Aadhaar Linking: ವೋಟರ್ ಐಡಿ - ಆಧಾರ್ ಜೋಡಣೆ ಶುರುವಾಯಿತಾ, ಕೇಂದ್ರ ಸರ್ಕಾರ ಹೇಳಿದ್ದಿಷ್ಟು ನೋಡಿ
ಮತದಾರರ ಗುರುತಿನ ಚೀಟಿ ಮತ್ತು ಆಧಾರ್ ಜೋಡಣೆ ಕಾರ್ಯ ಪದೇಪದೆ ಸುದ್ದಿಯಲ್ಲಿರುವ ವಿಚಾರ. ವೋಟರ್ ಐಡಿ -ಆಧಾರ್ ಜೋಡಣೆಗೆ ಫಾರ್ಮ್ 6B ಸಲ್ಲಿಸುವುದಕ್ಕೆ 2024ರ ಮಾರ್ಚ್ ಕೊನೇ ದಿನ ಎಂದು ಘೋಷಿಸಲಾಗಿದೆ. ಆದರೆ ಈ ಕಾರ್ಯ ಇನ್ನೂ ಶುರುವಾಗಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.
ಆಧಾರ್ ಮತ್ತು ಮತದಾರರ ಗುರುತಿನ ಚೀಟಿಯ ಜೋಡಣೆ ಕಾರ್ಯ ಇನ್ನೂ ಶುರುವಾಗಿಲ್ಲ ಎಂದು ಭಾರತ ಸರ್ಕಾರ ಸ್ಪಷ್ಟಪಡಿಸಿದೆ. ಈ ವಿಚಾರವನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲೋಕಸಭೆಯಲ್ಲಿ ಸದಸ್ಯರು ಕೇಳಿದ ಪ್ರಶ್ನೆಗೆ ಶುಕ್ರವಾರ ಉತ್ತರಿಸುತ್ತ ಸ್ಪಷ್ಟಪಡಿಸಿದ್ದಾರೆ.
ಸಂಸತ್ತಿನ ಚಳಿಗಾಲದ ಅಧಿವೇಶನ ಡಿ.4ಕ್ಕೆ ಶುರುವಾಗಿದ್ದು, ಶುಕ್ರವಾರ ಲೋಕಸಭೆಯ ಕಲಾಪದ ವೇಳೆ ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಅವರು ಲಿಖಿತ ಉತ್ತರ ನೀಡಿ ಆಧಾರ್ - ಮತದಾರರ ಗುರುತಿನ ಚೀಟಿ ಜೋಡಣೆ ವಿಚಾರ ಸ್ಪಷ್ಟಪಡಿಸಿದರು.
“ಆಧಾರ್ ಅನ್ನು ಲಿಂಕ್ ಮಾಡುವುದು ಪ್ರಕ್ರಿಯೆ ಚಾಲಿತವಾಗಿರುವಂಥದ್ದು. ಚುನಾವಣಾ ಫೋಟೋ ಗುರುತಿನ ಚೀಟಿಯೊಂದಿಗೆ ಆಧಾರ್ ಅನ್ನು ಲಿಂಕ್ ಮಾಡಲು ಯಾವುದೇ ಗುರಿಗಳನ್ನು ನೀಡಲಾಗಿಲ್ಲ. ಇದಲ್ಲದೆ, ಎಪಿಕ್ ಜೊತೆಗೆ ಆಧಾರ್ ಲಿಂಕ್ ಮಾಡುವ ಕೆಲಸವನ್ನು ಇನ್ನೂ ಪ್ರಾರಂಭಿಸಿಲ್ಲ ಎಂದು ಭಾರತದ ಚುನಾವಣಾ ಆಯೋಗವು ತಿಳಿಸಿದೆ. ಇದಲ್ಲದೆ, ಫಾರ್ಮ್ 6 ಬಿ ಸಲ್ಲಿಸುವ ಅವಧಿಯನ್ನು ಒಂದು ವರ್ಷದ ಅವಧಿಗೆ ವಿಸ್ತರಿಸಲಾಗಿದೆ ಎಂದು ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಹೇಳಿದ್ದಾರೆ.
ಮತದಾರರ ಗುರುತಿನ ಚೀಟಿ - ಆಧಾರ್ ಜೋಡಣೆಗೆ ಫಾರ್ಮ್ 6B
ಫಾರ್ಮ್ 6B (ಆಧಾರ್ ಕಾರ್ಡ್ ಲಿಂಕ್ ಮಾಡಲು) ಸಲ್ಲಿಸುವ ಅವಧಿಯನ್ನು ಮಾರ್ಚ್ 2024 ರ ಅಂತ್ಯದವರೆಗೆ ವಿಸ್ತರಣೆಯಾಗಿದೆ.
ಮತದಾರರ ಗುರುತಿನ ಚೀಟಿಗಳನ್ನು ಪ್ರತ್ಯೇಕವಾಗಿ ಇರಿಸಿರುವ ವ್ಯಕ್ತಿಗಳ ಹೆಸರುಗಳನ್ನು ಸ್ಪಷ್ಟಪಡಿಸದೆ ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಕಾಂಗ್ರೆಸ್ ಸಂಸದ ಪ್ರದ್ಯುತ್ ಬೊರ್ಡೊಲೊಯ್ ಅವರ ಪ್ರಶ್ನೆಗೆ ಕಾನೂನು ಸಚಿವ ಮೇಘವಾಲ್ ಅವರು ಉತ್ತರಿಸಿದರು.
"ಮತದಾರರ ಪಟ್ಟಿಯನ್ನು ಸಿದ್ಧಪಡಿಸುವ ಮೇಲ್ವಿಚಾರಣೆ, ನಿರ್ದೇಶನ ಮತ್ತು ನಿಯಂತ್ರಣದ ಹೊಣೆಗಾರಿಕೆ ಭಾರತೀಯ ಚುನಾವಣಾ ಆಯೋಗದ್ದು. ಸಂವಿಧಾನದ 324ನೇ ವಿಧಿಯಲ್ಲಿ ಈ ಹೊಣೆಗಾರಿಕೆಯನ್ನು ಆಯೋಗಕ್ಕೆ ನೀಡಲಾಗಿದೆ. ಆಯೋಗವು ಬಹುಸ್ತರದ ಭದ್ರತಾ ವ್ಯವಸ್ಥೆಯೊಂದಿಗೆ ಡೇಟಾವನ್ನು ನಿರ್ವಹಿಸುತ್ತದೆ. ಈ ಚುನಾವಣಾ ಡೇಟಾವನ್ನು ಸ್ಥಿರ ಮತ್ತು ಎನ್‌ಕ್ರಿಪ್ಟ್ ಮಾಡಿರುವುದಾಗಿ ಆಯೋಗ ತಿಳಿಸಿದೆ” ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದ್ದಾರೆ.
ವಲಸೆ ಕಾರ್ಮಿಕರ ಹಕ್ಕುಗಳನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡುವ ಆಧಾರ್ ಕಾರ್ಡ್‌ಗೆ ಲಿಂಕ್ ಮಾಡಲಾದ ವಿಶಿಷ್ಟ ಗುರುತನ್ನು ರಚಿಸುವ ಯೋಜನೆಗಳನ್ನು ಸರ್ಕಾರ ಘೋಷಿಸಿದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆಯು ಬಂದಿದೆ. ವಿವರಗಳನ್ನು ಇ-ಶ್ರಮ್ ಡೇಟಾಬೇಸ್‌ಗೆ ಸಂಯೋಜಿಸಲಾಗುತ್ತದೆ ಮತ್ತು ದೇಶಾದ್ಯಂತ ಎಲ್ಲಾ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಗುರುತಿಸುವಿಕೆಯನ್ನು ಕಡ್ಡಾಯಗೊಳಿಸಲಾಗಿದೆ.