Rahul Gandhi on BJP: "ನಾನು ಬಿಜೆಪಿಯನ್ನು ನನ್ನ 'ಗುರು' ಎಂದು ಪರಿಗಣಿಸುತ್ತೇನೆ, ಅದು ನನಗೆ ದಾರಿದೀಪವಿದ್ದಂತೆ" ಅಂದ್ರು ರಾಹುಲ್ ಗಾಂಧಿ
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Rahul Gandhi On Bjp: "ನಾನು ಬಿಜೆಪಿಯನ್ನು ನನ್ನ 'ಗುರು' ಎಂದು ಪರಿಗಣಿಸುತ್ತೇನೆ, ಅದು ನನಗೆ ದಾರಿದೀಪವಿದ್ದಂತೆ" ಅಂದ್ರು ರಾಹುಲ್ ಗಾಂಧಿ

Rahul Gandhi on BJP: "ನಾನು ಬಿಜೆಪಿಯನ್ನು ನನ್ನ 'ಗುರು' ಎಂದು ಪರಿಗಣಿಸುತ್ತೇನೆ, ಅದು ನನಗೆ ದಾರಿದೀಪವಿದ್ದಂತೆ" ಅಂದ್ರು ರಾಹುಲ್ ಗಾಂಧಿ

ನಾನು ಬಿಜೆಪಿಯನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ. ಏಕೆಂದರೆ ಬಿಜೆಪಿ ನನಗೆ ದಾರಿದೀಪವಿದ್ದಂತೆ. ಅದು ಯಾವುದನ್ನು ಮಾಡಬಾರದು ಎಂಬುದನ್ನು ಕಲಿಸುತ್ತದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ
ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ

ನವದೆಹಲಿ: ನಾನು ಬಿಜೆಪಿಯನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ. ಏಕೆಂದರೆ ಬಿಜೆಪಿ ನನಗೆ ದಾರಿದೀಪವಿದ್ದಂತೆ. ಅದು ಯಾವುದನ್ನು ಮಾಡಬಾರದು ಎಂಬುದನ್ನು ಕಲಿಸುತ್ತದೆ ಎಂದು ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಹೇಳಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಾಹುಲ್​ ಗಾಂಧಿ, “ಬಿಜೆಪಿ ನಮ್ಮ ಮೇಲೆ ಆಕ್ರಮಣಕಾರಿಯಾಗಿ ದಾಳಿ ಮಾಡಬೇಕೆಂದು ನಾನು ಬಯಸುತ್ತೇನೆ, ಇದು ಕಾಂಗ್ರೆಸ್ ಪಕ್ಷದ ಸಿದ್ಧಾಂತವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ, ನಾನು ಬಿಜೆಪಿಯನ್ನು ನನ್ನ ಗುರು ಎಂದು ಪರಿಗಣಿಸುತ್ತೇನೆ, ಅದು ನನಗೆ ದಾರಿ ತೋರಿಸುತ್ತಿದೆ ಮತ್ತು ಏನು ಮಾಡಬಾರದು ಎಂಬುದರ ಕುರಿತು ನನಗೆ ತರಬೇತಿ ನೀಡುತ್ತಿದೆ" ಎಂದರು.

ಡಿಸೆಂಬರ್ 24 ರಂದು ನವದೆಹಲಿಯನ್ನು ಪ್ರವೇಶಿಸಿದ ಭಾರತ್ ಜೋಡೋ ಯಾತ್ರೆಯ ಬಗ್ಗೆ ಮಾತನಾಡುತ್ತಾ, "ನಾನು ಇದನ್ನು ಪ್ರಾರಂಭಿಸಿದಾಗ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಸಾಮಾನ್ಯ ಯಾತ್ರೆಯಾಗಿರುತ್ತದೆ ಎಂದುಕೊಂಡಎ. ಆದರೆ ಈ ಯಾತ್ರೆ ಧ್ವನಿ ಮತ್ತು ಭಾವನೆಗಳನ್ನು ಹೊಂದಿದೆ ಎಂಬುದು ನಮಗೆ ನಿಧಾನವಾಗಿ ಅರ್ಥವಾಯಿತು." ಎಂದು ಹೇಳಿದರು.

"ಭಾರತ್ ಜೋಡೋ ಯಾತ್ರೆಯ ಬಾಗಿಲು ಎಲ್ಲರಿಗೂ ತೆರೆದಿದೆ, ನಮ್ಮೊಂದಿಗೆ ಸೇರುವುದಕ್ಕೆ ನಾವು ಯಾರನ್ನೂ ತಡೆಯುವುದಿಲ್ಲ. ಅಖಿಲೇಶ್ ಜಿ, ಮಾಯಾವತಿ ಜಿ ಮತ್ತು ಇತರರು "ಮೊಹಬ್ಬತ್ ಕಾ ಹಿಂದೂಸ್ತಾನ್" ಬಯಸುತ್ತಾರೆ," ಎಂದ ರಾಹುಲ್​​ ಇತರ ಪಕ್ಷಗಳಿಗೆ ಮುಕ್ತ ಆಹ್ವಾನ ನೀಡಿದರು.

ಅಖಿಲೇಶ್‌ ಯಾದವ್​ ಏನು ಹೇಳಿದ್ದರು?

ದೇಶದ ಕೋಮುಸೌಹಾರ್ದತೆಗಾಗಿ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಕೈಗೊಂಡಿರುವ ಭಾರತ್‌ ಜೋಡೋ ಯಾತ್ರೆಯಿಂದ, ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅಂತರ ಕಾಯ್ದುಕೊಂಡಿದ್ದಾರೆ. ನಮ್ಮ ಪಕ್ಷವು ವಿಭಿನ್ನ ಸಿದ್ಧಾಂತವನ್ನು ಹೊಂದಿದ್ದು, ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ಒಂದೇ ಎಂಬುದು ನಮ್ಮ ನಿಲುವು ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಸ್ಪಷ್ಟಪಡಿಸಿದ್ದರು.

ನಾವು ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ವ್ಯತ್ಯಾಸ ಗುರುತಿಸುವುದಿಲ್ಲ. ಆದರೆ ಕೋಮುವಾದಿ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು ಎಂಬ ಉದ್ದೇಶದಲ್ಲಿ ಕಾಂಗ್ರೆಸ್ ಜೊತೆ ಕೈಜೋಡಿಸಬೇಕು ಎಂದು ಬಯಸುತ್ತೇವೆ. ಆದರೆ ಭಾರತ್‌ ಜೋಡೋ ಯಾತ್ರೆಯು, ವಿಪಕ್ಷಗಳ ಸಂಭಾವ್ಯ ಮಹಾಮೈತ್ರಿಯ ಪ್ರಯತ್ನಗಳಿಗೂ ಹಿನ್ನಡೆ ತಂದಿದೆ ಎಂಬುದು ತಮ್ಮ ಅನಿಸಿಕೆ ಎಂದು ಅಖಿಲೇಶ್‌ ಯಾದವ್‌ ಮಾರ್ಮಿಕವಾಗಿ ಹೇಳಿದ್ದಾರೆ.

ಸೆಪ್ಟೆಂಬರ್ 7 ರಂದು ಕನ್ಯಾಕುಮಾರಿಯಿಂದ ಪ್ರಾರಂಭವಾದ ಭಾರತ್​ ಜೋಡೋ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಮಧ್ಯಪ್ರದೇಶ, ರಾಜಸ್ಥಾನ ಮತ್ತು ಮಹಾರಾಷ್ಟ್ರ ಮತ್ತು ಹರಿಯಾಣವನ್ನು ಪೂರೈಸಿದ್ದು ಪ್ರಸ್ತುತ ದೆಹಲಿಯಲ್ಲಿದೆ. ಇದು ಭಾರತದ ಇತಿಹಾಸದಲ್ಲಿ ಯಾವುದೇ ಭಾರತೀಯ ರಾಜಕಾರಣಿ ಕಾಲ್ನಡಿಗೆಯಲ್ಲಿ ನಡೆಸಿದ ಅತಿ ಉದ್ದದ ಮೆರವಣಿಗೆಯಾಗಿದೆ ಎಂದು ಕಾಂಗ್ರೆಸ್ ಹೇಳಿಕೊಂಡಿದೆ. ಈ ಯಾತ್ರೆಯ ಮೂಲಕ ರಾಹುಲ್ ಗಾಂಧಿ ಅವರು ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಮತ್ತು ಬಿಜೆಪಿಯ "ದೇಶವನ್ನು ವಿಭಜಿಸುವ ರಾಜಕೀಯ" ವಿರುದ್ಧ ಸಾಮಾನ್ಯ ಜನರನ್ನು ಒಗ್ಗೂಡಿಸುವ ಗುರಿಯನ್ನು ಹೊಂದಿದ್ದಾರೆ.

ಡಿಸೆಂಬರ್ 24 ರಂದು ಯಾತ್ರೆ ದೆಹಲಿ ಪ್ರವೇಶಿಸಿದಾಗ ಮಾತನಾಡಿದ್ದ ರಾಹುಲ್​ ಗಾಂಧಿ, "ಭಾರತ್ ಜೋಡೋ ಯಾತ್ರೆಯಲ್ಲಿ ನಾಯಿಗಳೂ ಬಂದಿದ್ದವು, ಯಾರೂ ಅವುಗಳಿಗೆ ಹಾನಿ ಮಾಡಿಲ್ಲ. ಹಸು, ಎಮ್ಮೆ, ಹಂದಿ, ಎಲ್ಲಾ ಪ್ರಾಣಿಗಳು ಬಂದವು. ಈ ಯಾತ್ರೆ ನಮ್ಮ ಭಾರತದಂತೆ, ಇಲ್ಲಿ ದ್ವೇಷವಿಲ್ಲ, ಹಿಂಸೆಯಿಲ್ಲ. 2,800 ಕಿಲೋಮೀಟರ್ ನಡೆದೆ, ಈ ವೇಳೆ ಜನರ ನಡುವೆ ಯಾವುದೇ ದ್ವೇಷ ಅಥವಾ ಹಿಂಸೆಯನ್ನು ನಾನು ನೋಡಿಲ್ಲ. ಆದರೆ ನಾನು ಟಿವಿ ಆನ್ ಮಾಡಿದಾಗ ಮಾತ್ರ ದ್ವೇಷ-ಹಿಂಸೆಯನ್ನು ನೋಡುತ್ತೇನೆ. ಭಗವದ್ಗೀತೆ ಮತ್ತು ಉಪನಿಷತ್ತುಗಳನ್ನು ಉಲ್ಲೇಖಿಸಿದ ರಾಹುಲ್​​​ ಗಾಂಧಿ ಹಿಂದೂ ಪಠ್ಯಗಳಲ್ಲಿ ಎಲ್ಲಿಯೂ ಬಡವರನ್ನು ದಮನಿಸಿ ಎಂದು ಬರೆಯಲಾಗಿಲ್ಲ" ಎಂದು ಹೇಳಿದ್ದರು.

ಚೀನಾ ಸೇರಿದಂತೆ ಇತರ ದೇಶಗಳಲ್ಲಿ ಕೋವಿಡ್​ ಉಲ್ಬಣಗೊಂಡಿರುವ ಕಾರಣ ಭಾರತದಲ್ಲಿಯೂ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದ್ದು, ಕೋವಿಡ್​ ನಿಯಮಗಳನ್ನು ಪಾಲಿಸಿ ಯಾತ್ರೆ ಮಾಡುವಂತೆ, ಇಲ್ಲವಾದಲ್ಲಿ ಯಾತ್ರೆಯನ್ನು ರದ್ದುಗೊಳಿಸುವಂತೆ ಕೇಂದ್ರ ಸರ್ಕಾರ ರಾಹುಲ್​ ಗಾಂಧಿಗೆ ಸೂಚಿಸಿದೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ರಾಹುಲ್​ ಗಾಂಧಿ ಬಿಜೆಪಿಗೆ ನಮ್ಮ ಭಾರತ್​ ಜೋಡೋ ಯಾತ್ರೆ ಬಗ್ಗೆ ಭಯ ಶುರುವಾಗಿದ್ದು, ಕೋವಿಡ್​ ಹೆಸರಲ್ಲಿ ಯಾತ್ರೆ ನಿಲ್ಲಿಸಲು ಹೊಸ ಪ್ಲಾನ್​ ಮಾಡಿದೆ ಎಂದು ಹೇಳಿದ್ದಾರೆ.

Whats_app_banner

ವಿಭಾಗ

ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.