ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣಾ ಫಲಿತಾಂಶ ಇಂದು; ಲೋಕಸಭೆ ಚುನಾವಣೆ ನಂತರದ ಮೊದಲ ಚುನಾವಣೆ ಫಲಿತಾಂಶ ಗಮನಿಸಲು ನೇರ ಲಿಂಕ್ ಮತ್ತು ವಿವರ
ಲೋಕಸಭೆ ಚುನಾವಣೆ ನಂತರ ನಡೆದ ಮೊದಲ ಚುನಾವಣೆಯ ಫಲಿತಾಂಶ ಇಂದು (ಅಕ್ಟೋಬರ್ 8) ಪ್ರಕಟವಾಗುತ್ತಿದೆ. ಜಮ್ಮು-ಕಾಶ್ಮೀರ, ಹರಿಯಾಣ ಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಶುರುವಾಗಲಿದ್ದು, ಫಲಿತಾಂಶ ಗಮನಿಸಲು ನೇರ ಲಿಂಕ್ ಮತ್ತು ಸಂಬಂಧಿತ ವಿವರ ಇಲ್ಲಿದೆ.
ನವದೆಹಲಿ: ಜಮ್ಮು- ಕಾಶ್ಮೀರ ಮತ್ತು ಹರಿಯಾಣ ಅಸೆಂಬ್ಲಿ ಚುನಾವಣೆಯ ಫಲಿತಾಂಶ ಇಂದು (ಅಕ್ಟೋಬರ್ 8) ಪ್ರಕಟವಾಗಲಿದ್ದು, ಮತ ಎಣಿಕೆ ಕಾರ್ಯಕ ಬೆಳಗ್ಗೆ 8 ಗಂಟೆಗೆ ಶುರುವಾಗಲಿದೆ. ಲೋಕಸಭೆ ಚುನಾವಣೆ ನಡೆದ ಬಳಿಕ ನಡೆದ ಹೈವೋಲ್ಟೇಜ್ ಚುನಾವಣೆ ಇದಾಗಿದ್ದು, ಜಮ್ಮು-ಕಾಶ್ಮೀರದ ಚುನಾವಣೆ ಬಹಳ ಮಹತ್ವ ಪಡೆದುಕೊಂಡಿದೆ. ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಪಡೆಯಲು ಪ್ರಯತ್ನಿಸಿದೆ. ಜಮ್ಮು ಕಾಶ್ಮೀರ ಕೇಂದ್ರಾಡಳಿತಕ್ಕೆ ಒಳಪಟ್ಟ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿರುವ ಕಾರಣ ದೇಶದ ಗಮನಸೆಳೆದಿದೆ. ಈ ಫಲಿತಾಂಶವು ಈ ವರ್ಷ ಕೊನೆಗೆ ವಿಧಾನಸಭೆ ಚುನಾವಣೆ ನಡೆಯಲಿರುವ ಮಹಾರಾಷ್ಟ್ರ ಮತ್ತು ಜಾರ್ಖಂಡ್ ರಾಜಕೀಯದ ಮೇಲೂ ಪರಿಣಾಮ ಬೀರಬಹುದು ಎಂಬುದು ರಾಜಕೀಯ ಪರಿಣತರ ಲೆಕ್ಕಾಚಾರ.
ಚುನಾವಣೋತ್ತರ ಸಮೀಕ್ಷೆಗಳು ನೀಡಿರುವ ಸುಳಿವು
ಹರಿಯಾಣದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. 10 ವರ್ಷಗಳ ಬಿಜೆಪಿ ಆಡಳಿತವನ್ನು ಈ ಬಾರಿ ಜನಾದೇಶ ಕೊನೆಗೊಳಿಸಲಿದೆ ಎಂಬುದು ಚುನಾವಣೋತ್ತರ ಸಮೀಕ್ಷೆಯ ಸುಳಿವು. ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ಫಲಿತಾಂಶದ ಸುಳಿವು ನೀಡಿದೆ ಸಮೀಕ್ಷೆ. ನ್ಯಾಷನಲ್ ಕಾನ್ಫರೆನ್ಸ್ ಮತ್ತು ಕಾಂಗ್ರೆಸ್ ಮೈತ್ರಿಗೆ ಬಲ ಬರಲಿದೆಯಾದರೂ ಅಧಿಕಾರ ಚುಕ್ಕಾಣಿ ಹಿಡಿಯವುದು ಕಷ್ಟ ಎಂಬ ಸನ್ನಿವೇಶ ಇರಲಿದೆ ಎಂದು ಸಮೀಕ್ಷೆ ಫಲಿತಾಂಶ ತಿಳಿಸಿದೆ.
ಹರಿಯಾಣ ಚುನಾವಣೆ: ಹರಿಯಾಣದಲ್ಲಿ ಈ ಬಾರಿ ಒಂದೇ ಹಂತದಲ್ಲಿ ಅಕ್ಟೋಬರ್ 5 ರಂದು ಚುನಾವಣೆ ನಡೆದಿತ್ತು. 90 ವಿಧಾನಸಭಾ ಸ್ಥಾನಗಳಲ್ಲಿ ಒಟ್ಟು 1031 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ 101 ಮಹಿಳೆಯರು ಮತ್ತು 464 ಸ್ವತಂತ್ರ ಅಭ್ಯರ್ಥಿಗಳು. ಶೇ 67.90 ಮತದಾನವಾಗಿದೆ.
90 ಮತ ಎಣಿಕೆ ಕೇಂದ್ರಗಳಲ್ಲಿ ಇಂದು ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಶುರುವಾಗಲಿದೆ. ಮೂರು ಸ್ತರದ ಭದ್ರತಾ ವ್ಯವಸ್ಥೆ ಮಾಡಲಾಗಿದೆ ಎಂದು ಡಿಜಿಪಿ ಶತ್ರುಜೀತ್ ಕಪೂರ್ ತಿಳಿಸಿದ್ದಾರೆ. ಇದರಂತೆ, ಮೊದಲ ಹಂತದ ಭದ್ರತೆಯಲ್ಲಿ ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆ (CAPF) ಸಿಬ್ಬಂದಿ, ಹರಿಯಾಣ ಸಶಸ್ತ್ರ ಪೊಲೀಸ್ (HAP/IRB) ಅಧಿಕಾರಿಗಳನ್ನು ಎರಡನೇ ಹಂತದಲ್ಲಿ ನಿಯೋಜಿಸಲಾಗಿದೆ. ಇನ್ನು ಮೂರನೇ ಹಂತದಲ್ಲಿ ಜಿಲ್ಲಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಈ ಕೇಂದ್ರಗಳಾದ್ಯಂತ ಭದ್ರತೆಯನ್ನು ಖಚಿತಪಡಿಸಿಕೊಳ್ಳಲು ಸುಮಾರು 12,000 ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ ಎಂದು ಅವರು ತಿಳಿಸಿದ್ಧಾರೆ.
ಹರಿಯಾಣದಲ್ಲಿ ಸದ್ಯ ಬಿಜೆಪಿ ಮತ್ತು ಜನನಾಯಕ ಜನತಾ ಪಾರ್ಟಿ ಸಮ್ಮಿಶ್ರ ಸರ್ಕಾರವಿದೆ. ಬಿಜೆಪಿಗೆ ಕಳೆದ ಬಾರಿ ಬಹುಮತ ಸಿಕ್ಕಿರಲಿಲ್ಲ. ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಿತ್ತು.ಈ ಸಲ ಸಣ್ಣ ಪಕ್ಷಗಳಿಗೆ ಯಾವುದೇ ಸ್ಥಾನಗಳು ಸಿಗುವುದು ಡೌಟ್ ಎಂದು ಸಮೀಕ್ಷೆ ಹೇಳಿದ್ದು, ಕಾಂಗ್ರೆಸ್‌ಗೆ ಸ್ಪಷ್ಟ ಬಹುಮತದ ಸಾಧ್ಯತೆ ಹೆಚ್ಚಿದೆ ಎಂದು ವಿವರಿಸಿದೆ.
2019ರ ಚುನಾವಣೆಯಲ್ಲಿ 90 ಸ್ಥಾನಗಳ ಪೈಕಿ ಕಾಂಗ್ರೆಸ್ 30 ಗೆದ್ದುಕೊಂಡಿತ್ತು. ಬಿಜೆಪಿ 40. ಸರ್ಕಾರ ರಚನೆಗೆ 46 ಸದಸ್ಯ ಬಲ ಬೇಕಾಗಿತ್ತು. ಆಗ ಜೆಜೆಪಿ ಜೊತೆಗೆ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಲಾಗಿತ್ತು. ಇದೇ ಮೈತ್ರಿ ವಿರೋಧದ ಕಾರಣ ಮನೋಹರಲಾಲ್ ಖಟ್ಟರ್ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯಬೇಕಾಗಿ ಬಂದಿತ್ತು. ಬಳಿಕ ನವಾಬ್ ಸಿಂಗ್ ಸೈನಿ ಮುಖ್ಯಮಂತ್ರಿಯಾದರು.
ದೇಶದ ಗಮನಸೆಳೆದಿರುವ ಜಮ್ಮು-ಕಾಶ್ಮೀರದ ಚುನಾವಣೆ
ಆಡಳಿತ ಸಮಸ್ಯೆ ಮತ್ತು ಪ್ರತ್ಯೇಕ ರಾಷ್ಟ್ರದ ಕೂಗು ಹೆಚ್ಚಾಗುತ್ತಿದ್ದ ಕಾರಣ ಜಮ್ಮು-ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ತೆರವುಗೊಳಿಸಿ ಕೇಂದ್ರಾಡಳಿತಕ್ಕೆ 2019ರ ಆಗಸ್ಟ್‌ನಲ್ಲಿ ಒಳಪಡಿಸಿದ ಬಳಿಕ ನಡೆದ ಮೊದಲ ಚುನಾವಣೆ ಇದು. ಮೂರು ಹಂತಗಳಲ್ಲಿ ಇಲ್ಲಿ ಚುನಾವಣೆ ನಡೆದಿತ್ತು. ಮೊದಲ ಹಂತದಲ್ಲಿ 24, ಎರಡನೇ ಹಂತದಲ್ಲಿ 26, ಮೂರನೇ ಹಂತದಲ್ಲಿ 40 ಸ್ಥಾನಗಳಿಗೆ ಮತದಾನ ನಡೆದಿತ್ತು. 90 ಸದಸ್ಯರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ 873 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇಂದು ಜಮ್ಮು- ಕಾಶ್ಮೀರದ 28 ಮತ ಎಣಿಕೆ ಕೇಂದ್ರಗಳಲ್ಲಿ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಶುರುವಾಗಲಿದೆ.
ಬಿಜೆಪಿ ಮತ್ತು ಎನ್‌ಸಿ-ಕಾಂಗ್ರೆಸ್ ಮೈತ್ರಿಯನ್ನು ಹೊರತುಪಡಿಸಿ, ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ, ಮಾಜಿ ಸಚಿವ ಸಜ್ಜದ್ ಗನಿ ಲೋನ್ ನೇತೃತ್ವದ ಪೀಪಲ್ಸ್ ಕಾನ್ಫರೆನ್ಸ್, ಅಪ್ನಿ ಪಾರ್ಟಿ, ಇಂಜಿನಿಯರ್ ರಶೀದ್ ಅವರ ಅವಾಮಿ ಇತ್ತೆಹಾದ್ ಪಕ್ಷ, ಜಮಾತ್-ಎ-ಇಸ್ಲಾಮಿ ಬೆಂಬಲಿತ ಸ್ವತಂತ್ರ ಅಭ್ಯರ್ಥಿಗಳು , ಮತ್ತು ಡೆಮಾಕ್ರಟಿಕ್ ಪ್ರೋಗ್ರೆಸಿವ್ ಆಜಾದ್ ಪಾರ್ಟಿ ಕೂಡ ಕಣದಲ್ಲಿದೆ. ಆದರೆ ಎಕ್ಸಿಟ್ ಪೋಲ್‌ಗಳು ಬಿಜೆಪಿ ಮತ್ತು ಎನ್‌ಸಿ-ಕಾಂಗ್ರೆಸ್ ಮೈತ್ರಿ ನಡುವೆ ಸ್ಪರ್ಧೆ ಇದೆ ಎಂದು ಹೇಳಿವೆ. ಯಾವುದೇ ಆದರೂ 46 ರಿಂದ 48 ಸ್ಥಾನಗಳಲ್ಲಿ ಗೆದ್ದರಷ್ಟೆ ಸರ್ಕಾರ ರಚನೆ ಸಾಧ್ಯ.
2014ರಲ್ಲಿ ಕೊನೆಯ ಸರ್ಕಾರ ಆಡಳಿತದಲ್ಲಿದ್ದಾಗ ಪಿಡಿಪಿ 28 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿತ್ತು. ಸೈದ್ಧಾಂತಿಕ ವಿರೋಧಿ ಬಿಜೆಪಿ (25 ಸದಸ್ಯ ಬಲ) ಜೊತೆ ಸೇರಿ ಸರ್ಕಾರ ರಚಿಸಿತ್ತು. ಆದರೆ 2018ರಲ್ಲಿ ಬಿಜೆಪಿ ಬೆಂಬಲ ಹಿಂಪಡೆದ ಕಾರಣ ಸರ್ಕಾರ ಪತನವಾಗಿ, ರಾಜ್ಯಪಾಲರ ಆಳ್ವಿಕೆ ಬಂದಿತ್ತು. ಮುಂದೆ 2019ರಲ್ಲಿ ಕೇಂದ್ರ ಸರ್ಕಾರವು ಜಮ್ಮು- ಕಾಶ್ಮೀರದ ಆಡಳಿತವನ್ನು ಕೇಂದ್ರದ ವ್ಯಾಪ್ತಿಗೆ ತೆಗೆದುಕೊಂಡಿತು.
ಚುನಾವಣಾ ಫಲಿತಾಂಶ ವೀಕ್ಷಣೆಗೆ ಹೀಗೆ ಮಾಡಿ - ಚುನಾವಣಾ ಆಯೋಗದ ವೆಬ್‌ಸೈಟ್‌ನಲ್ಲಿ ನಿಖರ ಫಲಿತಾಂಶ ವೀಕ್ಷಿಸಬಹುದಾಗಿದೆ. ವಿಶ್ಲೇಷಣೆ, ವರದಿಗಳನ್ನು ಗಮನಿಸಲು ನಮ್ಮ ಸುದ್ದಿ ಜಾಲತಾಣಗಳನ್ನು ಅನುಸರಿಸಬಹುದು.