ-ಉಕ್ರೇನ್ ಯುದ್ಧಕ್ಕೆ ವಿರಾಮ ಹಾಡಲಾಗುವುದು. ಆದರೆ ಅಷ್ಟರೊಳಗಾಗಿ ಈ ಸಮಸ್ಯೆ ಪರಿಹಾರ ಕಾಣಲಿ ಎಂದೂ ತಾವು ಆಶಿಸುವುದಾಗಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಈ ಕದನವನ್ನು ನಿಲ್ಲಿಸಲು ನನಗೆ ಒಂದು ದಿನಕ್ಕಿಂತ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ನನ್ನ ಉತ್ತಮ ಸ್ನೇಹಿತರಾಗಿರುವ ಪುಟಿನ್ ನನ್ನ ಮಾತು ಕೇಳುತ್ತಾರೆ ಎಂಬ ಸಂಪೂರ್ಣ ಭರವಸೆ ನನಗಿದೆ. ಜಗತ್ತನ್ನು ಮೂರನೇ ಮಹಾಯುದ್ಧದ ಆತಂಕದಿಂದ ಪಾರು ಮಾಡುವ ಸಾಮರ್ಥ್ಯ ನನಗಿದೆ ಎಂದು ಟ್ರಂಪ್ ತಮ್ಮ ಬೆನ್ನನ್ನು ತಾವೇ ತಟ್ಟಿಕೊಂಡಿದ್ದಾರೆ.
ಇದಕ್ಕೂ ಮುನ್ನ, ಕನ್ಸರ್ವೇಟಿವ್ ಪೊಲಿಟಿಕಲ್ ಆಕ್ಷನ್ ಕಾನ್ಫರೆನ್ಸ್‌ನಲ್ಲಿ (ಸಿಪಿಎಸಿ) ಮಾತನಾಡಿದ್ದ ಟ್ರಂಪ್, "ಅಮೆರಿಕನ್ನರು ನಮ್ಮ ದೇಶವನ್ನು ದ್ವೇಷಿಸುವ ಹಾಗೂ ಅದನ್ನು ಸಂಪೂರ್ಣ ನಾಶಪಡಿಸಲು ಬಯಸಿರುವ ಜನರಿಂದ ಕಾಪಾಡಲು ಬೃಹತ್ ಹೋರಾಟ ನಡೆಸುವಂತಾಗಿತ್ತು.." ಎಂದು ಹೇಳಿದ್ದಾರೆ.
ಇದೇ ವೇಳೆ ರಿಪಬ್ಲಿಕನ್ ಪಕ್ಷದ ತಮ್ಮ ಹಿಂದಿನ ನಾಯಕತ್ವದ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿರುವ ಡೊನಾಲ್ಡ್ ಟ್ರಂಪ್, ಮನೋವಿಕಾರಿಗಳು ಹಾಗೂ ನವಸಂಪ್ರದಾಯವಾದಿಗಳು ಪಕ್ಷದ ಮೂಲ ಸಿದ್ಧಾಂತಕ್ಕೆ ಭಾರೀ ಕೊಡಲಿ ಪೆಟ್ಟು ನೀಡಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ನಮ್ಮ ಪಕ್ಷವು ಈ ಮೊದಲು ಅಮೆರಿಕದ ಗಡಿಗಳನ್ನು ಮುಕ್ತಗೊಳಿಸುವ ಜಾಗತಿಕವಾದಿ ಮೂರ್ಖರಿಂದ ಕೂಡಿತ್ತು. ಆದರೆ ತಮ್ಮ ಅಮೆರಿಕ ಫಸ್ಟ್ ನೀತಿಯು ದೇಶದ ಭದ್ರತೆಯನ್ನು ಮತ್ತಷ್ಟು ಸಶಕ್ತಗೊಳಿಸಿದ್ದಲ್ಲದೇ, ಜಾಗತಿಕವಾಗಿಯೂ ಅಮೆರಿಕದ ವರ್ಚಸ್ಸನ್ನು ಹೆಚ್ಚಿಸಿತ್ತು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಒಟ್ಟಿನಲ್ಲಿ 2024ರ ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಭರ್ಜರಿ ಪ್ರಚಾರ ಆರಂಭಿಸಿರುವ ಟ್ರಂಪ್, ತಮ್ಮನ್ನು ಮೂರನೇ ಮಹಾಯುದ್ಧ ತಡೆಯುವ ಸಾಮರ್ಥ್ಯವಿರುವ ಜಾಗತಿಕ ನಾಯಕ ಎಂದು ಬಿಂಬಿಸಿಕೊಳ್ಳುತ್ತಿರುವುದು ಜಗತ್ತಿನ ಗಮನ ಸೆಳೆದಿದೆ.
ವಿಭಾಗ