Lok Sabha Elections 2024: ಹಿರಿಯ ಕಾಂಗ್ರೆಸ್‌ ನಾಯಕ, ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್‌ ಬಿಜೆಪಿ ತೆಕ್ಕೆಗೆ?
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Lok Sabha Elections 2024: ಹಿರಿಯ ಕಾಂಗ್ರೆಸ್‌ ನಾಯಕ, ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್‌ ಬಿಜೆಪಿ ತೆಕ್ಕೆಗೆ?

Lok Sabha Elections 2024: ಹಿರಿಯ ಕಾಂಗ್ರೆಸ್‌ ನಾಯಕ, ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್‌ ಬಿಜೆಪಿ ತೆಕ್ಕೆಗೆ?

Congress news ಕಾಂಗ್ರೆಸ್‌ನ ಹಿರಿಯ ನಾಯಕ, ಮಧ್ಯಪ್ರದೇಶ ಮಾಜಿ ಸಿಎಂ ಕಮಲನಾಥ್‌ ಅವರು ಕಾಂಗ್ರೆಸ್‌ ತೊರೆದು ಬಿಜೆಪಿ ಸೇರುವ ಸಾಧ್ಯತೆಗಳು ದಟ್ಟವಾಗಿವೆ.

ಕಾಂಗ್ರೆಸ್‌ ತೊರೆಯುವ ಹಂತದಲ್ಲಿ ಹಿರಿಯ ನಾಯಕ ಕಮಲ್‌ ನಾಥ್‌ ಇದ್ದಾರೆ.
ಕಾಂಗ್ರೆಸ್‌ ತೊರೆಯುವ ಹಂತದಲ್ಲಿ ಹಿರಿಯ ನಾಯಕ ಕಮಲ್‌ ನಾಥ್‌ ಇದ್ದಾರೆ.

ದೆಹಲಿ: ಲೋಕಸಭೆ ಚುನಾವಣೆ ಮುನ್ನವೇ ಕಾಂಗ್ರೆಸ್‌ನಿಂದ ಸಾಲು ಸಾಲು ನಾಯಕರು ಹೊರ ಹೋಗುತ್ತಿರುವ ನಡುವೆ ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಹಿರಿಯ ಕಾಂಗ್ರೆಸ್‌ ನಾಯಕ ಕಮಲನಾಥ್‌ ಕೂಡ ಪಕ್ಷ ಬಿಡುವ ಹಾದಿಯಲ್ಲಿದ್ದಾರೆ. ಕಮಲನಾಥ್‌ ಅವರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಯಾವುದೇ ಕ್ಷಣದಲ್ಲಾದರೂ ಬಿಜೆಪಿ ಸೇರಬಹುದು ಎಂದು ಹೇಳಲಾಗುತ್ತಿದೆ. ಈ ಕುರಿತು ಬೆಳವಣಿಗೆಯನ್ನು ಕಾಂಗ್ರೆಸ್‌ ಹಾಗೂ ಇಂಡಿಯಾ ಮೈತ್ರಿಕೂಟ ಕೂಡ ಗಮನಿಸುತ್ತಿದೆ.

ಕಾಂಗ್ರೆಸ್‌ನಲ್ಲಿ ಇಂದಿರಾಗಾಂಧಿ ಅವರ ಮೂರನೇ ಪುತ್ರ ಎಂದೇ ಕಮಲನಾಥ್‌ ಅವರನ್ನು ಗುರುತಿಸಲಾಗುತ್ತಿತ್ತು. ರಾಜೀವ್‌, ಸಂಜಯ್‌ ಗಾಂಧಿ ನಂತರ ಕಮಲನಾಥ್‌ ತಮ್ಮ ಪುತ್ರ ಎನ್ನುವಂತೆ ಇಂದಿರಾಗಾಂಧಿ ಮಾನ್ಯತೆಯನ್ನೂ ನೀಡಿದ್ದರು. ನಾಲ್ಕು ದಶಕದಿಂದ ಕಾಂಗ್ರೆಸ್‌ನಲ್ಲಿಯೇ ಇದ್ದು ಕೇಂದ್ರ ಸಚಿವ ಸ್ಥಾನ, ಮಧ್ಯಪ್ರದೇಶ ಸಿಎಂ ಗಾದಿಯನ್ನೂ ಕಮಲನಾಥ್‌ ಅಲಂಕರಿಸಿದ್ದರು.

ಪಕ್ಷದ ನಿಲುವಿಗೆ ಬೇಸರ

ಪಕ್ಷದಲ್ಲಿ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಅಸಮಾಧಾನಗೊಂಡಿರುವ ಕಮಲನಾಥ್‌ ಅವರು ಕೆಲ ದಿನಗಳಿಂದ ಕಾಂಗ್ರೆಸ್‌ನಿಂದ ಅಂತರ ಕಾಯುಕೊಂಡಿದ್ದರು. ಪಕ್ಷ ಬಿಡುವ ತೀರ್ಮಾನ ಮಾಡಿದ್ದರೂ ಎಲ್ಲಿ ಸೇರಬೇಕು ಎನ್ನುವ ತೀರ್ಮಾನ ಮಾಡಿರಲಿಲ್ಲ. ಬಿಜೆಪಿಯ ಹಿರಿಯ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆಯ ನಂತರ ಕಮಲನಾಥ್‌ ಅವರು ಬಿಜೆಪಿ ಸೇರುವುದು ಖಚಿತವಾಗಿದೆ.

ಕಳೆದ ಅವಧಿಯಲ್ಲಿ ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಸ್ಥಾನ ನೀಡಿದರೂ ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪಕ್ಷದ ನಾಯಕರು ಸಹಕರಿಸಲಿಲ್ಲ. ಇದರಿಂದ ಅಧಿಕಾರ ಉಳಿಸಿಕೊಳ್ಳಲು ಆಗಲಿಲ್ಲ. ಎರಡು ತಿಂಗಳ ಹಿಂದೆ ಮುಗಿದ ವಿಧಾನಸಭೆ ಚುನಾವಣೆಯಲ್ಲೂ ಸಹಕಾರ ಸಿಗಲಿಲ್ಲ. ಆನಂತರ ತಮ್ಮದೇ ವೈಫಲ್ಯ ಎನ್ನುವಂತೆ ಬಿಂಬಿಸಿ ಸಂಘಟನೆಯಿಂದಲೂ ದೂರ ಮಾಡಲಾಯಿತು. ಈ ಕಾರಣದಿಂದಲೇ ಕಾಂಗ್ರೆಸ್‌ ತೊರೆಯುತ್ತಿರುವುದಾಗಿ ಕಮಲನಾಥ್‌ ಆಪ್ತರ ಬಳಿ ಹೇಳಿಕೊಂಡಿದ್ದಾರೆ.

ಪುತ್ರನ ಪೋಸ್ಟ್‌

ಈ ನಡುವೆ ಮಧ್ಯಪ್ರದೇಶದಿಂದ ಏಕೈಕ ಕಾಂಗ್ರೆಸ್‌ ಸಂಸದರಾಗಿರುವ ನಕುಲ್‌ ನಾಥ್‌ ಅವರು ತಮ್ಮ ಸಾಮಾಜಿಕ ಮಾಧ್ಯಮ ವಿವರದಲ್ಲಿ ಕಾಂಗ್ರೆಸ್‌ ಅನ್ನುವುದನ್ನು ತೆಗೆದು ಹಾಕಿದ್ಧಾರೆ. ಅಲ್ಲದೇ ಈವರೆಗೂ ತಾವು ಪ್ರತಿನಿಧಿಸುತ್ತಿರುವ ಚಿಂದ್ವಾರ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತೇನೆ. ಆದರೆ ಯಾವ ಪಕ್ಷ ಎನ್ನುವುದನ್ನು ತಿಳಿಸುವುದಿಲ್ಲ ಎನ್ನುವ ಹೇಳಿಕೆ ನೀಡುವ ಮೂಲಕ ಕುತೂಹಲ ಹುಟ್ಟು ಹಾಕಿದ್ದರು.

ಮನವೊಲಿಕೆ

ಮಧ್ಯಪ್ರದೇಶ ಹಿರಿಯ ನಾಯಕ ದಿಗ್ವಿಜಯ್‌ ಸಿಂಗ್‌ ಸೇರಿದಂತೆ ಹಲವು ನಾಯಕರು ಕಮಲನಾಥ್‌ ಮನ ಒಲಿಸುವ ಪ್ರಯತ್ನ ಮಾಡಿದರೂ ಅವರು ಸ್ಪಂದಿಸಿಲ್ಲ ಎನ್ನಲಾಗಿದೆ.

ನಾಲ್ಕು ವರ್ಷದ ಹಿಂದೆ ಮಧ್ಯಪ್ರದೇಶದ ಹಿರಿಯ ನಾಯಕ ಜ್ಯೋತಿರಾಧಿತ್ಯ ಸಿಂಧಿಯಾ ಕಾಂಗ್ರೆಸ್‌ ತೊರೆದು ಬಿಜೆಪಿ ಕೇಂದ್ರದಲ್ಲಿ ಮಂತ್ರಿಯಾಗಿದ್ದಾರೆ. ,ಮೂರು ದಿನದ ಹಿಂದೆಯಷ್ಟೇ ಮಹಾರಾಷ್ಟ್ರ ಮಾಜಿ ಸಿಎಂ ಅಶೋಕ ಚೌಹಾಣ್‌ ಬಿಜೆಪಿ ಸೇರಿದ್ದು, ಮತ್ತೊಬ್ಬ ಸಿಎಂ ಅದೇ ಹಾದಿ ಹಿಡಿದಿದ್ದಾರೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.